Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Friday, 31 January 2025

ಸೋಂದಾ ಶ್ರೀಗಳಿಂದ ಗುರುಮೂರ್ತಿ ಮಂದಿರದಲ್ಲಿ ಶಿಖರ ಕಲಶ ಪ್ರತಿಷ್ಠೆ.


ಯಲ್ಲಾಪುರ: ಶ್ರೀ ಗುರುವಿನ ಅನುಗ್ರಹ ಎಲ್ಲ ಕಾಲಕ್ಕೂ ; ಎಲ್ಲ ಕಾರ್ಯಗಳಲ್ಲಿಯೂ ಅಪೇಕ್ಷಿತವಾದದ್ದು. ನಿರ್ಮಲವಾದ ಮನಸ್ಸಿನಿಂದ ಮಾಡಿದ ಪ್ರಾರ್ಥನೆ ಎಂದಿಗೂ ಫಲ ನೀಡುತ್ತದೆ ಎಂದು ಸೋಂದಾ ಸ್ವರ್ಣವಲ್ಲಿಯ ಶ್ರೀ ಗಂಗಾಧರೇAದ್ರ ಸರಸ್ವತೀ ಸ್ವಾಮೀಜಿ ನುಡಿದರು.

ಅವರು, ತಾಲೂಕಿನ ಉಮ್ಮಚಗಿಯ ಗುರುಮೂರ್ತಿ ಬಡಾವಣೆಯ ಶ್ರೀ ಗುರುಮೂರ್ತಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ೩ ದಿನಗಳ ಧಾರ್ಮಿಕ ಕಾರ್ಯಕ್ರಮಗಳ ನಿಮಿತ್ತ ಜ.೩೦ ರಂದು ಗುರುಮೂರ್ತಿ ಮಂದಿರದ ಶಿಖರ ಕಲಶ ಪ್ರತಿಷ್ಠೆ ನೆರವೇರಿಸಿ, ಆಶೀರ್ವಚನ ನೀಡುತ್ತಿದ್ದರು. 

ನಿಷ್ಕಲ್ಮಶ ಪ್ರಾರ್ಥನೆಗೆ ಮಾತ್ರ ಗುರು ಒಲಿದು, ಜೀವನ ಶ್ರೇಯಸ್ಕರ ಮಾರ್ಗವನ್ನು ತೋರುತ್ತಾನೆ. ಈ ಹಿನ್ನೆಲೆಯಲ್ಲಿ ಇಲ್ಲಿ ಹಮ್ಮಿಕೊಂಡ ಇಂತಹ ಕಾರ್ಯಕ್ರಮಗಳು ಲೋಕಹಿತ ಸಾಧನೆಗಾಗಿ ಮುಡಿಪಾಗಿಟ್ಟಿವೆ. ಇಂತಹ ಕಾರ್ಯಕ್ರಮಗಳು ಎಲ್ಲೆಡೆಯೂ ಇನ್ನಷ್ಟು ಹೆಚ್ಚಲಿ ಎಂದು ಹಾರೈಸಿದರು.

ಅಪರಾಹ್ನ ಆಯೋಜಿತಗೊಂಡ ಸಭಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಸಿದ್ದಾಪುರದ ಶಿರಳಗಿಯ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದಭಾರತೀ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಗುರುತತ್ವವೆಂದರೆ ಪರಮಾತ್ಮನ ಆಶೀರ್ವಚನವೇ ಆಗಿದೆ. 

ಇದನ್ನು ಸಾಧಿಸಲು ಏಕಾಗ್ರತೆ ಮತ್ತು ಚಿತ್ತಶುದ್ಧಿಗಳು ಅತ್ಯಗತ್ಯವಾಗಿದ್ದು, ಪ್ರಾಚೀನರು ಉಪಾಸನೆಗಳ ವಿವಿಧ ರೂಪಗಳಲ್ಲೊಂದಾದ ಲಿಂಗವನ್ನು ಚಿಹ್ನೆಯಾಗಿ ನೀಡಿದರು. ಕೊನೆ, ಮೊದಲುಗಳಿಲ್ಲದ ಬೆಳಕಿನ ಪುಂಜವೇ ದೇವರಾಗಿದ್ದು, ಶಿವನೆಂದರೆ ಜಗತ್ತಿನ ಅಣುರೇಣು ತೃಣಕಾಷ್ಠಗಳಲ್ಲಿ ಅಡಗಿದ ದಿವ್ಯ ಸ್ವರೂಪವಾಗಿದೆ. 

ಹಿರಿಯರು ಆಕಾಶವನ್ನೇ ದೈವದ ಗುರುತಿನ ಸಂಕೇತವೆಂದು ಪರಿಗಣಿಸಿದ್ದಾರೆ. ದೇವರನ್ನು ಗುರುತಿಸುವ ಪ್ರತ್ಯಕ್ಷವ್ಯಕ್ತಿ ಗುರುವೇ ಆಗಿದ್ದಾನೆ ಎಂದ ಅವರು, ಗುರುಗಳ ಆರಾಧನೆಯೇ ಪರಮಾತ್ಮನ ಚಿಂತನೆಯಾಗಿದೆ. ನಿರಂತರ ಭಗವಂತನ ಸಾಕ್ಷಾತ್ಕಾರದ ಸ್ವರೂಪ ಕಾಣಿಸುತ್ತಿರುವುದು ನಮ್ಮ ದೇಶದ ವಿಶೇಷವಾಗಿದ್ದು, ಇದು ಪರಂಪರೆಯ ವೈಶಿಷ್ಠ ಆಗಿದೆ ಎಂದರು. 

ಸತ್ಯ ಪರಿಶೋಧನೆಯೇ ಪ್ರತಿಯೊಬ್ಬ ಮನುಷ್ಯನ ಜೀವನದ ಗುರಿಯಾಗಿ, ನಮ್ಮ ನೈಜ ಸ್ವರೂಪವನ್ನು ನಾವೆಲ್ಲರೂ ಅರಿಯಬೇಕಿದೆ. ಜಗತ್ತಿನಲ್ಲಿ ಎಲ್ಲವೂ ಕ್ಷಣಿಕ. ಇಲ್ಲಿ ನಿಜಶಾಂತಿ, ಸುಖಗಳಿಲ್ಲ. ಆದ್ದರಿಂದ ಮೂಲಸ್ವರೂಪವನ್ನು ಕಂಡುಕೊಳ್ಳಬೇಕಿದ್ದು, ನಾನು ಯಾರೆಂಬುದೇ ನನಗೆ ಗೊತ್ತಿಲ್ಲದ ಸಂದರ್ಭದಲ್ಲಿ ಕೊರತೆ ಎಂದರೆ ಹೊರಗಿನದು.

ಒಳಗಿನದಲ್ಲ. ಆದ್ದರಿಂದ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ; ಆತ್ಮಜ್ಞಾನ, ಬ್ರಹ್ಮಜ್ಞಾನಗಳ ಅರಿವಿಗೆ ಗುರು ಉಪದೇಶ ಅತ್ಯಂತ ಅಗತ್ಯ. ದಟ್ಟವಾಗಿ ನಮ್ಮನ್ನಾವರಿಸಿರುವ ಮಂಜು ಕರಗಿಸಲು ಮತ್ತು ಮಮಕಾರದ ಸುಳಿಯಲ್ಲಿ ಸಿಲುಕಿರುವ ನಮ್ಮೆಲ್ಲರನ್ನೂ ಪಾರು ಮಾಡಲು ನಮಗೆ ಗುರುಕೃಪೆ ಅವಶ್ಯಕ. ಧರ್ಮಾನುಷ್ಠಾನದಿಂದ ಮಾತ್ರ ಅಧ್ಯಾತ್ಮಿಕ ಸಾಧನೆ ಸಾಧ್ಯ. ಇದಕ್ಕೆ ರಾಗದ್ವೇಷರಹಿತವಾದ ಕರ್ಮಾನುಷ್ಠಾನ ಮಾಡಬೇಕು ಎಂದರು.

೩ ದಿನಗಳ ಕಾಲ ನಡೆದ ಮಹಾರುದ್ರಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ೫೦ ಕ್ಕಿಂತ ಹೆಚ್ಚು ಸಂಖ್ಯೆಯ ವೈದಿಕರು ಪಾಲ್ಗೊಂಡಿದ್ದರು. ಸಮಾರೋಪ ಸಮಾರಂಭದ ಕಾರ್ಯಕ್ರಮ ಶ್ರೀಮಾತಾ ಸಂಸ್ಕೃತ ಮಹಾಪಾಠಶಾಲೆಯ ವಿದ್ಯಾರ್ಥಿಗಳಾದ ಶ್ರೀವರ ಮತ್ತು ಲೋಹಿತರ ವೇದಘೋಷದೊಂದಿಗೆ ಆರಂಭಗೊಂಡಿತು. 

ಸಂಜನಾ ಭಟ್ಟ ಪ್ರಾರ್ಥಿಸಿದರು. ಪಾಠಶಾಲೆಯ ಅಧ್ಯಾಪಕ ವಿ.ಮಹೇಶ ಭಟ್ಟ ಇಡಗುಂದಿ ನಿರ್ವಹಿಸಿದರು. ಶ್ರೀಪಾದ ಹೆಗಡೆ ಭಟ್ರಕೇರಿ ಸ್ವಾಗತಿಸಿದರು. ನಾರಾಯಣ ಹೆಗಡೆ ಕುಂಬ್ರಿಗುಡ್ಡೆ ವಂದಿಸಿದರು. 

ಕಾರ್ಯಕ್ರಮದಲ್ಲಿ ಜ್ಯೋತಿಷ್ಯಾಚಾರ್ಯ ವಿ.ನಾಗೇಂದ್ರ ಭಟ್ಟ ಹಿತ್ಲಳ್ಳಿ, ಅಗ್ನಿಹೋತ್ರಿ ನರಸಿಂಹ ಭಟ್ಟ ನಡುಗೋಡು, ಶ್ರೀಮಠದ ಉಪಾಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ, ಶ್ರೀಮಾತಾ ಸಂಸ್ಕೃತ ಪಾಠಶಾಲೆಯ ಅಧ್ಯಕ್ಷ ಟಿ.ವಿ.ಹೆಗಡೆ ಬೆದೆಹಕ್ಕಲು, ಸೀಮಾಧ್ಯಕ್ಷ ಶ್ರೀಪಾದ ಹೆಗಡೆ ಮತ್ತಿತರರು ಪಾಲ್ಗೊಂಡಿದ್ದರು. ಸಭೆಗೆ ಆಗಮಿಸಿದ ಗುರುಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ಸುದರ್ಶನ ಮಾತೃಮಂಡಳಿಯ ಮಾತೆಯರು ನಂತರ ಭಗವದ್ಗೀತೆಯನ್ನು ಪಠಿಸಿದರು.        


Wednesday, 22 January 2025

ಸಾಮಾಜಿಕ ಕಾರ್ಯಕರ್ತೆ ಶೋಭಾ ಹುಲ್ಮನೆ ಹೃದಯಘಾತದಿ ನಿಧನ

ಯಲ್ಲಾಪುರ: ಸಾಮಾಜಿಕ ಕಾರ್ಯಕರ್ತೆ ಶೋಭಾ ಹುಲ್ಮನಿಯವರು ಯಲ್ಲಾಪುರ ತಾಲೂಕಿನಲ್ಲಿ ಅಯೋಧ್ಯೆ ರಾಮಮಂದಿರ ವಾರ್ಷಿಕೋತ್ಸವ ಅಂಗವಾಗಿ ಪಟ್ಟಣದ ಬಸವೇಶ್ವರ ಭಕ್ತವೃಂದ ವತಿಯಿಂದ ಆಯೋಜಿಸಲಾಗಿದ್ದ ಶ್ರೀರಾಮಮೂರ್ತಿಯ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಆ ವೇಳೆ ಏಕಾಏಕಿ ಕುಸಿದುಬಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ನಿಧನರಾಗಿರುವುದನ್ನು ವೈದ್ಯರು ತಿಳಿಸಿದರು. ಅವರು ಪತಿ, ಪುತ್ರ, ಅಪಾರ ಬಂಧುಬಳಗವನ್ನು ಬಿಟ್ಟು ಅಗಲಿದ್ದಾರೆ. ಕಳೆದ ವರ್ಷ ತಹಶೀಲ್ದಾರ್ ಕಚೇರಿ ಎದುರು ಬೈಪಾಸ್‌ಗಾಗಿ ಆಗ್ರಹಿಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲೂ ಶೋಭಾ ಅವರು ಕುಸಿದು ಅಸ್ವಸ್ಥರಾಗಿದ್ದರು

ಯಲ್ಲಾಪುರದಲ್ಲಿ ಮಾನ್ಯಶಾಸಕ ಶಿವರಾಮ ಹೆಬ್ಬಾರ್ ಹಾಗೂ ವಿಜಯ ಮಿರಾಶಿ ನೇತೃತ್ವದಲ್ಲಿ ಶ್ರೀರಾಮ ಮೂರ್ತಿಯ ಭವ್ಯ ಮೆರವಣಿಗೆ

 

ಯಲ್ಲಾಪುರ: ಜನವರಿ 22 ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ವಾರ್ಷಿಕೋತ್ಸವದ ಸಂಭ್ರಮದಲ್ಲಿ   ಇಂದು, ಪಟ್ಟಣದ ಬಸವೇಶ್ವರ ಶ್ರೀರಾಮ ಭಕ್ತ ವೃಂದದ ವತಿಯಿಂದ ಆಯೋಜಿಸಲಾದ ರಾಮ ಮೂರ್ತಿಯ ಭವ್ಯ ಮೆರವಣಿಗೆಯು ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಮಾನ್ಯ ಶಾಸಕರಾದ ಶಿವರಾಂ ಹೆಬ್ಬಾರ್, ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ್ ಮತ್ತು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿಜಯ ಮಿರಾಶಿ ಗ್ರಾಮದೇವಿ ದೇವಾಲಯದಲ್ಲಿ ಶ್ರೀರಾಮಚಂದ್ರ ಮೂರ್ತಿಗೆ ಪೂಜೆ ಸಲ್ಲಿಸಿ, ಭಕ್ತರೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದರು.

ಪಟ್ಟಣದ ಗ್ರಾಮದೇವಿ ದೇವಾಲಯದಿಂದ ಪ್ರಾರಂಭವಾದ ಮೆರವಣಿಗೆಯು ಅಂಬೇಡ್ಕರ್ ವೃತ್ತದ ಬಳಿ ಹೋಗಿ ಬಸವೇಶ್ವರ ವೃತ್ತದಲ್ಲಿ ಸಂಪನ್ನಗೊಂಡಿತು. ಇಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು ಮತ್ತು ಭಕ್ತರಿಗೆ ಪ್ರಸಾದವನ್ನು ವಿತರಿಸಲಾಯಿತು.

Monday, 20 January 2025

ಯಲ್ಲಾಪುರದಲ್ಲಿ ಕುಮಾರವ್ಯಾಸ ಜಯಂತಿ ಸಂಭ್ರಮ

ಯಲ್ಲಾಪುರ: ಕರ್ನಾಟಕ ಗಮಕ ಕಲಾ ಪರಿಷತ್ತು ಮತ್ತು ತ್ರಿಪುರಾಂಬಿಕಾ ಮಹಿಳಾ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಕುಮಾರವ್ಯಾಸ ಜಯಂತಿಯನ್ನು ಶಿರಸಿ ರಸ್ತೆಯ ಸಂಸ್ಕೃತಿ ನಿವಾಸದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕರ್ನಾಟಕ ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷೆ ಮುಕ್ತಾ ಶಂಕರ ಅವರ ಮಾರ್ಗದರ್ಶನದಲ್ಲಿ ಗಾಯತ್ರಿ ಬೋಳಗುಡ್ಡೆ, ಸರೋಜಾ ಪ್ರಶಾಂತ್ ಹೆಗಡೆ, ಶಂಕರ್ ಭಟ್ಟ, ಆಶಾ ರವಿ ಬಗನಗದ್ದೆ, ಅಂಬಿಕಾ ಭಟ್ಟ ಮೊದಲಾದವರು ಕುಮಾರವ್ಯಾಸ ಭಾರತದ ಸುಪುತ್ರ ಕಲ್ಯಾಣ ಜರಾಸಂಧ ಭಾಗದ ಆಯ್ದ ಪದ್ಯಗಳನ್ನು ಸುಂದರವಾಗಿ ವಾಚಿಸಿದರು. ಜಾನವಿ ಎಸ್ ಮಣ್ಮನೆ, ರಚನಾ ಹೆಗಡೆ, ವಿಜಯಶ್ರೀ ಹೆಗಡೆ, ಸಂದ್ಯ ಕೊಂಡದಕುಳಿ, ಮಮತಾ ಪ್ರಕಾಶ್ ,ಮೊದಲಾದವರು ಪದ್ಯಗಳನ್ನು ಸಮರ್ಥವಾಗಿ ವ್ಯಾಖ್ಯಾನಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಈ ಸಂದರ್ಭದಲ್ಲಿ ಎಂ.ಎನ್. ಹೆಗಡೆ ಹಳವಳ್ಳಿ,, ಪ್ರಮೋದ ಹೆಗಡೆ, ಶಾಂತಲಾ ಹೆಗಡೆ, ಮಾದೇವಿ ಭಟ್ಟ, ಶೈಲಶ್ರೀ ಭಟ್ಟ, ಆಶಾ ಪಟೇಲ್ ಮತ್ತಿತರರು ಉಪಸ್ಥಿತರಿದ್ದರು.


ಹುಬ್ಬಳ್ಳಿಯಿಂದ ಕುಂಭಮೇಳಕ್ಕೆ ವಿಶೇಷ ರೈಲು ಸೇವೆ: ಭಕ್ತರಿಗೆ ಸುಲಭ ಪ್ರಯಾಣ

ಯಲ್ಲಾಪುರ: ಕುಂಭಮೇಳದ ಸಂದರ್ಭದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ರೈಲ್ವೆ ಇಲಾಖೆ ವಿಶೇಷ ರೈಲು ಸೇವೆಯನ್ನು ಆರಂಭಿಸಿದೆ. ಈ ಸೇವೆಯು ಹುಬ್ಬಳ್ಳಿಯಿಂದ ಕುಂಭಮೇಳಕ್ಕೆ ತೆರಳುವ ಭಕ್ತರಿಗೆ ಸುಲಭ ಪ್ರಯಾಣವನ್ನು ಒದಗಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿದೆ. ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಉತ್ತರ ಪ್ರದೇಶದ ತುಂಡ್ಲಾ ನಡುವೆ ಎರಡು ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.

ಈ ರೈಲುಗಳು ಧಾರವಾಡ, ಬೆಳಗಾವಿ, ಪುಣೆ, ಜಬಲ್ಪುರ್, ಪ್ರಯಾಗರಾಜ್ ಸೇರಿದಂತೆ ಹಲವಾರು ಪ್ರಮುಖ ನಗರಗಳಲ್ಲಿ ನಿಲ್ಲಲಿವೆ. ರೈಲು ಸಂಖ್ಯೆ 07379 ಹುಬ್ಬಳ್ಳಿಯಿಂದ ತುಂಡ್ಲಾಕ್ಕೆ ಜನವರಿ 20 ಮತ್ತು ಫೆಬ್ರವರಿ 6 ರಂದು ಹೊರಡಲಿದೆ. ರೈಲು ಸಂಖ್ಯೆ 07380 ತುಂಡ್ಲಾದಿಂದ ಹುಬ್ಬಳ್ಳಿಗೆ ಜನವರಿ 23 ಮತ್ತು ಫೆಬ್ರವರಿ 9 ರಂದು ಹೊರಡಲಿದೆ. ಈ ರೈಲುಗಳಲ್ಲಿ ಎಸಿ 2 ಟೈರ್, ಎಸಿ 3 ಟೈರ್, ಸ್ಲೀಪರ್ ಕ್ಲಾಸ್ ಮತ್ತು ಸೆಕೆಂಡ್ ಕ್ಲಾಸ್ ಸೇರಿದಂತೆ ವಿವಿಧ ರೀತಿಯ ಬೋಗಿಗಳನ್ನು ಹೊಂದಿರುತ್ತವೆ.

ಪ್ರಯಾಣಿಕರು ರೈಲಿನ ನಿಖರವಾದ ಸಮಯ, ನಿಲ್ದಾಣಗಳ ವಿವರಗಳನ್ನು ತಿಳಿಯಲು ಭಾರತೀಯ ರೈಲ್ವೆ ಜಾಲತಾಣ www.enquiry.indianrail.gov.in ಗೆ ಭೇಟಿ ನೀಡಬಹುದು ಅಥವಾ 139 ಸಹಾಯವಾಣಿಗೆ ಕರೆ ಮಾಡಬಹುದು ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.

ಕುಂಭಮೇಳವು ಹಿಂದೂ ಧರ್ಮದ ಅತ್ಯಂತ ಪವಿತ್ರವಾದ ಮಹಾಕುಂಭಗಳಲ್ಲಿ ಒಂದಾಗಿದೆ. 12 ವರ್ಷಗಳಿಗೊಮ್ಮೆ ನಡೆಯುವ ಈ ಮೇಳದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ. ಯಲ್ಲಾಪುರದ ಜನರು ಹುಬ್ಬಳ್ಳಿಯಿಂದ ಕುಂಭಮೇಳಕ್ಕೆ ವಿಶೇಷ ರೈಲು ಸಿಗುತ್ತಿರುವುದರಿಂದ ಸಂತೋಷಗೊಂಡಿದ್ದಾರೆ. ಈ ರೈಲು ಸೇವೆಯಿಂದ ಭಕ್ತರಿಗೆ ಪ್ರಯಾಣ ಸುಲಭವಾಗಿದೆ ಎಂದು ತಿಳಿದುಬಂದಿದೆ.



Thursday, 16 January 2025

ಶತಮಾನಗಳ ಇತಿಹಾಸ ಹೊಂದಿರುವ ಮಾವಳ್ಳಿ ಜಾತ್ರೆಗೆ ಕ್ಷಣಗಣನೆ



ಯಲ್ಲಾಪುರ: ಐದು ವರ್ಷಗಳಿಗೊಮ್ಮೆ ನಡೆಯುವ ಯಲ್ಲಾಪುರ ತಾಲೂಕಿನ ಕನ್ನಡಗಲ್ ಗ್ರಾಮದ ಪ್ರಸಿದ್ಧ ಮಾವಳ್ಳಿ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ .ಫೆಬ್ರುವರಿ 19 ಬುಧವಾರದಿಂದ  ಫೆಬ್ರವರಿ 27 ಗುರುವಾರದವರೆಗೂ 9 ದಿನಗಳ ಕಾಲ ಜಾತ್ರೆ ನಡೆಯಲಿದೆ.

ಮಾವಳ್ಳಿ ದೇವಸ್ಥಾನಕ್ಕೆ ಶತಮಾನಗಳ ಇತಿಹಾಸವಿದೆ ಮಾವಳ್ಳಿ ದೇವಸ್ಥಾನದ ಮೂಲ ಪೀಠ ಇರುವುದು ಕನ್ನಡಗಲ್. ಗ್ರಾಮದಲ್ಲಿ .ಇಲ್ಲಿರುವುದು ಕಾಷ್ಟ, ಮೂರ್ತಿಗಳು ಇದಕ್ಕೆ ಪುಷ್ಟಿ ನೀಡುವಂತೆ ಎರಡು ತಿಂಗಳ ಹಿಂದೆ ಅಷ್ಟಮಂಗಲ ಪ್ರಶ್ನೆಯನ್ನಿಟ್ಟಾಗ ಊರಿನ ತೋಟದ ಕೆರೆಯಲ್ಲಿ ಭದ್ರಕಾಳಿ ಮೂರ್ತಿ ದೊರೆತಿದೆ. ಈಗ ಇದನ್ನು ಮೂಲ ಪೀಠದಲ್ಲಿ ಇಡಲಾಗಿದೆ. ಹಿಂದೆ ಈ ದೇವಾಲಯ ರಾಜಾಶ್ರಯ ಒಳಪಟ್ಟ ಬಗ್ಗೆ ಅನೇಕ ಕುರುಹುಗಳು ಲಭ್ಯವಿದೆ

ಇನ್ನೊಂದು ಐತಿಹ್ಯ ಪ್ರಕಾರ ಇಲ್ಲಿರುವ ದೇವಿಯರು ಮತ್ತು ಶಿರಸಿ ಮಾರಿಕಾಂಬೆ ಮತ್ತು ಸಾಗರ ಮಾರಿಕಾಂಬೆಯರು ಸೋದರಿಯರಂತೆ ಒಟ್ಟು ಏಳು ಜನ ಸೋದರಿಯರು ಭಕ್ತ ಆನುಗ್ರಕ್ಕಾಗಿ ಯಲ್ಲಾಪುರ,ಶಿರಸಿ, ಸಾಗರದಲ್ಲಿ  ನೆಲೆನಿಂತಿದ್ದಾರೆ ಎನ್ನಲಾಗಿದೆ ಈ ಎಲ್ಲ ದೇವಿಯರ ಜಾತ್ರಾವಿಧಿ ವಿಧಾನಗಳು ಒಂದೆ ರೀತಿಯಾಗಿರುವುದು ವಿಶೇಷವಾಗಿರುತ್ತದೆ.

1923ರಲ್ಲಿ ಇಡೀ ಯಲ್ಲಾಪುರ ತಾಲೂಕು ಕಾಲರದಿಂದ ತತ್ತರಿಸಿತ್ತು ಸಾವಿರಾರು ಜನರು ಪ್ರಾಣ ಕಳೆದುಕೊಂಡರು ಅನೇಕರು ಊರನ್ನೇತೊರೆಯುವಂತಾಯಿತು .ಈ ಸಂದರ್ಭದಲ್ಲಿ ತಾಲೂಕಿನ ಅನೇಕ ಜಾತ್ರೆಗಳು ಉತ್ಸವಗಳು ನಿಲ್ಲುವಂತಾಯಿತು. ಈ ಅನಿವಾರ್ಯ ಸಂದರ್ಭದಲ್ಲಿ ಮಾವಳ್ಳಿ ಜಾತ್ರೆಯು ನಿಂತು ಹೋಯಿತು 61 ವರ್ಷಗಳ ನಂತರ 1984ರಲ್ಲಿ ಪುನಃ ಜಾತ್ರೆ ಪ್ರಾರಂಭವಾಯಿತು.

ಜಾತ್ರಾ ಆಕರ್ಷಣೆ 9 ದಿನಗಳ ಕಾಲ ನಡೆಯಲಿರುವ ಈ ಜಾತ್ರೆ ಅನೇಕ ವಿಶೇಷಗಳಿಂದ ಕೂಡಿರುತ್ತದೆ .ಜಾತ್ರ ಪೂರ್ವದಲ್ಲಿ ನಾಲ್ಕು ಹೊರಮಂಗಳ ವಾರಗಳನ್ನು ಆಚರಿಸಲಾಗುತ್ತದೆ ಊರಿನ ಜನರು ಮನೆಗೆ ಬೀಗ ಹಾಕಿ ತೆರಳುತ್ತಾರೆ ದೇವರು ಈ ಸಂದರ್ಭದಲ್ಲಿ ತಮ್ಮ ಮನೆಗೆ ಭೇಟಿ ನೀಡುತ್ತಾರೆ ಎಂಬುದು ಭಕ್ತರ ನಂಬಿಕೆ. ಜಾತ್ರ ಪ್ರಾರಂಭ ದಿನ ಸಂಜೆ ದೇವಿಯನ್ನು ದೇವಸ್ಥಾನದಿಂದ ಜಾತ್ರಾ ಮಂಟಪಕ್ಕೆ ಮೆರವಣಿಗೆಯಲ್ಲಿ ಕರೆತರಲಾಗುತ್ತದೆ.

ದೇವಿಯರನ್ನುಭಕ್ತರು ಪೀಠದಲ್ಲಿರಿಸಿ ತಲೆ ಮೇಲೆ ಹೊತ್ತು ತರುವ ದೃಶ್ಯ ನೋಡಲು ಮನಮೋಹಕವಾಗಿರುತ್ತದೆ ದೇವರು ಜಾತ್ರಾ ಮಂಟಪದ ಗದ್ದುಗೆಯಲ್ಲಿ ಆಸೀನರಾದ ನಂತರ ಭಕ್ತಾದಿಗಳು ಹರಕೆ ಉಡಿ ತುಲಾಭಾರ ಮುಂತಾದ ಸೇವೆಗಳನ್ನು ಮಾಡಲಾಗುತ್ತದೆ.

ಜಾತ್ರಾ ಮುಕ್ತಾಯ, ಈ ಸಲದ ಮಾವಳ್ಳಿ ಜಾತ್ರೆ ಮಹೋತ್ಸವ ಫೆಬ್ರವರಿ 27ರಂದು ಸಂಪನ್ನವಾಗಲಿದ್ದು ಮಾರ್ಚ್ 14ರಂದು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ದೇವಿಯರನ್ನು ದೇವಾಲಯದಲ್ಲಿ ಪುನರ್ ಪ್ರತಿಷ್ಠಾಪನ ಮಾಡಲಾಗುತ್ತದೆ.


ಬೆಡಸಗದ್ದೆಯಲ್ಲಿ ಜಿಲ್ಲಾ ಮಟ್ಟದ ವಾಲಿಬಾಲ್ ಸಂಭ್ರಮ

ಯಲ್ಲಾಪುರ: ಬೆಡಸಗದ್ದೆಯಲ್ಲಿ ಜನವರಿ 18 ಶನಿವಾರ ಮಧ್ಯಾಹ್ನ 3:00 ವನಶ್ರೀ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನ ಆಯೋಜಿಸಲಾಗಿದೆ  ಹೀಗಾಗಿ ಜನವರಿ 17ಕ್ಕೆ ಹೆಸರು ನೊಂದಾಯಿಸಲು ಕೊನೆದಿನವಾಗಿದೆ.

ಈ ಆಟದಲ್ಲಿ ಗೆದ್ದ ತಂಡಕ್ಕೆ ಮೊದಲ ಬಹುಮಾನ 10 ಸಾವಿರ ರೂ ಸಿಗಲಿದೆ. ಎರಡನೇ ಬಹುಮಾನ 5 ಸಾವಿರ ರೂ, ಮೂರನೇ ಬಹುಮಾನ 2 ಸಾವಿರ ರೂ ಘೋಷಣೆಯಾಗಿದೆ. ನಾಲ್ಕನೇ ಬಹುಮಾನವಾಗಿ ಆಕರ್ಷಕ ಟ್ರೋಪಿ ನೀಡಲಾಗುತ್ತದೆ. ಇದರೊಂದಿಗೆ ಉತ್ತಮ ಲಿಪ್ಟರ್, ಉತ್ತಮ ಹೊಡೆತಗಾರರನ್ನು ಗುರುತಿಸಿ ಟ್ರೋಪಿ ನೀಡಿ ಗೌರವಿಸಲಾಗುತ್ತದೆ.

ಇನ್ನೂ ಆಟದಲ್ಲಿ ಕೆಲವು ನಿಯಮಗಳಿವೆ ಒಂದು ತಂಡದಲ್ಲಿ ಆಡಿದ ಆಟಗಾರರನು ಇನ್ನೊಂದು ತಂಡದಲ್ಲಿ ಭಾಗವಹಿಸುವ ಹಾಗಿಲ್ಲ. ಒಂದೇ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಟಗಾರರು ತಂಡದಲ್ಲಿದ್ದು, ಪ್ರತಿಯೊಬ್ಬರು ಆಧಾರ್ ಕಾರ್ಡ ಹೊಂದಿರಬೇಕು. ಆಟಗಾರರು ಊಟದ ವ್ಯವಸ್ಥೆ  ಸಮವಸ್ತ್ರ ತರುವಿಕೆ ಜೊತೆ ಸಮಯಕ್ಕೆ ಸಹ ಆದ್ಯತೆ ಕೊಡಬೇಕು ಎಂಬ ನಿಯಮಗಳಿವೆ. ಇದರೊಂದಿಗೆ ಪ್ರವೇಶ ತಂಡಕ್ಕೆ 500ರೂ ಶುಲ್ಕವನ್ನು ನೀಡಬೇಕಾಗುತ್ತದೆ.

ಈ ಬಗ್ಗೆ ಯಾವುದೇ ಗೊಂದಲಗಳಿದ್ದರೆ ಈ ನಂಬರಿಗೆ ಫೋನ್ ಮಾಡಿ 8904118163, 8050518163, 9071179393

Wednesday, 15 January 2025

ಯಲ್ಲಾಪುರದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕಾರ ದೀಕ್ಷೆ: ಶಿಕ್ಷಕರು ಮಕ್ಕಳ ವ್ಯಕ್ತಿತ್ವ ರೂಪಿಸುತ್ತಿದ್ದಾರೆ.

ಯಲ್ಲಾಪುರ: ಶಿಲ್ಪಿ ಕಲ್ಲಿನಿಂದ ದೇವರ ಮೂರ್ತಿ ನಿರ್ಮಿಸಿದಂತೆ ಶಿಕ್ಷಕರು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ ಉತ್ತಮ ವ್ಯಕ್ತಿಯನ್ನಾಗಿ ಪರಿವರ್ತಿಸುತ್ತಾರೆ.

ಅವರು, ವಿಶ್ವದರ್ಶನ ಕನ್ನಡ ಮಾದ್ಯಮ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಆಯೋಜಿಸಿದ ಸಂಸ್ಕಾರ ದೀಕ್ಷಾ ಉಪನ್ಯಾಸ ಕಾರ್ಯಕ್ರಮದಲ್ಲಿ ವೇದಮೂರ್ತಿ ಅನಂತ್ ಭಟ್ಟ ಮಾತನಾಡಿ ಶಿಕ್ಷಕರು ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಮೂಲಕ ಅವರ ವ್ಯಕ್ತಿತ್ವ ಅನುರೂಪಿಸುತ್ತಾರೆ ಎಂದು ಹೇಳಿದರು

ವಿದ್ಯಾರ್ಥಿಗಳ ಜೀವನ ಕಠಿಣವಾದಷ್ಟು ಭವಿಷ್ಯ ಉತ್ತಮವಾಗಿರುತ್ತದೆ ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ ಅಧ್ಯಯನಕ್ಕೆಹೆಚ್ಚು ಸಮಯ ನೀಡುವಂತೆ ಸಲಹೆ ನೀಡಿದರು        

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ವಿಧಾನ ಪರಿಷತ್ ಶಾಸಕರಾದ ಶಾಂತರಾಮ್ ಸಿದ್ದಿ ಮಾತನಾಡಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪಾಲಕರ ಪಾತ್ರ ಪ್ರಮುಖವಾದದ್ದು ಶಿಕ್ಷಕರು ವ್ಯಕ್ತಿತ್ವ ನಿರ್ಮಾಣಕರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ್ ಕೋಣೆಮನೆ, ಆಡಳಿತಾಧಿಕಾರಿ ಅಜಯ್ ಭಾರತೀಯ, ಕನ್ನಡ ಮಾಧ್ಯಮ ಶಿಕ್ಷಕ ವೃಂದ, ಪತ್ರಿಕೋದ್ಯಮ ಉಪನ್ಯಾಸಕರು ,ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂತ್ಯದಲ್ಲಿ ಪಾಲ್ಗೊಂಡ ಹಲವಾರು ಪಾಲಕರು ಸಂಸ್ಥೆ ಆಯೋಜಿಸಿದ ಈ ಕಾರ್ಯಕ್ರಮದ ಬಗ್ಗೆ ಸಂತಸ ವ್ಯಕ್ತ  ಪಡಿಸಿದರು. ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ್ ಸ್ವಾಗತಿಸಿದರು. ಶಿಕ್ಷಕಿ ಪ್ರೇಮಾ ಗಾಂವ್ಕರ್ ನಿರ್ವಹಿಸಿದರು. ದೈಹಿಕ ಶಿಕ್ಷಕ ಮಹೇಶ್ ನಾಯ್ಕ ವಂದಿಸಿದರು. 


ಗುರುವಾರ ಯಲ್ಲಾಪುರದಲ್ಲಿ ವಿದ್ಯುತ್ ವ್ಯತ್ಯಯ

ಯಲ್ಲಾಪುರ: 110/ 33 ಬಾರ್ 11 ಕೆವಿ ಉಪ ಕೇಂದ್ರ ಉಮ್ಮಚ್ಚಿಗಿ ಹಾಗೂ 110/3/11 ವಿದ್ಯುತ್ ಉಪಕೇಂದ್ರಿ ಕಿರವತ್ತಿ ಮತ್ತು 33/11 ತುರ್ತು ನಿರ್ವಹಣಾ ಕಾರ್ಯ ನಡೆಯುವುದರಿಂದ ಗುರುವಾರ ಜನವರಿ 16 ರಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 6:00 ವರೆಗೆ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.

ಈ ವಿದ್ಯುತ್ ವ್ಯತ್ಯಯದಿಂದ 11 ಕೆವಿ ಕಿರವತ್ತಿಯಿಂದ ಹೊರಡುವ ಹೊಸಳ್ಳಿ, ಮದನೂರು, ಸೋಮಾಪುರ ಮತ್ತು ಕಿರುವತ್ತಿ ಶ್ರೀ ಕೃಷ್ಣ ಡೈರಿ ಮಾರ್ಗಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.

ಅದೇ ರೀತಿಯಲ್ಲಿ, 33/11 ಯಲ್ಲಾಪುರ ಉಪಕೇಂದ್ರದಿಂದ 11ಕೆವಿ ಯಲ್ಲಾಪುರ ಪಟ್ಟಣ, ಇಡುಗುಂದಿ, ವಜ್ರಳ್ಳಿ, ಮಾಗೋಡ್, ಉಪಳೇಶ್ವರ ಚಂದುಗುಳಿ ಹಾಗೂ ಕಣ್ಣಿಗೇರಿ ಮಾರ್ಗಗಳಲ್ಲಿಯೂ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ಕಾರ್ಯ ಮತ್ತು ಪಾಲನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

Tuesday, 14 January 2025

ಯಲ್ಲಾಪುರದಲ್ಲಿ ಸಂಕ್ರಾಂತಿಯ ಸಂಭ್ರಮ

ಯಲ್ಲಾಪುರ: ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದ ಹಿನ್ನೆಲೆಯಲ್ಲಿ ಯಲ್ಲಾಪುರದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಹಬ್ಬವನ್ನು ವಿವಿಧ ರಾಜ್ಯಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ.

ಸಂಕ್ರಾಂತಿ ಹಬ್ಬದ ನಿಮಿತ್ತ ಗ್ರಾಮದೇವಿ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆದವು. ಜನರು ಹಿರಿಯರಿಗೆ ಮತ್ತು ಸ್ನೇಹಿತರಿಗೆ ಎಳ್ಳು-ಬೆಲ್ಲ ನೀಡಿ ಶುಭಾಶಯ ಕೋರಿದರು.

ಕರ್ನಾಟಕದಲ್ಲಿ ಸಂಕ್ರಾಂತಿಯನ್ನು ಸುಗ್ಗಿ ಹಬ್ಬವೆಂದು ಆಚರಿಸಲಾಗುತ್ತದೆ. ಮಹಿಳೆಯರು ಮತ್ತು ಮಕ್ಕಳು ಕಬ್ಬು, ಎಳ್ಳು, ಬೆಲ್ಲ ಮತ್ತು ತೆಂಗಿನಕಾಯಿಯಿಂದ ತಯಾರಿಸಿದ ಬಾಗಿನಗಳನ್ನು ಮನೆ ಮನೆಗೆ ತೆರಳಿ ವಿನಿಮಯ ಮಾಡಿಕೊಳ್ಳುತ್ತಾರೆ.

ಪಟ್ಟಣದ ವಿನಾಯಕ ಕಾಲೋನಿಯ  ಮಕ್ಕಳು ಬಣ್ಣಬಣ್ಣದ  ಉಡುಪು ಧರಿಸಿ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಮನೆ ಮನೆಗೆ ಸುತ್ತಾಡಿ ಎಳ್ಳು-ಬೆಲ್ಲ ಹಂಚಿಕೊಂಡರು.

Sunday, 12 January 2025

ಯಲ್ಲಾಪುರದಲ್ಲಿ ಯೋಗ ಸಮ್ಮೇಳನ: ಆರೋಗ್ಯಕರ ಜೀವನಕ್ಕೆ ಒಂದು ಹೆಜ್ಜೆ


ಯಲ್ಲಾಪುರ : ಯೋಗವು ಮಾನವ ಜೀವನದಲ್ಲಿ ಆರೋಗ್ಯ, ಸಮೃದ್ಧಿ ಮತ್ತು ಸಮತೋಲನವನ್ನು ಸಾಧಿಸುವ ಒಂದು ಪರಿಪೂರ್ಣ ಮಾರ್ಗವಾಗಿದೆ. ಈ ನಿಟ್ಟಿನಲ್ಲಿ ಯಲ್ಲಾಪುರ ತಾಲೂಕಿನಲ್ಲಿ ಯೋಗ ಸಮ್ಮೇಳನವನ್ನು ಏರ್ಪಡಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಎಂದು ಅಂತರಾಷ್ಟ್ರೀಯ ಯೋಗ ಪಟು ಗಣಪತಿ ಎನ್. ಹೆಗಡೆ ಸಿದ್ದಾಪುರ ಅಭಿಪ್ರಾಯಪಟ್ಟರು.

ಜನವರಿ 12 ರಂದು ಪಟ್ಟಣದ ವೆಂಕಟರಮಣ ಮಠದ ವೇದವ್ಯಾಸ ಸಭಾಭವನದಲ್ಲಿ ಯಲ್ಲಾಪುರ ತಾಲೂಕಾ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್, ಉತ್ತರಕನ್ನಡ ಯೋಗ ಫೆಡರೇಶನ್ ಶಿರಸಿ ಮತ್ತು ಯಲ್ಲಾಪುರ ಅಡಿಕೆ ವ್ಯವಹಾರಸ್ಥರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಯೋಗ ಸಮ್ಮೇಳನ ಮತ್ತು ಯೋಗ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

"ಯೋಗವು ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ನಿಯಮಿತ ಯೋಗಾಭ್ಯಾಸವು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುವುದಲ್ಲದೆ, ಅವರಲ್ಲಿ ಸಂತೃಪ್ತಿಯ ಭಾವನೆಯನ್ನು ಬೆಳೆಸುತ್ತದೆ. ಇಂದು ಯೋಗವು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ ಮತ್ತು ಒಲಿಂಪಿಕ್ ಕ್ರೀಡೆಗಳ ಭಾಗವಾಗಿದೆ. ನಮ್ಮ ಮಕ್ಕಳಿಗೆ ಯೋಗದ ಜೊತೆಗೆ ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳ ಬಗ್ಗೆಯೂ ಪರಿಚಯಿಸುವುದು ಅತ್ಯಗತ್ಯವಾಗಿದೆ" ಎಂದು ಅವರು ಹೇಳಿದರು.

ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, "ನಮ್ಮ ದೈನಂದಿನ ಜೀವನದಲ್ಲಿ ನಾವು ಅನೇಕ ಒತ್ತಡಗಳನ್ನು ಎದುರಿಸುತ್ತೇವೆ. ಈ ಒತ್ತಡಗಳನ್ನು ನಿಭಾಯಿಸಲು ಯೋಗವು ಅತ್ಯಂತ ಪರಿಣಾಮಕಾರಿಯಾದ ಮಾರ್ಗವಾಗಿದೆ. ವಿದ್ಯಾರ್ಥಿಗಳಿಗೆ ಶಾಲೆಯ ಒತ್ತಡ, ವೃತ್ತಿಜೀವನದ ಒತ್ತಡ ಹೀಗೆ ವಿವಿಧ ರೀತಿಯ ಒತ್ತಡಗಳು ಇರುತ್ತವೆ. ಈ ಒತ್ತಡಗಳನ್ನು ನಿವಾರಿಸಿಕೊಳ್ಳಲು ನಿಯಮಿತವಾಗಿ ಯೋಗಾಭ್ಯಾಸ ಮಾಡುವುದು ಅತ್ಯಗತ್ಯವಾಗಿದೆ. ಯೋಗವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು" ಎಂದು ತಿಳಿಸಿದರು.

ಅಡಿಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಆರ್.ವಿ. ಹೆಗಡೆ ಮಾತನಾಡುತ್ತಾ, "ಸಂಪತ್ತು ಮತ್ತು ಐಶ್ವರ್ಯದ ಜೊತೆಗೆ ಆರೋಗ್ಯವೂ ಅತ್ಯಂತ ಮುಖ್ಯವಾಗಿದೆ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಯೋಗವು ಅತ್ಯಂತ ಪರಿಣಾಮಕಾರಿಯಾದ ಮಾರ್ಗವಾಗಿದೆ. ಸಣ್ಣ ವಯಸ್ಸಿನಿಂದಲೇ ಯೋಗಾಭ್ಯಾಸವನ್ನು ಪ್ರಾರಂಭಿಸಿದರೆ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು" ಎಂದು ಹೇಳಿದರು.

ಯಲ್ಲಾಪುರ ತಾಲೂಕಾ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ಯೋಗ ಸಾಧಕರಾದ ಶಂಕರ ಭಟ್ಟ ಪುಣೆ, ಮಂಜುನಾಥ ದೇಸಾಯಿ, ವಿಶಾಲಾಕ್ಷಿ ಭಟ್ಟ, ನಾರಾಯಣ ಭಾಗ್ವತ, ಡಿ.ಎನ್.ಗಾಂವ್ಕರ್, ರವಿ ಹೆಗಡೆ, ವಿ.ಕೆ.ಭಟ್ಟ, ನೇಮಿರಾಜ, ಪಾರ್ವತಿ ಹೆಗಡೆ, ನಾಗವೇಣಿ ಹೆಗಡೆ, ಜಾಹ್ನವಿ ಹೆಗಡೆ ಇವರನ್ನು ಸನ್ಮಾನಿಸಲಾಯಿತು.

ಶಿಕ್ಷಕಿ ರಾಧಾ ಭಟ್ಟ ಪ್ರಾರ್ಥಿಸಿದರು. ಸಂಸ್ಥೆಯ ಸಹಕಾರ್ಯದರ್ಶಿ  ಚಂದ್ರಶೇಖರ ಭಟ್ಟ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಅನಿಲ ಕರಿ ಪ್ರಾಸ್ತಾವಿಕ ಮಾತನಾಡಿದರು. ಶಿವಪ್ರಸಾದ ಭಟ್ಟ ಕಾರ್ಯಕ್ರಮವನ್ನು ನಿರ್ವಹಿಸಿದರು. ಯೋಗ ಮಾತೆ ಆಶಾ ಭಗನಗದ್ದೆ ವಂದಸಿದರು.

Friday, 10 January 2025

ಡಿಸೋಜಾ ಅವರ ಸಾಹಿತ್ಯ ಸಾಗರದಲ್ಲಿ ಮುಳುಗಿದ ಕವಿಗೋಷ್ಠಿ


ಯಲ್ಲಾಪುರ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರು ಜಿಲ್ಲಾ ಘಟಕ, ಉತ್ತರ ಕನ್ನಡ ಹಾಗೂ ಯಲ್ಲಾಪುರ ತಾಲ್ಲೂಕು ಘಟಕಗಳು, ನಾಡಿನ ಹಿರಿಯ ಸಾಹಿತಿ ಮತ್ತು ಪರಿಸರ ಪ್ರೇಮಿ ದಿ. ಡಾ. ನಾ. ಡಿಸೋಜಾ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಗೂಗಲ್ ಮೀಟ್ ಪ್ಲಾಟ್‌ಫಾರ್ಮ್‌ನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಲೀಲಾ ಹುಣಸಗಿ, ಜಿಲ್ಲಾಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ಉತ್ತರ ಕನ್ನಡ), ಡಾ. ಡಿಸೋಜಾ ಅವರನ್ನು "ಮೃದುಭಾಷಿ, ಹಸನ್ಮುಖಿ ನಾಡು ಕಂಡ ಶ್ರೇಷ್ಠ ಕಾದಂಬರಿಕಾರರು, ಪರಿಸರ ಕಾಳಜಿಯ ಕಥೆಗಾರರು" ಎಂದು ಶ್ಲಾಘಿಸಿದರು. ಅವರು, ಡಾ. ಡಿಸೋಜಾ ಅವರ ಕೃತಿಗಳು ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸಲು ಹೇಗೆ ಸಹಾಯಕವಾಗಿದೆ ಎಂಬುದನ್ನು ವಿವರಿಸಿದರು. ವಿಶೇಷವಾಗಿ, "ಮಕ್ಕಳ ಕಾದಂಬರಿ ಮುಳುಗಡೆಯ ಊರಿಗೆ ಬಂದವರು" ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರವನ್ನು ಪಡೆದ ಕೃತಿ ಎಂದು ಹೇಳಿದರು.

ಅತಿಥಿಗಳಾದ ವಾಸು ಸಮುದ್ರವಳ್ಳಿ, ವಿಶ್ವೇಶ್ವರ ಮೇಟಿ ಮತ್ತು ಯಮುನಾ ನಾಯ್ಕ ಕೂಡ ಡಾ. ಡಿಸೋಜಾ ಅವರ ಕೊಡುಗೆಗಳನ್ನು ಶ್ಲಾಘಿಸಿದರು. ಕವಿಗೋಷ್ಠಿಯಲ್ಲಿ ಆಶಾ ಶೆಟ್ಟಿ, ಬಾಲಚಂದ್ರ ಹೆಗಡೆ, ಭಾರತಿ ನಲವಡೆ ಮತ್ತು ಇತರ ಕವಿಗಳು ಭಾಗವಹಿಸಿ ತಮ್ಮ ಕವನಗಳನ್ನು ವಚನಿಸಿದರು.

ಈ ಕಾರ್ಯಕ್ರಮವು ಡಾ. ಡಿಸೋಜಾ ಅವರ ಸಾಹಿತ್ಯಿಕ ಕೊಡುಗೆಗಳನ್ನು ಸ್ಮರಿಸುವುದರ ಜೊತೆಗೆ, ಭವಿಷ್ಯದ ಪೀಳಿಗೆಗೆ ಅವರ ಆದರ್ಶಗಳನ್ನು ಹರಡುವ ಒಂದು ಪ್ರಯತ್ನವಾಗಿತ್ತು.

Thursday, 9 January 2025

ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಮಿಂಚಿದ ವೈಟಿಎಸ್‌ಎಸ್‌ ವಿದ್ಯಾರ್ಥಿನಿ

ಯಲ್ಲಾಪುರ: ಶಾಲಾ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪ್ರಾಚಾರ್ಯರ ಸಂಘ, ತುಮಕೂರು ಜಿಲ್ಲೆಯ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ವೈಟಿಎಸ್‌ಎಸ್‌ನ ವಿದ್ಯಾರ್ಥಿನಿ ಕುಮಾರಿ ಧನ್ಯಶ್ರೀ ಕೋಮಾರ್ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿನಿಯ ಈ ಸಾಧನೆಗೆ ವೈಟಿಎಸ್‌ಎಸ್‌ ಸಂಸ್ಥೆಯ ಅಧ್ಯಕ್ಷರಾದ ರವಿಕುಮಾರ್ ಶಾನಭಾಗ, ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರಾದ ಆನಂದ ಹೆಗಡೆ ಹಾಗೂ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.