ಯಲ್ಲಾಪುರ : ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 78ನೇ ಸ್ವಾತಂತ್ರೋತ್ಸವ ದಿನದಂದು ಹಮ್ಮಿಕೊಂಡ ದ್ವಜಾರೋಹಣ ಸಮಾರಂಭದಲ್ಲಿ, ಶಾಸಕರು ಹಾಗೂಬಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಿವರಾಮ ಹೆಬ್ಬಾರ್ ಅವರು ದ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿದ ಅವರು, “ಸ್ವಾತಂತ್ರ್ಯ ಪಡೆಯುವ ಹೋರಾಟದ ಹಿಂದೆ ಮಹಾತ್ಮ ಗಾಂಧಿ ಮತ್ತು ಇತರ ಹೋರಾಟಗಾರರ ತ್ಯಾಗವನ್ನು ನಾವು ಎಂದಿಗೂ ಮರೆಯುವಂತಿಲ್ಲ. ಇಂದು ನಾವು ಅನುಭವಿಸುತ್ತಿರುವ ಈ ಸ್ವಾತಂತ್ರ್ಯದ ಫಲ, ಸ್ವತಂತ್ರ ಹೋರಾಟದ ಪರಿಣಾಮ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರೇ ವಿನ್ಯಾಸಗೊಳಿಸಿದ ಸಂವಿಧಾನದ ಮೂಲಕವೇ ಸಾಧ್ಯವಾಗಿದೆ” ಸ್ವತಂತ್ರ ಭಾರತದ 78 ವರ್ಷಗಳ ದೀರ್ಘಯಾನವು ಜಾಗತಿಕ ಮಟ್ಟದಲ್ಲಿ ಭಾರತದ ಹೆಮ್ಮೆ ಹೆಚ್ಚಿಸುತ್ತಿದೆ. ಸ್ವತಂತ್ರ ಹೋರಾಟಗಾರರ ಕನಸು ಕೇವಲ ಸ್ವಾತಂತ್ರ್ಯ ಕೊಡಿಸುವುದಷ್ಟೆ ಅಲ್ಲ, ಭಾರತೀಯರು ಜಗತ್ತಿನ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಎಲ್ಲ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿರಬೇಕು ಎಂದು ಅವರು ಬಯಸಿದ್ದರು.
ಆ ಕನಸು ನನಸಾಗಿಸಲು ಪ್ರತಿಯೊಬ್ಬರಿಗೂ ತಮ್ಮ ಕರ್ತವ್ಯ ನಿರ್ವಹಿಸುವುದು ಅವಶ್ಯವಾಗಿದೆ." ಎಂದ ಅವರು, ದೇಶದ ಸೈನಿಕರ ತ್ಯಾಗವನ್ನು ಸ್ಮರಿಸಿದರು."ನಮ್ಮ ದೇಶದ ಸರ್ವಾಂಗೀಣ ಭದ್ರತೆ ಮತ್ತು ಏಕತೆಗಾಗಿ ನಮ್ಮ ಸೈನಿಕರು ಮಾಡಿರುವ ತ್ಯಾಗ ನಮಗೆ ಮಾದರಿಯಾಗಿದೆ. ದೇಶವು ಗಟ್ಟಿಯಾಗಿದ್ದರೆ, ನಾವೆಲ್ಲರೂ ಗಟ್ಟಿಯಾಗಿರುತ್ತೇವೆ. ಸ್ವತಂತ್ರ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳು ಇಂದು ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಮಾಡಿದ್ದು, ಅದನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ" ಈ ದೇಶ ಈ ನೆಲ ಈ ಜಲ ಎಲ್ಲವೂ ನಿಮ್ಮದು ನಿಮ್ಮ ಹಕ್ಕು ಅದರ ಬಗ್ಗೆ ಪ್ರೀತಿ ಹಾಗೂ ಅಭಿಮಾನ ಬೆಳೆಸಿಕೊಳ್ಳಿ ಎಂದು ಕರೆ ನೀಡಿ, 78ನೇ ಸ್ವತಂತ್ರೋತ್ಸವದ ಶುಭಾಶಯ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಆರ್.ಡಿ. ಜನಾರ್ದನ ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರುಗಳಾದ ಉಲ್ಲಾಸ್ ಶಾನಭಾಗ, ರಾಜೇಂದ್ರ ಬದ್ಧಿ, ಎಸ್.ಕೆ. ಹೆಗಡೆ, ಗೋಪಾಲಕೃಷ್ಣ ನೇತ್ರೆಕರ್, ಉಪಸ್ಥಿತರಿದ್ದರು. ಪತ್ರಕರ್ತರಾದ ಶಂಕರ ಭಟ್ಟ ತಾರೀಮಕ್ಕಿ, ನಾಗರಾಜ ಮದ್ಗುಣಿ, ಜಗದೀಶ ನಾಯಕ, ಶಾಸಕರ ಆಪ್ತ ಕಾರ್ಯದರ್ಶಿ ಕಮಲಾಕರ ನಾಯ್ಕ, ಆಪ್ತ ಸಹಾಯಕ ನಾಗರಾಜ ನಾಯ್ಕ, ಸಾಮಾಜಿಕ ಕಾರ್ಯಕರ್ತ ಡಾ. ರವಿ ಭಟ್ಟ ಬರಗದ್ದೆ, ಹಿರಿಯ ಮತ್ತು ಕಿರಿಯ ಉಪನ್ಯಾಸಕರು, ಬೋದಕೇತರ ಸಿಬ್ಬಂದಿಗಳು, ಕಾಲೇಜಿನ ವಿದ್ಯಾರ್ಥಿಗಳು ಮತ್ತು ಐಟಿಐ ಸಂಸ್ಥೆಯ ವಿದ್ಯಾರ್ಥಿಗಳು ಇದ್ದರು.