Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Tuesday, 6 August 2024

ವಜ್ರಳ್ಳಿ : ಕೊಳೆರೋಗದಿಂದ ಅಡಿಕೆ ಬೆಳೆ ನಷ್ಟ: ರೈತರು ಸಂಕಟದಲ್ಲಿ



ವರದಿ ; ದತ್ತಾತ್ರೇಯ ಭಟ್ಟ ಕಣ್ಣಿಪಾಲ 
ಯಲ್ಲಾಪುರ : ತಾಲೂಕಿನ ವಜ್ರಳ್ಳಿಯ ಬೀಗಾರ, ವಜ್ರಳ್ಳಿ, ತೇಲಂಗಾರ, ಹೊನ್ನಗದ್ದೆ ಸೇರಿದಂತೆ ಹಲವಾರು ಹಳ್ಳಿಗಳಲ್ಲಿ ಅಡಿಕೆ ಕೊಳೆರೋಗ ವ್ಯಾಪಕವಾಗಿ ಹರಡಿದೆ. ನಿರಂತರ ಮಳೆಯಿಂದಾಗಿ ಬೆಳೆಗಾರರು ಕಂಗಾಲಾಗಿದ್ದು, ಔಷಧಿ ಸಿಂಪರಣೆಯ ಮೂಲಕ ರೋಗವನ್ನು ನಿಯಂತ್ರಣ ತರಲು ಸಾಧ್ಯವಾಗುತ್ತಿಲ್ಲ. ಬಿರುಸಿನ ಗಾಳಿ ಹಾಗೂ ಮಳೆಯಿಂದ ಎತ್ತರದ ಅಡಿಕೆ ಮರಗಳು ನೆಲಕ್ಕುರುಳಿವೆ. ಅಡಿಕೆ ಬೆಳೆಗಾರರು ಈ ಬಾರಿ ಇಳುವರಿ ಕುಂಠಿತವಾಗುವ ಭಯದಲ್ಲಿ ಸಂಕಟ ಅನುಭವಿಸುತ್ತಿದ್ದಾರೆ. 
  ಕೊಳೆರೋಗ ತೀವ್ರವಾಗಿ ಹರಡಿರುವುದರಿಂದ ಔಷಧಿ ಸಿಂಪರಣೆ ಮಾಡಲು ಕೊನೆಗೌಡರ ಕೊರತೆ ಉಂಟಾಗಿದೆ. ಕೊಳೆ ಅಡಿಕೆ ಒಣಗಿಸಲು ಡ್ರೈಯರ್‌ಗಳ ಕೊರತೆಯಿಂದ ಬೆಳೆಗಾರರು ಕಷ್ಟದಲ್ಲಿದ್ದಾರೆ. ಬಲಿಯದ ಎಳೆಯ ಅಡಿಕೆಗಳು ಕೊಳೆರೋಗದಿಂದ ಉದುರಿದ ಪರಿಣಾಮ ಮುಂಬರುವ ಫಸಲಿನಲ್ಲಿ ಅಪಾರ ಬೆಳೆ ನಷ್ಟ ಸಂಭವಿಸುವ ಸಾಧ್ಯತೆಯಿದೆ.
 

 ವಜ್ರಳ್ಳಿಯ ಭಾಗದಲ್ಲಿ ಭತ್ತ, ಕಬ್ಬು, ಅಡಿಕೆ, ತೆಂಗು, ಗೇರು, ಮಾವು ಮುಂತಾದ ಪಾರಂಪರಿಕ ಬೆಳೆಗಳನ್ನು ನಂಬಿದ ರೈತರು ಈಗ ಅತೀವೃಷ್ಟಿಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ದಶಕದಿಂದ ಇಷ್ಟೊಂದು ಪ್ರಮಾಣದಲ್ಲಿ ಬೆಳೆ ನಷ್ಟವಾಗಿರುವುದರಿಂದ ಸರ್ಕಾರದಿಂದ ಪರಿಹಾರ ಘೋಷಿಸುವಂತೆ ರೈತರು ಒತ್ತಾಯಿಸಿದ್ದಾರೆ.

  "ಅಡಿಕೆ ಮರಗಳು ಗಾಳಿಯಿಂದ ಬಿದ್ದು, ಕೊಳೆರೋಗದಿಂದ ೫೦% ಹಾನಿಯಾಗಿದ್ದು, ತೋಟಗಾರಿಕೆ ಇಲಾಖೆ ಈ ಬಗ್ಗೆ ಗಮನಹರಿಸಬೇಕಾಗಿದೆ. ಸ್ಥಳೀಯ ಪಂಚಾಯತ ಮತ್ತು ಸೇವಾ ಸಹಕಾರಿ ಸಂಘಗಳು ಸಮೀಕ್ಷೆ ನಡೆಸಿ, ರೈತರಿಗೆ ಬೆಳೆ ವಿಮೆ ನೀಡುವ ಕ್ರಮ ತೆಗೆದುಕೊಳ್ಳಬೇಕು." ..... ವಿ.ಎನ್. ಭಟ್ಟ, ಸಾಮಾಜಿಕ ಕಾರ್ಯಕರ್ತ

 "ವಜ್ರಳ್ಳಿ ಭಾಗದ ರೈತರು ತೋಟದ ಸಮೀಕ್ಷೆ ಮಾಡಿ ಬೆಳೆ ಹಾನಿಯ ವರದಿ ಸಿದ್ಧಪಡಿಸುವಂತೆ ತಾಲೂಕು ಆಡಳಿತಕ್ಕೆ ಮನವಿ ಮಾಡುತ್ತಿದ್ದಾರೆ. ಸ್ಥಳೀಯ ಆಡಳಿತ ರೈತರ ನೆರವಿಗೆ ಮುಂದಾಗಬೇಕು." ...... ನವೀನ ಕಿರಗಾರೆ, ವಜ್ರಳ್ಳಿ ಸಹಕಾರಿ ಸಂಘದ ಸದಸ್ಯ.