ಯಲ್ಲಾಪುರ: ಈರಾಪುರ ಗ್ರಾಮದ ತೋಟಗಾರರು ಅಡಿಕೆ ತೋಟಗಳಲ್ಲಿ ಕೊಳೆ ರೋಗ ಉಲ್ಬಣಗೊಂಡಿದ್ದು, ರೈತರು ಆತಂಕದಿಂದ ತತ್ತರಿಸಿ ಹೋಗಿದ್ದಾರೆ.
ಈರಾಪುರದ ರೈತ ಪ್ರಸನ್ನ ಹೆಗಡೆ ಅವರ 1 ಎಕರೆ 37 ಗುಂಟೆ ತೋಟದಲ್ಲಿ ಕೊಳೆ ರೋಗ ಕಂಡುಬಂದಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆ ಇದಕ್ಕೆ ಮುಖ್ಯ ಕಾರಣವಾಗಿದೆ. ಮಳೆ ಕಡಿಮೆ ಇದ್ದಾಗ ಒಂದು ಬಾರಿ ಅಡಿಕೆ ಮರಗಳಿಗೆ ಕ್ರಿಮಿನಾಶಕ ಸಿಂಪಡನೆ ಮಾಡಲಾಗಿದೆ. ಆದರೆ, ಎರಡನೇ ಬಾರಿಗೆ ಸಿಂಪಡಿಸಲು ಮಳೆ ಅವಕಾಶ ನೀಡುತ್ತಿಲ್ಲ. ಈ ಪರಿಣಾಮವಾಗಿ, ಈರಾಪುರದ ಬಹುತೇಕ ತೋಟಗಳಲ್ಲಿ ಕೊಳೆ ರೋಗ ಹರಡಿದೆ.
ಇದರ ಜೊತೆಗೆ ಮಂಗನ ಕಾಟವು ಕೂಡ ಹೆಚ್ಚಾಗಿದ್ದು, ಅಡಿಕೆ ಬೆಳೆಗಾರರು ಎರಡೂ ಸಮಸ್ಯೆಯಿಂದ ಬಳಲುತ್ತಿದ್ದಾರೆ. ರೈತರು, ಸರ್ಕಾರದಿಂದ ತಕ್ಷಣದ ಪರಿಹಾರವನ್ನು ಒದಗಿಸುವಂತೆ ಆಗ್ರಹಿಸಿದ್ದಾರೆ. ಮಂಗಗಳನ್ನು ಸ್ಥಳಾಂತರಗೊಳಿಸಬೇಕು ಮತ್ತು ಕೊಳೆ ರೋಗಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿ ಕೀರ್ತಿ ಬಿಎಂ ಅವರ ಬಳಿ ಮನವಿ ಮಾಡಿದ್ದಾರೆ.
ಅಧಿಕಾರಿ ಕೀರ್ತಿ, ಈ ಭಾಗದಲ್ಲಿ ಕೊಳೆ ರೋಗ ಉಲ್ಬಣಗೊಳ್ಳುತ್ತಿರುವುದನ್ನು ಸ್ವತಃ ಪರಿಶೀಲಿಸಿದ್ದೆನೆ, ಮೇಲಾಧಿಕಾರಿಗಳಿಗೆ ಈ ವಿಷಯವನ್ನು ತಲುಪಿಸಿ, ಸ್ಥಳ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಪರಿಹಾರ ಕ್ರಮಗಳನ್ನು ಶಿಫಾರಸು ಮಾಡುವ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ತಿಮ್ಮಣ್ಣ ಗಾಂವ್ಕರ್ ಕೂಡ ಉಪಸ್ಥಿತರಿದ್ದರು.