ಯಲ್ಲಾಪುರ : ಯಲ್ಲಾಪುರದಲ್ಲಿ ಹಿಂದೂ ಸಮುದಾಯದ ಜನರು ಅಂತ್ಯಕ್ರಿಯೆಗಳಿಗೆ ಕಟ್ಟಿಗೆ ಕೊರತೆಯನ್ನು ಎದುರಿಸುತ್ತಿದ್ದಾರೆ. ಪಟ್ಟಣದಲ್ಲಿ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಎರಡು ಕಟ್ಟಿಗೆ ಡಿಪೋಗಳು ಮುಚ್ಚಲ್ಪಟ್ಟಿದ್ದು, ಖಾಸಗಿ ಮೂಲಗಳಿಂದ ಕಟ್ಟಿಗೆ ಪಡೆಯುವುದು ಕಷ್ಟಕರವಾಗಿದೆ.
ಯಲ್ಲಾಪುರದಲ್ಲಿ ಟಿಂಬರ್ ವ್ಯವಹಾರ ಹೆಚ್ಚು :
ಯಲ್ಲಾಪುರ ಟಿಂಬರ್ ವ್ಯವಹಾರಕ್ಕೆ ಹೆಸರುವಾಸಿಯಾಗಿದ್ದರೂ, ಪಟ್ಟಣದೊಳಗೆ ಕಟ್ಟಿಗೆ ಕೊರತೆ ತೀವ್ರವಾಗಿದೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಮತ್ತು ಸಬಗೇರಿ ನರ್ಸರಿ ಬಳಿ ಇದ್ದ ಕಟ್ಟಿಗೆ ಡಿಪೋಗಳು ಬಂದ್ ಆಗಿವೆ. ಹೆಚ್ಚುತ್ತಿರುವ ಕೂಲಿ, ಸಾಗಾಣಿಕೆ ವೆಚ್ಚಗಳು ಮತ್ತು ಕಡಿಮೆ ಬೇಡಿಕೆಯಿಂದಾಗಿ ಉರುವಲು ಕಟ್ಟಿಗೆ ಮಾರಾಟ ಮಾಡಲು ಟೆಂಡರ್‌ಗಳಿಗೆ ಸ್ಪಂದನೆ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ.
ಕೆಲವು ಖಾಸಗಿ ವ್ಯಕ್ತಿಗಳು ತಮ್ಮ ಜಮೀನಿನಲ್ಲಿ ಬೆಳೆದ ಮರಗಳ ಕಟ್ಟಿಗೆಗಳನ್ನು ಮಾರಾಟ ಮಾಡುತ್ತಿದ್ದರೂ, ಅವರಲ್ಲಿಯೂ ಸಹ ಕಟ್ಟಿಗೆ ದೊರೆಯುವ ಖಾತ್ರಿ ಇಲ್ಲ. ಇದರಿಂದಾಗಿ ಅಂತ್ಯಕ್ರಿಯೆ ನೆರವೇರಿಸಲು ಜನರು ಪರದಾಡುವಂತಾಗಿದೆ.
ಹಿಂದೂ ಮುಖಂಡರ ಅಸಮಾಧಾನ :
ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಗಜಾನನ ನಾಯ್ಕ ತಳ್ಳಿಕೇರಿ ಅವರು ಅಭಿಪ್ರಾಯಪಟ್ಟು, ಕಳೆದ ಕೆಲವು ವರ್ಷಗಳಿಂದ ಈ ಸಮಸ್ಯೆ ತೀವ್ರವಾಗಿದೆ ಎಂದು ಹೇಳಿದ್ದಾರೆ. "ಅಂತ್ಯಕ್ರಿಯೆಗೆ ಕಟ್ಟಿಗೆ ಪಡೆಯುವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ತಾಲೂಕು ಆಡಳಿತ, ಪಟ್ಟಣ ಪಂಚಾಯಿತಿ ಮತ್ತು ಜನಪ್ರತಿನಿಧಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಅಂತ್ಯಕ್ರಿಯೆಗಳಿಗೆ ಅಗತ್ಯವಾದ ಕಟ್ಟಿಗೆಯನ್ನು ಸಂಗ್ರಹಿಸಿ ಇಡಲು ಕ್ರಮ ಕೈಗೊಳ್ಳಬೇಕು", "ಪಟ್ಟಣದಲ್ಲಿ ಶೇ.60 ರಷ್ಟು ಜನಸಂಖ್ಯೆ ಹೊಂದಿರುವ ಹಿಂದೂ ಸಮುದಾಯಕ್ಕೆ ಸೇರಿದ ರುದ್ರಭೂಮಿಯನ್ನು ಈ ರೀತಿ ನಿರ್ಲಕ್ಷಿಸಿರುವುದು ದುರಂತ" ಎಂದು ಅವರು ಹೇಳಿದ್ದಾರೆ.
ಹಿಂದೂ ರುದ್ರ ಭೂಮಿಯೂ ನಿರ್ಲಕ್ಷ :
ಯಲ್ಲಾಪುರದ ಹಿಂದೂ ರುದ್ರಭೂಮಿಯ ನಿರ್ಲಕ್ಷ್ಯದ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸ್ಮಶಾನದಲ್ಲಿ ಮೂಲ ಸೌಕರ್ಯಗಳ ಕೊರತೆ ಇದ್ದು, ಶವಸಂಸ್ಕಾರಕ್ಕೆ ಬಳಸುವ ಕಟ್ಟೆಗಳು ದುರ್ಬಲಗೊಂಡಿವೆ. ಸ್ವಚ್ಛತೆ ಇಲ್ಲದೆ ಗಿಡಗಂಟಿಗಳು ಬೆಳೆದು ನಿಂತಿವೆ. ಈ ಹಿಂದೆ ಪತ್ರಿಕೆಗಳಲ್ಲಿ ವರದಿಯಾದ ನಂತರ ಸ್ಮಶಾನದ ಅಭಿವೃದ್ಧಿಗೆ 5 ಲಕ್ಷ ರೂ. ಅನುದಾನ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ವರ್ಷ ಕಳೆದರೂ ಯಾವುದೇ ಕೆಲಸ ನಡೆದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.