ಯಲ್ಲಾಪುರ: 2023-24 ಸಾಲಿನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಶೇ. 94.5 ಅಂಕಗಳೊಂದಿಗೆ ದನಗರಗೌಳಿ ಸಮುದಾಯದಲ್ಲಿ ಅತ್ಯಂತ ಹೆಚ್ಚು ಅಂಕಗಳನ್ನು ಪಡೆದು ಸಮಾಜಕ್ಕೆ ಕೀರ್ತಿ ತಂದಿರುವ ಹೊಳೆನಂದಿಕಟ್ಟಾ ಗೌಳಿವಾಡ ಗ್ರಾಮದ ಜನ್ನಿ ಬಾಬು ಹುಂಬೆ ಅವರಿಗೆ ಅವರ ನಿವಾಸದಲ್ಲಿ ಕರ್ನಾಟಕ ರಾಜ್ಯ ದನಗರಗೌಳಿ ಯುವ ಸೇನೆಯಿಂದ ಶುಕ್ರವಾರ ಸನ್ಮಾನಿಸಲಾಯಿತು.
ಸನ್ಮಾನಿಸಿ ಮಾತನಾಡಿದ ದನಗರಗೌಳಿ ಯುವ ಸೇನೆಯ ರಾಜ್ಯ ಅಧ್ಯಕ್ಷ ಸಂತೋಷ ವರಕ್, "ಜನ್ನಿ ಹುಂಬೆ, ದಟ್ಟ ಕಾಡಿನ ಮಧ್ಯೆ ಇರುವ ಹೊಳೆನಂದಿಕಟ್ಟಾ ಗ್ರಾಮದ ಅತ್ಯಂತ ಕಡು ಬಡತನದ ಕುಟುಂಬದಲ್ಲಿ ಹುಟ್ಟಿ ಬೆಳೆದಳು. ತನ್ನ ಪರಿಶ್ರಮದ ಮೂಲಕ, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಯಲ್ಲಾಪುರ ತಾಲ್ಲೂಕಿನಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುವುದು ಹೆಮ್ಮೆ ಮತ್ತು ಗೌರವದ ವಿಷಯವಾಗಿದೆ" ಎಂದು ಹೇಳಿದರು.
ಜನ್ನಿಯ ಸಾಧನೆ, ಬಡತನವು ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ. ಊರಿನಿಂದ ಬಸ್ ಸೌಲಭ್ಯವಿಲ್ಲದೇ ಪ್ರತಿದಿನವೂ ಏಳೇಳು ಕಿಮೀ ನಡೆದು ಕಾಲೇಜ್‌ಗೆ ಬರುವ ಕಷ್ಟದಲ್ಲೂ, ಅವಳು ಉತ್ತಮವಾಗಿ ಓದಿ ಇತರರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ. ಈ ಸಾಧನೆಯ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ದನಗರಗೌಳಿ ಯುವ ಸೇನೆಯಿಂದ ಅವಳನ್ನು ಗುರುತಿಸಿ, ಸಮಾಜಕ್ಕೆ ಪರಿಚಯಿಸಲು ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ಈ ಸಂದರ್ಭದಲ್ಲಿ ಜನ್ನಿ ತಂದೆ ಬಾಬು ಹುಂಬೆ ತಾಯಿ ನಾಗೂಬಾಯಿ ಹುಂಬೆ, ಯುವ ಸೇನೆಯ ಸದಸ್ಯರಾದ ಬಮ್ಮು ಫೋಂಡೆ, ಲಕ್ಷ್ಮಣ ಕೋಕರೆ ಕರಡೊಳ್ಳಿ, ಸಮೀಧಾ ಫೌಂಡೇಷನ್ ಸದಸ್ಯ ರಾಮು ಮಲಗೊಂಡೆ ಊರಿನ ಗ್ರಾಮಸ್ಥರಾದ ಧೋಂಡು ಪಟಕಾರೆ, ಧೋಂಡು ಕಾತ್ರಟ್, ರಾಮು ಎಡಗೆ, ಬಾಬು ಹುಂಬೆ, ಯುವಕರು, ಮಾತೆಯರು ಇದ್ದರು. ಬಮ್ಮು ಫೋಂಡೆ ನಿರೂಪಿಸಿ, ವಂದಿಸಿದರು.
ಹಾಸಣಗಿ ಗ್ರಾಮ ಪಂಚಾಯತದಲ್ಲಿ ಸಾಮಾಜಿಕ ಭದ್ರತೆ ಕುರಿತು ಅರಿವು ಕಾರ್ಯಕ್ರಮ
ಯಲ್ಲಾಪುರ: ಹಾಸಣಗಿ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆದ ಸಾಮಾಜಿಕ ಭದ್ರತೆ ಕುರಿತಾದ ಸಾರ್ವಜನಿಕ ಅರಿವು ಕಾರ್ಯಕ್ರಮವು ಸ್ಥಳೀಯ ಸಮುದಾಯದ ಸದಸ್ಯರಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯಿತು.
ಈ ಕಾರ್ಯಕ್ರಮದಲ್ಲಿ, ಬ್ಯಾಂಕಿಂಗ್ ವ್ಯವಹಾರಗಳು, ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುವ ವಂಚನೆಗಳು, ಎಟಿಎಂ ಕಾರ್ಡ್‌ಗಳ ಉಪಯೋಗಗಳು ಮತ್ತು ಮುದ್ರಾ ಯೋಜನೆ, ಪ್ರಧಾನ ಮಂತ್ರಿ ಓಡಿ ಯೋಜನೆ, ಹಾಗೂ ಜನಧನ ಯೋಜನೆಗಳ ಕುರಿತು ಮಾಹಿತಿಯನ್ನು ಕೆನರಾ ಬ್ಯಾಂಕ್‌ನ ಮ್ಯಾನೇಜರ್‌ರಾದ ಶ್ರೀನಾಥ್ ಕೊತಳೆ ಅವರು ಹಂಚಿಕೊಂಡರು.
ಈ ಕಾರ್ಯಕ್ರಮವು ಸ್ಥಳೀಯ ಜನರಲ್ಲಿ ಸಾಮಾಜಿಕ ಭದ್ರತೆ ಮತ್ತು ಬ್ಯಾಂಕಿಂಗ್ ಸೇವೆಗಳ ಬಗ್ಗೆ ಅರಿವು ಮೂಡಿಸಲು ಸಹಾಯ ಮಾಡಿತು. ಸಾರ್ವಜನಿಕರು ತಮ್ಮ ಪ್ರಶ್ನೆಗಳನ್ನು ಕೇಳಲು ಅವಕಾಶ ಪಡೆದಿದ್ದು, ಈ ಮೂಲಕ ಅವರಿಗೆ ತಮ್ಮ ಹಣಕಾಸು ವ್ಯವಹಾರಗಳನ್ನು ಸುಗಮವಾಗಿ ನಿರ್ವಹಿಸಲು ಮತ್ತು ವಂಚನೆಗಳಿಂದ ದೂರ ಉಳಿಯಲು ಮಾರ್ಗದರ್ಶನ ನೀಡಲಾಯಿತು.
ಹಾಸಣಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿನೋದಾ ಚಂದ್ರಶೇಖರ ಬಿಲ್ಲವ, ಸದಸ್ಯರಾದ ಎಂ.ಕೆ. ಭಟ್ಟ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶಿವಕುಮಾರ ವಿರಕ್ತಮಠ, ಹಾಗೂ ಧಾನ್ ಫೌಂಡೇಶನ್‌ನ ಶ್ರುತಿ ನೆಲವಾಡಿ, ಹಿರಿಯಾ ಪೂಜಾರಿ ಉಪಸ್ಥಿತರಿದ್ದರು.