ಯಲ್ಲಾಪುರ: ಕಾಳಿ ನದಿ ಸೇತುವೆ ಕುಸಿತದಿಂದಾಗಿ ನದಿಯಲ್ಲಿ ಬಿದ್ದ ಲಾರಿಯನ್ನು ಗುರುವಾರ ಸಂಜೆ ಯಶಸ್ವಿಯಾಗಿ ಮೇಲೇರಿಸಲಾಗಿದೆ. ಈ ಕಾರ್ಯಾಚರಣೆ ಯಲ್ಲಾಪುರದ ಇಮ್ರಾನ್ ಸನದಿ ಕ್ರೇನ್ ಮತ್ತು ಸ್ಥಳೀಯ ಕಾರ್ಮಿಕರ ಸಹಾಯದಿಂದ ನಡೆಯಿತು.
ಆಗಸ್ಟ್ 7 ರಂದು ಮಧ್ಯರಾತ್ರಿ ಕೋಡಿಭಾಗದ ಗೋವಾ ಸಂಪರ್ಕಿಸುವ ಸೇತುವೆ ಕುಸಿದು ಬಿದ್ದಾಗ, ತಮಿಳುನಾಡು ಮೂಲದ ಲಾರಿ ನದಿಗೆ ಬಿದ್ದಿತ್ತು. ಚಾಲಕ ಬಾಲಮುರುಗನ್ ಪ್ರಾಣಾಪಾಯದಿಂದ ಪಾರಾಗಿದ್ದರೂ, ನದಿಯ ಹರಿವಿನ ಮಟ್ಟ ಹೆಚ್ಚಾಗಿರುವ ಕಾರಣ ಲಾರಿ ಮೇಲೇರಿಸಲು ಸಾಧ್ಯವಾಗದ ಕಾರಣ ಕಾರ್ಯಾಚರಣೆ ವಿಳಂಬವಾಯಿತು. ಇದು ಜಿಲ್ಲಾಡಳಿತಕ್ಕೆ ತೀವ್ರ ತಲೆ ನೋವು ಮೂಡಿಸಿತ್ತು.
ನದಿಯ ಹರಿವಿನ ಮಟ್ಟ ಕಡಿಮೆ ಆಗುತ್ತಿದ್ದಂತೆ, ಜಿಲ್ಲಾಡಳಿತ ಮತ್ತು ಐಆರ್‌ಬಿ ಕಂಪನಿಯ ತಂಡ ಕಾರ್ಯಾಚರಣೆಗೆ ಮುಂದಾಗಿತ್ತು. ಆದರೆ, ಕಬ್ಬಿಣದ ಹಗ್ಗ ತುಂಡಾಗುತ್ತಿರುವುದರಿಂದ ಕಾರ್ಯಾಚರಣೆ ವಿಳಂಬವಾಗಿತ್ತು. ಗುರುವಾರ ಬೆಳಿಗ್ಗೆ ಎರಡು ಕ್ರೇನ್‌ಗಳ ಮೂಲಕ ಕಾರ್ಯಾಚರಣೆ ಪುನಾರಂಭವಾಯಿತು.
ಈಶ್ವರ್ ಮಲ್ಪೆ ಮತ್ತು ಸ್ಥಳೀಯ ಮೀನುಗಾರರ ಸಹಾಯದಿಂದ ಲಾರಿ ದಡಕ್ಕೆ ತರಲು ಮುಳುಗು ತಜ್ಞರ ತಂಡ ಯಶಸ್ವಿಯಾಗಿ ಕಾರ್ಯನಿರ್ವಹಿಸಿತು. ಸ್ಥಳೀಯರು ಈ ಸಾಧನೆಗೆ ಪಟಾಕಿ ಸಿಡಿಸಿ ಗೌರವ ಸೂಚಿಸಿದರು.