ಯಲ್ಲಾಪುರ: ಮದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಾಪುರ ಗ್ರಾಮದಲ್ಲಿ ಗುರುವಾರ ರಾತ್ರಿ 9 ರಿಂದ 10 ಆನೆಗಳ ಹಿಂಡು ಗೋವಿನ ಜೋಳದ ಗದ್ದೆಗೆ ದಾಳಿ ಮಾಡಿದ್ದು, ರೈತ ಮೋಹನ ಕೃಷ್ಣ ದೇಸಾಯಿಯವರಿಗೆ ಲಕ್ಷಾಂತರ ರೂಪಾಯಿ ಹಾನಿ ಉಂಟುಮಾಡಿದೆ.
ಮೋಹನ ದೇಸಾಯಿ, ಕಳೆದ ಕೆಲವು ತಿಂಗಳ ಹಿಂದೆ 5 ಎಕರೆ ಗದ್ದೆಯಲ್ಲಿ ಗೋವಿನ ಜೋಳ ಬೆಳೆದಿದ್ದರು. ಈ ಗದ್ದೆಗೆ 2 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿತ್ತು, ಇನ್ನೂ ಕೆಲವೇ ದಿನಗಳಲ್ಲಿ ಅವರು ಉತ್ತಮ ಫಲ ಬರುವ ನಿರೀಕ್ಷಿಸುತ್ತಿದ್ದರು. ಆದರೆ, ಆನೆಗಳ ದಾಳಿಯಿಂದ ಎಲ್ಲಾ ಬೆಳೆಯು ಸಂಪೂರ್ಣವಾಗಿ ನೆಲಸಮವಾಗಿದ್ದು, ರೈತನ ಕನಸುಗಳು ಒಡೆದು ಹೋಗಿದೆ.
ಅಧಿಕಾರಿಗಳಿಂದ ಸ್ಥಳ ಸಮೀಕ್ಷೆ :
ಕಿರವತ್ತಿ ವಲಯ ಅರಣ್ಯಾಧಿಕಾರಿ ದಿನೇಶ ಮಿರ್ಜಾನಕರ್, ಡಿಆರ್‌ಎಫ್‌ಓ ವಿನಯ ರಂಗೋನಟ್ಟಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ರೈತನಿಗೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸುವ ಭರವಸೆ ನೀಡಿದ್ದಾರೆ.
ಸ್ಥಳೀಯರು, ಮದನೂರು ಹುಣಶೆಟ್ಟಿಕೊಪ್ಪ ಮತ್ತು ಕಳಸೂರು ಗ್ರಾಮಗಳಲ್ಲಿ ಕಳೆದ ಕೆಲವು ದಿನಗಳಿಂದ 10-12 ಆನೆಗಳ ಹಿಂಡು ಪ್ರತಿದಿನವೂ ಗದ್ದೆ ಮತ್ತು ತೋಟಗಳಿಗೆ ದಾಳಿ ಮಾಡುತ್ತಿವೆ ಎಂದು ತಿಳಿಸಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಈ ಭಾಗದ ರೈತರ ಹೊಲಗಳಿಗೆ ಆನೆಗಳ ನಿರಂತರ ದಾಳಿ ನಡೆಯುತ್ತಿದೆ. ಈ ಪರಿಸ್ಥಿತಿಯು ರೈತರ ಜೀವನವನ್ನು ಕಷ್ಟಗೊಳಿಸುತ್ತಿದ್ದು, ಹತ್ತರಿಂದ ಹದಿನಾರರ ಸಂಖ್ಯೆಯಲ್ಲಿರುವ ಆನೆಗಳ ತಂಡಗಳನ್ನು ಸ್ಥಳಾಂತರಿಸುವ ಅಗತ್ಯವಿದೆ ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಹೆಗ್ಗಾಪುರ ಗ್ರಾಮದ ರೈತ ಮೋಹನ ದೇಸಾಯಿಗೆ ಹಾನಿಯ ಪರಿಹಾರ ನೀಡಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು, ಈ ಘಟನೆ ರೈತರ ಮೇಲೆ ಕೆಟ್ಟ ಪರಿಣಾಮ ಬೀರಿದ್ದು, ಸರ್ಕಾರ ಮತ್ತು ಅರಣ್ಯ ಇಲಾಖೆಯು ಶೀಘ್ರದಲ್ಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಎಂದು ಶ್ರೀ ಗ್ರಾಮದೇವಿ ಸಹಕಾರಿ ಸಂಘದ ಅಧ್ಯಕ್ಷ ಮಹೇಶ ದೇಸಾಯಿ ಮತ್ತು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.