ಯಲ್ಲಾಪುರ: ಪಟ್ಟಣದ ಇಂದಿರಾ ಕ್ಯಾಂಟೀನ್‌ನ ಮೇಲ್ಚಾವಣಿ ರಿಪೇರಿ ಕಾಮಗಾರಿಯನ್ನು ಕಾಮಗಾರಿ ಆದೇಶ ನೀಡುವ ಮೊದಲೇ ಪ್ರಾರಂಭಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ರವೀಂದ್ರನಗರ್ ವಾರ್ಡ್ ಸದಸ್ಯ ಸೋಮೇಶ್ವರ ನಾಯ್ಕ ಆರೋಪಿಸಿದ್ದಾರೆ.
ಈ ಕಾಮಗಾರಿ ನಿರ್ವಹಣೆಗೆ ಹೆಸ್ಕಾಂನಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯಬೇಕಿತ್ತು. ಆದರೆ, ಗುತ್ತಿಗೆದಾರ ಈ ನಿಯಮವನ್ನು ಪಾಲಿಸದೆ, ಇಂದಿರಾ ಕ್ಯಾಂಟೀನ್‌ನಿಂದ ವಿದ್ಯುತ್ ಸಂಪರ್ಕ ಪಡೆದು ವೆಲ್ಡಿಂಗ್ ಕಟಿಂಗ್ ಮುಂತಾದ ಕೆಲಸಗಳನ್ನು ಮಾಡುತ್ತಿದ್ದಾನೆ. ಇದರಿಂದ ಇಂದಿರಾ ಕ್ಯಾಂಟೀನ್‌ಗೆ ಬರುವ ಹೆಚ್ಚುವರಿ ಬಿಲ್ ಪಟ್ಟಣ ಪಂಚಾಯಿತಿ ಬರಿಸಬೇಕಾಗಿದೆ ಎಂದು ಸೋಮೇಶ್ವರ ನಾಯ್ಕ ಹೇಳಿದರು.
ಇತರ ಕಾಮಗಾರಿಗಳಲ್ಲಿಯೂ ಅನುಮಾನ!
ವಾರ್ಡ್ ನಂಬರ್ 17 ರವೀಂದ್ರ ನಗರದಲ್ಲಿ ಗಟಾರ ಮೇಲಿನ ಮುಚ್ಚಳಿಕೆ, ಸಿಸಿ ರಸ್ತೆ, ಮಿನಿ ಹೈ ಮಸ್ಟ್ ದೀಪದ ಕಂಬ ಇತ್ಯಾದಿ ಕೆಲಸಗಳು ಒಂದೇ ಅವಧಿಗೆ ಟೆಂಡರ್ ಆಗಿವೆ. ಆದರೆ, ತಮ್ಮ ವಾರ್ಡ್‌ನಲ್ಲಿಯ ಕೆಲಸಗಳಿಗೂ ವರ್ಕ್ ಆರ್ಡರ್ ನೀಡಲಾಗಿದೆಯೇ ಎಂಬ ಪ್ರಶ್ನೆಗೆ ಜನಪ್ರತಿನಿಧಿಯಾಗಿರುವ ತಮಗೆ ಅಸಮರ್ಪಕ ಉತ್ತರ ಪಟ್ಟಣ ಪಂಚಾಯಿತಿಯಿಂದ ಲಭ್ಯವಾಗಿದೆ ಎಂದು ಆರೋಪಿಸಿದ್ದಾರೆ.
ಸಾಮಗ್ರಿಗಳಲ್ಲಿಯೂ ಅನುಮಾನ!
ಇಂದಿರಾ ಕ್ಯಾಂಟೀನ್ ಮೇಲ್ಚಾವಣಿ ಟ್ರಸ್ ಮತ್ತು ಶೀಟ್ ಅಳವಡಿಕೆಗೆ, ಮುಂಡಗೋಡದಿಂದ ಒಬ್ಬ ಕಾಂಟ್ರಾಕ್ಟರ್ ಮತ್ತು ಯಲ್ಲಾಪುರದಿಂದ ಐದು ಜನ ಕಾಂಟ್ರಾಕ್ಟರ್‌ಗಳು ಟೆಂಡರ್ ಹಾಕಿದ್ದರು. ಆದರೆ, ಅವರಿಗೆ ಮಾಹಿತಿ ಇಲ್ಲದೆಯೇ ಕಾಮಗಾರಿ ಆದೇಶ ಭದ್ರಾವತಿಯಲ್ಲಿರುವ ಗುತ್ತಿಗೆದಾರರಿಗೆ ಲಭ್ಯವಾಗಿದೆ. ಕಾಮಗಾರಿ ಆದೇಶ ಬರುವ ನಾಲ್ಕು ದಿನಗಳ ಮೊದಲೇ ಗುತ್ತಿಗೆದಾರರು ಕೆಲಸ ಪ್ರಾರಂಭ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಇಂದಿರಾ ಕ್ಯಾಂಟೀನ್ ಮೇಲ್ಚಾವಣಿ ಟ್ರಸ್ ಮತ್ತು ಶೀಟ್ ಅಳವಡಿಕೆಯ ಸಾಮಗ್ರಿಗಳು ನಿಯಮಾನುಸಾರ ಇರುವಂತೆ ಕಂಡು ಬರುತ್ತಿಲ್ಲ. ಹೀಗಾಗಿ, ಕಾಮಗಾರಿ ಬಿಲ್ ನೀಡುವಾಗ ಸಂಪೂರ್ಣವಾಗಿ ಪರಿಶೀಲಿಸಿ ನೀಡಬೇಕು.
ಜಿಲ್ಲಾಧಿಕಾರಿಗಳಿಗೆ ದೂರು ನೀಡಲಿರುವ ಸೋಮೇಶ್ವರ ನಾಯ್ಕ.
ಪಟ್ಟಣ ಪಂಚಾಯಿತಿಯಲ್ಲಿ ಕಾಮಗಾರಿ ಆದೇಶ ಆಗುವ ಮೊದಲೇ ಕೆಲಸ ಪ್ರಾರಂಭಿಸಿರುವ ಕುರಿತು ತಾವು ಜಿಲ್ಲಾಧಿಕಾರಿಗಳು, ಸಂಬಂಧಪಟ್ಟ ಸಚಿವರು ಮತ್ತು ವಿಭಾಗಗಳಿಗೆ ದೂರು ನೀಡುವುದಾಗಿ ಸೋಮೇಶ್ವರ ನಾಯ್ಕ ಹೇಳಿದ್ದಾರೆ. ಕಾಮಗಾರಿ ಪ್ರಾರಂಭಿಸಿದ ದಿನದಂದು ತೆಗೆದ ಫೋಟೋದ ಜಿಪಿಎಸ್ ದಾಖಲೆ ಮತ್ತು ಕಾಮಗಾರಿ ಆದೇಶ ಪಟ್ಟಣ ಪಂಚಾಯಿತಿಯಲ್ಲಿ ನೀಡಿದ ದಿನಾಂಕ ಎರಡು ವ್ಯತ್ಯಾಸವಾಗಿದ್ದು, ಈ ಕಾಮಗಾರಿ ನೀಡುವಲ್ಲಿ ನಿಯಮಗಳನ್ನು ಪಾಲಿಸಿಲ್ಲ ಎಂಬ ಸಂಶಯವನ್ನು ಸೋಮೇಶ್ವರ ನಾಯ್ಕ ವ್ಯಕ್ತಪಡಿಸಿದ್ದಾರೆ.