Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Monday, 5 August 2024

ಮಾವಿನಮನೆ ಶಾಲೆಯಲ್ಲಿ ಶಿಕ್ಷಕಿಯ ಬೀಳ್ಕೊಡುಗೆ: ಗ್ರಾಮಸ್ಥರ ಭಾವನಾತ್ಮಕ ಬೀಳ್ಕೊಡುಗೆ

ಯಲ್ಲಾಪುರ : ತಾಲೂಕಿನ ಮಾವಿನಮನೆ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಿಕ್ಷಕಿ ಪ್ರತಿಮಾ ಕೋಮಾರರ ಬೀಳ್ಕೊಡುಗೆ ಸಮಾರಂಭವು ಗ್ರಾಮಸ್ಥರ ಹೃದಯವನ್ನು ಮುಟ್ಟುವಂತಹ ಒಂದು ಭಾವನಾತ್ಮಕ ಕ್ಷಣವಾಗಿತ್ತು. ಸುಮಾರು 17 ವರ್ಷಗಳ ಕಾಲ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ ಪ್ರತಿಮಾ ಅವರು ಈಗ ಶಿರಸಿಗೆ ವರ್ಗಾವಣೆ ಆಗಿರುವುದರಿಂದ, ಗ್ರಾಮಸ್ಥರು ಅವರನ್ನು ಅತ್ಯಂತ ಗೌರವದಿಂದ ಬೀಳ್ಕೊಟ್ಟರು.
   ಪಾಲಕರು, ಪೋಷಕರು ಮತ್ತು ಹಳೆಯ ವಿದ್ಯಾರ್ಥಿಗಳು ಶಿಕ್ಷಕಿಯ ಮಡಿಲು ತುಂಬಿ ಹಾರೈಸಿದರು. ಅರಿಶಿಣ, ಕುಂಕುಮ ಹಚ್ಚಿ, ಬಾಗಿನ ನೀಡಿ ಮುಂದಿನ ವೃತ್ತಿ ಜೀವನಕ್ಕೆ ಗ್ರಾಮದ ಮಹಿಳೆಯರು ಶುಭ ಹಾರೈಸಿದರು. ಅತ್ಯಂತ ಸರಳವಾದ ಈ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಜನ ಸೇರಿದ್ದು ಇದೊಂದು ವಿಶೇಷ ಘಟನೆಯಾಗಿದೆ. ಇಂತಹ ಸರಳ ಗ್ರಾಮದಲ್ಲಿ ಗುರುಗಳಿಗೆ ಇಷ್ಟೊಂದು ಪ್ರೀತಿ ಮತ್ತು ಗೌರವ ಸಿಗುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.
    ಈ ಸಮಾರಂಭದಲ್ಲಿ ಮಾವಿನಮನೆ ಗ್ರಾಮ ಪಂಚಾಯತ ಅಧ್ಯಕ್ಷರಾದ ಸುಬ್ಬಣ್ಣ ಕುಂಟೆಗಾಳಿ, ಆ ಭಾಗದ ಪಂಚಾಯತ ಸದಸ್ಯರಾದ ಮಾಬ್ಲೇಶ್ವರ ಭಟ್ಟ, ಸಮಾಜ ಸೇವಕರಾದ ಟಿ.ಸಿ.ಗಾಂವ್ಕಾರ, ಯಲ್ಲಾಪುರದ ಕ್ಷೇತ್ರ ಸಂಯೋಜಕರಾದ ಸಂತೋಷ ಜಿಗಳೂರ, ಸಿ.ಆರ್.ಪಿ ಪ್ರಭಾಕರ ಭಟ್ಟ, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಅನಂತ ಗೌಡ, ಎಸ್ .ಡಿ.ಎಮ್.ಸಿ ಎಲ್ಲಾ ಸದಸ್ಯರು, ಪಾಲಕ ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳು ಇದ್ದರು.
   ಈ ಕಾರ್ಯಕ್ರಮದ ನಿರ್ವಹಣೆಯನ್ನು ಅತಿಥಿ ಶಿಕ್ಷಕಿಯಾದ ಪ್ರತೀಕ್ಷಾ ಹೆಗಡೆ ಹಾಗೂ ಹಳೆ ವಿದ್ಯಾಥಿ೯ ದಿನೇಶ ಗೌಡ ನೆರವೇರಿಸಿದರು.

ಯಲ್ಲಾಪುರ ಪ.ಪಂಕ್ಕೆ ಹಿಂ ವರ್ಗದ ಮಹಿಳೆ ಅಧ್ಯಕ್ಷೆ ಉಪಾಧ್ಯಕ್ಷ ಸಾಮಾನ್ಯ ಮೀಸಲಾತಿ ನಿಗದಿ

ಯಲ್ಲಾಪುರ : ಯಲ್ಲಾಪುರ ಪಟ್ಟಣ ಪಂಚಾಯಿತಿಗೆ ಮುಂದಿನ ಅವಧಿಗೆ ಅಧ್ಯಕ್ಷರಾಗಿ ಹಿಂದುಳಿದ ವರ್ಗದ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಅಭ್ಯರ್ಥಿ ಸರಕಾರದಿಂದ ಅಧಿಸೂಚನೆ .
   ಕರ್ನಾಟಕ ಪುರಸಭೆಗಳ ಕಾಯಿದೆ, 1964 ರ ಪರಿಚ್ಛೇದ 42 ರ ಪ್ರಕಾರ ಮತ್ತು ಕರ್ನಾಟಕ ಪುರಸಭೆಗಳ ನಿಯಮ 13-A ಮತ್ತು 13 ರ ಅಡಿಯಲ್ಲಿ ಯಲ್ಲಾಪುರ ಪಟ್ಟಣ ಪಂಚಾಯತಿ ಗೆ ಮೀಸಲಾತಿ ನಿಗಧಿ ಪಡಿಸಿ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಟಿ. ಮಂಜುನಾಥ ಅಧಿಸೂಚನೆ ಹೊರಡಿಸಿದ್ದಾರೆ.

ಹಣ ಪಡೆದು ಭೂಮಿ ನೀಡದೇ ತಾಯಿಗೆ ವಂಚನೆ, ಮಗನಿಂದ ಆರೋಪ

ಯಲ್ಲಾಪುರ : ಇಲ್ಲಿಯ ವ್ಯಕ್ತಿಯೋರ್ವರು ತನ್ನ ತಾಯಿಯಿಂದ ಹಣ ಪಡೆದು ತಮ್ಮದ ಹೆಸರಲಲ್ಲದ ಭೂಮಿ ತೋರಿಸಿ ಮೋಸ ಮಾಡಿದ್ದಾರೆ ಎಂದು ಶಿಕ್ಷಕಿ ರೇವತಿ ನಾಯಕ ಅವರ ಪುತ್ರ ಶ್ರೀಶಾ ನಾಗ ಪೂಜಾರಿ ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ. ಈ ಬಗ್ಗೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ದಾಖಲೆ ಸಹಿತ ಮಾಹಿತಿ ನೀಡಿದ್ದಾರೆ.
   ಮಂಚಿಕೇರಿಯ ವ್ಯಕ್ತಿಯೊಬ್ಬರ ಮೂಲಕ ಪರಿಚಯವಾದ ಯಲ್ಲಾಪುರದ ಗೌರವಾನಿತ ವ್ಯಕ್ತಿಯ ಸಂಬಂಧಿಕ ಭೂ ವ್ಯವಹಾರದಲ್ಲಿ ತೊಡಗಿದ್ದು, ಭೂಮಿ ಕೊಡಸಲು ನನ್ನ ತಾಯಿಗೆ ವಾಗ್ದಾನ ಮಾಡಿದ್ದರು.
   ಭೂಮಿಯನ್ನು ತೋರಿಸಿ, 18.5 ಲಕ್ಷ ರೂ.ಗೆ 2.5 ಗುಂಟೆ ಭೂಮಿಯನ್ನು ಖರೀದಿಸಲು ಒಪ್ಪಂದ ಆಗಿತ್ತು. ಮುಂಗಡವಾಗಿ 5 ಲಕ್ಷ ರೂಪಾಯಿ ನೀಡುವಂತೆ ತಿಳಿಸಿದ , ಪಹಣಿ ಪತ್ರಿಕೆಯನ್ನು ತೋರಿಸಿದರು. ಆ ಪಹಣಿ ಪತ್ರಿಕೆಯಲ್ಲಿ ಇನ್ನೊಬ್ಬರ ಹೆಸರಿದ್ದರೂ, ತನ್ನ ಹೆಸರಿನಲ್ಲಿ ದಸ್ತಾವೇಜು ಮಾಡಿಕೊಡುತ್ತೇವೆಂದು ಭರವಸೆ ನೀಡಿದರು.
   ನನ್ನ ತಾಯಿ ಒಪ್ಪಂದಕ್ಕೆ ಸಹಿ ಮಾಡಿದರು. ಮೊದಲನೆಯ ಕಂತಿನ 1 ಲಕ್ಷ ರೂ. ನೀಡಿದ ನಂತರ, 4 ಲಕ್ಷ ರೂ. ಅಂಕೋಲಾ ಅರ್ಬನ್ ಬ್ಯಾಂಕಿನಲ್ಲಿ ಜಮಾ ಮಾಡಲಾಯಿತು. ಆದರೆ, ಭೂಮಿ ಪೋಡಿ ಆಗದ ಕಾರಣ, ವ್ಯಕ್ತಿ 3.7 ಲಕ್ಷ ರೂಪಾಯಿ ಮೌಲ್ಯದ ಚೆಕ್ ನೀಡಿದರೂ, ಅದು ಬೌನ್ಸ್ ಆಗಿದ್ದು ರಮಗೆ ಮೋಸ ಆಗಿದೆ ಎಂದು ತಿಳಿಸಿದ್ದಾರೆ.
  ಶ್ರೀಶಾ ತಮಗೆ ಆಗಿರುವ ಮೋಸ ಬೇರೆಯವರಿಗೆ ಆಗಬಾರದು ಎನ್ನುವ ಉದ್ದೇಶದಿಂದ ಪ್ರಕಟಣೆ ನೀಡುತ್ತಿರುವುದಾಗಿ ಹೇಳಿದ್ದಾರೆ.

ಕಳಚೆಯಲ್ಲಿ ಕೆಲ ಕಡೆ ಜರೆಯುತ್ತಿರುವ ಭೂಮಿ, ಮನೆ ಖಾಲಿ ಮಾಡುವಂತೆ ಸೂಚನೆ

ಯಲ್ಲಾಪುರ : ತಾಲೂಕಿನ ಕಳಚೆಯ ಮೂರು ಕಡೆಗಳಲ್ಲಿ ನಿಧಾನವಾಗಿ ಭೂಮಿ ಜರೆಯುತ್ತಿದೆ ಎಂದು ಮಾಹಿತಿ ದೊರಕಿದ್ದು, ಸ್ಥಲಾಂತರಗೊಳ್ಳುವಂತೆ ಕಂದಾಯ ಇಲಾಖೆಯಿಂದ ಇಲ್ಲಿಯ ಜನರಿಗೆ ತಿಳುವಳಿಕೆ ಪತ್ರ ನೀಡಲಾಗುತ್ತಿದೆ.
  ಕಳಚೆ ಭಾಗದ ದ ಮಾನಿಗದ್ದೆಕುಂಬ್ರಿಯ ಜನಾರ್ಧನ್ ಹೆಬ್ಬಾರ್ ಅವರ ತೋಟದ ಜಾಗದಲ್ಲಿ ಗುಡ್ಡ ಕುಸಿತ ಆಗುತ್ತಿರುವ ಹಿನ್ನೆಲೆಯಲ್ಲಿ ಅವರ ತೋಟಕ್ಕೆ ತೆರಳಿದ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲಿಸಲನೆ ಮಾಡಿದ್ಸಾರೆ
  ಕಳಚೆ ಗ್ರಾಮದ ದೇವಿಮನೆಕೇರಿಯ ಉದಯ ಚಂದ್ರಶೇಖರ ಐತಾಳರವರ ಮನೆಯ ಎದುರಗಡೆ ಭೂಕುಸಿತವಾಗುತ್ತಿದ್ದೂ, ಇವರಿಗೆ ಈಗಾಗಲೇ ಎರಡು ತಿಳುವಳಿಕೆ ಪತ್ರಗಳನ್ನು ನೀಡಿ ಸ್ಥಳಾಂತರಗೊಳ್ಳಲು ತಿಳಿಸಲಾಗಿದೆ. 
  ಕಳಚೆ ಭಾಗವಾದ ಮಾನಿಗದ್ದೆಕುಂಬ್ರಿಯ ಕಮಲಾಕರ ಗಣಪತಿ ಗಾಂವ್ಕರರವರ ಮನೆಯ ಎದುರಗಡೆ ಇದ್ದ ಭೂಮಿ ಕುಸಿಯುತ್ತಿದ್ದೂ, ಈ ಕುಟುಂಬದವರಿಗೂ ಎರಡು ತಿಳುವಳಿಕೆ ಪತ್ರಗಳನ್ನು ನೀಡಿ ಸ್ಥಳಾಂತರ ಗೊಳ್ಳಲು ತಿಳಿಸಲಾಗಿದೆ ಎಂದು ತಹಶೀಲ್ದಾರ ಅಶೋಕ ಭಟ್ಟ ಮಾಹಿತಿಯನ್ನು ನೀಡಿದ್ದಾರೆ.
    2021ರಲ್ಲಿ ಭೀಕರ ಭೂಕುಸಿತಕ್ಕೆ ಸಾಕ್ಷಿಯಾಗಿದ್ದ  ಕಳಚೆ ಗ್ರಾಮವು ಮತ್ತೊಮ್ಮೆ ಪ್ರಕೃತಿಯ ಕೋಪಕ್ಕೆ ಸಿಲುಕಿದೆ. ಶನಿವಾರ ರಾತ್ರಿಯಿಂದಲೇ  ನಿಧಾನವಾಗಿ ಕೆಲ ಕಡೆ ಭೂಮಿ ಕುಸಿಯುತ್ತಿದೆ. 
   2021ರ ಜುಲೈನಲ್ಲಿ ಸುರಿದ ಭೀಕರ ಮಳೆಯಿಂದಾಗಿ ಕಳಚೆ ಗ್ರಾಮ ಪೂರ್ತಿ ಭೂಕುಸಿತಕ್ಕೆ ಸಿಲುಕಿದ್ದಾಗಿನ ಚಿತ್ರಗಳು ಮತ್ತೊಮ್ಮೆ ಜನರ ಕಣ್ಣ ಮುಂದೆ ಹಾದು ಹೋಗುತ್ತಿವೆ. ಆಗ ಹಲವು ಮನೆಗಳು ಕುಸಿದು ಹೋಗಿದ್ದವು. ಒಬ್ಬರು ಜೀವ ಕಳೆದುಕೊಂಡಿದ್ದರು. ಊರಿನ ಏಕೈಕ ರಸ್ತೆ ನಾಮಾವಶೇಷವಾಗಿತ್ತು. ಈ ಘಟನೆಯ ನಂತರ ಮುಖ್ಯಮಂತ್ರಿಗಳು, ಹಲವು ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳ ತಂಡ ಮತ್ತು ತಜ್ಞರು ಕಳಚೆಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಊರನ್ನು ಪುನರ್ ನಿರ್ಮಾಣ ಮಾಡುವ ಭರವಸೆ ನೀಡಿದ್ದರು. ಆದರೆ, ಇನ್ನೂ ಪರಿಸ್ಥಿತಿ ಸುಧಾರಿಸಿಲ್ಲ.
  ಈಗ ಮತ್ತೆ ಭೂಮಿ ಕುಸಿಯುತ್ತಿರುವುದರಿಂದ ಗ್ರಾಮಸ್ಥರು ಭೀತಿಗೊಳಗಾಗಿದ್ದಾರೆ. ಅಧಿಕಾರಿಗಳು ಕೂಡಲೇ ಸ್ಥಳಾಂತರವಾಗುವಂತೆ ಸೂಚಿಸಿದ್ದಾರೆ. ಆದರೆ, ಪುನರ್ವಸತಿ ಕಲ್ಪಿಸಿಲ್ಲ ಎಂಬುದು ಜನರ ದೂರು.
  ಸಡಿಲವಾದ ಮಣ್ಣು ಈಗಲೂ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಕುಸಿಯುತ್ತಲೇ ಇದೆ. ಮಳೆ ಜಾಸ್ತಿಯಾದರೆ ಮತ್ತೇನು ಆಗಲಿದೆಯೋ ಎಂಬ ಆತಂಕದಲ್ಲೇ ಗ್ರಾಮಸ್ಥರಿದ್ದಾರೆ. ಭೂ ಕುಸಿತ ಹೀಗೆ ಮುಂದುವರೆದಲ್ಲಿ ಆ ಭಾಗದಲ್ಲಿ ವಾಸಿಸುವುದು ಕಷ್ಟ ಎನ್ನುವ ಅಭಿಪ್ರಾಯ ಕೇಳಿಬಂದಿದೆ.

ಯಲ್ಲಾಪುರದಲ್ಲಿ ನಿಂತ ಮಳೆ ನಿರಾಳರಾದ ಜನ

ಯಲ್ಲಾಪುರ : ಕಳೆದ ಕೆಲ ದಿನಗಳಿಂದ ತಾಲೂಕಿನಲ್ಲಿ ಹಾವಳಿ ಮುಂದುವರಿಸಿದ್ದ ಮಳೆಯ ತೀವ್ರತೆ ಭಾನುವಾರದಿಂದ ಗಣನೀಯವಾಗಿ ಇಳಿಕೆಯಾಗಿದೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದರೂ, ಪ್ರಮುಖ ಅನಾಹುತಗಳನ್ನು ಸಂಭವಿಸಿಲ್ಲ ಎನ್ನುವುದು ನೆಮ್ಮದಿಯ ಸಂಗತಿಯಾಗಿದೆ. 
   ತಾಲೂಕಿನಾದ್ಯಂತ ಹಳ್ಳ, ಕೆರೆ, ನದಿಗಳು ತುಂಬಿ ಹರಿಯುವಂತೆ ಮಾಡಿದ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದು ಪರಿಸ್ಥಿತಿಯನ್ನು ಸ್ವಲ್ಪ ಮಟ್ಟಿಗೆ ನಿಭಾಯಿಸಲು ಸಹಕಾರಿಯಾಯಿತು.
  ಆದರೆ, ಮಳೆಯ ಅಬ್ಬರದಿಂದಾಗಿ ತಾಲೂಕಿನ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಜಮೀನು ಕುಸಿತ ಮತ್ತು ಮಣ್ಣು ಸವಕಳಿಯಂತಹ ಅಹಿತಕರ ಘಟನೆಗಳು ನಡೆದಿವೆ. ಅಲ್ಲದೇ ಮರ ಮುರಿದು ಬೀಳುವುದು, ವಿದ್ಯುತ್ ದೂರಸಂಪರ್ಕ ಸಮಸ್ಯೆಯಾಗಿತ್ತು, ಕೆಲ ರಸ್ತೆಗಳು ಹಾನಿಗೊಳಗಾಗಿದ್ದವು ಇದರಿಂದ ಕೆಲ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಸ್ಥಳೀಯ ಆಡಳಿತ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿದ್ದವು.
  ಹವಾಮಾನ ಇಲಾಖೆಯು ಆಗಸ್ಟ್ 5ರ ವೇಳೆಗೆ ಮಳೆ ನಿಲ್ಲುವ ನಿರೀಕ್ಷೆ ವ್ಯಕ್ತಪಡಿಸಿದ್ದು, ಜನರಲ್ಲಿ ಸ್ವಲ್ಪ ಮಟ್ಟಿನ ನೆಮ್ಮದಿಗೆ ಕಾರಣವಾಗಿದೆ. ಮಳೆಯ ತೀವ್ರತೆ(ರವಿವಾರ 49 ಮಿ.ಮೀ, ಸೋಮವಾರ 24.4 ಮಿ.ಮೀ) ಕಡಿಮೆಯಾದ ಹಿನ್ನೆಲೆಯಲ್ಲಿ ರೈತರು, ವ್ಯಾಪಾರಿಗಳು, ಕೂಲಿಗಾರರು ಮತ್ತು ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಆದರೂ, ಮುಂದಿನ ದಿನಗಳಲ್ಲಿ ಮಳೆಯ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಜನರು ಎಚ್ಚರ ವಹಿಸುವಂತೆ ಅಧಿಕಾರಿಗಳು ಕರೆ ನೀಡಿದ್ದಾರೆ.

ಯಲ್ಲಾಪುರ ಮಂಚಿಕೇರಿಯ ಎಟಿಎಂನಲ್ಲಿ ಸಮಸ್ಯೆ: ಗ್ರಾಹಕರಲ್ಲಿ ಆಕ್ರೋಶ

ಯಲ್ಲಾಪುರ : ತಾಲೂಕಿನ ಮಂಚಿಕೇರಿ ಗ್ರಾಮದಲ್ಲಿನ ಕೆನರಾ ಬ್ಯಾಂಕ್‌ಗೆ ಸಂಬಂಧಿಸಿರುವ ಎಟಿಎಂ ಕಳೆದ 6-7 ದಿನಗಳಿಂದ ಮುಚ್ಚಿರುವುದರಿಂದ ಗ್ರಾಹಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಹಣ ಪಡೆಯಲು ಬ್ಯಾಂಕಿಗೆ ಹೋಗುವುದು ಅನಿವಾರ್ಯವಾಗುತ್ತಿದ್ದು, ಇದರಿಂದ ಗ್ರಾಹಕರು ಕಷ್ಟಕ್ಕೆ ಸಿಲುಕುತ್ತಿದ್ದಾರೆ.
    ಈ ಸಂಬಂಧ ಮಂಚಿಕೇರಿಯ ಸಮಾಜ ಸೇವಕ ವಿಕಾಸ ನಾಯ್ಕ ಯಲ್ಲಾಪುರ ನ್ಯೂಸ್  ಹೇಳಿಕೆ ನೀಡಿ, ಗ್ರಾಮೀಣ ಭಾಗದ ಜನರು ದೂರದ ಪಟ್ಟಣಗಳಿಗೆ ಹೋಗಿ ಹಣ ಪಡೆಯುವ ಅನಿವಾರ್ಯತೆಯಿಂದ ಮುಕ್ತರಾಗಲು ಎಟಿಎಂಗಳು ಬಹಳ ಮುಖ್ಯ. ಇದರಿಂದ ಜನರ ಸಮಯ ಮತ್ತು ಹಣದ ಉಳಿತಾಯವಾಗುತ್ತದೆ. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿ ತಕ್ಷಣ ಹಣ ಪಡೆಯುವುದು ಸುಲಭವಾಗುತ್ತದೆ. ಹೀಗೆ ಎಟಿಎಂಗಳು ಗ್ರಾಮೀಣ ಜನಜೀವನದಲ್ಲಿ ಹಲವು ಬದಲಾವಣೆಗಳನ್ನು ತರಬಲ್ಲವು. ಅಲ್ಲದೆ, ಗ್ರಾಮೀಣ ಉದ್ಯಮಿಗಳಿಗೆ ಕೂಡ ಎಟಿಎಂಗಳು ತುಂಬಾ ಅನುಕೂಲಕರವಾಗಿವೆ.
ಮಂಚಿಕೇರಿಯ ಎಟಿಎಂ ಸದಾ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವಂತೆ ಬ್ಯಾಂಕ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ನಗದು ವ್ಯವಹಾರವೇ ಹೆಚ್ಚಾಗಿರುವುದರಿಂದ ಎಟಿಎಂ ಅವಶ್ಯಕತೆ ಅನಿವಾರ್ಯವಾಗಿದೆ ಎಂದು ಅವರು ಹೇಳಿದ್ದಾರೆ.
  ಗ್ರಾಮಸ್ಥರು ಕೂಡ ಈ ಸಮಸ್ಯೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಬ್ಯಾಂಕ್ ಅಧಿಕಾರಿಗಳು ಕೂಡಲೇ ಎಟಿಎಂ ಅನ್ನು ದುರಸ್ತಿ ಮಾಡಿ ಕಾರ್ಯನಿರ್ವಹಿಸುವಂತೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಮೊಗಟಾರವರ 'ಮೆಲುಕು' ಅಪರೂಪದ ಗ್ರಂಥ; ಡಾ.ಕಾಳೆ ಗೌಡ ನಾಗವಾರ/ಸೀಗೆಮನೆ ಗ್ರಾಮಸ್ಥರಿಂದ ಮಾದರಿ ಸ್ವಚ್ಛತಾ ಅಭಿಯಾನ

ಮೊಗಟಾರವರ 'ಮೆಲುಕು' ಅಪರೂಪದ ಗ್ರಂಥ; ಡಾ.ಕಾಳೆ ಗೌಡ ನಾಗವಾರ

 ಯಲ್ಲಾಪುರ: ಬೀರಣ್ಣ ನಾಯಕ ಮೊಗಟಾ ಅವರ 'ಮೆಲುಕು' ಕೃತಿ ಅಪರೂಪದ ಜನಪದ ಕಾಳಜಿಗಳುಳ್ಳ ಅತ್ಯುತ್ತಮ ಗ್ರಂಥ. ನಮ್ಮ ಪ್ರಾಚೀನ ಸಂಸ್ಕೃತಿಯ ತಾಜಾತನದ ನೇರ ಪ್ರತೀಕ. ಜಾನಪದ ಕ್ಷೇತ್ರಕ್ಕೆ ಶ್ರೇಷ್ಠ ಕೊಡುಗೆ. ಈ ಮೆಲುಕು ಕೃತಿಯನ್ನು ಜಾನಪದ ಆಕಾಡೆಮಿ ಗಮನಿಸ ಬೇಕಾಗಿದೆ' ಎಂದು ಬರಹಗಾರ, ಜಾನಪದ ತಜ್ಞ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಡಾ.ಕಾಳೆ ಗೌಡ ನಾಗವಾರ ಮೈಸೂರಿನಲ್ಲಿ ಮೆಲಕು ಕೃತಿಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
        ಜಾನಪದದ ಕುರಿತು ಸಂಶೋಧನೆ ನಡೆಸುವ ಸಂಶೋಧಕರಿಗೆ ಇದೊಂದು ಮಾರ್ಗದರ್ಶನ ನೀಡಬಲ್ಲ ಗ್ರಂಥವಾಗಿ ಹೊರಹೊಮ್ಮಿದೆ ಎಂದು ಡಾ.ಕಾಳೆ ಗೌಡ ನಾಗವಾರ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಸೀಗೆಮನೆ ಸ್ವಚ್ಛತಾ ಅಭಿಯಾನ: ಗ್ರಾಮಸ್ಥರಲ್ಲಿ ಸ್ವಚ್ಛತಾ ಪ್ರಜ್ಞೆ ಹೆಚ್ಚು 
ಯಲ್ಲಾಪುರ : ಸೀಗೆಮನೆ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಸ್ವಚ್ಚತಾ ಅಭಿಯಾನವನ್ನು ಭರ್ಜರಿಯಾಗಿ ಆಚರಿಸಲಾಯಿತು. ಗ್ರಾಮಸ್ಥರು ಒಗ್ಗಟ್ಟಿನಿಂದ ಕೆಲಸ ಮಾಡಿ, ಗ್ರಾಮವನ್ನು ಶುಚಿಯಾಗಿಡಲು ಹಲವು ಕ್ರಮಗಳನ್ನು ಕೈಗೊಂಡರು.
   ರವಿವಾರ ಬೆಳಿಗ್ಗೆ ಗ್ರಾಮದ ವಿವಿಧ ಭಾಗಗಳಿಂದ ಜನರು ಸೇರಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಗ್ರಾಮಸ್ಥರು ಸೀಗೆಮನೆಯಿಂದ ಮಾವಿನಕಟ್ಟಾ-ಉಮ್ಮಚಗಿ ರಸ್ತೆಯವರೆಗೆ ರಸ್ತೆ ಬದಿ ಬೆಳೆದ ಅನಗತ್ಯ ಗಿಡಗಳನ್ನು ಕಡಿದು, ಪ್ಲಾಸ್ಟಿಕ್ ಕಸವನ್ನು ಸಂಗ್ರಹಿಸುವ ಮೂಲಕ ಪರಿಸರವನ್ನು ಶುಚಿಯಾಗಿಡಲು ಕ್ರಮ ಕೈಗೊಂಡರು.
   ಸೀಗೆಮನೆ ಕ್ರಾಸ್‌ನಲ್ಲಿರುವ ಬಸ್ ನಿಲ್ದಾಣವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಕಸವನ್ನು ವಿಲೇವಾರಿ ಮಾಡುವ ಕಾರ್ಯವನ್ನು ಕೈಗೊಂಡರು. 
   ಈ ಕಾರ್ಯಕ್ರಮದಲ್ಲಿ ಗ್ರಾಮದ ಎನ್. ವಿ. ಹೆಗಡೆ, ಪಿ. ವಿ. ಹೆಗಡೆ, ಜಿ.ಟಿ. ಹೆಗಡೆ, ಟಿ. ಎಂ. ಹೆಗಡೆ, ಎಸ್. ಜಿ. ಹೆಗಡೆ, ಆರ್.ಆರ್. ಹೆಗಡೆ, ಕೆ. ಜಿ. ಹೆಗಡೆ, ಸುಬ್ರಾಯ ಹೆಗಡೆ, ದತ್ತಾತ್ರೇಯ ಹೆಗಡೆ, ಜಿ.ಆರ್. ಹೆಗಡೆ ಸೇರಿದಂತೆ ಅನೇಕ ಗ್ರಾಮಸ್ಥರು ಭಾಗವಹಿಸಿದ್ದರು.
   ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ ಗ್ರಾಮಸ್ಥರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಅವರು ಸಂಘಟಿತರಾಗಿ ಕೆಲಸ ಮಾಡಿದರೇ ಏನನ್ನಾದರೂ ಒಳ್ಳೆಯ ಕೆಲಸ ಮಾಡಬಹುದು ಎಂದು ಹೇಳಿದರು. ಈ ರೀತಿಯ ಕಾರ್ಯಕ್ರಮಗಳು ಮತ್ತಷ್ಟು ಒಳ್ಳೆಯ ಕೆಲಸಕ್ಕೆ ಪ್ರೇರಣೆ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು. ಅಲ್ಲದೆ, ಇದು ಇತರರಿಗೂ ಮಾದರಿಯಾಗುತ್ತದೆ ಎಂದು ಹೇಳಿದರು.
   ಈ ಸ್ವಚ್ಛತಾ ಅಭಿಯಾನವು ಉಮ್ಮಚಗಿ ಗ್ರಾಮದಲ್ಲಿ ಸ್ವಚ್ಛತಾ ಪ್ರಜ್ಞೆಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.

ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆಗಳ ನಿವಾರಣೆಗೆ ಶಾಸಕರಿಗೆ ಮನವಿ

ಯಲ್ಲಾಪುರ: ಕಳೆದ ಹಲವಾರು ವರ್ಷಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕವು ಶಾಸಕ ಶಿವರಾಮ ಹೆಬ್ಬಾರ್ ಹಾಗೂ ತಹಶೀಲ್ದಾರ ಅಶೋಕ‌ ಭಟ್ಟ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದೆ.
   2017ರ ಹೊಸ ನಿಯಮಗಳನ್ನು 2016ರ ಮೊದಲು ನೇಮಕಾತಿಯಾದವರಿಗೆ ಅನ್ವಯಿಸುವುದು ಸರಿಯಲ್ಲ. ಇದರಿಂದ ಪ್ರಾಥಮಿಕ ಶಾಲಾ ಶಿಕ್ಷಕರು ಅನ್ಯಾಯಕ್ಕೆ ಒಳಗಾಗುತ್ತಾರೆ. ಅವರಿಗೆ 2016ರ ಹಳೆಯ ನಿಯಮಗಳ ಪ್ರಕಾರವೇ ಪ್ರೌಢಶಾಲೆ ಮತ್ತು ಮುಖ್ಯಗುರುಗಳ ಹುದ್ದೆಗೆ ಬಡ್ತಿ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. 
    ಶಾಸಕ ಶಿವರಾಮ ಹೆಬ್ಬಾರ್ ಅವರು ಶಿಕ್ಷಕರ ಮನವಿಯನ್ನು ಸ್ವೀಕರಿಸಿ, ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ರವಾನಿಸುವ ಭರವಸೆಯನ್ನು ತಹಶೀಲ್ದಾರ ನೀಡಿದರು.
    ಈ ಸಂದರ್ಭದಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್. ಆರ್. ಭಟ್, ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ನಾಯಕ ತಾಲೂಕ ನೌಕರರ ಸಂಘದ ಅಧ್ಯಕ್ಷ ಪ್ರಕಾಶ ನಾಯಕ, ತಾಲೂಕ ಶಿಕ್ಷಕರ ಸಂಘದ ಪ್ರಮುಖರಾದ ಗಂಗಾಧರ ಪಟಗಾರ, ಮಾರುತಿ ನಾಯ್ಕ, ಸತೀಶ ನಾಯಕ, ಭಾರತಿ ನಾಯಕ, ಸುವರ್ಣಲತಾ ಪಟಗಾರ, ಸಂತೋಷ್ ನಾಯ್ಕ, ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಸಂಜೀವ್ ಹೊಸ್ಕೇರಿ ಮುಂತಾದವರು ಇದ್ದರು‌.

ಅರಬೈಲ್ ಶಾಲೆಯಲ್ಲಿ ಡೆಂಗ್ಯೂ ಜಾಗೃತಿ ಕಾರ್ಯಕ್ರಮದ ಯಶಸ್ವಿ ಆಯೋಜನೆ

ಯಲ್ಲಾಪುರ: ತಾಲೂಕಿನ ಅರಬೈಲ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಡೆಂಗ್ಯೂ ಜ್ವರದ ಬಗ್ಗೆ ಜಾಗೃತಿ ಮೂಡಿಸುವ ಒಂದು ಗಂಭೀರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
   ಈ ಕಾರ್ಯಕ್ರಮದಲ್ಲಿ, ಸಮುದಾಯ ಸಮನ್ವಯಾಧಿಕಾರಿ ತಾಯವ್ವ ಸೊರಗಾಂವಿ ಮಾತನಾಡಿ, ಡೆಂಗ್ಯೂ ಜ್ವರದ ಕಾರಣಗಳು, ಲಕ್ಷಣಗಳು ಮತ್ತು ತಡೆಗಟ್ಟುವ ಕ್ರಮಗಳ ಕುರಿತು ವಿಸ್ತಾರವಾಗಿ ತಿಳಿಸಿದರು. ಡೆಂಗ್ಯೂ ಜ್ವರವು ಸೋಂಕಿತ ಸೊಳ್ಳೆಗಳ ಕಡಿತದಿಂದ ಹರಡುವ ವೈರಲ್ ಸೋಂಕು ಎಂದು ತಿಳಿಸಿದ ಅವರು, ಈ ಕಾಯಿಲೆಯ ತೀವ್ರತೆ ಮತ್ತು ಅದರಿಂದ ಉಂಟಾಗುವ ತೊಂದರೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
    ಶಾಲೆಯ ಮುಖ್ಯಾಧ್ಯಾಪಕಿ ಶಿವಲೀಲಾ ಹುಣಸಗಿ ಮಾತನಾಡಿ, ಡೆಂಗ್ಯೂ ಜ್ವರದಂತಹ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಸ್ವಚ್ಛತೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸೊಳ್ಳೆಗಳನ್ನು ದೂರವಿಡುವ ಕ್ರಮಗಳನ್ನು ಕೈಗೊಳ್ಳುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಡೆಂಗ್ಯೂ ಜ್ವರದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಹಕಾರಿ ಎಂದು ಹೇಳಿದರು.
   ಡೆಂಗ್ಯೂ ಜ್ವರದ ಬಗ್ಗೆ ಜಾಗೃತಿ ಮೂಡಿಸುವ ವೈಜ್ಞಾನಿಕ ಮಾಹಿತಿಯನ್ನು ಒಳಗೊಂಡ ಪ್ರಾತ್ಯಕ್ಷಿಕೆಗಳು, ಸೊಳ್ಳೆಗಳ ಜೀವನಚಕ್ರ ಮತ್ತು ಅವು ಹೇಗೆ ಗುಣಿಸುತ್ತವೆ ಎಂಬುದನ್ನು ತೋರಿಸುವ ಪ್ರಾಯೋಗಿಕ ಪ್ರದರ್ಶನ, ಡೆಂಗ್ಯೂ ಜ್ವರದ ಲಕ್ಷಣಗಳು ಮತ್ತು ತಡೆಗಟ್ಟುವ ಕ್ರಮಗಳ ಕುರಿತು ಮಕ್ಕಳು ಅರಿತುಕೊಂಡರು.
   ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಡೆಂಗ್ಯೂ ಜ್ವರದ ಬಗ್ಗೆ ಗಂಭೀರವಾದ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಬಹುದು. ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಡೆದ ಮಾಹಿತಿಯನ್ನು ತಮ್ಮ ಮನೆ ಮತ್ತು ಸಮುದಾಯಕ್ಕೆ ತಲುಪಿಸುವ ಮೂಲಕ ಡೆಂಗ್ಯೂ ಜ್ವರದ ಹರಡುವಿಕೆಯನ್ನು ತಡೆಯಲು ಸಹಕಾರಿಯಾಗಲಿದ್ದಾರೆ.
  ಸಹಶಿಕ್ಷಕರಾದ ರಾಮ ಟಿ.ಗೌಡ,ನಾಗರಾಜ ಆಚಾರಿ ಉಪಸ್ಥಿತರಿದ್ದರು.ವಿದ್ಯಾರ್ಥಿನಿ
ದೀಕ್ಷಾ ಭಟ್ ನಿರೂಪಿಸಿ ವಂದಿಸಿದರು.