Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Wednesday, 7 August 2024

ಬೇಡ್ತಿಯ ಹಳೆ ಸೇತುವೆಯ ಸುರಕ್ಷತೆಗೆ ಕ್ರಮ ಕೈಗೊಳ್ಳುವ ಅಗತ್ಯ: ಕಿಸಾನ್ ಸಂಘ

ಯಲ್ಲಾಪುರ: ತಾಲೂಕಿನ ಯಲ್ಲಾಪುರ-ಶಿರಸಿ ರಸ್ತೆಯ ಬೇಡ್ತಿಯ ಹಳೆ ಸೇತುವೆ ಸುರಕ್ಷತೆ ಕ್ರಮಗಳನ್ನು ತಕ್ಷಣ ಅನುಸರಿಸಲು ತಾಲೂಕು ಆಡಳಿತಕ್ಕೆ ಸೂಚಿಸುವಂತೆ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಉಪಾಧ್ಯಕ್ಷ ನರಸಿಂಹ ಸಾತೊಡ್ಡಿ ಆಗ್ರಹಿಸಿದ್ದಾರೆ. 
   ಬುಧವಾರ ತಹಶೀಲ್ದಾರ ಅಶೋಕ ಭಟ್ಟ ಅವರಿಗೆ ಮನವಿ ಸಲ್ಲಿಸಿ, ಅವರು ಸೇತುವೆಯ ದುರಸ್ಥಿ ನಡೆದಿದೆಯಾದರೂ, ಕೆಲವು ಕಡೆ ರೇಲ್ ಇಲ್ಲವಾದ್ದರಿಂದ ಅಪಘಾತ ಸಂಭವಿಸುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಈ ಹಳೆ ಸೇತುವೆಯ ಮೇಲೆ ವಾಹನ ಸಂಚಾರವನ್ನು ನಿಲ್ಲಿಸುವ ಅಗತ್ಯವಿದ್ದು, ಮೀನುಗಾರರು ಮತ್ತು ಪ್ರವಾಸಿಗರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು. 
    ಹಳೆಯ ಸೇತುವೆಯನ್ನು ಪಾದಾಚಾರಿಗಳಿಗೆ ಮಾತ್ರ ಮೀಸಲಿಟ್ಟು, ಇನ್ನಿತರ ವಾಹನ ಸಂಚಾರವನ್ನು ನಿಷೇಧಿಸಲು ನಾಮಫಲಕ ಹಾಕಿ, ಅವಘಡಗಳನ್ನು ತಡೆಯುವಂತೆ ಮನವಿ ಮಾಡಿದ್ದಾರೆ.

ಯಲ್ಲಾಪುರ ಪ.ಪಂ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯೇ ಇಲ್ಲ! ಯಲ್ಲಾಪುರ ಪಟ್ಟಣ ಪಂಚಾಯತ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಕ್ಕಟ್ಟು

ವರದಿ : ಜಗದೀಶ ನಾಯಕ
ಯಲ್ಲಾಪುರ : ಮೀಸಲಾತಿ ಪ್ರಕಟವಾಗಿದ್ದು, ಯಲ್ಲಾಪುರ ಪಟ್ಟಣ ಪಂಚಾಯತ್‌ನಲ್ಲಿ ಈಗ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಸರ್ಕಾರವು ಅಧ್ಯಕ್ಷ ಸ್ಥಾನವನ್ನು ‘ಬ’ ವರ್ಗದ ಮಹಿಳೆಗೆ ಮೀಸಲಿಟ್ಟಿದೆ. ಆದರೆ, ಪಟ್ಟಣ ಪಂಚಾಯತ್‌ನಲ್ಲಿ ಈ ವರ್ಗದ ಯಾವುದೇ ಮಹಿಳಾ ಸದಸ್ಯರು ಇಲ್ಲದ ಕಾರಣ ಈ ಮೀಸಲಾತಿಯನ್ನು ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ.
  ಒಟ್ಟು 19 ಸದಸ್ಯರ ಪೈಕಿ ಒಬ್ಬರು ಮೃತಪಟ್ಟಿದ್ದರಿಂದ ಈಗ 18 ಸದಸ್ಯರು ಮಾತ್ರ ಇದ್ದಾರೆ. ಇವರಲ್ಲಿ ಕಾಂಗ್ರೆಸ್ 12 ಮತ್ತು ಬಿಜೆಪಿಯ 5 ಹಾಗೂ ಪಕ್ಷೇತರ ಓರ್ವ ಸದಸ್ಯರಿದ್ದಾರೆ. ಅವರಲ್ಲಿ ಕಾಂಗ್ರೆಸ್‌ನ ಸುನಂದಾ ದಾಸ್, ಸತೀಶ ನಾಯ್ಕ, ಪುಷ್ಪಾ ನಾಯ್ಕ, ರಾಜು ನಾಯ್ಕ, ಜನಾರ್ಧನ ಪಾಟಣಕರ, ಗೀತಾ ದೇಶಭಂಡಾರಿ, ನಾಗರಾಜ ಅಂಕೋಲೆಕರ. ಹಲೀಮಾ ಕಕ್ಕೇರಿ, ನರ್ಮದಾ ನಾಯ್ಕ, ಅಮಿತ ಅಂಗಡಿ, ಕೈಸರ್ ಆಲಿ, ಅಬ್ದುಲ್ ಅಲಿ, ಒಟ್ಟು 12 ಸದಸ್ಯರು, ಬಿಜೆಪಿಯಲ್ಲಿ ಸೋಮೇಶ್ವರ ನಾಯ್ಕ, ಶಾಮಿಲಿ ಪಾಟಣಕರ, ಆದಿತ್ಯ ಗುಡಿಗಾರ, ಕಲ್ಪನಾ ಗಜಾನನ ನಾಯ್ಕ, ಜ್ಯೋತಿ ನಾಯ್ಡು ಸೇರಿದಂತೆ 5 ಸದಸ್ಯರು,  ಪಕ್ಷೇತರ ಸದಸ್ಯ ರಾಧಾಕೃಷ್ಣ ನಾಯ್ಕ ಸೇರಿ ಒಟ್ಟು 18 ಸದಸ್ಯರಿದ್ದಾರೆ.
 ಅಧ್ಯಕ್ಷ ಸ್ಥಾನಕ್ಕೆ ‘ಬ’ ವರ್ಗದ ಮಹಿಳಾ ಸದಸ್ಯರಿಲ್ಲದ ಕಾರಣ, ಸರ್ಕಾರದೊಂದಿಗೆ ಕೆಟಗರಿ ಬದಲಾವಣೆಯ ವಿಚಾರ ಪ್ರಸ್ತಾಪಿಸಲಾಗಿದ್ದು, ಈ ಸಮಯದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್ಚಿನ ಮಹತ್ವ ಬಂದಿದೆ. 
   ಈಗ ಉಪಾಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಪ್ರಶ್ನೆ ಎದುರಾಗಿದೆ. ಯಾಕೆಂದರೆ, ಸರ್ಕಾರದ ಮೀಸಲಾತಿ ಪ್ರಕಾರ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಆದರೆ, ಅಧ್ಯಕ್ಷ ಸ್ಥಾನ ಖಾಲಿಯಿರುವ ಕಾರಣ ಉಪಾಧ್ಯಕ್ಷರು ಅಧ್ಯಕ್ಷರ ಕೆಲಸವನ್ನು ನೋಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಉಪಾಧ್ಯಕ್ಷ ಸ್ಥಾನ ಬಹಳಷ್ಟು ಮಹತ್ವ ಪಡೆದಿದೆ. 
   ಈಗ ಎರಡು ಪಕ್ಷಗಳ ನಡುವೆ ಉಪಾಧ್ಯಕ್ಷ ಸ್ಥಾನಕ್ಕೆ ತಮ್ಮ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸುತ್ತಿವೆ. ಯಾವ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. 
    ಸರ್ಕಾರವು ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯನ್ನು ಬದಲಾಯಿಸುವ ಸಾಧ್ಯತೆ ಇದೆ. ಈ ಕುರಿತು ಕಾರ್ಯ ಚಟುವಟಿಕೆಗಳು ಪ್ರಗತಿಯಲ್ಲಿದೆ ಎಂದು ತಿಳಿದು ಬಂದಿದೆ. ಸದ್ಯ ಶಾಸಕ ಶಿವರಾಮ್ ಹೆಬ್ಬಾರ್ ಬಿಜೆಪಿಯವರಾಗಿದ್ದರೂ ಅವರ ಕಾರ್ಯ ಕಾಂಗ್ರೆಸ್ ಪರವಾಗಿರುವುದರಿಂದ ಅವರು ಸೂಚಿಸಿರುವ ಸದಸ್ಯರೆ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಸಾಧ್ಯತೆ ಇದ್ದು, ಮುಂದಿನ ಆರ ತಿಂಗಳಿಂದ ಒಂದು ವರ್ಷವರೆಗೆ ಹೆಬ್ಬಾರ್ ವ್ಯಕ್ತಿಯೇ ಆಡಳಿತ ನಡೆಸಲಿದ್ದಾರೆ ಎನ್ನಲಾಗುತ್ತಿದೆ.
 ಯಲ್ಲಾಪುರ ಪಟ್ಟಣ ಪಂಚಾಯತ್‌ನಲ್ಲಿ ರಾಜಕೀಯ ಚಟುವಟಿಕೆಗಳು ಚುರುಕಾಗಿ ನಡೆಯುತ್ತಿವೆ. ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡುವುದು ಎಂಬ ಪ್ರಶ್ನೆಗೆ ಉತ್ತರ ಸಿಗಲು ಇನ್ನೂ ಕೆಲವು ದಿನಗಳಿಗೆ ಕಾಯಬೇಕಾಗಿದೆ.

ಕೊಳೆ ರೋಗ ಮತ್ತು ಮಂಗನ ಕಾಟ: ಈರಾಪುರದ ಅಡಿಕೆ ತೋಟಗಳಿಗೆ ತೀವ್ರ ಹಾನಿ

ಯಲ್ಲಾಪುರ: ಈರಾಪುರ ಗ್ರಾಮದ ತೋಟಗಾರರು ಅಡಿಕೆ ತೋಟಗಳಲ್ಲಿ ಕೊಳೆ ರೋಗ ಉಲ್ಬಣಗೊಂಡಿದ್ದು, ರೈತರು ಆತಂಕದಿಂದ ತತ್ತರಿಸಿ ಹೋಗಿದ್ದಾರೆ. 
   ಈರಾಪುರದ ರೈತ ಪ್ರಸನ್ನ ಹೆಗಡೆ ಅವರ 1 ಎಕರೆ 37 ಗುಂಟೆ ತೋಟದಲ್ಲಿ ಕೊಳೆ ರೋಗ ಕಂಡುಬಂದಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆ ಇದಕ್ಕೆ ಮುಖ್ಯ ಕಾರಣವಾಗಿದೆ. ಮಳೆ ಕಡಿಮೆ ಇದ್ದಾಗ ಒಂದು ಬಾರಿ ಅಡಿಕೆ ಮರಗಳಿಗೆ ಕ್ರಿಮಿನಾಶಕ ಸಿಂಪಡನೆ ಮಾಡಲಾಗಿದೆ. ಆದರೆ, ಎರಡನೇ ಬಾರಿಗೆ ಸಿಂಪಡಿಸಲು ಮಳೆ ಅವಕಾಶ ನೀಡುತ್ತಿಲ್ಲ. ಈ ಪರಿಣಾಮವಾಗಿ, ಈರಾಪುರದ ಬಹುತೇಕ ತೋಟಗಳಲ್ಲಿ ಕೊಳೆ ರೋಗ ಹರಡಿದೆ. 
  ಇದರ ಜೊತೆಗೆ ಮಂಗನ ಕಾಟವು ಕೂಡ ಹೆಚ್ಚಾಗಿದ್ದು, ಅಡಿಕೆ ಬೆಳೆಗಾರರು ಎರಡೂ ಸಮಸ್ಯೆಯಿಂದ ಬಳಲುತ್ತಿದ್ದಾರೆ. ರೈತರು, ಸರ್ಕಾರದಿಂದ ತಕ್ಷಣದ ಪರಿಹಾರವನ್ನು ಒದಗಿಸುವಂತೆ ಆಗ್ರಹಿಸಿದ್ದಾರೆ. ಮಂಗಗಳನ್ನು ಸ್ಥಳಾಂತರಗೊಳಿಸಬೇಕು ಮತ್ತು ಕೊಳೆ ರೋಗಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿ ಕೀರ್ತಿ ಬಿಎಂ ಅವರ ಬಳಿ ಮನವಿ ಮಾಡಿದ್ದಾರೆ.
  ಅಧಿಕಾರಿ ಕೀರ್ತಿ, ಈ ಭಾಗದಲ್ಲಿ ಕೊಳೆ ರೋಗ ಉಲ್ಬಣಗೊಳ್ಳುತ್ತಿರುವುದನ್ನು ಸ್ವತಃ ಪರಿಶೀಲಿಸಿದ್ದೆನೆ, ಮೇಲಾಧಿಕಾರಿಗಳಿಗೆ ಈ ವಿಷಯವನ್ನು ತಲುಪಿಸಿ, ಸ್ಥಳ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಪರಿಹಾರ ಕ್ರಮಗಳನ್ನು ಶಿಫಾರಸು ಮಾಡುವ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ತಿಮ್ಮಣ್ಣ ಗಾಂವ್ಕರ್ ಕೂಡ ಉಪಸ್ಥಿತರಿದ್ದರು.

ಬಾಂಗ್ಲಾದೇಶದ ಹಿಂಸಾಚಾರ ಖಂಡಿಸಿ ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪತ್ರಿಕಾಗೋಷ್ಠಿ

ಯಲ್ಲಾಪುರ/ಹುಬ್ಬಳ್ಳಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. 
    ಮುತಾಲಿಕ್ ಅವರು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಅತ್ಯಾಚಾರವನ್ನು ತೀವ್ರವಾಗಿ ಖಂಡಿಸಿದರು. "ಬಾಂಗ್ಲಾದೇಶ ಹುಟ್ಟಿದ್ದು ನಮ್ಮಿಂದಲೇ. ನಮ್ಮ ದೇಶವು ಬಾಂಗ್ಲಾದೇಶಕ್ಕೆ ಸಾಕಷ್ಟು ಉಪಕಾರ ಮಾಡಿದೆ, ಆದರೆ ಇವರು ಹಿಂದೂಗಳ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ" ಎಂದರು. ಪ್ರಧಾನಮಂತ್ರಿ ನರೇಂದ್ರ ಮೋದಿ ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇಸ್ಕಾನ್ ದೇವಸ್ಥಾನ ಮತ್ತು ರವೀಂದ್ರನಾಥ ಟ್ಯಾಗೋರ್ ಅವರ ಮೂರ್ತಿ ಧ್ವಂಸವು ನಾಚಿಕೆಗೇಡಿತನವಾಗಿದೆ ಎಂದು ಹೇಳಿದರು. 
    ಬಾಂಗ್ಲಾದೇಶದ ನುಸುಳುಕೋರರು ಭಾರತದಾದ್ಯಂತ ಸಮಸ್ಯೆ ಉಂಟುಮಾಡುತ್ತಿದ್ದಾರೆ, ಮತ್ತು ಕರ್ನಾಟಕದಲ್ಲೂ 10 ಲಕ್ಷ ಬಾಂಗ್ಲಾದೇಶಿಗರು ನೆಲೆಸಿದ್ದಾರೆ ಎಂದು ತಾವು ಮಾಹಿತಿಯನ್ನು ಪಡೆದಿದ್ದೇವೆ. 
    ನಂದಿಹಾಳು ಮಾಡುವ ಈ ನುಸುಳುಕೋರರನ್ನು ಪತ್ತೆಹಚ್ಚಲು ಗಂಗಾಧರ್ ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ ಐದು ಜನರ ಸಮಿತಿ ರಚಿಸಲಾಗಿದೆ. ರಾಜ್ಯದ ಪೊಲೀಸ್ ಆಯುಕ್ತರು ಮತ್ತು ಎಸ್‌ಪಿಗಳನ್ನು ಬಾಂಗ್ಲಾ ನುಸುಳುಕೋರರನ್ನು ಬಂಧಿಸಿ ದೇಶದಿಂದ ಹೊರಹಾಕುವಂತೆ ಆಗ್ರಹಿಸಿದರು. 

ಅಡಿಕೆ ಕೊಳೆರೋಗ ತಡೆಗಾಗಿ ವೀರಭದ್ರ ದೇವಸ್ಥಾನದಲ್ಲಿ ವಿಶೇಷ ಪೂಜೆ/ಕೈಗಾ-ಇಳಕಲ್ ಹೆದ್ದಾರಿ ಮೇಲೆ ನೀರಿನ ಓಟ: ಸಾರ್ವಜನಿಕರಿಗೆ ತೊಂದರೆ

ಅಡಿಕೆ ಕೊಳೆರೋಗ ತಡೆಗಾಗಿ ವೀರಭದ್ರ ದೇವಸ್ಥಾನದಲ್ಲಿ ವಿಶೇಷ ಪೂಜೆ
ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಸಮೀಪದ ಹೊನ್ನಗದ್ದೆಯ ವೀರಭದ್ರ ದೇವಸ್ಥಾನದಲ್ಲಿ ಬುಧವಾರ ಬೆಳಿಗ್ಗೆ ನಿರಂತರ ಮಳೆಯಿಂದ ಅಡಿಕೆಯ ಕೊಳೆರೋಗ ಹರಡುವುದನ್ನು ತಡೆಗಟ್ಟಲು ವಿಶೇಷ ಪೂಜೆ ನೆರವೇರಿಸಲಾಯಿತು. 
   ಅಡಿಕೆ ಬೆಳೆಗಾರರು ತಮ್ಮ ಬೆಳೆ ಉಳಿಸಲು ವೀರಭದ್ರ ದೇವರ ಮೊರೆ ಹೋಗಿದ್ದರು. ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಜಯರಾಮ ಹೆಗಡೆ, ಉಪಾಧ್ಯಕ್ಷ ಮಹೇಶ ಗಾಂವ್ಕರ, ಗೌರವ ಕಾರ್ಯದರ್ಶಿ ವಿಘ್ನೇಶ್ವರ ಹೆಗಡೆ, ಸದಸ್ಯ ದಿನೇಶ ಭಟ್ಟ, ಸತೀಶ ಗಾಂವ್ಕರ, ಮಾತೃ ಮಂಡಳಿ ಭಾರತಿ ಭಟ್ಟ ಮತ್ತು ಅರ್ಚಕರಾದ ರಾಮಚಂದ್ರ ಭಟ್ಟ ಈ ಸಂದರ್ಭದಲ್ಲಿದ್ದರು ಉಪಸ್ಥಿತರಿದ್ದರು.

ಕೈಗಾ-ಇಳಕಲ್ ಹೆದ್ದಾರಿ ಮೇಲೆ ನೀರಿನ ಓಟ: ಸಾರ್ವಜನಿಕರಿಗೆ ತೊಂದರೆ
ಯಲ್ಲಾಪುರ: ಕೈಗಾ-ಇಳಕಲ್ ರಾಜ್ಯ ಹೆದ್ದಾರಿ 6ರ ತೇಲಂಗಾರ-ಇಡಗುಂದಿ ನಡುವೆ, ಬೆಳ್ಳನೆಯ ಬಳಿ ಕಳೆದ ಹದಿನೈದು ದಿನಗಳಿಂದ ಡಾಂಬರು ರಸ್ತೆಯ ನಡುವೆ ನಿರಂತರವಾಗಿ ಎರಡು ಇಂಚು ನೀರು ಉಕ್ಕುತ್ತಿದೆ. ಮಳೆ ಮುಂದುವರೆದರೆ,
ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳು ಮತ್ತು ಸಾರ್ವಜನಿಕರ ದಿನನಿತ್ಯದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುವ ಸಾಧ್ಯತೆಯಿದೆ. ಭಾರಿ ವಾಹನಗಳ ಸಂಚಾರದಿಂದ ಡಾಂಬರು ಕಿತ್ತು ಬೀಳುವ ಸಾಧ್ಯತೆ ಹೆಚ್ಚಾಗಿದೆ. ಈ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

 

ಅಡಿಕೆ ಕೊಳೆ ರೋಗಕ್ಕೆ ತುತ್ತಾದ ರೈತರಿಗೆ ಹೆಚ್ಚು ವಿಮಾ ಪರಿಹಾರಕ್ಕೆ ವಿನಂತಿ/ ತೋಟಕ್ಕೆ ಅಧಿಕಾರಿಗಳ ಭೇಟಿ

ಅಡಿಕೆ ಕೊಳೆ ರೋಗಕ್ಕೆ ತುತ್ತಾದ ರೈತರಿಗೆ ಹೆಚ್ಚು ವಿಮಾ ಪರಿಹಾರಕ್ಕೆ ವಿನಂತಿ
ಯಲ್ಲಾಪುರ: ವಜ್ರಳ್ಳಿಯ ಆದರ್ಶ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ, ಅಡಿಕೆ ಕೊಳೆ ರೋಗದಿಂದಾದ ಹಾನಿಗಾಗಿ ಹವಾಮಾನ ಆಧರಿತ ಬೆಳೆ ವಿಮೆಯಡಿ ಹೆಚ್ಚು ಪರಿಹಾರ ನೀಡುವಂತೆ ತಹಶೀಲ್ದಾರ ಹಾಗೂ ತೋಟಗಾರಿಕೆ ಇಲಾಖೆಗೆ ಮನವಿ ಮಾಡಿದೆ. 
  ಬುಧವಾರ, ಸಂಘದ ಅಧ್ಯಕ್ಷ ದತ್ತಾತ್ರೇಯ ತಿಮ್ಮಣ್ಣ ಭಟ್ಟ ತಹಶೀಲ್ದಾರ ಅಶೋಕ ಭಟ್ ಹಾಗೂ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು. 
   ಈ ಮನವಿಯಲ್ಲಿ ಅಂಬಗಾಂವ, ಜೋಗಳೆಪಾಲ, ಹೊನಗದ್ದೆ, ವಜ್ರಳ್ಳಿ, ತಾರಗಾರ, ಬೀಗಾರ, ತೇಲಂಗಾರ ಹಾಗೂ ಚಿಮ್ನಳ್ಳಿ ಗ್ರಾಮಗಳಲ್ಲಿ ಹಾನಿ ಉಂಟಾಗಿರುವ ಬಗ್ಗೆ ವಿವರ ನೀಡಲಾಗಿದೆ. ಕೊನೆಯ ಒಂದುವರೆ ತಿಂಗಳಿನಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ಗ್ರಾಮಗಳ ರೈತರು ಬೆಳೆದ ಅಡಿಕೆ ತೋಟಗಳಲ್ಲಿ ವ್ಯಾಪಕವಾಗಿ ಕೊಳೆರೋಗ ಹರಡಿದೆ. ಇದರಿಂದಾಗಿ ಬೆಳೆ ಶೇ.50 ಕ್ಕಿಂತಲೂ ಹೆಚ್ಚಾಗಿ ಹಾನಿಯಾಗಿದೆ. 
    ಈ ಪ್ರದೇಶದ ಬಹುತೇಕ ರೈತರು ಚಿಕ್ಕ ಮತ್ತು ಅತಿ ಚಿಕ್ಕ ಹಿಡುವಳಿದಾರರು, ಅಡಿಕೆ ಬೆಳೆಯೇ ಅವರ ಮುಖ್ಯ ಆದಾಯದ ಮೂಲವಾಗಿದೆ. ಈ ರೈತರು ಬೆಳೆಸಾಲ, ಆಸಾಮಿ ಖಾತೆ ಸಾಲ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಸಂಘಕ್ಕೆ ಸಾಲ ಮರುಪಾವತಿಯಲ್ಲಿ ತೊಂದರೆಯಾದಲ್ಲಿ, ಹೆಚ್ಚಿನ ಪರಿಹಾರ ಅವಶ್ಯಕ ಎಂದು ಸಂಘದ ಮನವಿ ತಿಳಿಸಿದೆ. 
   ಈ ಹಾನಿಯನ್ನು ಸರಿಪಡಿಸಲು, ಇಲಾಖೆ ಸಮೀಕ್ಷೆ ನಡೆಸಿ, ರೈತರಿಗೆ ಹೆಚ್ಚು ವಿಮಾ ಪರಿಹಾರ ನೀಡುವಂತೆ ಸಹಕಾರ ಸಂಘದ ಮನವಿಯಲ್ಲಿ ಕೇಳಿಕೊಂಡಿದೆ.

ಅಡಿಕೆ ಕೊಳೆರೋಗದ ಪ್ರದೇಶಕ್ಕೆ ಅಧಿಕಾರಿಗಳ ಭೇಟಿ
ಯಲ್ಲಾಪುರ: ಕೊಳೆರೋಗ ಪೀಡಿತ ಬೀಗಾರ, ವಜ್ರಳ್ಳಿಯ ಭಾಗಗಳಿಗೆ ತೋಟಗಾರಿಕೆ ಸಹಾಯಕ ಅಧಿಕಾರಿ ಕೀರ್ತಿ ಬಿ ಎಂ ಬುಧವಾರ ಭೇಟಿ ನೀಡಿ, ಹಾನಿಯ ಸಮೀಕ್ಷೆ ನಡೆಸಿದರು. 
   ತಾಲೂಕಿನ ಬೀಗಾರ, ವಜ್ರಳ್ಳಿ, ತೇಲಂಗಾರ, ಹೊನ್ನಗದ್ದೆ ಸೇರಿದಂತೆ ಹಲವಾರು ಹಳ್ಳಿಗಳಲ್ಲಿ ಅಡಿಕೆ ಕೊಳೆರೋಗ ವ್ಯಾಪಕವಾಗಿ ಹರಡಿದ್ದು, ನಿರಂತರ ಮಳೆಯಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಔಷಧಿ ಸಿಂಪರಣೆಯ ಮೂಲಕ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಬಿರುಸಿನ ಗಾಳಿ ಮತ್ತು ಮಳೆಯಿಂದ ಎತ್ತರದ ಅಡಿಕೆ ಮರಗಳು ನೆಲಕ್ಕುರುಳಿದ್ದು, ಇಳುವರಿ ಕುಂಠಿತವಾಗುವ ಭಯದಲ್ಲಿ ಬೆಳೆಗಾರರು ಸಂಕಟ ಅನುಭವಿಸುತ್ತಿದ್ದಾರೆ.
    ಕೊಳೆರೋಗ ತೀವ್ರವಾಗಿ ಹರಡಿರುವುದರಿಂದ ಔಷಧಿ ಸಿಂಪರಣೆ ಮಾಡಲು ಕೊನೆಗೌಡರ ಕೊರತೆಯುಂಟಾಗಿದೆ. ಡ್ರೈಯರ್‌ಗಳ ಕೊರತೆಯಿಂದ ಬೆಳೆಗಾರರು ಕಷ್ಟಪಡುತ್ತಿದ್ದಾರೆ. ಬಲಿಯದ ಎಳೆಯ ಅಡಿಕೆಗಳು ಉದುರಿದ ಪರಿಣಾಮ ಮುಂಬರುವ ಫಸಲಿನಲ್ಲಿ ಅಪಾರ ನಷ್ಟ ಸಂಭವಿಸುವ ಸಾಧ್ಯತೆಯಿದೆ. 
   ಇಷ್ಟೊಂದು ಪ್ರಮಾಣದಲ್ಲಿ ಬೆಳೆ ನಷ್ಟವಾಗಿರುವುದರಿಂದ ಸರ್ಕಾರದಿಂದ ಪರಿಹಾರ ಘೋಷಿಸುವಂತೆ ರೈತರು ಒತ್ತಾಯಿಸಿದ್ದಾರೆ. ಸ್ಥಳೀಯರಾದ ನವೀನ ಕಿರಗಾರೆ, ಗಣೇಶ ಕಿರಗಾರಿ ಮತ್ತು ಇತರರು ಇದ್ದರು.

ಯಲ್ಲಾಪುರ: ಮುಂಗಾರು ಅತಿವೃಷ್ಟಿಯಿಂದ ಹುಣಶೆಟ್ಟಿಕೊಪ್ಪ ಭತ್ತದ ಬೆಳೆಗೆ ಅಪಾರ ಹಾನಿ

ವರದಿ : ಜಗದೀಶ ನಾಯಕ
ಯಲ್ಲಾಪುರ: ಮುಂಗಾರು ಮಳೆಗಾಲದ ಅತಿವೃಷ್ಟಿಯಿಂದಾಗಿ ಯಲ್ಲಾಪುರ ತಾಲೂಕಿನ ಮದನೂರು, ಕಿರವತ್ತಿ ಮತ್ತು ಕಣ್ಣಿಗೇರಿ ಪಂಚಾಯತಿ ವ್ಯಾಪ್ತಿಯಲ್ಲಿ ಭತ್ತದ ಬೆಳೆಗೆ ಅಪಾರ ಹಾನಿಯಾಗಿದೆ. ನೆಟ್ಟಿ ಕಾರ್ಯ ಬಹುತೇಕ ಸ್ಥಗಿತಗೊಂಡಿದ್ದು, ನೇಟಿ ಮಾಡಿದ್ದ ಬೆಳೆ ಕೊಳೆಯುತ್ತಿದೆ. ಈ ಅನಿರೀಕ್ಷಿತ ಮಳೆಯಿಂದಾಗಿ ರೈತರ ಜೀವನೋಪಾಯಕ್ಕೆ ಬಹುದೊಡ್ಡ ಸವಾಲು ಎದುರಾಗಿದೆ.
  ಹುಣಶೆಟ್ಟಿಕೊಪ್ಪ ಗ್ರಾಮದ ರೈತ ಹಾಗೂ ಮದನೂರು ಶ್ರೀ ಗ್ರಾಮದೇವಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ  ಮಹೇಶ್ ದೇಸಾಯಿ ಈ ಸಂಬಂಧ ಮಾತನಾಡಿ, "ಹಿಂದಿನ ವರ್ಷಗಳಲ್ಲಿ ಅತಿವೃಷ್ಟಿಯಿಂದ ನೇಟಿ ಬೆಳೆ ಹಾನಿಯಾದಾಗ ಸರ್ಕಾರ ಪರಿಹಾರ ನೀಡುತ್ತಿತ್ತು. ಆದರೆ, ಈ ಬಾರಿ ಪರಿಹಾರದ ನಿರೀಕ್ಷೆ ಕಡಿಮೆ ಇದೆ," ಎಂದು ಆತಂಕ ವ್ಯಕ್ತಪಡಿಸಿದರು. "ಅತಿವೃಷ್ಟಿಯಿಂದ ರೈತರು ನಷ್ಟ ಅನುಭವಿಸುತ್ತಿದ್ದು, ಸರ್ಕಾರ ತಕ್ಷಣ ಪರಿಹಾರ ಘೋಷಿಸಬೇಕು" ಎಂದು ಆಗ್ರಹಿಸಿದರು. ಅವರಂತೆಯೇ ಹಲವಾರು ರೈತರು ತಮ್ಮ ಜೀವನೋಪಾಯಕ್ಕೆ ಭತ್ತದ ಬೆಳೆಯೇ ಆಧಾರವಾಗಿದ್ದು, ಈ ಅನಿರೀಕ್ಷಿತ ನಷ್ಟದಿಂದಾಗಿ ಮುಂದಿನ ದಿನಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
   "ನೇಟಿ ಮಾಡಿದ ಭತ್ತದ ಸಸಿಗಳು ಕೊಳೆತು ಹೋಗುವ ಹಾನಿ‌ ಒಂದೆಡೆಯಾದರೆ, ಅತಿವೃಷ್ಟಿಯಿಂದಾಗಿ ಮಣ್ಣಿನಲ್ಲಿನ ಪೋಷಕಾಂಶಗಳು ಕೊಚ್ಚಿ ಹೋಗಿರುವುದರಿಂದ ಮುಂದಿನ ಬೆಳೆಗಳಿಗೂ ಹಾನಿಯಾಗುವ ಸಾಧ್ಯತೆ ಇದೆ,"ಎಂದು ರೈತರು ಆತಂಕಿತರಾಗಿದ್ದಾರೆ. 
  ಈ ಸಂಬಂಧ ಸರ್ಕಾರದ ಅಧಿಕಾರಿಗಳು ಇನ್ನೂ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ರೈತರಿಗೆ ಸೂಕ್ತ ಪರಿಹಾರ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಆಗ್ರಹವಾಗಿದೆ. ಸರ್ಕಾರದ ಪ್ರತಿನಿಧಿಗಳು ಅಥವಾ ಇಲಾಖೆಯ ಅಧಿಕಾರಿಗಳು ತಕ್ಷಣ ಜಾಗೃತರಾಗಿ,
ರೈತರ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ.
  ವಜ್ರಳ್ಳಿ, ಕಳಚೆ ಭಾಗದಲ್ಲಿ ಅಡಿಕೆ ಕೊಳೆ ರೋಗ ಹಾಗೂ ಹುಣಶೆಟ್ಟಿಕೊಪ್ಪ ಭಾಗದಲ್ಲಿ ಭತ್ತದ ನಾಟಿ ಸಸಿಗಳು ಕೊಳೆತು ರೈತರ ಪ್ರಯೋಜನಕ್ಕೆ ಬಾರದಿರುವುದು ಇಲ್ಲಿಯ ಕೃಷಿ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎತ್ತಿ ತೋರಿಸುತ್ತಿದೆ. ಈ ಸಮಸ್ಯೆಯನ್ನು ನಿಭಾಯಿಸಲು ಸರ್ಕಾರದ ಪ್ರತಿನಿಧಿಗಳು, ರೈತ ವರ್ಗಗಳ ಸಮಸ್ಯೆಯನ್ನು ಪ್ರತ್ಯಕ್ಷ ಕಂಡು ನಿವಾರಿಸಬೇಕಾಗಿದೆ.

ವೃತ್ತಿಯನ್ನೇ ವೃತವಾಗಿಸಿಕೊಂಡ ಗೋಪಾಲ ನಾಯ್ಕರಿಗೆ ಸನ್ಮಾನ.

ಯಲ್ಲಾಪುರ: ಕಾರವಾರ ಜನ್ಮ ಭೂಮಿಯಾದರೂ ಯಲ್ಲಾಪುರ ತಾಲೂಕನ್ನೇ ಕರ್ಮ ಭೂಮಿಯಾಗಿಸಿಕೊಂಡು, ವೃತ್ತಿಯನ್ನೇ ವೃತವಾಗಿಸಿದ ಗೋಪಾಲ ಅಚ್ಚುತ ನಾಯ್ಕ ಅವರನ್ನು ಶಿವಪ್ರದಾ ಪ್ರಕಾಶನ ಮತ್ತು ಸೇವಾ ಸಂಸ್ಥೆಯಿಂದ ಸನ್ಮಾನಿಸಲಾಯಿತು.
  ಸಮಯಕ್ಕೆ ಹಾಗೂ ತನ್ನ ಕರ್ತವ್ಯಕ್ಕೆ ಬಹಳ ಮಹತ್ವ ನೀಡಿ ನೀರಿನ ಪಂಪ ರಿಪೇರಿಯಲ್ಲಿ ಅತ್ಯಂತ ನೈಪುಣ್ಯತೆ ಗಳಿಸಿ 'ಪಂಪ ಸರ್ಜನ್' ಎಂದು ಕರೆಸಿಕೊಂಡು ಯಲ್ಲಾಪುರ ತಾಲೂಕಿಗೆ ಪ್ರಾಮಾಣಿಕ ಸೇವೆ ನೀಡಿ ಎಲ್ಲರ ಮೆಚ್ಚುಗೆ ಪಾತ್ರರಾದ ಗೋಪಾಲ ಅಚ್ಚುತ ನಾಯ್ಕ ಅವರನ್ನು ಶಿವಪ್ರದಾ ಪ್ರಕಾಶನ ಮತ್ತು ಸೇವಾ ಸಂಸ್ಥೆಯ ಆಶ್ರಯದಲ್ಲಿ ಕಾರವಾರದ ಸದಾಶಿವಗಡದ ದೇಸಾಯಿವಾಡಾದ ಅವರ ಮನೆಯಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.  ಕಾಯಿಲೆಯಿಂದ ಹಾಸಿಗೆ ಆಶ್ರಯಿಸಿದ ಗೋಪಾಲ ನಾಯ್ಕರನ್ನು ಈ ಸಂದರ್ಭದಲ್ಲಿ ಬೇಗ ಗುಣಮುಖರಾಗಲೆಂದು ಹಾರೈಸಲಾಯಿತು.   ಸಂಸ್ಥೆಯ ಸದಸ್ಯರು ಹಾಗೂ ಖ್ಯಾತ ವ್ಯಂಗ್ಯಚಿತ್ರಕಾರ ಹಾಗೂ ಬರಹಗಾರರಾದ ದೇವಿದಾಸ ಸುವರ್ಣ, ಬೀರಣ್ಣ ನಾಯಕ ಮೊಗಟಾ, ನಿವೃತ್ತ ಪ್ರೌಢಶಾಲಾ ಮುಖ್ಯಾಧ್ಯಾಪಕರಾದ ಪಿ.ಎಸ್.ರಾಣೆ, ಸರಿತಾ(ರಾಧಾ) ನಾಯ್ಕ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾಳಿ ಸೇತುವೆ ಕುಸಿತ: ನಿನ್ನೆ ನಾನು ಇದೇ ಸೇತುವೆ ಮೇಲೆ ಬಂದಿದ್ದೆ !

ಯಲ್ಲಾಪುರ: ಕರ್ನಾಟಕ ಮತ್ತು ಗೋವಾಕ್ಕೆ ಸಂಪರ್ಕ ಕಲ್ಪಿಸುವ 35-40 ವರ್ಷ ಹಳೆಯದಾದ ಕಾರವಾರ-ಸದಾಶಿವಗಡ ಸಂಪರ್ಕಿಸುವ ಕಾಳಿ ಸೇತುವೆ ಮಂಗಳವಾರ ಮಧ್ಯರಾತ್ರಿ ಕುಸಿದು ಬಿದ್ದಿದೆ. ಭಾಗ್ಯವಶಾತ್ ಯಾವುದೇ ದೊಡ್ಡ ಮಾನವ ಹಾನಿ ಸಂಭವಿಸಿಲ್ಲ.
   ಸೇತುವೆ ಕುಸಿದಿರುವ ಚಿತ್ರಗಳು ಮತ್ತು ಅದರ ಗಾಂಭೀರ್ಯತೆ ಸ್ಥಳೀಯರಲ್ಲಿ ಭಯ ಹುಟ್ಟಿಸಿದೆ. ಯಲ್ಲಾಪುರದ 55 ವರ್ಷದ ಮೆಡಿಕಲ್ ಪ್ರತಿನಿಧಿಯೊಬ್ಬರು ಸದಾಶಿವಗಡದಿಂದ ಕಾರವಾರಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಅವರ ಪ್ರಯಾಣ ಮುಗಿದು ಕೇವಲ 12 ಗಂಟೆಗಳ ನಂತರ ಸೇತುವೆ ಕುಸಿದಿರುವುದು ದಾಖಲಾಗಿದೆ.
   ಇಂತಹ ಘಟನೆಗಳು ಜನರ ಅಳಲು ಮತ್ತು ಆತಂಕವನ್ನು ಹೆಚ್ಚಿಸುತ್ತವೆ. ಕುಸಿದ ಸೇತುವೆ ದೃಶ್ಯಗಳು ಜನರಲ್ಲಿ ಭೀತಿ ಮೂಡಿಸುತ್ತವೆ. "ನಾನು ಅಲ್ಲಿದ್ದರೆ ಏನಾಗುತ್ತಿತ್ತು" ಎಂಬ ಕಲ್ಪನೆಯಿಂದ ಜನರು ತಲ್ಲಣಗೊಳ್ಳುತ್ತಾರೆ.
    ಯಲ್ಲಾಪುರದ ಮೆಡಿಕಲ್ ಪ್ರತಿನಿಧಿ, ತಮ್ಮ ದಿನನಿತ್ಯದ ಕೆಲಸಕ್ಕಾಗಿ ಈ ಗಡಿಜಿಲ್ಲೆಗಳಲ್ಲಿ ಸುತ್ತಾಟ ನಡೆಸುತ್ತಾರೆ. ಶಿರೂರು ಗುಡ್ಡ ಕುಸಿತ ಘಟನೆ ಸಂದರ್ಭದಲ್ಲಿ, ಆರು ಗಂಟೆಗಳ ನಂತರ ಅಂಕೋಲಾದಿಂದ ಕುಮಟಾಕ್ಕೆ ತೆರಳಲು ಯತ್ನಿಸಿದರು, ಆದರೆ ಮಾರ್ಗ ಸರಿಯಾಗದೆ ಮನೆಗೆ ಮರಳಬೇಕಾಯಿತು ಎಂಬುದು ಅವರ ಅನುಭವ. "ನಿನ್ನೆ ನಾನು ಇದೇ ಸೇತುವೆ ಮೇಲೆ ಬಂದಿದ್ದೆ !" ಎಂದು ಹೇಳುತ್ತಾರೆ.
   ಕಾಳಿ ಸೇತುವೆ ಕುಸಿತದಿಂದ ಯಾತ್ರಿಕರು ಮತ್ತು ದಿನನಿತ್ಯದ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗಿದ್ದು, ಜಿಲ್ಲಾಧಿಕಾರಿ ಸೇತುವೆಯ ಮೇಲೆ ಸಂಚಾರಕ್ಕೆ ತಡೆ ನೀಡಿದ್ದಾರೆ.

ಕಾರವಾರ-ಗೋವಾ ಸಂಪರ್ಕದ ಕಾಳಿ ಸೇತುವೆ ಕುಸಿತ: ಸಂಚಾರಕ್ಕೆ ಅಡಚಣೆ

ವರದಿ : ಜಗದೀಶ ನಾಯಕ
ಯಲ್ಲಾಪುರ/ಕಾರವಾರ: ಕಾರವಾರ ಮತ್ತು ಗೋವಾ ಸಂಪರ್ಕಿಸುವ ಮಹತ್ವದ ಕಾಳಿ ಸೇತುವೆ (ರಾಷ್ಟ್ರೀಯ ಹೆದ್ದಾರಿ 66) ಮಂಗಳವಾರ ಮಧ್ಯರಾತ್ರಿಯ ನಂತರ ಕುಸಿದು ಬಿದ್ದಿದೆ. ಈ ಘಟನೆ ಸಂಭವಿಸುವಾಗ ತಮಿಳುನಾಡಿನ ಲಾರಿಯೊಂದು ಸೇತುವೆಯ ಮೇಲೆ ಚಲಿಸುತ್ತಿತ್ತು. ಲಾರಿ ಅಪಘಾತಕ್ಕೀಡಾಗಿ ಮುಳುಗುತ್ತಿದ್ದಾಗ, ಲಾರಿ ಚಾಲಕ ಗಾಜು ಒಡೆದು ಹೊರ ಬಂದಿದ್ದಾನೆ. ಗೋವಾದಿಂದ  ಹುಬ್ಬಳ್ಳಿಗೆ ಖಾಲಿ ಲಾರಿ ತೆರಳುತ್ತಿತ್ತು, ಅದರಲ್ಲಿ ಇದ್ದ ಚಾಲಕನನ್ನು ಸ್ಥಳೀಯ ಮೀನುಗಾರರು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಆತನನ್ನು‌ ಕೇರಳದ ರಾಧಾಕೃಷ್ಣನ್ ಎಂದು ಗುರುತಿಸಲಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
   ಈ ಸೇತುವೆಯನ್ನು ರಸ್ತೆ ಸಂಚಾರ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮೂಲಕ ನಿರ್ಮಿಸಿ 1986ರಲ್ಲಿ ಸಾರ್ವಜನಿಕ ಬಳಕೆಗಾಗಿ ತೆರೆದಿಡಲಾಗಿತ್ತು. 1986ರವರೆಗೆ ಕಾರವಾರ ಮತ್ತು ಗೋವಾದ ನಡುವಿನ ಸಂಪರ್ಕ ಬಾರ್ಜ್ ಮೂಲಕ ನಡೆಸಲಾಗುತ್ತಿತ್ತು. ಕಾಳಿ ಸೇತುವೆ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದ್ದು, ಅನೇಕ ಸಿನೆಮಾದ ಚಿತ್ರೀಕರಣಕ್ಕೂ ಈ ಸೇತುವೆ ಸಾಕ್ಷಿಯಾಗಿದೆ. ಅದರಲ್ಲೂ ಈ ಸೇತುವೆ ಮೇಲೆ ಗೋವಾದಿಂದ ಕಾರವಾರ ಗೋಕರ್ಣಕ್ಕೆ ಆಗಮಿಸುವ ವಿದೇಶಗರು ನಿಂತು ವೀಕ್ಷಿಸಿ ಫೋಟೋ ಕ್ಲಿಕ್ಕಿಸಿ ಸಾಗುತ್ತಿದ್ದರು. ಸಮುದ್ರ ಹಾಗೂ ಕಾಳಿ ನದಿ ಸೇರುವ ಕಾಳಿ ನದಿ ಸೇತುವೆಯ ಮೇಲೆ ಬಹುತೇಕ ಪ್ರವಾಸಿ ವಾಹನಗಳು ನಿಧಾನವಾಗಿ ಪ್ರಕೃತಿಯ ಸೌಂದರ್ಯವನ್ನು ಕಣ್ಣು ತುಂಬಿಸಿಕೊಳ್ಳುತ್ತಿದ್ದರು.
  ಕೆಲ ವರ್ಷದ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದ್ದ ಐಆರ್‌ಬಿ ಕಂಪನಿಯು ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಹೊಸ ಸೇತುವೆಯನ್ನು ನಿರ್ಮಿಸಿದ್ದರಿಂದ ಹಳೆಯ ಸೇತುವೆ ಮೂಲಕ ಏಕಮುಖ ಸಂಚಾರ ನಡೆಯುತ್ತಿತ್ತು. ಆದರೆ, ಇದೀಗ ಹಳೆಯ ಸೇತುವೆ ಕುಸಿದು ಬಿದ್ದಿರುವುದರಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರ ದಟ್ಟಣೆ ಮತ್ತು ಅಸ್ತವ್ಯಸ್ತ ಸ್ಥಿತಿ ಉಂಟಾಗಲಿದೆ.

  ಸ್ಥಳೀಯ ಮತ್ತು ಪ್ರಯಾಣಿಕರ ಸಂಚಾರದಲ್ಲಿ ಈ ಘಟನೆ ಗಂಭೀರ ಪರಿಣಾಮ ಬೀರಿದ್ದು, ಅಧಿಕಾರಿಗಳು ತ್ವರಿತವಾಗಿ ಪೂರಕ ಕ್ರಮಗಳನ್ನು ಕೈಗೊಂಡಿದ್ದಾರೆ. ಜನರಿಗೆ ಪರ್ಯಾಯ ಮಾರ್ಗಗಳನ್ನು ಬಳಸಲು ಅವಕಾಶ ಇಲ್ಲವಾಗಿದೆ.