Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Tuesday, 13 August 2024

ವೈಟಿಎಸ್ಎಸ್ ಆಂಗ್ಲ್ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಗದ್ದೆ ನಾಟಿ ಅನುಭವ

ಯಲ್ಲಾಪುರ: ಪಟ್ಟಣದ ವೈಟಿಎಸ್ಎಸ್ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳು ಆಗಸ್ಟ್ 13ರಂದು ಶಿರಸಿ ರಸ್ತೆಯ ಸವಣಗೇರಿ ಗ್ರಾಮದ ಭೀಮರಾವ್ ಗೋಂದಲಿಯವರ ಗದ್ದೆಯಲ್ಲಿ ನಾಟಿ ಕಾರ್ಯದಲ್ಲಿ ಭಾಗವಹಿಸಿ, ಕೃಷಿ ಚಟುವಟಿಕೆಗಳನ್ನು ಅರ್ಥೈಸಿಕೊಳ್ಳುವ ಅವಕಾಶವನ್ನು ಪಡೆದುಕೊಂಡರು.
   ಈ ಕಾರ್ಯಕ್ರಮದ ಸಮಯದಲ್ಲಿ, ವಿದ್ಯಾರ್ಥಿಗಳು ಮೊದಲಿಗೆ ಸವಣಗೇರಿ ಗದ್ದೆಯಲ್ಲಿ ರೈತರಿಂದ ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು. ರೈತರಾದ ಭೀಮರಾವ್ ಗೋಂದಲಿ ಮತ್ತು ಕಾಶಿಂ ಅವರ ಮಾರ್ಗದರ್ಶನದಲ್ಲಿ, ವಿದ್ಯಾರ್ಥಿಗಳು ತಮ್ಮ ಕೈಯಿಂದಲೇ ಭತ್ತದ ನಾಟಿ ಮಾಡುವ ಪಾಠವನ್ನು ಕಲಿತರು. ಈ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು‌ ನಂತರ ಕೆಸರು ಗದ್ದೆಯಲ್ಲಿ ಮಣ್ಣಿನ ಸೊಗಡನ್ನು ಅನುಭವಿಸಿ, ನೈಸರ್ಗಿಕ ಪರಿಸರದ ಒಡನಾಟವನ್ನು ಸಾಕ್ಷಾತ್ಕಾರ ಮಾಡಿದರು.
    ಮತ್ತಷ್ಟು ಆನಂದವನ್ನು ನೀಡಲು, ಮಕ್ಕಳೂ ಕೂಡಾ ತಾವು ಭತ್ತದ ನಾಟಿ ಮಾಡಿದ ನಂತರ, ಅದೇ ಕೆಸರು ಗದ್ದೆಯಲ್ಲಿ ಕುಣಿದು ಕುಪ್ಪಳಿಸಿದರು. ಗದ್ದೆಯಲ್ಲಿ ಓಡಾಡುತ್ತಿದ್ದ ಏಡಿಗಳನ್ನು ತಮ್ಮ ಬೊಗಸೆಯಲ್ಲಿ ತುಂಬಿಕೊಂಡು ಅವುಗಳೊಂದಿಗೆ ಆಟವಾಡುತ್ತ ಮೀನುಗಾರರು ಆದರು. ಇವೆಲ್ಲ ಗ್ರಾಮೀಣ ಬದುಕಿನ ಅನುಭವವನ್ನು ಮಕ್ಕಳಿಗೆ ತಂದುಕೊಡುವಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದು, ಮಕ್ಕಳಲ್ಲಿ ಕೃಷಿಯ ಬಗ್ಗೆ ಒಲವು ಮೂಡಿತು.
  ಈ ಕಾರ್ಯದಲ್ಲಿ ಶಾಲೆಯ ಮುಖ್ಯಾಧ್ಯಾಪಕಿ ಶೈಲಜಾ ಮಾಪ್ಸೇಕರ, ದೈಹಿಕ ಶಿಕ್ಷಕ ಜಿ.ಎಂ. ತಾಂಡುರಾಯನ್, ಮತ್ತು ಶಿಕ್ಷಕಿ ಸೌಮ್ಯ ಮತ್ತಿತರರು ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಈ ಕಾರ್ಯಕ್ರಮದಿಂದ ವಿದ್ಯಾರ್ಥಿಗಳು ಕೃಷಿಯ ಮಹತ್ವವನ್ನು ಅರ್ಥೈಸಿಕೊಂಡು, ರೈತರ ಶ್ರಮವನ್ನು ಗೌರವಿಸಲು ಪ್ರೇರಿತರಾದರು. 
    ಗ್ರಾಮೀಣ ಜೀವನದ ಸಮೃದ್ಧಿಯನ್ನು ಶಾಲಾ ಮಕ್ಕಳಿಗೆ ಪರಿಚಯಿಸುವಲ್ಲಿ ಈ ಕಾರ್ಯಕ್ರಮವು ಸಾಕಷ್ಟು ಪರಿಣಾಮಕಾರಿಯಾಗಿ ಯಶಸ್ವಿಯಾಯಿತು.

ಆಗಸ್ಟ್ 15ರಂದು‌ ಪ್ರತಿ‌ಮನೆಯ ಮೇಲೆ ತಿರಂಗಾ ; ತಹಶೀಲ್ದಾರ ಅಶೋಕ ಭಟ್ಟ

ಯಲ್ಲಾಪುರ: ದೇಶ 78ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ, "ಹರ್ ಘರ್ ತಿರಂಗಾ" ಅಭಿಯಾನವು ದೇಶಾದ್ಯಂತ ಕಾರ್ಯ ಪ್ರವೃತ್ತವಾಗಿದೆ, ಮತ್ತು ಯಲ್ಲಾಪುರ ತಾಲೂಕಿನಲ್ಲಿ ಈ ಅಭಿಯಾನವು ವಿಶೇಷ ಪ್ರಚಾರವನ್ನು ಪಡೆಯುತ್ತಿದೆ. 
   ಯಲ್ಲಾಪುರದ ತಹಶೀಲ್ದಾರ ಅಶೋಕ ಭಟ್ಟ ಅವರು ಸ್ವಾತಂತ್ರ್ಯೋತ್ಸವದ ಮಹತ್ವವನ್ನು ಜನರಿಗೆ ತಿಳಿಸಲು, ಆಗಸ್ಟ್ 15ರಂದು ಪ್ರತಿ ಮನೆಗೂ ತ್ರಿವರ್ಣ ಧ್ವಜ ಹಾರಿಸುವಂತೆ ಕರೆ ನೀಡಿದ್ದಾರೆ. "ನಮ್ಮ ದೇಶದ ಸ್ವಾತಂತ್ರ್ಯವನ್ನು ಆಚರಿಸುವ ಈ ಮಹತ್ವದ ಕ್ಷಣದಲ್ಲಿ, ಪ್ರತಿ ಹಳ್ಳಿಯೂ, ಪಟ್ಟಣವೂ, ತ್ರಿವರ್ಣ ಧ್ವಜದ ಗರಿಮೆಯನ್ನು ಪ್ರತಿಬಿಂಬಿಸಬೇಕು" ಎಂದು ಅವರು ಹೇಳಿದರು. 
  ಅಲ್ಲದೆ, ಅಶೋಕ ಭಟ್ಟ ಅವರು, ಹೆಚ್ಚು ಜನ ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಕೋರಿದ್ದಾರೆ. ತ್ರಿವರ್ಣ ಧ್ವಜವನ್ನು ತಮ್ಮ ಮನೆ ಮೇಲೆ ಹಾರಿಸಿ, ಅದರ ಸೆಲ್ಪಿ ಫೋಟೋ ತೆಗೆದು, www.harghartiranga.com ಜಾಲತಾಣದಲ್ಲಿ ಅಪ್ಲೋಡ್ ಮಾಡುವಂತೆ ಅವರು ಸಲಹೆ ನೀಡಿದ್ದಾರೆ. ಈ ಮೂಲಕ, "ಹರ್ ಘರ್ ತಿರಂಗಾ" ಅಭಿಯಾನವನ್ನು ಹಳ್ಳಿ ಹಳ್ಳಿಗಳವರೆಗೆ ತಲುಪಿಸಲು ಪ್ರಯತ್ನಿಸಲಾಗುತ್ತಿದೆ.
   ಈ ಸಂದರ್ಭದಲ್ಲಿ, ಎಲ್ಲ ಸರ್ಕಾರಿ ನೌಕರರು, ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರ ಮನೆಯ ಮೇಲೆ ತ್ರಿವರ್ಣ್ ದ್ವಜ ಹಾರಿಸುವಮನತೆ ಕರೆ ನೀಡಿದ್ದಾರೆ , "ಸಾರ್ವಜನಿಕರು ಅಭಿಯಾನದಲ್ಲಿ ಸಕ್ರಿಯವಾಗಿ ಭಾಗಿಯಾಗಲು ಮುಂದಾಗಬೇಕು. ಸ್ವಾತಂತ್ರ್ಯ ದಿನಾಚರಣೆಯ ಹಿನ್ನಲೆಯಲ್ಲಿ, ದೇಶದ ಪ್ರತಿಯೊಬ್ಬ ನಾಗರಿಕನೂ ರಾಷ್ಟ್ರದೊಂದಿಗಿನ ತನ್ನ ಬದ್ಧತೆಯನ್ನು ತೋರಿಸಬೇಕು" ಎಂದು ಅಶೋಕ ಭಟ್ಟ ಪ್ರಕಟಣೆಯಲ್ಲಿ ಹೇಳಿದ್ದಾರೆ. 

ಉಮ್ಮಚಗಿಯ ಮನಸ್ವಿನಿ ವಿದ್ಯಾನಿಲಯ ವಿದ್ಯಾರ್ಥಿಗಳ ಯೋಗ ಸಾಧನೆ

ಉಮ್ಮಚಗಿಯ ಮನಸ್ವಿನಿ ವಿದ್ಯಾನಿಲಯ ವಿದ್ಯಾರ್ಥಿಗಳ ಯೋಗ ಸಾಧನೆ!
ಯಲ್ಲಾಪುರ: ಉಮ್ಮಚಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ನಾಲ್ಕು ಕ್ಲಸ್ಟರ್ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಉಮ್ಮಚಗಿಯ ಮನಸ್ವಿನಿ ಶಾಲೆಯ ವಿದ್ಯಾರ್ಥಿಗಳು ಯೋಗ ಸ್ಪರ್ಧೆಯಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. 

  ಪರ್ಣಿಕಾ ಹೆಗಡೆ, ಅಂಜನಾ ಹೆಗಡೆ, ವತ್ಸಲಾ ಜೈನ್ ಮತ್ತು ಲೀಲವರ್ಧನ ಗೌಡ ಅವರು ಗುಂಪು ಮತ್ತು ರಿದಮಿಕ್ ಯೋಗ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು. ಅವರ ಸಾಧನೆಯನ್ನು ಗುರುತಿಸಿ, ಅವರು ತಾಲೂಕಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

   ಮನಸ್ವಿನಿ ಶಾಲೆಯ ಅಧ್ಯಕ್ಷರಾದ ರೇಖಾ ಕೋಟೆಮನೆ, ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಯೋಗ ಸಾಧಕರನ್ನು ಅಭಿನಂದಿಸಿದ್ದಾರೆ. ಅವರು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸಿ, ತಾಲೂಕಾ ಮಟ್ಟದಲ್ಲಿಯೂ ಅದ್ಭುತ ಸಾಧನೆ ಮಾಡಲಿ ಎಂದು ಶುಭ ಹಾರೈಸಿದ್ದಾರೆ.
  ಉಮ್ಮಚಗಿಯ ಮನಸ್ವಿನಿ ವಿದ್ಯಾನಿಲಯವು ಯೋಗ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಶಾಲೆಯು ವಿದ್ಯಾರ್ಥಿಗಳಲ್ಲಿ ಯೋಗದ ಪ್ರಾಮುಖ್ಯತೆಯನ್ನು ಬೋಧಿಸುತ್ತಿದೆ ಮತ್ತು ಅವರಿಗೆ ಯೋಗಾಭ್ಯಾಸ ಮಾಡಲು ಅವಕಾಶಗಳನ್ನು ಒದಗಿಸುತ್ತಿದೆ. ಈ ಯಶಸ್ಸು ಶಾಲೆಯ ಯೋಗ ಶಿಕ್ಷಣ ಕಾರ್ಯಕ್ರಮದ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.

ಯಲ್ಲಾಪುರ : ಜನರಿಲ್ಲದ ಲೋಕಾಯುಕ್ತ ಸಭೆ, ಮಾಹಿತಿಯ ಕೊರತೆಗೆ ಜನರ ಅಸಮಾದಾನ

ಯಲ್ಲಾಪುರ : ಜನರಿಲ್ಲದ ಲೋಕಾಯುಕ್ತ ಸಭೆ, ಮಾಹಿತಿಯ ಕೊರತೆಗೆ ಜನರ ಅಸಮಾದಾನ
ಯಲ್ಲಾಪುರ: ಲೋಕಾಯುಕ್ತ ಎಸ್‌ಪಿ ಕುಮಾರಚಂದ್ರ ಅವರ ಅಧ್ಯಕ್ಷತೆಯಲ್ಲಿ ತಹಶೀಲ್ದಾರ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ "ಸಾರ್ವಜನಿಕರಿಗೆ ಮಾಹಿತಿ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮ"  ಸಭೆ ಹಲವು ಪ್ರಶ್ನೆಗಳಿಗೆ ಹುಟ್ಟಿ ಹಾಕಿತು. 
   ಸಾಮಾಜಿಕ ಕಾರ್ಯಕರ್ತ ಪ್ರಕಾಶ ಕಟ್ಟಿಮನಿ ಅವರು ಸಭೆಯಲ್ಲಿ ಹಲವು ಸಮಸ್ಯೆಗಳ ಪ್ರಸ್ತಾಪಿಸಿ, ಅಧಿಕಾರಿಗಳ ಜವಾಬ್ಧಾರಿ ಬಗ್ಗೆ ಮಾತನಾಡಿದರು. "ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ವಿಸ್ತಾರದ ಕುರಿತಂತೆ ನಿಯಮ ಪಾಲನೆಯಾಗುತ್ತಿಲ್ಲ," ಎಂದು ಅಸಮಾಧಾನ ವ್ಯಕ್ತಪಡಿಸಿದರು. ಯಲ್ಲಾಪುರ ಪಟ್ಟಣದ ಮಧ್ಯ ಭಾಗದಲ್ಲಿ "ಕೆಲವು ವರ್ಷದ ಹಿಂದೆ ಜವಾಬ್ದಾರಿಯುತ ಇಲಾಖೆಯ ಕಚೇರಿ ವಿಸ್ತರಣೆಗಾಗಿಯೇ ರಾಷ್ಟ್ರೀಯ ಹೆದ್ದಾರಿಯನ್ನು ಅತಿಕ್ರಮಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಅಂಚಿನವರೆಗೆ ಅತಿಕ್ರಮಣ ಮಾಡಿದವರಿಗೆ ಪಟ್ಟಣ ಪಂಚಾಯಿತಿ ಎಲ್ಲ ರೀತಿಯ ಪರವಾನಿಗೆ ಹಾಗೂ ಸೌಲಭ್ಯ ನೀಡುತ್ತಿದೆ. ಸಾರ್ವಜನಿಕರು ಸರ್ಕಾರಿ ಆಸ್ತಿಗಳ ರಕ್ಷಣೆಗೆ ಅಧಿಕಾರಿಗಳಿಗೆ ಲಿಖೀತ ಅರ್ಜಿ ನೀಡಬೇಕಾಗಿದೆ. ಹಾಗಾದರೇ, "ಸರಕಾರಿ ಜಮೀನನ್ನು ರಕ್ಷಣೆ ಮಾಡಬೇಕಾದ ಜವಾಬ್ದಾರಿ ಯಾರದು, ಖಾಸಗಿಯವರು ಅಕ್ರಮ ಸಂಬಂಧಿಸಿದಂತೆ ಅಧಿಕಾರಿಗಳಿಗೆ ದೂರು ನೀಡಬೇಕಾ, ಹಾಗಿದ್ದರೆ, ಅಧಿಕಾರಿಗಳ ಕರ್ತವ್ಯ ಏನಿದೆ ಎಂದು ಲೋಕಾಯುಕ್ತರಿಗೆ ಪ್ರಶ್ನಿಸಿದರು.
   ಲೋಕಾಯುಕ್ತ ಎಸ್‌ಪಿ ಕುಮಾರಚಂದ್ರ ಅವರು ಮಾತನಾಡಿ, "ಯಾವುದೇ ಸರಕಾರಿ ಕಚೇರಿ ನಿರ್ವಹಣೆ ಮಾಡಬೇಕಾದರೆ ಅದಕ್ಕಾಗಿಯೇ ಸರ್ಕಾರದ ನಿಯಮಗಳು ಇವೆ. ಅರ್ಜಿಗಳಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಸರಿಯಾದ ಹಿಂಬರಹದೊಂದಿಗೆ ಸಂಗ್ರಹಿಸಬೇಕು. ನಿಮ್ಮ ಕರ್ತವ್ಯ ಅರಿತು ನೀವು ಜವಾಬ್ದಾರಿಯುತ ಕಾರ್ಯ ನಿರ್ವಹಿಸಬೇಕು. ಅಲ್ಲದೆ, "ಯಾವುದೇ ಅರ್ಜಿಗೆ ಸಂಬಂಧಿಸಿದಂತೆ, ತಕ್ಷಣದಲ್ಲಿ ಅದನ್ನು ಬಗೆಹರಿಸಬೇಕು. ಅದಾಗದಿದ್ದರೆ, ಅರ್ಜಿದಾರರಿಗೆ ಯಾವ ಕಾರಣಕ್ಕೆ ಸಮಸ್ಯೆ ಬಗೆಹರಿಸಲಾಗಲಿಲ್ಲ ಎಂಬುದರ ಬಗ್ಗೆ ಹಿಂಬರಹ ನೀಡಬೇಕು," ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. "ಲೋಕಾಯುಕ್ತ ಮತ್ತು ಭ್ರಷ್ಟಾಚಾರ ನಿಯಂತ್ರಣ ನಮ್ಮ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಸರ್ಕಾರಿ‌ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಪ್ಪುಗಳನ್ನು ನಾವು ಪೂರಕ ದಾಖಲೆಗಳ ಆಧಾರದ ಮೇಲೆ ಪರಿಶೀಲಿಸುತ್ತೇವೆ ಮತ್ತು ಕ್ರಮ ಕೈಗೊಳ್ಳುತ್ತೇವೆ," ಎಂದು ಸ್ಪಷ್ಟನೆ ನೀಡಿದರು. 
    ಕಂದಾಯ ಇಲಾಖೆಯಿಂದ ಮಂಜೂರಾದ ಜಾಗೆಯನ್ನು ಶರ್ತು ಉಲ್ಲಂಘಿಸಿ, ಕ್ರಯದಸ್ತ (ಕ್ರಯ ದಾಖಲೆ) ನೊಂದಣಿ ಮಾಡಲಾಗಿದೆ, ಹೀಗಾಗಿ ಸೋ ಮೊಟೊ ಪ್ರಕರಣ ದಾಖಲಿಸುವಂತೆ ಲೋಕಾಯುಕ್ತ ಎಸ್.ಪಿಯವರಿಗೆ ಯಲ್ಲಾಪುರದಲ್ಲಿ ಮಂಜುನಾಥ, ವಿ. ಹೆಗಡೆ ಮತ್ತು ಅಬ್ದುಲ್ ರೆಹಮಾನ್ ಶೇಖ್ ಹಸನ್ ಅವರು, ಮನವಿ ನೀಡಿದರು.  ಯಲ್ಲಾಪುರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಸರ್ವೇ ನಂ. 4A1A1A1 GR 542ರ ಅಡಿಯಲ್ಲಿ, ಕಂದಾಯ ಇಲಾಖೆಯಿಂದ ಮಂಜೂರಾದ ಜಾಗೆಯನ್ನು ಶರ್ತಿನ ಪ್ರಕಾರ ಪಾಲಿಸದೇ, ಕ್ರಯದಸ್ತವನ್ನು ನೊಂದಣಿ ಪಡಿಸಲಾಗಿದೆ. ಈ ಕೃತ್ಯವನ್ನು ತಹಶೀಲ್ದಾರರ ಕಚೇರಿ ಹಾಗೂ ಪ.ಪಂ ತಿರಸ್ಕರಿಸಿದೆ. ಅಲ್ಲದೆ,  ಪಿ.ಆಯ್.ಡಿ. ನಂ. 14-6-64ಯಲ್ಲಿರುವ ಸರ್ವೇ ನಂ. 5-GR ಹತ್ತಿರದ ಜಾಗೆಯ ಮಾರಾಟ ನೋಂದಣಿ ವೇಳೆ ಕೂಡಾ ನಿಯಮ ಉಲ್ಲಂಘನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
   ಸಾರ್ವಜನಿಕರ ಹಿತದೃಷ್ಟಿಯಿಂದ, ಈ ಶರ್ತಿನ ಉಲ್ಲಂಘನೆ ಮತ್ತು ಕಾನೂನು ಬಾಹಿರ ನೋಂದಣಿಯನ್ನು ಗಂಭೀರವಾಗಿ ಪರಿಗಣಿಸಲು, ಸೂಕ್ತ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲು ಲೋಕಾಯುಕ್ತರಿಗೆ ಹೆಗಡೆ ಹಾಗೂ ಶೇಖ ಹಸನ್ ವಿನಂತಿಸಿದರು.
 ಲೋಕಾಯುಕ್ತರ ಸಭೆಯ ಉದ್ದೇಶ ಸಾರ್ವಜನಿಕರಿಂದ ಮಾಹಿತಿಗಳನ್ನು ನೀಡುವುದಾಗಿದ್ದರೂ, ತಕರಾರುಗಳನ್ನು ಆಲಿಸುವುದು ಎಂದು ಘೋಷಿಸಲಾದರೂ, ಜನಸಾಮಾನ್ಯರು ಹಾಗೂ ಮಾಧ್ಯಮದವರಿಗೆ ಈ ಕಾರ್ಯಕ್ರಮದ ಬಗ್ಗೆ ಸರಿಯಾದ ಮಾಹಿತಿ ನೀಡಿರಲಿಲ್ಲ. ಹೀಗಾಗಿ, ಲೋಕಾಯಕ್ತರಿಗೆ ನೀಡಲು ನೂರಾರು ದೂರುಗಳಿದ್ದರೂ ಮಾಹಿತಿ ಕೊರತೆಯಿಂದ ಕೇವಲ ಆರರಿಂದ ಏಳು ಜನ ಮಾತ್ರ ದೂರು ನೀಡುವಂತಾಗಿತ್ತು.
   ಸಭೆಯಲ್ಲಿ ಪ್ರಭಾರೆ ಡಿವೈಎಸ್‌ಪಿ ವಿನಾಯಕ ಬಿಲ್ಲವ್ , ಲೋಕಾಯುಕ್ತ ಇನ್ಸಪೇಕ್ಟರ್ ಪ್ರಸಾದ ಪನ್ನೇಕರ. ಯಲ್ಲಾಪುರ ತಹಶೀಲ್ದಾರ ಅಶೋಕ ಭಟ್ಟ, ತಾ.ಪಂ ಪ್ರಭಾರೆ ಇಓ ಮತ್ತು ಬಿಇಓ ಎನ್ ಆರ್ ಹೆಗಡೆ, ಪಿಐ ರಮೇಶ ಹಾನಾಪುರ, ಎಸಿಎಫ್ ಹಿಮವತಿ ಭಟ್ಟ, ಹೆಸ್ಕಾಂ ಎಇಇ ರಮಾಕಾಂತ ನಾಯ್ಕ, ಜಿ.ಪಂ ಇಂ.ಸ.ಕಾ.ನಿ ಇಂ. ಅಶೋಕ ಬಂಟ್, ಪಿಡಬ್ಲ್ಯೂಡಿ ಸಹಾಯಕ ಎಂಜಿನೀಯರ್ ವಿಶಾಲ ಕಟಾವಕರ, ಹಿಂದುಳಿದ ವರ್ಗದ ಇಲಾಖಾ ಅಧಿಕಾರಿ ದಾಕ್ಷಾಯಣಿ ನಾಯ್ಕ, ಪ.ಪಂ ಸಮೂಹ ಸಂಪನ್ಮೂಲ ಅಧಿಕಾರಿ ಹೇಮಾವತಿ ಭಟ್ಟ ಹಾಗೂ ಇನ್ನಿತರ ಅಧಿಕಾರಿಗಳಿದ್ದರು.

ವಿಶ್ವದರ್ಶನ ಬಳಿ ಶಾಲಾ ಸಮಯದ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಪೊಲೀಸರಿಗೆ ಮನವಿ

ಯಲ್ಲಾಪುರ : ವಿಶ್ವದರ್ಶನ ವಿದ್ಯಾ ಸಂಸ್ಥೆ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾಲಾ ಸಮಯದಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ. ವಿದ್ಯಾರ್ಥಿಗಳು ಮತ್ತು ಪಾಲಕರ ವಾಹನಗಳು ರಸ್ತೆ ಅಕ್ಕಪಕ್ಕದಲ್ಲಿ ನಿಲ್ಲುವುದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ಪಟ್ಟಣ ಪಂಚಾಯತಿ ಸದಸ್ಯ ನಾಗರಾಜ ಅಂಕೋಲೆಕರ ಅವರು ಪೊಲೀಸ್ ಉಪ ನಿರೀಕ್ಷಕ ಸಿದ್ದಪ್ಪ ಗುಡಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದ್ದಾರೆ.
    ಬಹಳಷ್ಟು ವಾಹನಗಳ ಒಂದೆ ಸಲ ಹೊರ ಬರುವುದರಿಂದ  ಮಕ್ಕಳು ಮತ್ತು ಪಾದಚಾರಿಗಳಿಗೆ ಅಪಾಯವಾಗುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಆದ್ದರಿಂದ, ಪಾಲಕರು ವಿದ್ಯಾರ್ಥಿಗಳನ್ನು ಶಾಲಾ ಆವರಣದೊಳಗೆ ಬಿಟ್ಟು ಹೋಗುವ ಮತ್ತು ಅವರನ್ನು ಮೈದಾನದಿಂದಲೇ ಕರೆದುಕೊಂಡು ಹೋಗುವ ವ್ಯವಸ್ಥೆ ಜಾರಿಗೊಳಿಸುವಂತೆ ಸಂಸ್ಥೆಯ ಪ್ರಾಂಶುಪಾಲರಿಗೆ ಸೂಚಿಸುವಂತೆ ಮನವಿ ಮಾಡಲಾಗಿದೆ.
   ವಿಶ್ವದರ್ಶನದ ಎದುರು ಅಕ್ಕಪ್ಕದಕದಲ್ಲಿ ಹೊಟೇಲ್‌ಗಳ ಮುಂದೆ ವಾಹನ ನಿಲುಗಡೆಗೂ ಅಂಕೋಲೆಕರ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೊಟೇಲ್‌ಗಳ ಗ್ರಾಹಕರು ವಾಹನಗಳನ್ನು ಕಡ್ಡಾಯವಾಗಿ ಹೊಟೇಲ್ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುವಂತೆ ಮಾಲೀಕರಿಗೆ ಸೂಚಿಸಬೇಕು ಎಂದು ಮನವಿ ಮಾಡಲಾಗಿದೆ.
   ಪಿಎಸ್ಐ ಸಿದ್ದಪ್ಪ ಗುಡಿ ಮನವಿ ಸ್ವೀಕರಿಸಿ ದೂರಿನ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.

ತೆಲಂಗಾರದಲ್ಲಿ ಬಿಜೆಪಿ‌ ಮಂಡಲದಿಂದ ಹರ ಘರ್ ತಿರಂಗಾ ಅಭಿಯಾನ

ಯಲ್ಲಾಪುರ : ತಾಲೂಕಿನ ತೆಲಂಗಾರದಲ್ಲಿ ಭಾರತದ ಕ್ರಾಂತಿಕಾರಿ ಭಗತ ಸಿಂಗ್ ಅವರ ಪುತ್ಥಳಿಗೆ ಭಾರತೀಯ ಜನತಾ ಪಕ್ಷದ  ಕಾರ್ಯಕರ್ತರು ಆಗಸ್ಟ್ 13 ರಂದು ಮಾಲಾರ್ಪಣೆ ಮಾಡಿದರು. ಈ ಕಾರ್ಯಕ್ರಮವು "ಹರ ಘರ್ ತಿರಂಗಾ" ಅಭಿಯಾನದ ಅಂಗವಾಗಿ ಆಯೋಜಿಸಲಾಯಿತು.
    ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಅವರು ಭಗತ ಸಿಂಗ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಪುತ್ಥಳಿ ಆವರಣವನ್ನು ಬಿಜೆಪಿ ಕಾರ್ಯಕರ್ತರು ಸ್ವಚ್ಛಗೊಳಿಸಿದರು. 
     ಈ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ಜಿಲ್ಲಾ ಪಧಾಧಿಕಾರಿಗಳಾದ ಉಮೇಶ ಭಾಗ್ವತ, ಜಿ ಎನ್ ಗಾಂವ್ಕರ, ವೆಂಕಟ್ರಮ ಬೆಳ್ಳಿ, ಮತ್ತು ಮಂಡಳ ಉಪಾಧ್ಯಕ್ಷ ಸುಬ್ಬಣ್ಣ ಬೋಳ್ಮನೆ, ಇಡಗುಂದಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಜಿ ಆರ್ ಭಾಗ್ವತ, ಮತ್ತು ಪಕ್ಷದ ಪಧಾಧಿಕಾರಿಗಳಾದ ದತ್ತ ಭಟ್ಟ, ದೀಪಕ ಭಟ್ಟ ಬಾರೆ, ನವೀನ ಕಿರಗಾರೆ, ಟಿ ಎನ್ ಭಟ್ಟ, ವಿ ಎನ್ ಭಟ್ಟ, ಮಹೇಶ ಗಾಂವ್ಕರ, ರಾಮ ಕೋಮಾರ, ರವಿ ಬಿಡಾರ, ತಿಮ್ಮಣ ಗಾಂವ್ಕರ, ರತ್ನಾ ಬಾಂದೇಕರ, ಅನ್ನಪೂರ್ಣ ಭಟ್, ವೆಂಕಟರಮಣ ಗಾಮದ, ಸುರೇಶ್ ಮರಾಠಿ, ಮತ್ತು ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
 ಶಾಲಾ ಮಕ್ಕಳು ಮತ್ತು ಬಿಜೆಪಿ ಕಾರ್ಯಕರ್ತರು ಭಗತ ಸಿಂಗ್ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು.

ಯಲ್ಲಾಪುರದ ಮದರ್ ತೆರೇಸಾ ಶಾಲೆಯಲ್ಲಿ ಚಿಣ್ಣರಿಗೆ ಛದ್ಮವೇಶ ಸ್ಪರ್ಧೆ

ಯಲ್ಲಾಪುರ: ಯಲ್ಲಾಪುರ ಪಟ್ಟಣದ ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ ಆಗಸ್ಟ್ 13ರಂದು ಚಿಣ್ಣರ ಛದ್ಮವೇಷ ಸ್ಪರ್ಧೆಯನ್ನು ವಿಜೃಂಭಣೆಯಿಂದ ನಡೆಸಲಾಯಿತು. ಕಿಂಡರ್ ಗಾರ್ಡನ್, ಎಲ್‌ಕೆಜಿ ಮತ್ತು ಯುಕೆಜಿ ಈ ಮೂರು ವಿಭಾಗಗಳಲ್ಲಿ ಮಕ್ಕಳಿಗೆ ವಿಭಿನ್ನ ಛದ್ಮವೇಷ ತೊಟ್ಟು, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ನೀಡಲಾಯಿತು.
  ಕಿಂಡರ್ ಗಾರ್ಡನ್ ವಿಭಾಗದಲ್ಲಿ ರೋಷಲ್, ಆನಿಯಾ, ಬೆನ್ ಯೆಡನ್ ,    . ಎಲ್‌ಕೆಜಿ ವಿಭಾಗದಲ್ಲಿ ಹೊಸಾನ್ನಾ, ಅರೀಸಾ, ಆನ್ಯಾ, ಆಕರ್ಷ, ಅಯಾನ್, ಆರ್ನವ್, ರಿವಾನ್, ಮತ್ತು ಅದ್ವಿಕ್ ಗೆ ಪ್ರಶಸ್ತಿಗಳು ದೊರಕಿದವು. ಯುಕೆಜಿ ವಿಭಾಗದಲ್ಲಿ ಸುಜೆನ್, ಶ್ರೇಯಸ್, ಪಿಯಾನ, ಜಿಸಸಲಿ, ಕ್ರಿಸ್ಟಿ ಅಲ್ಫ್ಯಾನ್ಸೋ, ಪ್ರೀತಿ, ಮತ್ತು ಪ್ರತೀಕ್ ಅವರು ವಿಜೇತರಾಗಿ ಹೊರಹೊಮ್ಮಿದರು.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಂದನೇ ಫಾದರ್ ಪೀಟರ್ ಕರ್ನೇರಿಯೋ ವಹಿಸಿದರು. ಶಾಲೆಯ ಮುಖ್ಯೋಪಾಧ್ಯಾಯ ಫಾದರ್ ರೊಯ್ಯಸ್ಟನ್ ಗೊನ್ಸಾಲ್ವೀಸ್, ಶಿಕ್ಷಕ ವೃಂದ, ಮತ್ತು ಸ್ಪರ್ಧಿಗಳ ಪಾಲಕರು ಈ ವೇಳೆ ಉಪಸ್ಥಿತರಿದ್ದರು. 
   ಕಾರ್ಯಕ್ರಮದಲ್ಲಿ ನಿರ್ಣಾಯಕರಾಗಿ ಅನಿತಾ ಮತ್ತು ಕುಸುಮಾ ಕಾರ್ಯ ನಿರ್ವಹಿಸಿದರು. ಮಕ್ಕಳು ಉತ್ಸಾಹಭರಿತರಾಗಿ ತಮ್ಮ ತಮ್ಮ ಛದ್ಮವೇಷಗಳನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಮಕ್ಕಳ ಪ್ರತಿಭೆಯನ್ನು ಮೆಚ್ಚಿಕೊಂಡು, ಅವರ ಭವಿಷ್ಯದ ಬೆಳೆವಣಿಗೆಗೆ ಶುಭ ಹಾರೈಸಿದರು. ಮಕ್ಕಳ ಪಾಲಕರು ಕಾರ್ಯಕ್ರಮದಲ್ಲಿ‌ಪಾಲ್ಗೊಂಡಿದ್ದರು.  ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಶ್ವೇತಾ ಸ್ವಾಗತಿಸಿ, ನಿರೂಪಣೆ ನಡೆಸಿದರು.

78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಯಲ್ಲಾಪುರದಲ್ಲಿ ರಾಷ್ಟ್ರಧ್ವಜದೊಂದಿಗೆ ಬೈಕ್ ರ‌್ಯಾಲಿ

ಯಲ್ಲಾಪುರ : 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಯಲ್ಲಾಪುರ ತಾಲೂಕು ಆಡಳಿತವು ಆಗಸ್ಟ್ 13 ರಂದು ಬೆಳಿಗ್ಗೆ ವಿಶಾಲ ಕಾರ್ಯಕ್ರಮದ ಭಾಗವಾಗಿ ರಾಷ್ಟ್ರಧ್ವಜದ ಬೈಕ್ ರ್ಯಾಲಿಯನ್ನು ಹಮ್ಮಿಕೊಂಡಿತು. ಈ ರ‌್ಯಾಲಿಗೆ ಯಲ್ಲಾಪುರದ ಆಡಳಿತ ಸೌಧದ ಮುಂಭಾಗದಲ್ಲಿ ಅಶೋಕ್ ಭಟ್ ಅವರು ಚಾಲನೆ ನೀಡಿದರು. 
   ನಂತರ ಮಾತನಾಡಿದ ಅಶೋಕ್ ಭಟ್, "ಸ್ವಾತಂತ್ರ್ಯದ 78ನೇ ವರ್ಷಾಚರಣೆಯ ಸಡಗರದ ಅಂಗವಾಗಿ, ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಮತ್ತು ಸಾರ್ವಜನಿಕರ ಮೂಲಕ ರಾಷ್ಟ್ರಾಭಿಮಾನವನ್ನು ಹೆಚ್ಚಿಸುವ ಉದ್ದೇಶದಿಂದ ಈ ಬೈಕ್ ರ‌್ಯಾಲಿಯನ್ನು ಆಯೋಜಿಸಲಾಗಿದೆ. ಅಗಸ್ಟ್ 15 ನಮ್ಮ ಸ್ವಾಭಿಮಾನದ ಸಂಕೇತದ ದಿನವಾಗಿದೆ. ಈ ರೀತಿಯ ರಾಷ್ಟ್ರೀಯ ಹಬ್ಬಗಳ ಮಹತ್ವವನ್ನು ಜನರಲ್ಲಿಯೂ ಸ್ವಾಭಿಮಾನ ಮತ್ತು ಹೆಮ್ಮೆ ಮೂಡಿಸುವ ಮೂಲಕ ತಿಳಿಸಬೇಕಾಗಿದೆ, ಸ್ವತಂತ್ರೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚು ಜನ ಪಾಲ್ಗೊಳ್ಳಬೇಕು ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮ" ಎಂದು ಅಭಿಪ್ರಾಯಪಟ್ಟರು.
   
ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ (ಗ್ರೇಡ್ 2) ಸಿ. ಜಿ. ನಾಯ್ಕ, ತಾ.ಪಂ ಪ್ರಭಾರೆ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಬಿಇಓ ಎನ್ ಆರ್ ಹೆಗಡೆ, ಪ.ಪಂ ಮುಖ್ಯಾಧಿಕಾರಿ ಸುನೀಲ ಗಾವಡೆ, ಪೊಲೀಸ್ ನಿರೀಕ್ಷಕರಾದ ರಮೇಶ ಹಾನಾಪುರ, ಪಿಎಸ್ಐಗಳಾದ ಸಿದ್ದಪ್ಪ ಗುಡಿ ಹಾಗೂ ನಿರಂಜನ್ ಹೆಗಡೆ ಹಾಗೂ ಜಿಪಂ ಇಂಜಿನಿಯರಿಂಗ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ ಬಂಟ್, ಹಿಂದುಳಿದ ವರ್ಗದ ಇಲಾಖೆಯ ಅಧಿಕಾರಿ ದಾಕ್ಷಾಯಣಿ ನಾಯ್ಕ ಸೇರಿದಂತೆ ಅನೇಕ ಅಧಿಕಾರಿಗಳು ಭಾಗವಹಿಸಿದ್ದರು. 
   ಬೆಳಗ್ಗೆ 09.30 ಗಂಟೆಗೆ "ಬೈಕ್ ರ‌್ಯಾಲಿ" ಯನ್ನು ಆಡಳಿತ ಸೌಧದಿಂದ ಪ್ರಾರಂಭಿಸಿ, ಬಸವೇಶ್ವರ ವೃತ್ತ ಅಂಬೇಡ್ಕರ್ ವೃತ್ತ - ಬೆಲ್ ರೋಡ್ ಸಂಕಲ್ಪ ಹೊಟೇಲ್ ಕ್ರಾಸ್ ಮಾರ್ಗವಾಗಿ, ಆಡಳಿತ ಸೌಧದಲ್ಲಿ ಮುಕ್ತಾಯಗೊಂಡಿತು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ , ಆ.15ರಂದು ಜಿಲ್ಲಾ ಅನುಷ್ಠಾನ ಪ್ರಾಧಿಕಾರ ಉದ್ಘಾಟನೆ

 

Description of the image ‌ಯಲ್ಲಾಪುರ : ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಿಲ್ಲಾ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರವು ಆಗಸ್ಟ್ 15, 2024 ರಂದು ಕಾರವಾರದ ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ಉದ್ಘಾಟನೆಯಾಗಲಿದೆ. Description of the image ‌   ಈ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರು ಉದ್ಘಾಟಿಸಲಿದ್ದು, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್. ವಿ. ದೇಶಪಾಂಡೆ, ಶಾಸಕರು ಹಾಗೂ ಕರ್ನಾಟಕ ಮಾರ್ಕೆಟಿಂಗ್ ಕನ್ಸಲ್ಟಂಟ್ ಅಂಡ್ ಏಜೆನ್ಸಿಸ್‌ಯ ಅಧ್ಯಕ್ಷ ಸತೀಶ್ ಕೆ. ಸೈಲ್, ಶಾಸಕ ಭೀಮಣ್ಣ ಟಿ. ನಾಯ್ಕ, ಪ್ರಮುಖರಾದ ನಿವೇದಿತ ಅಳ್ವಾ, ವಿ.ಎಸ್. ಪಾಟೀಲ ಮತ್ತು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ ಸೇರಿದಂತೆ ಗಣ್ಯರು ಉಪಸ್ಥಿತರಿರುತ್ತಾರೆ.
   ಈ ಪ್ರಾಧಿಕಾರದ ಸ್ಥಾಪನೆಯಿಂದ ಗೃಹಲಕ್ಷ್ಮಿ, ಗೃಹ ಜ್ಯೋತಿ, ಯುವನಿಧಿ ಮುಂತಾದ ಪಂಚ ಗ್ಯಾರಂಟಿಗಳು ಜಿಲ್ಲೆಯ ಜನರಿಗೆ ಸುಲಭವಾಗಿ ದೊರೆಯಲಿವೆ. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ಪಿ. ಹೀರೋ ಅವರು ಎಲ್ಲರನ್ನು ಹೃತ್ಪೂರ್ವಕವಾಗಿ ಆಹ್ವಾನಿಸಿದ್ದಾರೆ.   bottom

ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಂದು ಬೈಕ್ ರ‌್ಯಾಲಿ, ನಾಳೆ ತಿರಂಗಾ ಯಾತ್ರೆ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಆದೇಶದಂತೆ, ಯಲ್ಲಾಪುರ ತಾಲೂಕಿನಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೈಕ್ ರ್ಯಾಲಿ ಮತ್ತು ತಿರಂಗಾ ಯಾತ್ರೆ ಆಯೋಜಿಸಲಾಗಿಸಲಾಗಿದೆ ಎಂದು ತಹಶೀಲ್ದಾರ ಅಶೋಕ ಭಟ್ಟ ತಿಳಿಸಿದ್ದಾರೆ.

ಬೈಕ್ ರ‌್ಯಾಲಿ: ಆಗಸ್ಟ್ 13 ರಂದು ಬೆಳಗ್ಗೆ 9:30 ಕ್ಕೆ ಆಡಳಿತ ಸೌಧದಿಂದ ಪ್ರಾರಂಭವಾಗುವ ಈ ರ‌್ಯಾಲಿ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ ಮತ್ತು ಬೆಲ್ ರೋಡ್ ಮುಖಾಂತರ ಮತ್ತೆ ಆಡಳಿತ ಸೌಧದಲ್ಲಿ ಮುಕ್ತಾಯಗೊಳ್ಳಲಿದೆ.
ತಿರಂಗಾ ಯಾತ್ರೆ: ಆಗಸ್ಟ್ 14 ರಂದು ಬೆಳಗ್ಗೆ 9:30 ಕ್ಕೆ ಆಡಳಿತ ಸೌಧದಿಂದ ಪ್ರಾರಂಭವಾಗುವ ಈ ಯಾತ್ರೆ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಬೆಲ್ ರೋಡ್ ಮತ್ತು ತರಕಾರಿ ಮಾರುಕಟ್ಟೆ ಮುಖಾಂತರ ಮತ್ತೆ ಆಡಳಿತ ಸೌಧದಲ್ಲಿ ಮುಕ್ತಾಯಗೊಳ್ಳಲಿದೆ.
    ಸಮವಸ್ತ್ರ ಅಥವಾ ಶುಭ್ರ ಬಿಳಿ ಸಮವಸ್ತ್ರ ಧರಿಸುವುದು ಕಡ್ಡಾಯ. ಬೈಕ್ ಚಾಲಕರು ಹೆಲ್ಮೆಟ್ ಧರಿಸುವುದು ಕೂಡ ಅನಿವಾರ್ಯ. ಎಲ್ಲಾ ಸರಕಾರಿ ನೌಕರರು ಮತ್ತು ಸಾರ್ವಜನಿಕರು ಈ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು.
   ಈ ಕಾರ್ಯಕ್ರಮಗಳ ಮೂಲಕ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸುವುದು ಮತ್ತು ಸ್ವಾತಂತ್ರ್ಯದ ಮಹತ್ವವನ್ನು ಅರಿತುಕೊಳ್ಳುವುದು ಈ ಆಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಯಲ್ಲಾಪುರ ತಹಶೀಲ್ದಾರರು ಈ ಕಾರ್ಯಕ್ರಮದ ಯಶಸ್ಸಿಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.