ಯಲ್ಲಾಪುರ: ಮದನೂರು ಗ್ರಾಮದಲ್ಲಿ ಸಿದ್ದಿ ಸಮುದಾಯದ ವ್ಯಕ್ತಿಯೊಬ್ಬರ ಕೊಲೆಯಾಗಿರುವ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತಾವರಕಟ್ಟಾ ಮದನೂರು ಗ್ರಾಮದ ಮಂಗಲಾ ಪಾವ್ಲು ಸಿದ್ದಿ ನೀಡಿರುವ ದೂರಿನ ಪ್ರಕಾರ, ಸೆಪ್ಟೆಂಬರ್ 28 ರಂದು ಬಸಳೆಬೈಲ್ ನಿವಾಸಿ ಆರೋಪಿತ ಸುರೇಶ ಪವಾರ, ತನ್ನ ಅಂಗವಿಕಲರ ತ್ರಿಚಕ್ರ ವಾಹನದಲ್ಲಿ ಪಾವ್ಲು ಸಿದ್ದಿ ಅವರನ್ನು ಕೂಡಿಸಿಕೊಂಡು ಹೋಗಿದ್ದನು. ಸಂಜೆಯಾದರೂ ಪಾವ್ಲು ಸಿದ್ದಿ ಮನೆಗೆ ವಾಪಸ್ ಬಾರದಿದ್ದರಿಂದ ಮಂಗಲಾ ಅವರು, ಸುರೇಶನ ಮನೆಗೆ ಹೋಗಿ ತನ್ನ ಪತಿಯ ಬಗ್ಗೆ ವಿಚಾರಿಸಿದ್ದರು. ಆಗ ಸುರೇಶ ಪಾವ್ಲು ಸಿದ್ದಿಯನ್ನು ಕಳಸೂರು ಕತ್ರಿಗೆ ಬಿಟ್ಟು ಹೋಗಿರುವುದಾಗಿ ಹೇಳಿದ್ದನು.
ಮರುದಿನವೂ ಪಾವ್ಲು ಸಿದ್ದಿ ಮನೆಗೆ ಬಾರದಿದ್ದರಿಂದ ಮಂಗಲಾ ಪುನಃ ಸುರೇಶನ ಮನೆಗೆ ಹೋಗಿ ವಿಚಾರಿಸಿದಾಗ, ಸುರೇಶ ಆಕೆಯನ್ನು ಬೈದು, ಜಾತಿ ನಿಂದನೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೆಪ್ಟೆಂಬರ್ 30 ರಂದು ಬೆಳಗ್ಗೆ ಪಾವ್ಲು ಸಿದ್ದಿ ಶವವು ಮದನೂರು ಗ್ರಾಮದ ಯಳ್ಳಂಬಿ ಹಳ್ಳದಲ್ಲಿ ಪತ್ತೆಯಾಗಿದೆ ಎಂಬ ಮಾಹಿತಿ ಪಡೆದ ಮಂಗಲಾ ಸ್ಥಳಕ್ಕೆ ತೆರಳಿ ನೋಡಿದಾಗ ಪತಿಯ ಶವವನ್ನು ಕೆರೆಯಲ್ಲಿ ಕಂಡಿದ್ದಾಳೆ.
ಮಂಗಲಾ ಆರೋಪಿ ಸುರೇಶನೇ ತನ್ನ ಪತಿಯನ್ನು ಕೊಲೆ ಮಾಡಿ, ಆತನ ಶವವನ್ನು ಹಳ್ಳದಲ್ಲಿ ಬಿಸಾಡಿರುವುದಾಗಿ ಆರೋಪಿಸಿ ದೂರು ನೀಡಿದ್ದಾಳೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಲ್ಲಾಪುರ ಪಿಎಸ್ಐ ನಸ್ರೀನ್ ತಾಚ್ ಚಟ್ಟರಗಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
.