ಯಲ್ಲಾಪುರ / ಬೆಂಗಳೂರು : ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅ.4ರಂದು ಪಂಚಾಯತ್ ರಾಜ್ ಕುಟುಂಬ ರವರಿಂದ ಬೃಹತ್ ಪ್ರತಿಭಟನೆ ನಡೆಯಿತು. ಯಲ್ಲಾಪುರ ತಾಲೂಕಿನಿಂದ ಪಂಚಾಯತ ರಾಜ್ ಪ್ರತಿನಿಧಿಗಳು ಒಕ್ಕೂಟದ ಅಧ್ಯಕ್ಷ ಎಂ ಕೆ ಭಟ್ ಯಡಳ್ಳಿ ನೇತೃತ್ವದಲ್ಲಿ ತಂಡ ತೆರಳಿ ಪ್ರತಿಭಟನೆಯಲ್ಲಿ ಭಾಗವಹಿಸಿತು.
ಪಂಚಾಯತ ರಾಜ್ ಇಲಾಖೆಯ ಅಧಿಕಾರಿಗಳಿಗೆ ಆಗುತ್ತಿರುವ ತೊಂದರೆ, ಸದಸ್ಯರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ರಾಜ್ಯಮಟ್ಟದ ಗ್ರಾಮ ಪ್ರತಿನಿಧಿಗಳು, ಮತ್ತು ಇಲಾಖಾ ನೌಕರರ ವರ್ಗ, ಸೇರಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಉತ್ತರ ಕನ್ನಡ ಜಿಲ್ಲೆಯಿಂದ ಸುಮಾರು 1000ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು.
ಮನವೊಲಿಕೆ ಯತ್ನ ವಿಫಲ :
ಧರಣಿ ಕೈ ಬಿಡುವಂತೆ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ನೌಕರರು ಸದಸ್ಯರನ್ನು ಮನವೊಲಿಸಲು ಮುಂದಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮದೇವನ್ ಅವರು, ಹೋರಾಟದ ನೇತೃತ್ವ ವಹಿಸಿದ್ದವರ ಜೊತೆ ಶುಕ್ರವಾರ ಚರ್ಚಿಸಿದರು. ಆದರೆ ಬೇಡಿಕೆ ಈಡೇರಿಸುವ ಸ್ಪಷ್ಟ ಬರವಸೆ ನೀಡದ ಕಾರಣದಿಂದ ಮನವೊಲಿಕೆ ಯತ್ನ ವಿಫಲವಾಯಿತು.
ನಮ್ಮ ಯಾವುದೇ ಬೇಡಿಕೆಗಳನ್ನು ಈಡೇರಿಸುವ ಭರವಸೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಂದ ಬಂದಿಲ್ಲ ಆದ್ದರಿಂದ ಧರಣಿ ಮುಂದುವರಿಸುತ್ತೇವೆ. ಶನಿವಾರವು ಗ್ರಾಮ ಪಂಚಾಯಿತಿಗಳಲ್ಲಿ ಯಾವುದೇ ಸೇವೆ ದೊರಕುವುದಿಲ್ಲ ಎಂದು ಒಕ್ಕೂಟದ ಪ್ರಮುಖರು ತಿಳಿಸಿದರು.
ಈ ಸಂದರ್ಭದಲ್ಲಿ ಉತ್ತರಕನ್ನಡ ತಂಡವನ್ನು ಉದ್ದೇಶಿಮಾತನಾಡಿದ ಎಂ ಕೆ ಭಟ್ಟ ಯಡಳ್ಳಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘ ಹಾಗೂ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಒಕ್ಕೂಟ, ಅ.4ರಂದು ಕರೆ ನೀಡಿರುವ ಪಂಚಾಯತ್ ರಾಜ್ ಕುಟುಂಬದ ಹೋರಾಟಕ್ಕೆ ಸಾರ್ವಜನಿಕರು ಸಂಪೂರ್ಣ ಬೆಂಬಲವನ್ನು ನೀಡಿದ್ದಾರೆ. ಶನಿವಾರ ಕೂಡ ನಮ್ಮ ಹೋರಾಟ ಮುಂದುವರೆಯಲಿದೆ. ಸರ್ಕಾರ ನೌಕರರ ಸಮಸ್ಯೆಯೊಂದಿಗೆ ಚುನಾಯಿತ ಪ್ರತಿನಿಧಿಗಳು ಅಧಿಕಾರವನ್ನು ಮೊಟಕುಗೊಳಿಸಲು ಹೋಗಬಾರದು. ಈ ನಿಟ್ಟಿನಲ್ಲಿ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಹೇಳಿದರು.
ಇಂದು ಅಕ್ಟೋಬರ್ 5 ರಂದು ಮುಂದುವರೆದ ಭಾಗವಾಗಿ ಮಂತ್ರಿಗಳು ಬಂದು ಮನವಿ ಸ್ವೀಕಾರ ಮಾಡಿ ಆಶ್ವಾಸನೆ ಸಿಗುವವರೆಗೂ ಪ್ರತಿಭಟನೆಯನ್ನ ಮುಂದುವರೆದು ಹೋಗಬೇಕೆಂದು ತೀರ್ಮಾನಿಸಲಾಯಿತು.
ನಮ್ಮ ಪ್ರತಿಭಟನೆಯಲ್ಲಿ ಚಲುವಾದಿ ನಾರಾಯಣಸ್ವಾಮಿ ವಿರೋಧ ಪಕ್ಷದ ನಾಯಕರು, ವಿಧಾನ ಪರಿಷತ್ ಸದಸ್ಯ ಯಲ್ಲಾಪುರದ ಶಾಂತರಾಮ ಸಿದ್ದಿ ಮುಂತಾದವರು ಬಂದು ನಮ್ಮ ನಮ್ಮ ಪ್ರತಿಭಟನೆಯಲ್ಲಿ ಭಾಗಿಯಾಗಿ ಬೆಂಬಲವನ್ನು ಸೂಚಿಸಿದರು.
ಗ್ರಾಮ ಪಂಚಾಯಿತಿಗಳಲ್ಲಿ ಸಂಪೂರ್ಣ ಸೇವೆ ಸ್ಥಗಿತ :
ಅನಿರ್ದಿಷ್ಟಾವಧಿ ಮುಷ್ಕರಕ್ಕೆ ರಾಜ್ಯದ 5950 ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯಿತಿಯ ಎಲ್ಲ ವೃಂದಗಳ ಅಧಿಕಾರಿಗಳು ನೌಕರರು ಕೆಲಸದಿಂದ ಹೊರಗೆ ಬಿಡುತ್ತಿದ್ದಾರೆ ಇದರಿಂದಾಗಿ ಪಂಚಾಯಿತಿಗಳಲ್ಲಿ ಎಲ್ಲ ಬಗೆಯ ಸೇವೆಗಳು ಸ್ಥಗಿತಗೊಂಡಿವೆ ವಿವಿಧ ಕೆಲಸಗಳಿಗಾಗಿ ಪಂಚಾಯಿತಿಗಳಿಗೆ ಬಂದಿದ್ದ ಜನರಿಗೆ ಇದರಿಂದಾಗಿ ತೀವ್ರ ಸಮಸ್ಯೆಯಾಯಿತು.