ಯಲ್ಲಾಪುರ : ತಾಲೂಕಿನ ಕಣ್ಣಿಗೇರಿಯ ಶಾರದೋತ್ಸವ ಸಮಿತಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಯುಕ್ತವಾಗಿ ಶಾಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಶಾರದಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಅಕ್ಟೋಬರ್ 9ರಂದು ಶಾರದೋತ್ಸವ, ಸನ್ಮಾನ, ಗುರುವಂದನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಸಭಾ ಕಾರ್ಯಕ್ರಮವನ್ನು ಊರಿನ ಹಿರಿಯ ಗಣ್ಯರಾದ ಕೃಷ್ಣ ಪುರುಷೋ ನಾಯ್ಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಅಣ್ಣಪ್ಪ ನಾಯ್ಕ ಮಾತನಾಡಿ, ಈಗಾಗಲೆ ಸಾಕಷ್ಟು ಅಭಿವೃದ್ಧಿ ಮಾಡಿದ್ದೆವೆ. ಶಾಲೆಯ ಕುಂದು ಕೊರತೆ ಗಮನಿಸಿ ದಾನಿಗಳಿಂದ ಹಣ ಸಂಗ್ರಹಿಸಿ ಅಂತಹ ಕೊರತೆಗಳನ್ನು ನಿವಾರಿಸಲು ಪ್ರಯತ್ನಿಸಿದ್ದೆವೆ. ಪಾಲಕರು ಹಾಗೂ ಕಣ್ಣಿಗೇರಿ ಗ್ರಾಮದ ನಾಗರಿಕರು ಶಾಲೆಯ ಅಭಿವೃದ್ಧಿಗೆ ಸಹಾಯ ಮಾಡಿದ್ದಾರೆ. ಹಿಂದಿನ ಬಾರಿ ನಮ್ಮ ಶಾಲೆಯ ಸಹ ಶಿಕ್ಷಕಿ ಕಲ್ಪನಾ ಕೊಂಡ್ಲೇಕರ ತಾಲೂಕಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಬಂದಿತ್ತು, ಈ ಬಾರಿ ನಮ್ಮಶಾಲೆಯ ಮುಖ್ಯ ಶಿಕ್ಷಕ ಶ್ರೀಕಾಂತ ವೈದ್ಯ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ನಂದನ ಸೊಸೈಟಿ ನಿರ್ದೇಶಕ ರವಿ ಕೈಟ್ಕರ್ ಮಾತನಾಡಿ, ಕಣ್ಣಿಗೇರಿ ಶಾಲೆಯಲ್ಲಿ ಬಹಳಷ್ಟು ಹಿಂದಿನಿಂದ ಶಾರಾದೋತ್ಸವ ನಡೆಸಿಕೊಂಡು ಬಂದಿರುತ್ತಾರೆ. ಇಲ್ಲಿಯ ಹಿಂದಿನ ವಾತಾವರಣಕ್ಕೂ ಇಂದಿನ ವಾತಾವರಣಕ್ಕೆ ಹೋಲಿಸದರೆ, ಶಾಲೆ ಹಾಗೂ ಗ್ರಾಮ ಬಹಳಷ್ಟು ಅಭಿವೃದ್ಧಿ ಕಂಡಿದೆ. ಈ ಎಲ್ಲ ಸಾಧನೆಗೆ ಶಾಲೆಯ ಎಸ್‌ಡಿಎಂಸಿ, ಶಾಲೆಯ ಶಿಕ್ಷಕರು ಊರ ನಾಗರಿಕರು, ಯುವಕ ಸಂಘದ ಸದಸ್ಯರು ಕಾರಣ ಎಂದು ಹೇಳಿದರು.
ಕಣ್ಣಿಗೇರಿ ಗ್ರಾಮ ಪಂಚಾಯತಿ ಸದಸ್ಯ ವಾಸುದೇವ ಮಾಪ್ಸೇಕರ್ ಮಾತನಾಡಿ, ಈ ಶಾಲೆಗೆ 47 ವರ್ಷ ಕಳೆದಿದೆ, ಅಂದಿನಿಂದಲೂ ಶಾರದೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳಿಗೆ ಶೈಕ್ಷಣಿಕ ಮಟ್ಟದಲ್ಲಿ ಉತ್ತೇಜನ ನೀಡುವ ಕಾರ್ಯ ಮಾಡಲಾಗುತ್ತಿದೆ. ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ ಅಭಿವೃದ್ಧಿ ಕಂಡರೂ, ಶಾಲೆಗೆ ಇನ್ನಷ್ಟು ಅಗತ್ಯತೆಯನ್ನು ಪೂರೈಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ದೈಹಿಕ ಪರಿವೀಕ್ಷಕರಾದ ಪ್ರಕಾಶ ತಾರೀಕೊಪ್ಪ ಮಾತನಾಡಿ, ಕಣ್ಣಿಗೇರಿ ಊರಿನ ಪಾಲಕರು ಹಾಗೂ ಮಕ್ಕಳು ಉತ್ತಮ ಸಂಸ್ಕಾರವನ್ನು ಬೆಳೆಸಿಕೊಂಡಿದ್ದಾರೆ. ತಮ್ಮ ಮಕ್ಕಳನ್ನು ಹೆಚ್ಚೆಚ್ಚು ಸರ್ಕಾರಿ ಶಾಲೆಗಳಲ್ಲಿ ಓದಿಸುವ ಮೂಲಕ ಒಳ್ಳೆಯ ಶಿಕ್ಷಣ ನೀಡುವಂತವರಾಗಿ ಎಂದು ಕರೆ ನೀಡಿದರು.
ಶಿಕ್ಷಣ ಸಂಯೋಜಕ ಪ್ರಶಾಂತ ಜಿಎನ್ ಅತಿಥಿಗಳಾಗಿ ಮಾತನಾಡಿದರು. ದೇವಸ್ಥಾನದ ಅರ್ಚಕ ನಾಗೇಶ ಮಾಪ್ಸೇಕರ, ಸ್ಥಳೀಯ ಯೂವ ಮುಖಂಡರಾದ ನೀಲಕಂಠ ಭೋವಿವಡ್ಡರ್, ರಾಜೇಶ್ ಮರಾಠಿ ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀಕಾಂತ್ ವೈದ್ಯ, ಯಲ್ಲಾಪುರ ಭೂ ನ್ಯಾಯ ಮಂಡಳಿ ಸದಸ್ಯರಾಗಿ ನಿಯುಕ್ತಿಗೊಂಡ ಎಸ್‌ಡಿಎಂಸಿ ಅಧ್ಯಕ್ಷ ಅಣ್ಣಪ್ಪ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಶಾಲೆಯ ಶಿಕ್ಷಕಿ ಕಲ್ಪನಾ ಕೊಂಡ್ಲೇಕರ್ ಇವರಿಗೆ ಗುರು ವಂದನೆ ಸಲ್ಲಿಸಲಾಯಿತು.
ಎಸ್‌ಡಿಎಂಸಿ ಸದಸ್ಯ ದೀಪಕ ನಾಯ್ಕ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಶ್ರೀಕಾಂತ ವೈದ್ಯ ನಿರೂಪಿಸಿದರು. ಶಿಕ್ಷಕಿ ಕಲ್ಪನಾ ಕೊಂಡ್ಲೇಕರ ವಂದಿಸಿದರು.
.