ಯಲ್ಲಾಪುರ : ಭಗತ್ ಸಿಂಗ್ ಅಟೋ ಚಾಲಕ ಮತ್ತು ಮಾಲಕರ ಸಂಘ, ಗ್ರಾಮದೇವಿ ಟ್ಯಾಕ್ಸಿ ಚಾಲಕ ಮತ್ತು ಮಾಲಕರ ಸಂಘ, ಲಾರಿ ಚಾಲಕರ ಸಂಘ, ಬಸವೇಶ್ವರ ಗೂಡ್ಸ್ ಲಕ್ಷಾ ಚಾಲಕ ಮತ್ತು ಮಾಲಕರ ಸಂಘ ಹಾಗೂ ಕನ್ನಡ ಪರ ಸಂಘಟನೆ ಯಲ್ಲಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನವರಾತ್ರಿಯ ನಿಮಿತ್ತವಾಗಿ ಶುಕ್ರವಾರ ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಅನ್ನ ಪ್ರಸಾದ ವಿತರಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು, ನಾಳೆ ಮಂಗಳವಾರ ಯಲ್ಲಾಪುರದ ರಾಜಸ್ಥಾನಿ ವಿಷ್ಣು ಸಮಾಜದವರಿಂದ ಅನ್ನ ಸಂತರ್ಪಣೆ ನಡೆಯಲಿದೆ.
ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ನಡೆಯುತ್ತಿರುವ ವೈಭವದ ನವರಾತ್ರಿ ಉತ್ಸವದಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಆಯೋಜಿಸಲಾಗುತ್ತದೆ, ವಿವಿಧ ಸಂಘಟನೆಗಳ ಮುಖಂಡರಾಗಿರುವ ಸಂತೋಷ ನಾರಾಯಣ ನಾಯ್ಕ ನೇತೃತ್ವದಲ್ಲಿ ಅನ್ನಪ್ರಸಾದ ವಿತರಣಾ ಕಾರ್ಯಕ್ರಮ ಪ್ರತಿ ವರ್ಷ ನಡೆಯುತ್ತಿದೆ.
ಅಕ್ಟೋಬರ್ 8ರ ಮಂಗಳವಾರ ಮಧ್ಯಾಹ್ನ 12:30ರಿಂದ 3:30ರ ವರೆಗೆ ರಾಜಸ್ಥಾನಿ ವಿಷ್ಣು ಸಮಾಜ ಯಲ್ಲಾಪುರದ ಸಹಯೋಗದೊಂದಿಗೆ ಕನ್ನಡ ಪರ ಸಂಘಟನೆ ಯಲ್ಲಾಪುರದ ನೇತೃತ್ವದಲ್ಲಿ ಎರಡನೇ ಹಂತದ ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಲಿವೆ ಎಂದು ಸಂತೋಷ ನಾಯ್ಕ ತಿಳಿಸಿದ್ದಾರೆ.