ಯಲ್ಲಾಪುರ: ತಾಲೂಕಾ ಆರೋಗ್ಯ ಇಲಾಖೆ ಮತ್ತು ಪಶು ಪಾಲನಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಇಂದು ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಶ್ವ ರೇಬಿಸ್ ದಿನಾಚರಣೆ ಆಚರಿಸಲಾಯಿತು.
ತಾಲೂಕಾ ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ಅವರು ರೇಬಿಸ್ ರೋಗದ ಬಗ್ಗೆ ಮಾತನಾಡಿ, ರೇಬಿಸ್ ಸೋಂಕಿತ ಪ್ರಾಣಿ ಕಚ್ಚಿದರೆ ತಕ್ಷಣ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು. ರೇಬಿಸ್‌ಗೆ ಲಸಿಕೆ ಕಂಡುಹಿಡಿದ ಲೂಯಿಸ್ ಪಾಸ್ಚರ್ ಮರಣ ಹೊಂದಿದ ದಿನವನ್ನು ವಿಶ್ವ ರೇಬಿಸ್ ದಿನವೆಂದು ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಸಹಾಯಕ ನಿರ್ದೇಶಕ ಡಾ. ಎಸ್. ಸಿ. ಭಟ್ಟ ಅವರು ಪ್ರಾಣಿಗಳಲ್ಲಿ ರೇಬಿಸ್ ಹರಡುವಿಕೆ ಹಾಗೂ ನಿಯಂತ್ರಣ ಕುರಿತು ಮಾಹಿತಿ ನೀಡಿದರು. ಸಾಕು ಪ್ರಾಣಿಗಳಾದ ನಾಯಿ ಹಾಗೂ ಬೆಕ್ಕುಗಳಿಗೆ ಪಶು ಇಲಾಖೆಯಲ್ಲಿ ಉಚಿತವಾಗಿ ರೇಬಿಸ್ ಲಸಿಕೆ ಕೊಡಿಸಲು ತಿಳಿಸಿದರು.
ಶಾಲೆಯ ಪ್ರಾಂಶುಪಾಲ ಸಂಜಯ ನಾಯಕ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲೂಕಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ ತಾಳಿಕೋಟಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿ. ಎಲ್. ಶಿರೂರ, ತಾಲೂಕಾ ಕಾರ್ಯಕ್ರಮ ವ್ಯವಸ್ಥಾಪಕ ಎಸ್. ಎಸ್. ಪಾಟೀಲ, ನಿಲಯ ಪಾಲಕ ಪ್ರವೀಣ, ಎನ್.ಸಿ.ಸಿ ಅಧಿಕಾರಿ ಶಿಲ್ಪಾ, ನರ್ಸಿಂಗ್ ಅಧಿಕಾರಿ ಅಶ್ವಿನಿ ಅಂಕೋಲೆಕರ ಹಾಗೂ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.