ವರದಿ : ಜಗದೀಶ ನಾಯಕ
ಯಲ್ಲಾಪುರ : ದಿನದಿಂದ ದಿನಕ್ಕೆ ಅಭಿವೃದ್ದಿ ಹೊಂದುತ್ತಿರುವ ಯಲ್ಲಾಪುರ ಪಟ್ಟಣ, ನಗರ ಆಗುವ ಕಡೆಗೆ ಅತಿ ವೇಗದಲ್ಲಿ ಹೆಜ್ಜೆ ಹಾಕುತ್ತಿದೆ. ಈ ಪಟ್ಟಣವನ್ನು ಭವಿಷ್ಯದ ದೃಷ್ಟಿಯಿಂದ ಈಗಲೇ ಪ್ಲಾನ್ ಮಾಡಿ ಅಭಿವೃದ್ಧಿಪಡಿಸಬೇಕಾಗಿದ್ದು ರಸ್ತೆಗಳು ಕಿರುದಾಗುತ್ತಿವೆ ಪಾದಚಾರಿಗಳಿಗೆ ರಸ್ತೆಗೆ ಇಲ್ಲದಾಗಿದೆ. ಪಾದಚಾರಿಗಳಿಗೆ ಮೀಸಲಿಟ್ಟ ಜಾಗಗಳು ಉಳ್ಳವರ ಅದಾಯವಾಗುತ್ತಿದೆ.
ಪಟ್ಟಣದ ಐಬಿ ರಸ್ತೆಯ ಮೂಲಕ ತಾಲೂಕ ಆಸ್ಪತ್ರೆ ಲೋಕೋಪಯೋಗಿ ಇಲಾಖೆ ಕಚೇರಿ, ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ಕಚೇರಿ, ಹೆಬ್ಬಾರ್ ವಸತಿ ಬಡಾವಣೆ, ಮಂಜುನಾಥ ನಗರ ಕಡೆಗೆ ಹೊಇಗಿ ಬರಲು ಬಸ್ ನಿಲ್ದಾಣದ ಕಡೆಗೆ ಅತಿ ಸಮೀಪದ ರಸ್ತೆ ಐಬಿ ರಸ್ತೆಯಾಗಿದೆ. ಈಗಾಗಲೇ ಈ ರಸ್ತೆಯಲ್ಲಿ ಬ್ಯಾಂಕ್, ಟ್ರಾವೆಲರ್ಸ್, ಶಾಪಿಂಗ್ ಕಾಂಪ್ಲೆಕ್ಸ್, ಸಂಗ್ರಹಿಸೋ ಗುಡಾಣ ಮುಂತಾದ ವಾಣಿಜ್ಯ ಉದ್ದೇಶದ ಕಟ್ಟಡಗಳು ತಲೆಯೆತ್ತಿದ್ದು. ಈ ಕಟ್ಟಡಗಳ ನಿರ್ಮಾಣದಲ್ಲಿ ವಾಹನ ನಿಲುಗಡೆಗೆ ಸ್ಥಳ ಮೀಸಲಿಡದೆ, ಕೇವಲ ಕಟ್ಟಡಗಳಿಗಷ್ಟೇ ಜಾಗ ಎನ್ನುವಂತೆ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಈ ರಸ್ತೆಯಲ್ಲಿ ಪಾದಚಾರಿಗಳಿಗೆ ಮೀಸಲಿಟ್ಟ ಸ್ಥಳದಲ್ಲಿ ಹಲವಾರು ವಾಹನಗಳು ದಿನದ 24 ಗಂಟದ ನಿಂತಿರುವುದರಿಂದ ಸಾರ್ವಜನಿಕರು ರಸ್ತೆಯ ಪಕ್ಕದಲ್ಲಿ ಓಡಾಡಲು ಸಮಸ್ಯೆಯಾಗುತ್ತಿದೆ.
ಎಲ್ಲಕ್ಕಿಂತ ಮುಖ್ಯವಾಗಿ ತಾಲೂಕ ಆಸ್ಪತ್ರೆಗೆ ಹೋಗಿ ಬರುವ ರೋಗಿಗಳು, ಗರ್ಭಿಣಿಯರು ತಮ್ಮ ಆರೋಗ್ಯದ ದೃಷ್ಟಿಯಿಂದ ಆಸ್ಪತ್ರೆಗೆ ಹೋಗುತ್ತಿದ್ದರೆ ಆಸ್ಪತ್ರೆಗೆ ಹೋಗುವ ದಾರಿಯಲ್ಲಿಯೇ ಅಪಾಯಗಳು ಅಡ್ಡಿಯಾಗಿವೆ. ಗ್ರಾಮೀಣ ಭಾಗದಿಂದ ಆಸ್ಪತ್ರೆಗೆ ಬರುವ ಗರ್ಭಿಣಿ ಮಹಿಳೆಯ ಹೊಟ್ಟೆಯಲ್ಲಿ ಒಂದು ಮಗು ಅಕ್ಕಪಕ್ಕದಲ್ಲಿ ಇನ್ನೆರಡು ಮಕ್ಕಳನ್ನು ಇಟ್ಟುಕೊಂಡು ಆಸ್ಪತ್ರೆಗೆ ಸಾಗಬೇಕಾಗಿದೆ. ರಸ್ತೆಯ ಮಧ್ಯದಲ್ಲಿ ಓಡಾಡುವ ಕಾರು ಬೈಕುಗಳ ಕಾರಣಕ್ಕಾಗಿ ಮಕ್ಕಳನ್ನು ವಯಸ್ಸಾದರೂ ಅವರನ್ನು ಸಂಭಾಳಿಸುವುದೇ ಕಷ್ಟವಾಗಿದೆ.
ಬಹುತೇಕ ಸರ್ಕಾರಿ ಆಸ್ಪತ್ರೆಗೆ ಬರುವ ಜನ ಬಡವರಾಗಿದ್ದು ಬಸ್ ನಿಲ್ದಾಣದಿಂದ ಆಟೋ ಮಾಡಿಕೊಂಡು ಬರಲು ಕೂಡ ಅವರಿಗೆ ಆರ್ಥಿಕ ಸಮಸ್ಯೆ ಇದೆ. ಪೇಟೆಗೆ ಬರುವಾಗ ತಾವು ಒಬ್ಬರು ಬಾರದೆ ತಮ್ಮ ಮಕ್ಕಳನ್ನು ಕರೆದುಕೊಂಡು ಬರುವುದರಿಂದ ಸೂಕ್ತ ಸುರಕ್ಷಿತ ಪಾದಚಾರಿ ರಸ್ತೆ ಇಲ್ಲದೆ, ಅಪಾಯವನ್ನು ಎದುರಿಸಿ ಸಾಗಿಸುವ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಮುಂದುವರೆದು ಕಟ್ಟಡ ನಿರ್ಮಿಸಿ ಬಾಡಿಗೆ ಕೊಡುವ ಮಾಲೀಕರು ಕೂಡ ತಮ್ಮ ಕಟ್ಟಡ ಬಾಡಿಗೆ ನೀಡಿ, ಇಂಚು ಜಾಗವನ್ನು ಬಿಡದೇ, ತಮ್ಮ ಸ್ವಂತ ವಾಹನವನ್ನು ಪಾರ್ಕ್ ಮಾಡಲು ಜಾಗ ಮೀಸಲಿರಿಸದೇ ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದಾರೆ. ಈ ಕಟ್ಟಡ ಮಾಲೀಕರ ವಾಹನದ ಜೊತೆಗೆ ಇವರು ಬಾಡಿಗೆ ನೀಡಿರುವ ಬಾಡಿಗೆದಾರರ ವಾಹನಗಳು ಕೂಡ ರಸ್ತೆಯ ಪಕ್ಕದಲ್ಲಿಯೇ ಪಾರ್ಕ್ ಆಗುವುದರಿಂದ ಇನ್ನಷ್ಟು ಸಮಸ್ಯೆ ಎದುರಿಸುವಂತಿದೆ.
ಯಲ್ಲಾಪುರ ಪಟ್ಟಣದಲ್ಲಿ ಸುಪ್ರೀಂ ಕೋರ್ಟಿನ ಆದೇಶ ಉಲ್ಲಂಘಿಸಿ ವಾಣಿಜ್ಯ ಕಟ್ಟಡಗಳ ನಿರ್ಮಾಣವಾಗಿದೆ ಹೈವೆಯಿಂದ ಇಂತಿಷ್ಟು ಮೀಟರ್ ಹೊರಗಡೆ ಕಟ್ಟಡ ನಿರ್ಮಾಣವಾಗಬೇಕಾಗಿರುವುದು ರಸ್ತೆ ಅಂಚಿನಲ್ಲಿಯೇ ನಿರ್ಮಾಣವಾಗಿರುವ ಕಟ್ಟಡಗಳೇ ಹೆಚ್ಚು ಅದರಲ್ಲೂ ಇತ್ತೀಚಿಗೆ ನಿರ್ಮಾಣವಾದ ಕಟ್ಟಡಗಳು ಹೆಚ್ಚು ಕಂಡು ಬರುತ್ತಿವೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಸಮಾಜಕ್ಕೆ ಬುದ್ಧಿ ಹೇಳುವಂತಹ ಕಟ್ಟಡ ಮಾಲೀಕರೇ ಹೆಚ್ಚಾಗಿ ಇಂತಹ ನಿರ್ಮಾಣದಲ್ಲಿ ಕಂಡು ಬಂದಿದ್ದು ಯಲ್ಲಾಪುರಕ್ಕೆ ಮತ್ತೊಮ್ಮೆ ಮುನಿಶ್ ಮೌದ್ಗಿಲ್ ರಂತಹ ಜಿಲ್ಲಾಧಿಕಾರಿ ನೆನಪು ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.( ಸಂದರ್ಭ ಬಂದರೇ ಯಲ್ಲಾಪುರ ನ್ಯೂಸ್ ಯಾವ ಕಟ್ಟಡ ನಿಯಮ ಬಾಹೀರವಾಗಿ ನಿರ್ಮಾಣವಾಗಿದೆ, ಸರ್ಕಾರದ ನಿಯಮಗಳ ಉಲ್ಲಂಘನೆ ಆಗಿರುವುದು ಎಲ್ಲಿ ಎಂಬುದಾಗಿ ಹಿರಿಯ ಅಧಿಕಾರಿಗಳ ದಾಖಲೆ ಕೂಡ ಒದಗಿಸಲಿದೆ.)
ಪಟ್ಟಣ ಪಂಚಾಯಿತಿ ಸ್ವಂತ ಪಾರ್ಕಿಂಗ್ ವ್ಯವಸ್ಥೆ ಹೊಂದಿರುವ ಕಟ್ಟಡಗಳ ವಾಣಿಜ್ಯ ಸಂಕೀರ್ಣ, ಮನೆ ಮಾಲೀಕರಿಗೆ ಮಾತ್ರ ಮನೆ ಬಾಡಿಗೆ ನೀಡಲು ಅನುಮತಿ ನೀಡಬೇಕಾಗಿದ್ದು, ಸ್ವಂತಃ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ರಸ್ತೆ ಪಕ್ಕದಲ್ಲಿ ನಿಲ್ಲಿಸಿಟ್ಟ ವಾಹನಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಅದಕ್ಕಾಗಿ ಪ್ರತ್ಯೇಕ ಕಾನೂನು ಈಗ ಜಾರಿಯಾಗಿದ್ದು, ಬೇರೆ ಬೇರೆ ನಗರ ಪಟ್ಟಣದಲ್ಲಿ ಅನ್ವಯವಾಗುತ್ತಿದೆ. ಯಲ್ಲಾಪುರದಲ್ಲಿ ಅದನ್ನು ನಿರಂತರವಾಗಿ ಪಾಲಿಸುವಂತಾಗಬೇಕು.
ನಿಯಮ ಬಾಹೀರವಾಗಿ ಕಟ್ಟಡ ನಿರ್ಮಾಣ ಮಾಡಲು ಅನುಮತಿ ನೀಡಿದ ಅಧಿಕಾರಿಗಳು ನಿವೃತ್ತರಾದರೂ ಕೂಡ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಂದಾಗ ಮಾತ್ರ ಬಹುತೇಕ ಹೆಚ್ಚಿನ ಸಂಖ್ಯೆಯಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮತದಾರರಾಗಿರುವ ಬಡ ಪಾದಚಾರಿಗಳು ನೆಮ್ಮದಿಯಿಂದ ಸಂಚರಿಸಲು ಅನುಕೂಲ ಆಗಬಹುದಾಗಿದೆ.
.
.