ಯಲ್ಲಾಪುರ : ತಾಲೂಕಿನ ಕಿರವತ್ತಿಯ ಜಯಭಾರತ ಸಂಘಟನೆ ಹಾಗೂ ಐಕ್ಯತಾ ಸಂಘಟನೆ ಅಕ್ಟೋಬರ್ 2ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿ ಕಾರ್ಯಕ್ರಮವನ್ನು ಸಂಘಟನೆಯ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಪ್ರಮುಖರಾದ ಮಕ್ಸೂದ್ ಶೇಖ್ ಅಭಿಪ್ರಾಯ ವ್ಯಕ್ತಪಡಿಸಿ, ಗಾಂಧಿಯವರು ಅಹಿಂಸೆ, ಸತ್ಯ, ಸ್ವಾವಲಂಬನೆ, ಶ್ರಮದ ಮೌಲ್ಯಗಳು, ಮತ್ತು ತ್ಯಾಗದ ಮಹತ್ವವನ್ನು ಯುವಜನತೆಗೆ ಒತ್ತಿ ಹೇಳಿದರು. "ಯುವಕರು ದೇಶದ ಶಕ್ತಿಯ ರೂಪ" ಎಂದು ಹೇಳಿ, ದೇಶದ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಮತ್ತು ಸಮಾನತೆ ಸಾಧಿಸಲು ಶ್ರದ್ಧೆಯಿಂದ ಹೋರಾಡಬೇಕೆಂದು ಕರೆ ನೀಡಿದರು. ಯುವ ಜನತೆ ಅವರನ್ನು ಹಾದಿ ತೋರಿಸುವ ದೀಪವಾಗಿ ಕಂಡು, ದೇಶದ ಪರಿವರ್ತನೆಗೆ ಮಹತ್ವದ ಪಾತ್ರ ವಹಿಸಬೇಕೆಂದು ನುಡಿದರು.
ಮಹೇಶ ಪೂಜಾರ್ ಮಾತನಾಡಿ, ಗಾಂಧಿಯವರು ಒತ್ತಿ ಹೇಳಿದ ಮತ್ತೊಂದು ವಿಷಯವೆಂದರೆ ಶಿಕ್ಷಣದ ಮಹತ್ವ. ಅವರು ಜ್ಞಾನವನ್ನು ಸಮಾಜದ ಸುಧಾರಣೆಗಾಗಿ ಬಳಸಬೇಕೆಂದು ಹೇಳಿದ್ದಾರೆ. ಯುವಕರಿಗೆ ಸಮಾಜದ ಏಳಿಗೆಯಲ್ಲಿ, ರಾಷ್ಟ್ರೀಯ ಏಕತೆಯಲ್ಲಿ ಮತ್ತು ಧಾರ್ಮಿಕ ಸಹಿಷ್ಣುತೆಯಲ್ಲಿ ಪ್ರಮುಖ ಪಾತ್ರ ವಹಿಸಲು ಅವರು ಕರೆ ನೀಡಿದರು.
ಮುಸ್ತಾಕ್ ಶೇಖ ಅಭಿಪ್ರಾಯಪಟ್ಟು, ಮಹಾತ್ಮಾ ಗಾಂಧಿಜಿಯವರು ಯುವ ಜನತೆಗೆ ಆಂತರಿಕ ಶಕ್ತಿಯನ್ನು ಪ್ರಚೋದಿಸಿದರು. ಯುವಜನತೆಯಲ್ಲಿ ರಾಷ್ಟ್ರಪ್ರೇಮದ ಜಾಗೃತಿಯನ್ನು ಉಂಟುಮಾಡಿದರು. ಗಾಂಧೀಜಿ ಸದಾ ಯುವಜನರಿಗೆ ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ನಡೆವಂತೆ ಕರೆ ನೀಡಿದರು. ಹಿಂಸೆ ಹಾಗೂ ಕ್ರೂರತೆಗೆ ತಲೆ ಬಾಗದೆ, ಧೈರ್ಯದಿಂದ ಮತ್ತು ಸಮರ್ಥವಾಗಿ ಸತ್ಯದ ಹಾದಿಯಲ್ಲಿ ಹೋರಾಡುವಂತೆ ಪ್ರೇರೇಪಿಸಿದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆಯಬೇಕೆಂದು ಹೇಳಿದರು.
ಅಹ್ಮದ್ ಕೋಳಿಕೇರಿ ಮಾತನಾಡಿ, ಮಹಾತ್ಮಾ ಗಾಂಧಿಯವರು ಯುವ ಜನತೆ ದೇಶದ ಬಡತನ, ಅಸಮಾನತೆ ಮತ್ತು ದಾಸ್ಯದಿಂದ ಮುಕ್ತವಾಗಲು ಶ್ರಮಿಸಬೇಕೆಂದು ಕರೆ ನೀಡಿದರು. ಸ್ವದೇಶಿ ಚಳುವಳಿಯ ಮೂಲಕ ದೇಶೀಯ ವಸ್ತುಗಳನ್ನು ಬಳಸಲು, ಸಮುದಾಯದ ಸೇವೆ ಮಾಡಲು, ಮತ್ತು ಸ್ವಾವಲಂಬನೆ ಪಡೆಯಲು ಪ್ರೋತ್ಸಾಹಿಸಿದರು ಎಂದರು.
ಸಂಘಟನೆಯ ಪ್ರಮುಖರಾದ ದತ್ತಾತ್ರೇಯ ಹೇಂದ್ರೆ, ಮಹಬೂಬ್ ಅಲಿ ಭಮ್ಮಿಕಟ್ಟಿ ಹಾಗೂ ಇನ್ನಿತರರು ಇದ್ದರು.