Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Monday, 14 October 2024

ರವೀಂದ್ರನಗರದ ಬಸವರಾಜ ಭೋವಿವಡ್ಡರ ಅನುಮಾನಾಸ್ಪದ ಸಾವು: ಪತ್ನಿ ಸೀತಾಳಿಂದ ಠಾಣೆಗೆ ದೂರು

IMG-20241014-160903 ಯಲ್ಲಾಪುರ : ತಾಲ್ಲೂಕಿನ ರವಿಂದ್ರನಗರದ ಬಸವರಾಜ ಹನುಮಂತಪ್ಪ ಬೋವಿವಡ್ಡರ (40) ಅವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ನಡೆದಿದ್ದು, ಅವರ ಪತ್ನಿ ಸೀತಾ ಬಸವರಾಜ ಬೋವಿವಡ್ಡರ ಅವರು ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 
   ಸೀತಾ ಅವರು ತಮ್ಮ ಗಂಡನ ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿ, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಬಸವರಾಜ ಪೀಡ್ಸ್ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಬಸವರಾಜ ಕೂಲಿ ಕೆಲಸಗಾರರಾಗಿದ್ದು. ಕಳೆದ ಅಕ್ಟೋಬರ್ 10 ರಂದು ಬೆಳಿಗ್ಗೆ 9:30 ಕ್ಕೆ ಕೃಷ್ಣಪ್ಪ ಲಮಾಣಿ ಮತ್ತು ಪರಶುರಾಮ ಸಿದ್ದಿ ಎಂಬವರೊಂದಿಗೆ ಕೆಲಸಕ್ಕೆ ಹೋಗಿದ್ದರು. ಆದರೆ, ಅಕ್ಟೋಬರ್ 13 ರಂದು ರಾತ್ರಿ 11:30 ಕ್ಕೆ ಯಲ್ಲಾಪುರ ತಾಲೂಕಿನ ಮಳಲಗಾಂವ ಗ್ರಾಮದ ಬೇಡ್ತಿ ನದಿ ಪಕ್ಕದ ಅರಣ್ಯದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿದೆ. 
     ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಾವಿನ ನಿಜವಾದ ಕಾರಣ ಏನು ಎಂಬುದನ್ನು ತಿಳಿದುಕೊಳ್ಳಲು ಯಲ್ಲಾಪುರ ಪೊಲೀಸ್ ನಿರೀಕ್ಷಕರಾದ ರಮೇಶ ಹಾನಾಪುರ ತನಿಖೆ ನಡೆಸುತ್ತಿದ್ದಾರೆ.

ನಾಳೆ ಯಲ್ಲಾಪುರದಲ್ಲಿ ಬೋಸ್ಚ್ ಬ್ರಿಡ್ಜ್ ಉದ್ಯೋಗ ಮೇಳ : ಯುವಕರಿಗೆ ಸುವರ್ಣಾವಕಾಶ

IMG-20241008-210810 ಯಲ್ಲಾಪುರ: ಕ್ರಿಯೇಟಿವ್ ಕಂಪ್ಯೂಟರ್ ಇನ್ಸಿಟ್ಯೂಟ್ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು, ಯಲ್ಲಾಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ, ಶಾಸಕ ಶಿವರಾಮ ಹೆಬ್ಬಾರ ಅವರ ಮಾರ್ಗದರ್ಶನದಲ್ಲಿ, ಬೋಸ್ಚ್ ಬ್ರಿಡ್ಜ್ (BOSCH BRIDGE) ಉದ್ಯೋಗ ಮೇಳ - 2024 ಅನ್ನು ಯಲ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಈ ಉದ್ಯೋಗ ಮೇಳವು ಅಕ್ಟೋಬರ್ 15ರಂದು ಬೆಳಿಗ್ಗೆ 9.00 ಗಂಟೆಯಿಂದ ಆರಂಭವಾಗಲಿದೆ. 
    ಬೋಸ್ಚ್ ಜರ್ಮನಿಯ ಪ್ರತಿಷ್ಠಿತ ಕಂಪನಿಯಾಗಿದ್ದು, ಈ ಉದ್ಯೋಗ ಮೇಳದಲ್ಲಿ ಅವರ ಜೊತೆಗೆ ಹಲವಾರು ಇತರ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ. ಉದ್ಯೋಗಾಕಾಂಕ್ಷಿ ಯುವಕ-ಯುವತಿಯರಿಗೆ ಈ ಉದ್ಯೋಗ ಮೇಳವು ಸುವರ್ಣಾವಕಾಶವನ್ನು ನೀಡುತ್ತಿದೆ. ನೇರ ಸಂದರ್ಶನದ ಮೂಲಕ ವಿವಿಧ ಕಂಪನಿಗಳಲ್ಲಿ ಸ್ಥಳದಲ್ಲೇ ಉದ್ಯೋಗ ನೀಡಲಾಗುವುದು. IMG-20241008-210612 ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳನ್ನು ಈ ಮೇಳದಲ್ಲಿ ಪರಿಚಯಿಸಲಾಗುವುದು. 7ನೇ ತರಗತಿಯಿಂದ ಹಿಡಿದು ವಿವಿಧ ಪದವಿ ಪಡೆದ ಅಭ್ಯರ್ಥಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು.  

ಯಾರು ಭಾಗವಹಿಸಬಹುದು? 
    ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು, ಅಭ್ಯರ್ಥಿಗಳು 7ನೇ ತರಗತಿ, ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಬಿ.ಎ, ಬಿ.ಕಾಂ, ಬಿಬಿಎ, ಬಿಸಿಎ, ಬಿಎಸ್‌ಸಿ, ಎಮ್‌ಎ, ಎಮ್ ಕಾಂ, ಎಮ್‌ಬಿಎ, ಬಿಎಸ್‌ಡಬ್ಲ್ಯೂ, ಎಮ್‌ಎಸ್‌ಡಬ್ಲ್ಯೂ, ಡಿ.ಎಡ್, ಬಿ.ಎಡ್‌, ಎಮ್‌ಸಿಎ, ಎಮ್.ಎಸ್.ಸಿ, ಅಥವಾ ಯಾವುದೇ ಪದವಿ ಪಡೆದಿರಬೇಕು. ವಿಕಲಚೇತನ ಅಭ್ಯರ್ಥಿಗಳಿಗೂ ಈ ಅವಕಾಶ ಲಭ್ಯವಿದೆ. 

 ನೋಂದಣಿ ಹೇಗೆ? IMG-20241008-210646 ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಆಸಕ್ತಿಯಿರುವ ಅಭ್ಯರ್ಥಿಗಳು, ಮೇಲೆ ಕಾಣಿಸುತ್ತಿರುವ ಕ್ಯೂಆರ್ ಕೋಡ್(QR Code) ಅನ್ನು ಸ್ಕ್ಯಾನ್ ಮಾಡಿ ಹೆಸರನ್ನು ನೊಂದಾಯಿಸಿಕೊಳ್ಳಬಹುದು. 

 ಸಂದರ್ಶನಕ್ಕೆ ಏನು ತರಬೇಕು? 
 ಸಂದರ್ಶನಕ್ಕೆ ಹಾಜರಾಗುವ ಪ್ರತಿಯೊಬ್ಬ ಅಭ್ಯರ್ಥಿಯು ತಮ್ಮ ರೆಸ್ಯೂಮ್, ಎಸ್ಎಸ್ಎಲ್‌ಸಿ, ಪಿಯುಸಿ ಅಂಕಪಟ್ಟಿ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತ್ತು ಇತರೆ ಪ್ರಮಾಣಪತ್ರಗಳ ಮೂಲ ಮತ್ತು ಪ್ರತಿಗಳನ್ನು ತರಬೇಕು. 

 ಹೆಚ್ಚಿನ ಮಾಹಿತಿ: 
 ಹೆಚ್ಚಿನ ಮಾಹಿತಿಗಾಗಿ, ಈ ಕೆಳಗಿನ ಸಂಖ್ಯೆಗಳಿಗೆ ಕರೆ ಮಾಡಿ: 9986716721, 9611164788, 8722420928 

 ಈ ಉದ್ಯೋಗ ಮೇಳವು ಯುವಕ-ಯುವತಿಯರಿಗೆ ತಮ್ಮ ಕನಸಿನ ಉದ್ಯೋಗವನ್ನು ಪಡೆಯಲು ಅತ್ಯುತ್ತಮ ವೇದಿಕೆಯಾಗಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಯುವಜನತೆಯನ್ನು ಕೋರಿಕೊಳ್ಳಲಾಗಿದೆ.

ಧಾರವಾಡದ ಅರ್ಜುನ್ ಕಾಲೇಜು: ಯುವ ಪ್ರತಿಭೆಗಳಿಗೆ ಉಜ್ವಲ ಭವಿಷ್ಯದ ಬೆಳಕು

IMG-20241014-145005 ಯಲ್ಲಾಪುರ/ ಧಾರವಾಡ : ದ್ವಿತೀಯ ಪಿಯುಸಿ ವಿದ್ಯಾರ್ಥಿ ಜೀವನದಲ್ಲಿ ಮಹತ್ವದ ತಿರುವು ಮತ್ತು ಭವಿಷ್ಯದ ಆಕಾರ ನೀಡುವಲ್ಲಿ ಧಾರವಾಡದ ಅರ್ಜುನ್ ಎಜ್ಯುಕೇಷನಲ್ ಇನ್ಸಿಟ್ಯೂಶನ್ಸ್ ಪಾತ್ರ ಅವಿಸ್ಮರಣೀಯ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಈ ಸಂಸ್ಥೆ ಮುಂಚೂಣಿಯಲ್ಲಿದ್ದು, ಇಲ್ಲಿ ಕೋಚಿಂಗ್ ಪಡೆದ ಅನೇಕ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದಲ್ಲಿ ಶೈಕ್ಷಣಿಕ ಸಾಧನೆ ಮಾಡಿ, ತಮ್ಮ ಹಾಗೂ ಸಂಸ್ಥೆಯ ಹೆಸರನ್ನು ಎತ್ತಿ ಹಿಡಿದಿದ್ದಾರೆ. ಅರ್ಜುನ್ ವಿಜ್ಞಾನ ಪದವಿಪೂರ್ವ ಕಾಲೇಜಿನ ಭೋದಕ ಸಿಬ್ಬಂದಿಗಳು ಸ್ವತಃ IIT/NIT/ M.Sc ಪದವೀಧರರಾಗಿದ್ದು, ವಿಜ್ಞಾನ ವಿಷಯಗಳಲ್ಲಿ ಪರಿಣತಿ ಹೊಂದಿದ್ದಾರೆ. JEE Mains/JEE, Advanced/NEET/KVPY/ KCET ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಥಮ ಪಿಯುಸಿಯಿಂದಲೇ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. IMG-20241014-144954 ವಿದ್ಯಾರ್ಥಿಗಳ ವೈಯುಕ್ತಿಕ ಕಾಳಜಿಯೇ ಸಂಸ್ಥೆಯ ಮುಖ್ಯ ಧ್ಯೇಯ ಎಂಬುದು ಅರ್ಜುನ್ ಎಜ್ಯುಕೇಷನಲ್ ಇನ್ಸಿಟ್ಯೂಶನ್ಸ್ ನ ವಿಶೇಷತೆ. ಕಳೆದ ಕೆಲವು ವರ್ಷಗಳಿಂದ ಈ ಸಂಸ್ಥೆಯ ಮೂಲಕ ಅನೇಕ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಹೊರಹೊಮ್ಮಿವೆ. 2023-24 ಸಾಲಿನಲ್ಲಿಯೇ ಕು.ಪ್ರಜ್ಞಾ ಈಶ್ವರಪ್ಪಗೋಳ್ 600 ಕ್ಕೆ 590 ಅಂಕಗಳೊಂದಿಗೆ ರಾಜ್ಯದಲ್ಲಿ 9ನೇ ಸ್ಥಾನ ಪಡೆದರೆ, ನೀಟ್‌ನಲ್ಲಿ 720ಕ್ಕೆ 601 ಅಂಕಗಳನ್ನು ಗಳಿಸಿದ್ದಾರೆ. ಇದೇ ರೀತಿ ಗೌತಮ್ ಪಟೇಲ್ 625 ಅಂಕಗಳನ್ನು ಪಡೆದು ಕಾಲೇಜಿನ ಹೆಸರನ್ನು ಎತ್ತಿ ಹಿಡಿದಿದ್ದಾರೆ. 

 ರಜತ ಹೆಗಡೆ : 

 ಈ ಸಾಧನೆಗಳ ಸರಮಾಲೆಗೆ ಇನ್ನೊಂದು ಮುಖ್ಯ ಅಂಶವೆಂದರೆ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ತ್ಯಾಗಲಿಯ ಗ್ರಾಮೀಣ ಪ್ರತಿಭೆಯಾದ ರಜತ್ ಹೆಗಡೆ ಐಐಟಿ ಹೈದರಾಬಾದಿನಲ್ಲಿ ಸ್ಥಾನ ಪಡೆದು, ಜಿಲ್ಲೆಯ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ. ಶಶಿಧರ ಹೆಗಡೆ ಮತ್ತು ನಿರ್ಮಲಾ ಹೆಗಡೆ ದಂಪತಿಗಳ ಪುತ್ರನಾಗಿರುವ ರಜತ್, ಬಾಲ್ಯದಿಂದಲೇ ಪ್ರತಿಭಾನ್ವಿತನಾಗಿ ಶ್ರೀ ಕಾಳಿಕಾ ಭವಾನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದು, ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನ ಗಳಿಸಿದ್ದನು. 
    ಪಿಯು ವ್ಯಾಸಂಗವನ್ನು ಅರ್ಜುನ್ ಕಾಲೇಜಿನಲ್ಲಿ ಪೂರೈಸಿದ ರಜತ್, ತನ್ನ ಅಧ್ಯಯನ ಮತ್ತು ಪರಿಶ್ರಮದ ಜೊತೆಗೆ ಅರ್ಜುನ್ ಕಾಲೇಜಿನ ಅಧ್ಯಾಪಕರ ಮಾರ್ಗದರ್ಶನ ಮತ್ತು ಸಹಕಾರದಿಂದ ಐಐಟಿ ಹೈದರಾಬಾದಿನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ. ಪಿಯುಸಿ ಹಂತದವರೆಗೆ ಕೇವಲ ಸಿಇಟಿ ಕುರಿತು ಮಾತ್ರ ಗಮನಹರಿಸುತ್ತಿದ್ದ ರಜತ್, ಅರ್ಜುನ್ ಕಾಲೇಜಿನ ಅಧ್ಯಾಪಕರುಗಳು ಐಐಟಿ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿ, ಅದಕ್ಕೆ ಬೇಕಾದ ತಯಾರಿ ಮತ್ತು ಪರೀಕ್ಷೆಯನ್ನು ಎದುರಿಸಲು ಅಗತ್ಯವಾದ ಸಹಾಯ ಮಾಡಿದ್ದಾರೆ ಎನ್ನುವುದು ಗಮನಾರ್ಹ. IMG-20241014-144929 ರಜತ್‌ನ ಈ ಸಾಧನೆಯ ಹಿಂದೆ ಅರ್ಜುನ್ ಕಾಲೇಜಿನ ಅಧ್ಯಾಪಕರ ಪಾತ್ರ ಹಾಗೂ ಪಾಲಕರ ಪ್ರೋತ್ಸಾಹ ಮಹತ್ವದ್ದಾಗಿದೆ. ಇದು ಕೇವಲ ರಜತ್‌ನ ಯಶಸ್ಸಲ್ಲ, ಬದಲಾಗಿ ಅರ್ಜುನ್ ಕಾಲೇಜಿನ ಶೈಕ್ಷಣಿಕ ಗುಣಮಟ್ಟ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಕಡೆಗಿನ ಕಾಳಜಿಯ ಪ್ರತೀಕ. ರಜತ್‌ನ ಭವಿಷ್ಯ ಉಜ್ವಲವಾಗಲೆಂದು ಆಶಿಸುತ್ತಾ, ಅರ್ಜುನ್ ಕಾಲೇಜು ಮತ್ತಷ್ಟು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ರೂಪಿಸಿ, ಅವರ ಭವಿಷ್ಯವನ್ನು ಪ್ರಕಾಶಮಾನವಾಗಿಸಲಿ ಎಂಬುದು ನಮ್ಮೆಲ್ಲರ ಆಶಯ. .
          .... ನಿರ್ಮಲಾ ಹೆಗಡೆ (ರಜತ್ ಹೆಗಡೆಯ ತಾಯಿ) 

ತೇಜಸ್ವಿ ಮದ್ಗುಣಿ : 

ಈ ಸಾಧನೆಗಳ ಸರಮಾಲೆಗೆ ಇನ್ನೊಂದು ಮುಖ್ಯ ಅಂಶವೆಂದರೆ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಪತ್ರಕರ್ತ ನಾಗರಾಜ ಮದ್ಗುಣಿ‌ ಹಾಗೂ ವೈದ್ಯರಾದ ಡಾ.ಸುಚೇತಾ ಮದ್ಗುಣಿ ದಂಪತಿಗಳ ಪುತ್ರನಾದ ತೇಜಸ್ವಿ ಮದ್ಗುಣಿ ಧಾರವಾಡದ ಐಐಐಟಿ ಸ್ಥಾನ ಪಡೆದು, ಜಿಲ್ಲೆಯ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ. ಬಾಲ್ಯದಿಂದಲೇ ಪ್ರತಿಭಾನ್ವಿತನಾಗಿ ವೈಟಿಎಸ್ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪಡೆದು, ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಸಾಧನೆ‌ಮಾಡಿದ್ದಾನೆ
IMG-20241014-185112
ಪಿಯು ವ್ಯಾಸಂಗವನ್ನು ಅರ್ಜುನ್ ಕಾಲೇಜಿನಲ್ಲಿ ಪೂರೈಸಿದ ತೇಜಸ್ವಿ, ತನ್ನ ಅಧ್ಯಯನ ಮತ್ತು ಪರಿಶ್ರಮದ ಜೊತೆಗೆ ಅರ್ಜುನ್ ಕಾಲೇಜಿನ ಅಧ್ಯಾಪಕರ ಮಾರ್ಗದರ್ಶನ ಮತ್ತು ಸಹಕಾರದಿಂದ ಐಐಐಟಿ ಧಾತವಾಡದಲ್ಲೊ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ.ಸ್ಥಳೀಯ ಕಾಲೇಜುಗಳು ಪಿಯುಸಿ ಹಂತದವರೆಗೆ ಕೇವಲ ಸಿಇಟಿ ಕುರಿತು ಮಾತ್ರ ಗಮನಹರಿಸುತ್ತಿದ್ದ ಸಂದರ್ಭದಲ್ಲಿ,  ಜೆಇಇ ಯಂತಹ ಉನ್ನತ ಪರೀಕ್ಷೆಯ ಸಿದ್ಧತೆಗೆ ಧಾರವಾಡದ ಅರ್ಜುನ ಕಾಲೇಜು ಉತ್ತಮ ಆಯ್ಕೆ, ಅಲ್ಲಿನ ಉಪನ್ಯಾಸಕರ ತಂಡ ವಿದ್ಯಾರ್ಥಿಗಳನ್ನು  ಸ್ಪರ್ಧಾತ್ಮಕ ಪರೀಕ್ಷೆಗೆ ಉತ್ತಮ ವಾಗಿ ಸಿದ್ಧ ಪಡಿಸುತ್ತಾರೆ ಎಂಬ ಭರವಸೆಯನ್ನು ಕಾಲೇಜಿನ ಉಪನ್ಯಾಸಕರು ಹುಸಿಗೊಳಿಸಲಿಲ್ಲ. ಉತ್ಕೃಷ್ಠ ತರಬೇತಿಯ‌ ಪರಿಣಾಮ  ತೇಜಸ್ವಿ ಜೆಇಇ ಪರೀಕ್ಷೆಯಲ್ಲಿ‌ಉತ್ತಮ ಅಂಕ ಗಳಿಸಿ ಭಾರತೀಯ ಮಾಹಿತಿ‌ ತಂತ್ರಜ್ಞಾನ ಸಂಸ್ಥೆ ಧಾರವಾಡ(IIIT Dharwad)  ಇಲ್ಲಿ‌ ಕಂಪ್ಯೂಟರ್‌ಸಾಯನ್ಸ್ ಪದವಿಗೆ ಆಯ್ಕೆಯಾಗಿರುವುದು ಸಂತಸ  ತಂದಿದೆ. ಇದು ಸಾಧ್ಯವಾಗಿದ್ದು ಧಾರವಾಡದ  ಅರ್ಜುನ ಕಾಲೇಜಿನ ತಂಡದಿಂದ ಅದಕ್ಕಾಗಿ ಇಡೀ ತಂಡಕ್ಕೆ ಧನ್ಯವಾದವನ್ನಹ‌ಅರ್ಪಿಸುತ್ತೇನೆ. ಮಾತ್ರ ವಲ್ಲದೇ ಎನ್.ಡಿ.ಎ. ಯಂತಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ ಈತ ಉತ್ತೀರ್ಣನಾಗಿದ್ದು, ಇಂತಹ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಯನ್ನೂ ಅರ್ಜುನ ತಂಡ ನೀಡುತ್ತಿರುವುದು‌ ಗಮನಾರ್ಹ

       ತೇಜಸ್ವಿಯ ಈ ಸಾಧನೆಯ ಹಿಂದೆ ಅರ್ಜುನ್ ಕಾಲೇಜಿನ ಅಧ್ಯಾಪಕರ ಪಾತ್ರ ಹಾಗೂ ಪಾಲಕರ ಪ್ರೋತ್ಸಾಹ ಮಹತ್ವದ್ದಾಗಿದೆ. ಇದು ಕೇವಲ ತೆಡಜಸ್ವಿ ಯಶಸ್ಸಷ್ಟೆ ಅಲ್ಲ,  ಅರ್ಜುನ್ ಕಾಲೇಜಿನ ಶೈಕ್ಷಣಿಕ ಗುಣಮಟ್ಟ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಕಡೆಗಿನ ಕಾಳಜಿಯ ಪ್ರತೀಕ. ತೇಜಸ್ವಿ ಭವಿಷ್ಯ ಉಜ್ವಲವಾಗಲೆಂದು ಆಶಿಸುತ್ತಾ, ಅರ್ಜುನ್ ಕಾಲೇಜು ಮತ್ತಷ್ಟು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ರೂಪಿಸಿ, ಅವರ ಭವಿಷ್ಯವನ್ನು ಪ್ರಕಾಶಮಾನವಾಗಿಸಲಿ ಎಂಬುದು ನಮ್ಮೆಲ್ಲರ ಆಶಯ. 
        ..... ನಾಗರಾಜ ಮದ್ಗುಣಿ ಹಾಗೂ ಡಾ. ಸುಚೇತಾ ಮದ್ಗುಣಿ (ತೇಜಸ್ವಿ ತಂದೆ ತಾಯಿಯರು) 
  
    ಅವರ ಮಾತುಗಳು ಈ ಯಶಸ್ಸಿನ ಹಿಂದಿನ ಪರಿಶ್ರಮ, ಪೋಷಕರ ಪ್ರೋತ್ಸಾಹ ಮತ್ತು ಅರ್ಜುನ್ ಕಾಲೇಜಿನ ಪ್ರಾಮಾಣಿಕ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ. ಈ ರೀತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮುಂದೆ ಬರುವಂತೆ ಪ್ರೋತ್ಸಾಹಿಸುವುದು, ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. 

 ಅರ್ಜುನ್ ಕಾಲೇಜು: ಏಕಲವ್ಯರ ತರಬೇತಿ ಕೇಂದ್ರ 
 ಧಾರವಾಡದ ಅರ್ಜುನ್ ಕಾಲೇಜು ಇತ್ತೀಚಿನ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಹೆಗ್ಗುರುತನ್ನು ಸ್ಥಾಪಿಸಿದೆ. ಐಐಟಿಗಳಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿಗಳನ್ನು ಪೋಷಿಸುವಲ್ಲಿ ಈ ಕಾಲೇಜು ಸಾಧಿಸಿರುವ ಯಶಸ್ಸು ಅನೇಕರನ್ನು ಆಶ್ಚರ್ಯಚಕಿತಗೊಳಿಸಿದೆ. IMG-20241014-144940 2024 ರ ಸಾಲಿನಲ್ಲಿ ರಜತ್ ಹೆಗಡೆ (ಐಐಟಿ ಹೈದ್ರಾಬಾದ್), ಪ್ರಣವ್ ಕಾಮತ್ (ಐಐಟಿ ವಾರಣಾಸಿ), ಅಹ್ಮದ್ ನಬಿಲ್ ಕಾರಿಗರ್ (ಐಐಟಿ ಧಾರವಾಡ), ಸಾತ್ವಿಕ್ ಬಲ್ಬುರ್ಗಿ (ಎನ್‌ಐಟಿ ಕಾಲಿಕಟ್), ನಂದನ್ ಕಾಮತ್ (ಐಐಐಟಿ ಹೈದ್ರಾಬಾದ್), ತೇಜಸ್ವಿ ಮದ್ಗುಣಿ (ಐಐಐಟಿ ಧಾರವಾಡ), ಹರ್ಷ ಕುಡ್ತರರ್ಕರ (ಐಐಟಿ ಧಾರವಾಡ) ಮುಂತಾದ ವಿದ್ಯಾರ್ಥಿಗಳು ಐಐಟಿ ಪ್ರವೇಶ ಪಡೆದಿರುವುದು ಕಾಲೇಜಿನ ಶೈಕ್ಷಣಿಕ ಗುಣಮಟ್ಟದ ಸ್ಪಷ್ಟ ಸೂಚನೆಯಾಗಿದೆ. ಇದಲ್ಲದೆ, ಪ್ರಸ್ತುತ ಸಾಲಿನಲ್ಲಿ ಮೂರು ವಿದ್ಯಾರ್ಥಿಗಳು ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆದಿರುವುದು ಕಾಲೇಜಿನ ಸರ್ವತೋಮುಖ ಬೆಳವಣಿಗೆಗೆ ಸಾಕ್ಷಿಯಾಗಿದೆ. 
    ಉತ್ತರ ಕನ್ನಡದ ಹಲವು ವಿದ್ಯಾರ್ಥಿಗಳಿಗೆ ಅರ್ಜುನ್ ಕಾಲೇಜು ಅತ್ಯಂತ ಆದರ್ಶ ಸ್ಥಳವಾಗಿ ಬದಲಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿ ಹೊಂದಿರುವ ಪಾಲಕರು ಸಹ ತಮ್ಮ ಮಕ್ಕಳನ್ನು ಈ ಕಾಲೇಜಿಗೆ ಸೇರಿಸಲು ಆದ್ಯತೆ ನೀಡುತ್ತಿದ್ದಾರೆ. 2019 ರಲ್ಲಿ ಕೇವಲ 25 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಈ ವಿಜ್ಞಾನ ಪದವಿಪೂರ್ವ ಕಾಲೇಜು, ಇಂದು 210 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ತಮ್ಮ ವಿದ್ಯಾರ್ಥಿಗಳಿಗೆ ದ್ರೋಣಾಚಾರ್ಯರಂತೆ ಮಾರ್ಗದರ್ಶನ ನೀಡುವ ಮೂಲಕ, ಈ ಕಾಲೇಜು ಅತ್ಯುತ್ತಮ ಫಲಿತಾಂಶಗಳನ್ನು ಗಳಿಸುತ್ತಿದೆ. 
    ಧಾರವಾಡದ ಅರ್ಜುನ್ ವಿಜ್ಞಾನ ಪದವಿಪೂರ್ವ ಕಾಲೇಜಿನ ಯಶಸ್ಸಿನ ಹಿಂದೆ ಅದರ ಶಿಕ್ಷಣ ನೀತಿ ಮತ್ತು ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾಗಿದೆ. ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳ ಜೊತೆಗೆ, ಅವರ ವೈಯಕ್ತಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಕಾಲೇಜು ಒತ್ತು ನೀಡುತ್ತದೆ. ಈ ಕಾರಣದಿಂದಾಗಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಸ್ಪರ್ಧಾತ್ಮಕತೆ ಬೆಳೆಯಲು ಸಹಾಯವಾಗುತ್ತಿದೆ. 
   ಅರ್ಜುನ್ ಕಾಲೇಜಿನ ಯಶಸ್ಸು ಅನೇಕರಿಗೆ ಪ್ರೇರಣೆಯಾಗಿದೆ. ಉತ್ತರ ಕರ್ನಾಟಕದ ಶೈಕ್ಷಣಿಕ ಕ್ಷೇತ್ರದಲ್ಲಿ ಒಂದು ಹೊಸ ಅಧ್ಯಾಯವನ್ನು ಬರೆದಿರುವ ಈ ಕಾಲೇಜು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿದೆ ಎಂಬುದರಲ್ಲಿ ಸಂಶಯವಿಲ್ಲ. IMG-20241014-144954 ವಿಳಾಸ: ಅರ್ಜುನ ವಿಜ್ಞಾನ ಪದವಿ ಪೂರ್ವ ಕಾಲೇಜು, ಧಾರವಾಡ, ಶ್ಯಾನಭಾಗ ಕಟ್ಟಡ, ಟೋಲ್ ನಾಕಾ ಹತ್ತಿರ, ಪಿಬಿ ರಸ್ತೆ, ಸರಸ್ವತಿಪುರ ಧಾರವಾಡ.

ಅಲ್ಕೇರಿ ಗೌಳಿವಾಡದ ಧನಗರ ಗೌಳಿದಲ್ಲಿ ವಿಜ್ರಂಭಣೆಯ ದಸರಾ ಹಬ್ಬ : ಶ್ರೀ ಬಾಳುಮಾಮಾ ಮಂದಿರದಲ್ಲಿ ಗಜಾನೃತ್ಯ

IMG-20241014-135309 ಯಲ್ಲಾಪುರ : ತಾಲ್ಲೂಕಿನ ಮದನೂರು ಪಂಚಾಯತಿ ವ್ಯಾಪ್ತಿಯ ಅಲ್ಕೇರಿ ಗೌಳಿವಾಡದಲ್ಲಿ ಧನಗರ ಗೌಳಿ ಸಮುದಾಯದವರು ಶಾಸ್ತ್ರೋಕ್ತವಾಗಿ ವಿಜ್ರಂಭಣೆಯಿಂದ ಹಬ್ಬವನ್ನು ಆಚರಿಸಿದರು. ಮಹಾರಾಷ್ಟ್ರದ ಅದ್ಮಾಪುರ ಶ್ರೀ ಬಾಳುಮಾಮಾ ಮಂದಿರದಲ್ಲಿ ಏಕಾದಶಿಯ ದಿನದಂದು ತಮ್ಮ ಸಂಸ್ಕೃತಿಯ ಪ್ರತೀಕವಾದ ಗಜಾ ನೃತ್ಯವನ್ನು‌ ಪ್ರದರ್ಶಿಸಿ ದೇವರಲ್ಲಿ ಭಕ್ತಿಯನ್ನು ವ್ಯಕ್ತಪಡಿಸಿದರು‌. IMG-20241014-135018 ತಾಲ್ಲೂಕಿನ ವಿವಿಧ ಭಾಗಗಳಲ್ಲಿ ದಟ್ಟ ಅರಣ್ಯದಲ್ಲಿ ವಾಸವಾಗಿರುವ ಹೈನುಗಾರಿಕೆಯನ್ನೇ ಮೂಲ ಕಸಬುನ್ನಾಗಿಸಿಕೊಂಡ ಧನಗರ ಗೌಳಿ ಸಮಾಜದ ದಸರಾ ಹಬ್ಬದ ಆಚರಣೆ ವಿಶೇಷವಾಗಿದೆ. ಅದರಲ್ಲೂ ವಿಶೇಷವಾಗಿ ಅಲ್ಕೇರಿ ಗೌಳಿವಾಡದ ದಸರಾ ಪ್ರಾರಂಭವಾದ ಮೂರನೇ ದಿನ ಏಕಾದಶಿ ದಿನದಂದು ಧನಗರ ಗೌಳಿ ಸಮುದಾಯದವರು, IMG-20241014-135006 ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಆದ್ಮಾಪುರದ ಶ್ರೀ ಬಾಳುಮಾಮ ದೇವಾಲಯದಲ್ಲಿ ಗಜಾ ನೃತ್ಯ‌ಪ್ರದರ್ಶಿಸಿ ದೇವರಲ್ಲಿಯ ಭಕ್ತಿಯನ್ನು ವ್ಯಕ್ತಪಡಿಸಿದರು‌.IMG-20241014-134954  ಘಟಸ್ಥಾಪನೆ, ಜಾಗರಣೆ, ಮನೆಯ ಹಾಗೂ ದೇವಸ್ಥಾನದ ಅಂಗಳದಲ್ಲಿ ಗಜಾ ಕುಣಿತ, ಮೈ ಮೇಲೆ ದೇವರು ಬರುವುದು, ಊರಿನ ಗಡಿಭಾಗದಲ್ಲಿ ಪೂರ್ವಜರ ಹೆಸರಿನಿಂದ ಇಟ್ಟಿರುವ ಕಲ್ಲಿನ ಪೂಜೆ, ಹಾಲು, ಮೊಸರು, ಬೆಣ್ಣೆ, ತುಪ್ಪ, ಬೆಲ್ಲ ಇವುಗಳ ಮಿಶ್ರಿತ ದೇವರ ಪ್ರಸಾದ ನೈವೇದ್ಯ ಹಾಗೂ ವಿತರಣೆ ಇವುಗಳು ಕಲ್ಕೇರಿ ದಸರಾ ಹಬ್ಬದ ಆಚರಣೆಯಲ್ಲಿ ಕಂಡುಬರುವ ವಿಶೇಷತೆಗಳಾಗಿದ್ದವು.  IMG-20241014-134942 ಅಲ್ಕೇರಿ ಗೌಳಿವಾಡ ಗ್ರಾಮದ ಧನಗರ ಗೌಳಿ ಸಮುದಾಯದ ಒಳ‌ಪಂಗಡಗಳಾದ ಜೋರೆ, ಜಾನ್ಕರ್, ಖರಾತ್, ಮಲಗೊಂಡೆ, ಬಿಚುಕ್ಲೆ, ಬಾಜಾರಿ, ಟಾರಾ, ಯಮ್ಕರ ಧನಗರ ಗೌಳಿ ಸಮಾಜದ ಎಲ್ಲಾ ಹಿರಿಯರು, ಮಹಿಳೆಯರು, ಯುವಕರು, ಗ್ರಾಮದ ನಾಗರಿಕರು ಸೇರಿ ದಸರಾ ಹಬ್ಬದ ದೇವಸ್ಥಾನದ ಅಂಗಳದಲ್ಲಿ ಸೇರಿ ದೇವರಲ್ಲಿ ಹರಕೆ ಹೊತ್ತು ಹಾಗೂ ಹಳೆಯ ಹರಕೆಯನ್ನು ತೀರಿಸಿ ಗ್ರಾಮದ ಯುವಕರೆಲ್ಲರೂ ಸೇರಿ ಗಜಾ ನೃತ್ಯವನ್ನು ಮಾಡಿ ಬಂದಂತಹ ಬೀಗರಿಗೆ ಬನ್ನಿ ಗಿಡದ ಎಲೆಯನ್ನು ಕೊಟ್ಟು ಬಂಗಾರದ ಹಾಗೆ ಬಾಳುವ ಎಂದು ಪರಸ್ಪರ ಆಲಂಘಿಸಿ ಶುಭ ಕೋರಿದರು.  IMG-20241014-134928 ಎಲ್ಲರನ್ನು ಚೆನ್ನಾಗಿ ಇಟ್ಟಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ವಿಜೃಂಭಣೆಯಿಂದ ಆಚರಿಸಲಾಯಿತು. ತಾಲ್ಲೂಕಿನ ಮದನೂರು ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯ ಧನಗರ ಗೌಳಿ ಸಮಾಜದವರು ಊರ ನಾಗರಿಕರು ಹೆಚ್ಚಿನ‌ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವಿಕಾಸವಾದಿ, ಕಾನೂನು ಪರಿಣಿತ, ಕ್ರೀಡಾ ಪ್ರೇಮಿ : ಪ್ರಕಾಶ ಮಾಲಶೇಟ ಎಂಬ ಯಲ್ಲಾಪುರದ ಆಲದ‌ಮರ

IMG-20241014-112939


ಯಲ್ಲಾಪುರ: ಪ್ರಕಾಶ ಮಾಲಶೇಟ ಅವರು ಕ್ರೀಡಾ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿರುವ ಒಬ್ಬ ಬಹುಮುಖ ಪ್ರತಿಭಾನ್ವಿತ ವ್ಯಕ್ತಿ. 1953 ರಲ್ಲಿ ಕಾಶೀನಾಥ ಮತ್ತು ನಿರ್ಮಲಾ ದಂಪತಿಯ ಪುತ್ರರಾಗಿ ಜನಿಸಿದ ಪ್ರಕಾಶ, 1975ರಲ್ಲಿ ಬೆಳಗಾವಿಯ ಗೋಗಟೆ ಕಾಲೇಜಿನಿಂದ ಬಿ.ಕಾಮ್ ಹಾಗೂ ಆರ್.ಎಲ್.ಲಾ ಕಾಲೇಜಿನಿಂದ ಎಲ್.ಎಲ್.ಬಿ (ಸ್ಪೆಷಲ್) ಪದವಿ ಪಡೆದು ಯಲ್ಲಾಪುರಕ್ಕೆ ಮರಳಿದರು.

1975 ರಿಂದ 1978 ರವರೆಗೆ ದೇಶದಲ್ಲಿ ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ, ಅನಂತ ಗೋವಿಂದ ಪೈ, ವಿನಾಯಕ ಬಾಲಕೃಷ್ಣ ಮುರಕುಂಬಿ ಮತ್ತು ಮಂಜುನಾಥ ನಿಲಂಕಾರ ಹೆಗಡೆ ಎಂಬ ಮಿತ್ರರೊಂದಿಗೆ ತಮ್ಮನ್ನು ಜೈಲು ವಾಸಕ್ಕೆ ಒಳಪಡಿಸಿಕೊಂಡರು. IMG-20241014-112930

ಕ್ರೀಡಾ ಪ್ರೇಮಿ, ಕ್ರೀಡೆಗೆ‌ ಪ್ರೋತ್ಸಾಹಕ !

1978 ರಿಂದ ಯಲ್ಲಾಪುರದಲ್ಲಿ ವಕೀಲ ಮತ್ತು ತೆರಿಗೆ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಾ, 'ಸ್ಪೋರ್ಟ್ಸ್ ಕ್ಲಬ್ ಯಲ್ಲಾಪುರ' ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಅದರ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ನಂತರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. (ಉತ್ತರ ಕನ್ನಡ ಜಿಲ್ಲಾ ಗೆಜೆಟಿಯರನಲ್ಲಿ ಈ ಸಂಸ್ಥೆಯನ್ನು ಕ್ರೀಡಾ ಸಂಘವಾಗಿ ನೊಂದಾಯಿಸಲಾಗಿದೆ). ಕ್ರೀಡಾಂಗಣ ನಿರ್ಮಾಣಕ್ಕಾಗಿ ಸರಕಾರದಿಂದ ಎರಡು ಎಕರೆ ಜಮೀನನ್ನು ಪಡೆದು, ಬಿಸಗೋಡ್ ಮೈನ್ಸ್ ನವರ ಬುಲ್ಡೋಜರ್ ಸಹಾಯದಿಂದ ಅದನ್ನು ಸಮತಟ್ಟು ಮಾಡಿ ಆಟದ ಮೈದಾನ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದಲ್ಲದೆ, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸದಸ್ಯರಾಗಿ ಸತತ ಇಪ್ಪತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ, ಯಲ್ಲಾಪುರದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಅವಿರತ ಪ್ರಯತ್ನದ ಫಲವಾಗಿ, ದೇಶದಲ್ಲಿ ತಾಲ್ಲೂಕು ಕ್ರೀಡಾಂಗಣ ಯೋಜನೆ ಆರಂಭವಾಯಿತು.

ಯಲ್ಲಾಪುರದ ಪ್ರಕಾಶ ಮಾಲಶೇಟ ಅವರು ಕ್ರೀಡಾ ಲೋಕದಲ್ಲಿ ತಮ್ಮ ಅಪಾರ ಸೇವೆಯಿಂದ ಜನರ ಮನ ಗೆದ್ದಿರುವ ವ್ಯಕ್ತಿ. ಹಲವಾರು ಎಡರುತೊಡರುಗಳ ನಡುವೆಯೂ ಕ್ರೀಡೆಗೆ ತಮ್ಮನ್ನು ಅರ್ಪಿಸಿಕೊಂಡು, ಯಲ್ಲಾಪುರದ ಕ್ರೀಡಾ ಪ್ರಗತಿಗೆ ಅಪಾರ ಕೊಡುಗೆ ನೀಡಿದ್ದಾರೆ.

ತಾಲ್ಲೂಕು ಕ್ರೀಡಾಂಗಣ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ತಮ್ಮ ಸ್ಪೋರ್ಟ್ಸ್ ಕ್ಲಬ್ ಯಲ್ಲಾಪುರದ ತಾಲೂಕಾ ಕ್ರೀಡಾಂಗಣಕ್ಕೆ ಎರಡು ಎಕರೆ ಜಮೀನನ್ನು ದಾನವಾಗಿ ನೀಡಿ ಅದನ್ನು ಸಾಧ್ಯವಾಗಿಸಿದರು. ಇಷ್ಟೇ ಅಲ್ಲದೇ, ತಮ್ಮ ಕ್ಲಬ್‌ಗೆ ಸ್ವಂತ ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ ಪ್ರಯತ್ನಿಸಿ, ಹೋಲಿ ರೋಜರಿ ಚರ್ಚ್ ಪಕ್ಕದಲ್ಲಿರುವ ಸರಕಾರಿ ನೌಕರರ ಸಂಘದ ಕಟ್ಟಡವನ್ನು ಖರೀದಿಸಿ ಅವರಿಗೆ ಹೊಸ ಕಟ್ಟಡ ನಿರ್ಮಾಣದಲ್ಲಿ ಸಹಾಯ ಮಾಡಿದರು.

ಮಂಡಲ ಉಪಾಧ್ಯಕ್ಷರಾಗಿ ಕೆಲಸ 

2005ರಲ್ಲಿ ಸ್ಪೋರ್ಟ್ಸ್ ಕ್ಲಬ್ ಯಲ್ಲಾಪುರದ ರಜತ ಮಹೋತ್ಸವದ ಸಂದರ್ಭದಲ್ಲಿ ಪತಂಜಲಿ ಯೋಗ ಸಮಿತಿ ಮತ್ತು ಸಹ್ಯಾದ್ರಿ ನಿಸರ್ಗ ಬಳಗದ ಸಹಕಾರದೊಂದಿಗೆ ಯೋಗ ಸಪ್ತಾಹವನ್ನು ಅದ್ದೂರಿಯಾಗಿ ಆಚರಿಸಿದರು. 1983ರಲ್ಲಿ ಯಲ್ಲಾಪುರ ಮಂಡಲ ಪಂಚಾಯತಿಯ ಸ್ವತಂತ್ರ ಅಭ್ಯರ್ಥಿಯಾಗಿ ಚುನಾಯಿತರಾಗಿ ಸದಸ್ಯರಾಗಿ ಸೇವೆ ಸಲ್ಲಿಸಿದ ಅವರು, ನಂತರ ಉಪಾಧ್ಯಕ್ಷರಾಗಿ ಮತ್ತು ಉಪಪ್ರಧಾನರಾಗಿ ಏಳುವರೆ ವರ್ಷ ಕಾರ್ಯನಿರ್ವಹಿಸಿದರು. ಯಲ್ಲಾಪುರದ ಮೀನು ಮಾರುಕಟ್ಟೆ ನಿರ್ಮಾಣಕ್ಕೂ ಅವರ ಪ್ರಯತ್ನಗಳು ಕಾರಣವಾಗಿವೆ.

ಜಿಲ್ಲಾ ಮಟ್ಟದ ಹಲವಾರು ಸಂಸ್ಥೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಪ್ರಕಾಶ ಮಾಲಶೇಟ ಅವರು, 1983ರಿಂದ 5 ಬಾರಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಯಲ್ಲಾಪುರದಲ್ಲಿ ಏರ್ಪಡಿಸಿದ್ದಾರೆ. 'ಗೆದ್ದರೂ ಬಹುಮಾನ, ಸೋತರೂ ಬಹುಮಾನ' ಎಂಬ ಹೊಸ ಕ್ರೀಡಾ ಪ್ರೋತ್ಸಾಹ ನೀತಿಯನ್ನು ಪರಿಚಯಿಸುವ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಪ್ರಥಮ ಬಾರಿ ಕಾರವಾರದಲ್ಲಿ ನಡೆದ ದಕ್ಷಿಣ ಭಾರತ ಭಾರ ಎತ್ತುವ ಸ್ಪರ್ಧೆಯ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಜಿಲ್ಲಾ ವೇಟ್ ಲಿಫ್ಟಿಂಗ್ ಅಸೋಸಿಯೇಷನ್‌ನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕರ್ನಾಟಕ ರಾಜ್ಯ ಬೀಚ್ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷರಾಗಿ ಮೂರು ವರ್ಷ ಸೇವೆ ಸಲ್ಲಿಸಿದ ಅವರು, ಮುಂಬೈನಲ್ಲಿ ನಡೆದ ಏಷ್ಯನ್ ಬೀಚ್ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾರತ ತಂಡದ ತಾಂತ್ರಿಕ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಈ ಮೂಲಕ ಕ್ರೀಡಾ ಲೋಕದಲ್ಲಿ ತಮ್ಮನ್ನು ಒಂದು ಪ್ರೇರಣಾ ಮೂರ್ತಿಯನ್ನಾಗಿ ಸ್ಥಾಪಿಸಿಕೊಂಡಿದ್ದಾರೆ.

 ಕ್ರೀಡೆ, ಪತ್ರಿಕೋದ್ಯಮ ಮತ್ತು ಸಾಮಾಜಿಕ ಸೇವೆಯಲ್ಲಿ ಸಕ್ರಿಯ

ಶಿರಸಿಯ ಪ್ರಕಾಶ ಮಾಲಶೇಟ್ ಅವರು ಕ್ರೀಡಾ, ಸಾಮಾಜಿಕ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಾ ಒಂದು ವಿಶಿಷ್ಟ ಗುರುತನ್ನು ಸೃಷ್ಟಿಸಿಕೊಂಡಿದ್ದಾರೆ. ಜಿಲ್ಲೆಯ ಇತಿಹಾಸದಲ್ಲಿ ಶಿರಸಿಯಲ್ಲಿ ನಡೆದ ಕರ್ನಾಟಕ ಮತ್ತು ಗೋವಾ ರಣಜಿ ಟ್ರಾಫಿ ಕ್ರಿಕೇಟ್ ಪಂದ್ಯಾವಳಿಯ ಆಹಾರ, ವಸತಿ ಮತ್ತು ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಯಲ್ಲಾಪುರದಲ್ಲಿ ನಡೆದ ರಾಜ್ಯ ಯುವಜನ ಮೇಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಈಗ ಅವರು ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್‌ನ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವರದಿಗಾರರಾಗಿ ಮಾಲಶೇಟ್

ಪತ್ರಿಕಾರಂಗದಲ್ಲಿಯೂ ತಮ್ಮ ಕೈವಾಡವನ್ನು ಹೊಂದಿರುವ ಪ್ರಕಾಶ ಮಾಲಶೇಟ್, ಬೆಳಗಾವಿಯ "ತರುಣ ಭಾರತ" ಮರಾಠಿ ದಿನಪತ್ರಿಕೆಗೆ ಎಂಟು ವರ್ಷಗಳ ಕಾಲ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಕುಟುಂಬ ಪ್ರಿಯರಾದ ಪ್ರಕಾಶ 1984ರಲ್ಲಿ ಪುಷ್ಪಲತಾರನ್ನು ವಿವಾಹವಾಗಿ ಇಬ್ಬರು ಪುತ್ರರನ್ನು ಪಡೆದಿದ್ದಾರೆ. ಅವರ ಪ್ರಥಮ ಪುತ್ರ ಬಿ.ಇ ಪದವಿಯನ್ನು ಪಡೆದು ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಎರಡನೇ ಪುತ್ರ ಬಿ.ಕಾಂ ಮತ್ತು ಎಂ.ಬಿ.ಎ ಪದವಿಯನ್ನು ಪಡೆದು ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಕಂಪನಿಯನ್ನು ನಡೆಸುತ್ತಿದ್ದಾರೆ.

ಕೇಂದ್ರ ಸರ್ಕಾರದ ಕ್ರೀಡಾ ಇಲಾಖೆ ವತಿಯಿಂದ ನಡೆಸಲಾದ "ಸಿದ್ದಿ ಕ್ರೀಡಾ ಪ್ರತಿಭಾನ್ವೇಷಣಾ" ಕಾರ್ಯಕ್ರಮದಲ್ಲಿ ಪ್ರಕಾಶ ಸಕ್ರಿಯವಾಗಿ ತೊಡಗಿಸಿಕೊಂಡು, ಹಳಿಯಾಳದ ಬಸವರಾಜ ಓಸೀಮಠ ಅವರೊಂದಿಗೆ 42 ಜನ ಸಿದ್ದಿ ಕ್ರೀಡಾಪಟುಗಳನ್ನು ದೆಹಲಿಗೆ ತರಬೇತಿಗೆ ಕರೆದೊಯ್ದು, ಅವರ ತರಬೇತಿಗೆ ಸಹಕಾರ ನೀಡಿದ್ದಾರೆ. 40 ವರ್ಷಗಳಿಂದ ಟಿಳಕಚೌಕ್ ಸಾರ್ವಜನಿಕ ಗಜಾನನೋತ್ಸವ ಸಮಿತಿಯಲ್ಲಿ ವಿವಿಧ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ ಪ್ರಕಾಶ, ಯಲ್ಲಾಪುರ ತಾಲೂಕಿನಲ್ಲಿ ಗಣೇಶೋತ್ಸವ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅಲ್ಲದೆ, ಸಮಾಜದ ಸಂಸ್ಥಾಪಕ ಕಾರ್ಯದರ್ಶಿ ಮತ್ತು ನಂತರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ತಾಲ್ಲೂಕು ಪತಂಜಲಿ ಯೋಗ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿ, ಯೋಗಋಷಿ ಬಾಬಾ ರಾಮದೇವ ಅವರ ಕಾರ್ಯಕ್ರಮವನ್ನು ವೈ.ಟಿ.ಎಸ್ ಸಂಸ್ಥೆಯ ಮೈದಾನದಲ್ಲಿ ಯಶಸ್ವಿಯಾಗಿ ನಡೆಸಿದ್ದಾರೆ. IMG-20241014-112917 IMG-20241014-113111

ಜಗತ್ತು ಸುತ್ತುವ ಪ್ರಕಾಶ ಮಾಲಶೇಟ್ ಅವರಿಗೆ ಸನ್ಮಾನ

ಯಲ್ಲಾಪುರದ ಪ್ರಕಾಶ ಮಾಲಶೇಟ್ ಅವರು ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯ ಉತ್ತಮ ವಿದ್ಯಾರ್ಥಿಯಾಗಿದ್ದು, ಹಲವು ವರ್ಷಗಳಿಂದ ಸಂಸ್ಥೆಯ ಅಜೀವ ಸದಸ್ಯರಾಗಿದ್ದಾರೆ. 2006 ರಿಂದ ಬೆಂಗಳೂರಿನಲ್ಲಿ ವಾಸವಿರುವ ಅವರು, ಬೆಂಗಳೂರಿನಲ್ಲಿ ವಕಾಲತ್ತು ಮಾಡುತ್ತಾ ತೆರಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಕಾಶರಿಗೆ ಪ್ರವಾಸ ಮಾಡುವುದು ಮತ್ತು ಜಗತ್ತನ್ನು ಸುತ್ತುವುದು ಅತ್ಯಂತ ಪ್ರೀತಿಯ ಹವ್ಯಾಸ. ಅವರು ತಮ್ಮ ಪತ್ನಿ ಪುಷ್ಪಲತಾ ಅವರೊಂದಿಗೆ ಅಮೆರಿಕವನ್ನು ಸಂಪೂರ್ಣವಾಗಿ ಸುತ್ತಿದ್ದಾರೆ. ನೇಪಾಳ, ಭೂತಾನ್ ಮುಂತಾದ ದೇಶಗಳಿಗೆ ತಮ್ಮ ಮಿತ್ರರನ್ನು ಕರೆದುಕೊಂಡು ಹೋಗಿ ತೋರಿಸಿದ್ದಾರೆ. ಪ್ರತಿ ವರ್ಷ ಒಂದು ರಾಜ್ಯವನ್ನು ಸುತ್ತುವುದು ಅವರ ನಿಯಮಿತ ಹವ್ಯಾಸ. ಗುಜರಾತ್‌ನಿಂದ ಅಸ್ಸಾಂವರೆಗೆ ಹಾಗೂ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ತಮ್ಮ ಗುಂಪಿನ ಜನರೊಂದಿಗೆ ಹಲವು ಬಾರಿ ಪ್ರವಾಸ ಮಾಡಿದ್ದಾರೆ. ಈ ವರ್ಷದ ನವೆಂಬರ್‌ನಲ್ಲಿ 25 ಜನರ ತಂಡದೊಂದಿಗೆ ದಕ್ಷಿಣ ಭಾರತ ಪ್ರವಾಸವನ್ನು ಯೋಜಿಸಿದ್ದಾರೆ.

ಇದೀಗ 72ನೇ ವಯಸ್ಸಿನಲ್ಲೂ ಸಕ್ರಿಯರಾಗಿರುವ ಪ್ರಕಾಶ, ಪದ್ಮಶ್ರೀ ಡಾ. ಸುಭಾಷ ಪಾಳೆಕರ ಅವರ ಕೃಷಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಬಳಸದೇ ತಮ್ಮ ಸ್ವಂತ ಹೊಲದಲ್ಲಿ ವಿಷಮುಕ್ತ ಮತ್ತು ಆರೋಗ್ಯಕರ ತರಕಾರಿಗಳನ್ನು ಬೆಳೆಸಿ ಜನರಿಗೆ ಒದಗಿಸುವಲ್ಲಿ ತೊಡಗಿದ್ದಾರೆ.

ಭಾನುವಾರ, ಎಪಿಎಂಸಿ ರೈತ ಭವನದಲ್ಲಿ ನಡೆದ ಚೆಸ್ ಪಂದ್ಯಾವಳಿ ಉದ್ಘಾಟನೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಯಲ್ಲಾಪುರದ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕು ಸಮಿತಿಯ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಅವರ ನೇತೃತ್ವದಲ್ಲಿ ಪ್ರಕಾಶ ಮಾಲಶೇಟ್ ಅವರನ್ನು ಸನ್ಮಾನಿಸಲಾಯಿತು. ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕಾ ಕ್ರೀಡಾಂಗಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಕಾಶ ಮಾಲಶೇಟ್ ಅವರ ಸೇವೆ ಮತ್ತು ಪರಿಶ್ರಮವನ್ನು ಸ್ಮರಿಸಿದರು.

.

ಅಪರಾದ ಸುದ್ದಿಗಳು : ರವೀಂದ್ರನಗರದ ವ್ಯಕ್ತಿ ಕಾಣೆ, ನಿರ್ಲಕ್ಷದ ಚಾಲನೆ ಕಾರು ಅಪಘಾತ ಚಾಲಕರಿಗೆ ಗಾಯ

IMG-20241014-083049 
 ಅತಿವೇಗದ ಕಾರು ಚಲಾಯಿಸಿ ಅಪಘಾತ : ಚಾಲಕನಿಗೆ ಗಾಯ 
 ಯಲ್ಲಾಪುರ: ಯಲ್ಲಾಪುರ ತಾಲೂಕಿನ ಮಾಗೋಡ ಕಪ್ಪೆಗದ್ದೆ ಕ್ರಾಸ್ ಬಳಿ ತುಮಕೂರು ನಿವಾಸಿ ಕಾರು ಚಾಲಕ ಕಾಂತರಾಜ ವಿಜೆ. ಜಗದೀಶ ಎಂ(23) ತನ್ನ ಕಾರನ್ನು ಅತಿವೇಗವಾಗಿ ಚಲಾಯಿಸಿ ಅಪಘಾತಕ್ಕೀಡಾಗಿ ಗಾಯಗೊಂಡ ಘಟನೆ ಅಕ್ಟೋಬರ್ 12 ರಂದು ಸಂಭವಿಸಿದೆ. IMG-20241014-083038 ಮಧ್ಯಾಹ್ನ 3-10ರ ಸುಮಾರಿಗೆ ಕಾಂತರಾಜ ರಾ.ಹೆ-63 ರಲ್ಲಿ ಯಲ್ಲಾಪುರದಿಂದ ಅಂಕೋಲಾ ಕಡೆಗೆ ತನ್ನ ಕಾರನ್ನು ಚಲಾಯಿಸುತ್ತಿದ್ದಾಗ, ನಿಷ್ಕಾಳಜಿತನದಿಂದ ವಾಹನದ ನಿಯಂತ್ರಣ ಕಳೆದುಕೊಂಡು ರಸ್ತೆಯ ಪಕ್ಕದಲ್ಲಿದ್ದ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ಅಪಘಾತದಲ್ಲಿ ಕಾಂತರಾಜನಿಗೆ ಎದೆ, ಕೈಗಳಿಗೆ ಗಾಯಗಳಾಗಿದ್ದು, ಕಾರು ಜಖಂಗೊಂಡಿದೆ. 
  ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯ ಪಿಎಸ್ಐ ಶೇಡ್ಜಿ ಚೌಹಾನ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ******* 
 ಯಲ್ಲಾಪುರ ರವೀಂದ್ರನಗರದ ಬಸವರಾಜ ಭೋವಿವಡ್ಡರ್ ಕಾಣೆಯಾಗಿದ್ದಾರೆ 

 ಯಲ್ಲಾಪುರ : ಪಟ್ಟಣದ ರವಿಂದ್ರನಗರದ ಬಸವರಾಜ ಹನುಮಂತಪ್ಪ ಭೋವಿವಡ್ಡರ್ ಕಾಣೆಯಾಗಿದ್ದು, ಅವರನ್ನು ಹುಡುಕಲು ಪತ್ನಿ ಸೀತಾ ಬೋವಿವಡ್ಡರ ಪೊಲೀಸರಿಗೆ ದೂರು ನೀಡಿದ್ದಾರೆ. 
  ಕೂಲಿ ಕೆಲಸ ಮಾಡುತ್ತಿದ್ದ 40 ವರ್ಷ ವಯಸ್ಸಿನ ಬಸವರಾಜ ಭೋವಿವಡ್ಡರ್, ಅಕ್ಟೋಬರ್ 10ರಂದು ಬೆಳಗ್ಗೆ 9:30ಕ್ಕೆ ಮಗಳಿಗೆ ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ತಮ್ಮ ಸ್ನೇಹಿತರೊಂದಿಗೆ ಹೊರಟಿದ್ದರು. ಆದರೆ, ಸ್ನೇಹಿತರೊಂದಿಗೆ ಇಲ್ಲದೆ ಇದುವರೆಗೂ ಮನೆಗೆ ಮರಳಿ ಬಂದಿಲ್ಲ ಎಂದು ದೂರಿನಲ್ಲಿ‌ ತಿಳಿಸಿದ್ದಾರೆ. 
    ಬಸವರಾಜ ಎಲ್ಲಿಗೆ ಹೋಗಿದ್ದಾರೆ ಎಂಬುದು ತಿಳಿದಿಲ್ಲ. ಸೀತಾ ಅವರು ಬೇರೆ ಬೇರೆ ಕಡೆ ಹುಡುಕಾಟ ನಡೆಸಿ, ಸಂಬಂಧಿಕರಿಗೆ ವಿಚಾರಿಸಿ, ಫೋನ್‌ ಮೂಲಕ ಮಾಹಿತಿ ಪಡೆಯಲು ಪ್ರಯತ್ನಿಸಿದ್ದಾರೆ. ಆದರೆ, ಬಸವರಾಜ ಸಿಕ್ಕಿಲ್ಲ. ಈ ಕಾರಣದಿಂದ ದೂರು ನೀಡಲು ವಿಳಂಭವಾಗಿದೆ ಎಂದು ಸೀತಾ ಅವರು ತಿಳಿಸಿದ್ದಾರೆ. 
    ಯಲ್ಲಾಪುರ ಪೊಲೀಸ್ ಠಾಣೆಯ ಪಿಎಸ್ಐ ಶೇಡ್ಜಿ ಚೌಹಾನ್ ಈ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ******* 

 ಯಲ್ಲಾಪುರದಲ್ಲಿ ರಸ್ತೆ ಅಪಘಾತ, ಒಬ್ಬರಿಗೆ ಗಾಯ 

 ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಸಂಭವಿಸಿದ ಒಂದು ರಸ್ತೆ ಅಪಘಾತದಲ್ಲಿ ಒಬ್ಬ ವ್ಯಕ್ತಿಗೆ ಗಾಯಗಳಾಗಿವೆ. ಕಿರಣ ಆನಂದ ರಜಪೂತ ಎಂಬಾತ ಅ.11 ರಂದು ಸಂಜೆ 7 ಗಂಟೆ ಸುಮಾರಿಗೆ ಮಂಗಳೂರಿನಿಂದ ಹುಬ್ಬಳ್ಳಿಗೆ ತನ್ನ ಕಾರನ್ನು ಚಾಲನೆ ಮಾಡುತ್ತಿದ್ದಾಗ ಯಲ್ಲಾಪುರ ತಾಲೂಕಿನ ತಾಳಕುಂಬ್ರಿ ಬಳಿ ಅಪಘಾತ ಸಂಭವಿಸಿದೆ. IMG-20241014-083025 ಕಿರಣ ಅತೀ ವೇಗವಾಗಿ ಮತ್ತು ನಿಷ್ಠಾಳಜಿಯಿಂದ ಕಾರನ್ನು ಚಾಲನೆ ಮಾಡುತ್ತಿದ್ದರಿಂದ ಚಾಲನಾ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಕಾರಲ್ಲಿದ್ದ ರೋಹಿತ ಪೊಪಟ್ ಮೊಹಿತೆ ಎಂಬಾತನಿಗೆ ಹೊಟ್ಟೆ ಬಳಿ ಗಾಯಗಳಾಗಿವೆ. 
    ಕಿರಣ, 26 ವರ್ಷ ವಯಸ್ಸಿನ ವ್ಯವಹಾರಿಯಾಗಿದ್ದು, ಮಹಾರಾಷ್ಟ್ರದ ಸೊಲ್ಲಾಮರದ ನಿವಾಸಿಯಾಗಿದ್ದಾನೆ. ಹಾಲಿ ಗೌಳಿಗಲ್ಲಿಯಲ್ಲಿ ವಾಸವಿದ್ದಾನೆ. ರೋಹಿತ 20 ವರ್ಷ ವಯಸ್ಸಿನವನಾಗಿದ್ದು, ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಖಾನಾಪುರ ತಾಲೂಕಿನ ಹಿಂಗಣಗದೆಯ ನಿವಾಸಿಯಾಗಿದ್ದಾನೆ. 
     ಈ ಘಟನೆಯ ಬಗ್ಗೆ ರೋಹಿತ ಫಿರ್ಯಾದು ದಾಖಲಿಸಿದ್ದು, ಯಲ್ಲಾಪುರ ಪೊಲೀಸ್ ಠಾಣೆಯ ಪಿಎಸ್ಐ ಶೇಡ್ಜಿ ಚೌಹಾನ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.