ಯಲ್ಲಾಪುರ: ಸಾವಿರ ಸದಸ್ಯರೊಂದಿಗೆ ಆರಂಭಗೊಂಡ ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘ 25 ವರ್ಷಗಳನ್ನು ಪೂರ್ಣಗೊಳಿಸಿ 26ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಸುದೀರ್ಘ ಸೇವಾ ಅವಧಿಯಲ್ಲಿ ಸಂಘವು ಸದಸ್ಯರ ಸಂಖ್ಯೆಯನ್ನು ಉಳಿಸಿಕೊಂಡು, ರೈತರಿಗೆ ಅಗತ್ಯ ಕೃಷಿ ಸೇವೆಗಳನ್ನು ಒದಗಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ ಸಹಕಾರಿ ಸಂಘದ ಅಧ್ಯಕ್ಷ ಎಂ ಆರ್ ಹೆಗಡೆ ಕುಂಬ್ರಿಗುಡ್ಡೆ ಹೇಳಿದರು.
ಅವರು, ಮಂಗಳವಾರ ಎಪಿಎಂಸಿ ಅಡಿಕೆ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಲೆನಾಡು ಸಹಕಾರಿ ಸಂಘದ ಬಗ್ಗೆ ಮಾಹಿತಿ ನೀಡಿದರು. ಸಂಘದ ಸೇವಾ ವ್ಯಾಪ್ತಿ ಯಲ್ಲಾಪುರ, ಅಂಕೋಲಾ, ಮುಂಡಗೋಡ ಮತ್ತು ಜೊಯಿಡಾ ತಾಲೂಕುಗಳನ್ನು ಒಳಗೊಂಡಿದೆ. ನೀರಾವರಿ ಪಂಪ್‌ಸೆಟ್, ಕೃಷಿ ಉಪಕರಣ, ಡ್ರಿಪ್ ಇತರ ಸೇವೆಗಳನ್ನು ಸ್ಪರ್ಧಾತ್ಮಕ ದರದಲ್ಲಿ ನೀಡುವ ಮೂಲಕ ಗ್ರಾಮೀಣ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಹಣ ಇಲ್ಲದ ರೈತರಿಗೂ ಅಗತ್ಯ ಕೃಷಿ ಉಪಕರಣಗಳನ್ನು ಒದಗಿಸಿ, ಅವರ ಆರ್ಥಿಕ ಅಭಿವೃದ್ಧಿಗೆ ನೆರವಾಗುವ ಕಾರ್ಯವನ್ನು ಸಂಘ ನಿರ್ವಹಿಸುತ್ತಿದೆ ಎಂದು ಹೇಳಿದರು.
ಕೃಷಿ ಉಪಕರಣಗಳಿಗಾಗಿ ಜನರು ಹುಬ್ಬಳ್ಳಿ, ಶಿರಸಿಗೆ ಹೋಗಬೇಕಿತ್ತು. ರೈತರಿಗೆ ಸಮೀಪದಲ್ಲಿಯೇ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ 25 ವರ್ಷಗಳ ಹಿಂದೆ ಮನೆ ಮನೆಗೆ ಭೇಟಿ ನೀಡಿ ಸಂಘವನ್ನು ಸ್ಥಾಪಿಸಲಾಯಿತು. ಆಡಳಿತ ಮಂಡಳಿ ಮತ್ತು ಸಿಬ್ಬಂದಿಯ ಶ್ರಮದಿಂದ ಸಂಘವು ಕಳೆದ ವರ್ಷ 47.85 ಲಕ್ಷ ರೂಪಾಯಿ ಲಾಭ ಗಳಿಸಿದೆ" ಎಂದು ಹೇಳಿದರು.
ಸಂಘದ ಪ್ರಮುಖ ಎಂ. ಜಿ. ಭಟ್ಟ ಶೀಗೆಪಾಲ್ ಮಾತನಾಡಿ, ಸೆಪ್ಟೆಂಬರ್ 13ರಂದು ಅಡಿಕೆ ಭವನದಲ್ಲಿ ಸಂಘದ ವಾರ್ಷಿಕ ಸಭೆ ನಡೆಯಲಿದೆ. ಈ ಸಂದರ್ಭದಲ್ಲಿ 14 ಸಾಧಕ ಕೃಷಿಕರನ್ನು ಸನ್ಮಾನಿಸಲಾಗುತ್ತದೆ. ಅವರ ಕೃಷಿ ಸಾಧನೆಗಳು ಮತ್ತು ಮಾರ್ಗದರ್ಶನಗಳು ಇತರರಿಗೂ ಪ್ರೇರಣೆಯಾಗಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿನಾಯಕ ಹೆಗಡೆ, ಮಧುಕೇಶ್ವರ ಭಟ್ಟ, ಎಂ. ಆರ್. ಹೆಗಡೆ ತರೆಹಳ್ಳಿ, ದತ್ತಾತ್ರೇಯ ಬೋಳಗುಡ್ಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
.
.
.