ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಾಗತೀಕ ಕೈ ತೊಳೆಯುವ ದಿನಾಚರಣೆ; ಮಕ್ಕಳಲ್ಲಿ ಜಾಗೃತಿ
ಯಲ್ಲಾಪುರ : ಪಟ್ಟಣದ ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗ್ಲೋಬಲ್ ಹ್ಯಾಂಡ್ ವಾಷಿಂಗ್ ಡೇ (ಜಾಗತಿಕ ಕೈ ತೊಳೆಯುವ ದಿನ) ಯನ್ನು ಮಕ್ಕಳ ನೃತ್ಯ ಹಾಗೂ ಪ್ರಾತ್ಯಕ್ಷಿಕೆಯ ಮೂಲಕ ಆಚರಿಸಲಾಯಿತು.
ಮುಖ್ಯಾಧ್ಯಾಪಕರಾದ ಫಾ. ರೊಯ್ಯಸ್ಟನ ಗೊನ್ಸಾಲ್ವಿಸ್ ಜಾಗತೀಕ ಕೈ ತೊಳೆಯುವ ದಿನದ ಕುರಿತು ಮಾತನಾಡಿ, ಗ್ಲೋಬಲ್ ಹ್ಯಾಂಡ್ ವಾಶಿಂಗ್ ಡೇ, ಜನರಿಗೆ ಕೈ ತೊಳೆಯುವ ಪ್ರಾಮುಖ್ಯತೆಯನ್ನು ಅರಿವು ಮಾಡಿಸುವುದಕ್ಕಾಗಿ ಆಚರಿಸಲಾಗುತ್ತದೆ. ಸ್ವಚ್ಛತೆಯ ಅಧಾರಭೂತವಾದ ಚಟುವಟಿಕೆಗಳಲ್ಲೊಂದಾದ ಕೈ ತೊಳೆಯುವಿಕೆ, ಸೋಂಕುಗಳು ಮತ್ತು ರೋಗಗಳ ಹರಡುವಿಕೆಯನ್ನು ತಡೆಯುವ ಮುಖ್ಯ ವಿಧಾನವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಹಾಗೂ ಯುನಿಸೆಫ್ (UNICEF) ಮೊದಲಾದ ಸಂಸ್ಥೆಗಳ ಪ್ರಕಾರ, ಸರಿಯಾಗಿ ಕೈ ತೊಳೆಯುವುದರಿಂದ ಹಲವಾರು ತೀವ್ರ ಸಾಂಕ್ರಾಮಿಕ ರೋಗಗಳನ್ನು ತಡೆಯಬಹುದು ಎಂದು ತಿಳಿಸಿಕೊಟ್ಟಿವೆ.
ಕೈ ತೊಳೆಯುವಾಗ, ನೀರು ಮತ್ತು ಸಾಬೂನು ಬಳಸಿ ಕನಿಷ್ಠ 20 ಸೆಕೆಂಡುಗಳ ಕಾಲ ಕೈಯ ಎಲ್ಲಾ ಭಾಗಗಳನ್ನು ತೊಳೆದರೆ, ನಮ್ಮ ಕೈಯಲ್ಲಿ ಇರಬಹುದಾದ ವೈರಸ್, ಬ್ಯಾಕ್ಟೀರಿಯಾ ಮುಂತಾದ ಪತಜನ್ಯಗಳನ್ನು ತೆಗೆದುಹಾಕಬಹುದು.
ಈ ದಿನವನ್ನು ಆಚರಿಸುವ ಪ್ರಮುಖ ಉದ್ದೇಶವು, ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಆರೋಗ್ಯಕರ ಕೈ ತೊಳೆಯುವ ಅಭ್ಯಾಸವನ್ನು ಉತ್ತೇಜಿಸುವುದು. ಇದು ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ಕಡಿಮೆ ಮಾಡಬಲ್ಲ ಸಾಮಾನ್ಯ ಮತ್ತು ಪರಿಣಾಮಕಾರಿ ಚಟುವಟಿಕೆ. ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಹ್ಯಾಂಡ್ ವಾಶಿಂಗ್ ಡೇ ಉದ್ದೇಶ ಸಹಕಾರಿಯಾಗಿದೆ. ಹೀಗಾಗಿ, ಎಲ್ಲರೂ ಕೈ ತೊಳೆಯುವ ಸಾಮಾನ್ಯ ಚಟುವಟಿಕೆಯನ್ನು ನಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಬೇಕು ಎಂದು ಹೇಳಿದರು.
ಶಾಲೆಯ ಶಿಕ್ಷಕಿಯಾದ ರವಿನ ಗಾಂವ್ಕರ ಅವರ ನೇತತ್ವದಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿಗಳು ಅಭಿನಯ ಗೀತೆ ಪ್ರದರ್ಶನ ಮಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ಜಾಗೃತಿಯನ್ನು ಮೂಡಿಸಿದರು.
ಶಾಲೆಯ ಶಿಕ್ಷಕರಾದ ಸಿಸ್ಟರ ಸೋನಿಯಾ, ರೇಖಾ ಫರ್ನಾಂಡಿಸ್, ಸಂಗೀತ, ಕುಸುಮಾ, ದಿವ್ಯ, ಲೀಲೆಶ, ಮಫೀನಾ , ಅನಿತಾ, ಇತರ ಶಿಕ್ಷಕರು ಸಿಬ್ಬಂದಿಗಳು ಉಪಸ್ಥಿತರಿದ್ದರು.