ಯಲ್ಲಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್, ಯಲ್ಲಾಪುರ ಮುಂಡಗೋಡ ತಾಲೂಕಿನಲ್ಲಿ ವೃತ್ತಿಪರ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಮಕ್ಕಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಂಡಿತು.
ಜಿಲ್ಲಾ ನಿರ್ದೇಶಕ ಎ. ಬಾಬು ನಾಯ್ಕ ಅವರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಕರ್ನಾಟಕ ರಾಜ್ಯದಲ್ಲಿ ಇದುವರೆಗೆ 97,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸುಮಾರು 114 ಕೋಟಿಯಷ್ಟು ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ವಿತರಿಸಿದೆ ಎಂದು ತಿಳಿಸಿದರು.
ಯಲ್ಲಾಪುರ ಮುಂಡಗೋಡ ತಾಲೂಕಿನಲ್ಲಿ 130 ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮಂಜೂರಾತಿ ನೀಡಲಾಗಿದೆ. ಈ ಯೋಜನೆಯು ನವ ಜೀವನ ಮತ್ತು ನವ ಸಮಾಜ ನಿರ್ಮಾಣಕ್ಕಾಗಿ ಸುಜ್ಞಾನ ನಿಧಿ ಶಿಷ್ಯವೇತನ, ಪ್ರಗತಿ ನಿಧಿ ಕಾರ್ಯಕ್ರಮ, ಜ್ಞಾನದೀಪ ಗೌರವ ಶಿಕ್ಷಕರ ನಿಯೋಜನೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಜೊತೆಗೆ, ಆಪತ್ತು ಕಾಲದಲ್ಲಿ ಆಪ್ತರಕ್ಷಕ ಶೌರ್ಯ ಸ್ವಯಂ ಸೇವಾ ಘಟಕ, ಯಂತ್ರ ಶ್ರೀ ಯಾತ್ರಿಕೃತ ಬತ್ತ ಬೇಸಾಯ ಯೋಜನೆ ಮತ್ತು ಮಹಿಳೆಯರಿಗೆ ಜ್ಞಾನವಿಕಾಸ ಕಾರ್ಯಕ್ರಮಗಳನ್ನು ಸಹ ಈ ಯೋಜನೆಯಡಿಯಲ್ಲಿ ನಡೆಸಲಾಗುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುತ್ತಿವೆ.
ಯೋಜನಾಧಿಕಾರಿಗಳು ಹನುಮಂತ ನಾಯ್ಕ ಅವರು ಮಾತನಾಡಿ, ಯುವ ಜನತೆ ತಮ್ಮ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಪೋಷಕರು ಮತ್ತು ಗುರುಗಳ ಮಾರ್ಗದರ್ಶನವನ್ನು ಪಡೆದುಕೊಂಡು, ನಾಡು, ನುಡಿ, ಸಂಸ್ಕೃತಿ ಮತ್ತು ಜೀವನದ ಮೌಲ್ಯಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಿರಸಿ ಜಿಲ್ಲಾ ನಿರ್ದೇಶಕರು ಎ. ಬಾಬು ನಾಯ್ಕ, ಜಿಲ್ಲಾ ಜನ ಜಾಗೃತಿ ವೇದಿಕೆಯ ಅಧ್ಯಕ್ಷರು ಡಿ ಎನ್ ಗೌಂವ್ಕರ್, ಯೋಜನೆಯ ಯೋಜನಾಧಿಕಾರಿಗಳು, ಪತ್ರಕರ್ತರು ಪ್ರಭಾವತಿ ಮತ್ತು ಜೈ ರಾಜ್, ಜ್ಞಾನವಿಕಾಸ ಸಮನ್ವ್ಯಾಧಿಕಾರಿ ಚೈತ್ರ, ಸೇವಾ ಪ್ರತಿನಿಧಿಗಳು ಮಂಜುನಾಥ್ ಹೆಗಡೆ, ಸುಮಂಗಲ, ಅನಿತಾ, ವಿದ್ಯಾರ್ಥಿಗಳು ಮತ್ತು ಪಾಲಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಲಯದ ಮೇಲ್ವಿಚಾರಕರು ಮಹಾಂತೇಶ ಸ್ವಾಗತಿಸಿ ವಂದಿಸಿದರು.