ಯಲ್ಲಾಪುರ : ಕೌಶಲ್ಯವಿಕಾಸ ತರಬೇತಿ ಪಡೆದುಕೊಂಡು ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಹಾಗೂ ಆರ್ಥಿಕ ಸಬಲತೆ ಹೊಂದಲು ಸಾಧ್ಯವಾಗುತ್ತದೆ ಎಂದು ಪೋಲೀಸ್ ನಿರೀಕ್ಷಕರಾದ ರಮೇಶ ಹೆಚ್ ಹಾನಾಪೂರ ಹೇಳಿದರು.
ಅವರು ಇಂದು ಅಡಿಕೆ ಭವನದಲ್ಲಿ ಶಿರಸಿಯ ಗ್ರೀನ್ ಕೇರ್ ಸಂಸ್ಥೆ ಹಾಗೂ ಯಲ್ಲಾಪುರದ ಕ್ರಿಯೇಟಿವ್ ತರಬೇತಿ ಕೇಂದ್ರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೌಶಲ್ಯ ವಿಕಾಸ ಯೋಜನೆ ಅಡಿಯಲ್ಲಿ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ಹೊಸದಾಗಿ ಬ್ಯುಟೀಶಿಯನ್ ಮತ್ತು ಫ್ಯಾಶನ್ ಡಿಸ್ಟೆನಿಂಗ್ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ತಾಲೂಕಾ ಆಸ್ಪತ್ರೆಯ ನೇತ್ರ ತಜ್ಞರಾದ ಡಾ.ಸೌಮ್ಯಕೆ.ವಿ ಮಾತನಾಡಿ, ಸ್ವ ಉದ್ಯೋಗ ಕೈಗೊಳ್ಳಲು ಕೌಶಲ್ಯ ವಿಕಾಸ ತರಬೇತಿ ನೆರವಾಗುವುದಲ್ಲದೆ ಮಹಿಳೆಯರ ಜೀವನಾಧಾರಕ್ಕೆ ಸಹಕಾರಿ ಆಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರೀನ್ ಕೇರ್ ಸಂಸ್ಥೆಯ ಮಾಧ್ಯಮ ಸಲಹೆಗಾರರಾದ ಅಶೋಕ ಹಾಸ್ಯಗಾರ ಅವರು ಮಾತನಾಡಿ ಕೌಶಲ್ಯ ತರಬೇತಿ ಪಡೆದ ಫಲಾನುಭವಿಗಳು ತಮ್ಮ ಉತ್ಪಾದನೆಗೆ ಆಧುನಿಕತೆಯ ಸ್ಪರ್ಶ ನೀಡಬೇಕು. ಗ್ರಾಹಕರ ಅಭಿರುಚಿಗೆ ತಕ್ಕುದಾದ ಉತ್ಪನ್ನಗಳನ್ನು ತಯಾರಿಸಬೇಕೆಂದು ಹೇಳಿದರು.
ಗ್ರೀನ್ ಕೇರ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಮಾರ ಆರ್. ಎಂ. ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ತಿಳಿಸಿದರು.
ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶ್ರೀಪಾದ ಹೆಗಡೆ, ಆಸ್ಮಿತೆ ಫೌಂಡೇಶನ್ ನ ರಿಯಾಜ್ ಸಾಗರ., ಗ್ರೀನ್ ಕೇರ್ ಸಂಸ್ಥೆಯ ಪದಾಧಿಕಾರಿಗಳಾದ ಜಿ.ಎಂ.ಭಟ್ಟ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಿವೃತ್ತ ಆರೋಗ್ಯ ಶಿಕ್ಷಣಾಧಿಕಾರಿ ಎಸ್. ಟಿ ಭಟ್ಟ ಅವರಿಗೆ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.
ಕ್ರಿಯೇಟಿವ್ ತರಬೇತಿ ಸಂಸ್ಥೆ ಯಲ್ಲಾಪುರ ಇದರ ಮುಖ್ಯಸ್ಥರಾದ ಶ್ರೀನಿವಾಸ ಮುರ್ಡೇಶ್ವರ ಸ್ವಾಗತಿಸಿದರು. ಗ್ರೀನ್ ಕೇರ್ ಸಂಸ್ಥೆಯ ನಿರ್ದೇಶಕಿ ಆಶಾ ಡಿಸೋಜಾ ನಿರೂಪಿಸಿ ವಂದಿಸಿದರು.