
ಯಲ್ಲಾಪುರ: ಕಳೆದ 40 ವರ್ಷಗಳ ಹಿಂದೆ ಯಲ್ಲಾಪುರದ ಉರ್ದು ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮೈಮೂನಾ ದಾವೂದ್ ಶೇಖ್ ಅವರನ್ನು ಅವರ ಶಿಷ್ಯಂದಿರು ಶಿಕ್ಷಕರ ದಿನಾಚರಣೆಯಂದು ಸನ್ಮಾನಿಸಿ ಗೌರವಿಸಿದರು.
ಶಿಕ್ಷಕರ ದಿನಾಚರಣೆಯಂದು ಯಲ್ಲಾಪುರದಿಂದ ನೂರಾರು ಕಿಲೋಮೀಟರ್ ದೂರದಲ್ಲಿರುವ ಕಾರವಾರ ಕೋಡಿಭಾಗಕ್ಕೆ ತೆರಳಿ, ಮೈಮೂನಾ ದಾವೂದ್ ಶೇಖ್ ಅವರನ್ನು ಅವರ ಶಿಷ್ಯಂದಿರು ಸನ್ಮಾನಿಸಿದರು. ಶಿಕ್ಷಕಿ ಅವರು ಕಲಿಸಿದ ಅಕ್ಷರ ಪಾಠವು ಅವರ ಜೀವನದ ಮೇಲೆ ಆಳವಾದ ಪ್ರಭಾವ ಬೀರಿದೆ ಎಂದು ಅವರು ತಿಳಿಸಿದರು. ಅವರನ್ನು ನೆನಪಿಸಿಕೊಂಡು ಕೃತಜ್ಞತೆ ಸಲ್ಲಿಸಲು ಅವರು ದೂರದ ಪ್ರಯಾಣ ಮಾಡಿದರು.

ಶಿಷ್ಯಂದಿರ ಭೇಟಿಯಿಂದ ಭಾವುಕರಾದ ಮೈಮೂನಾ ದಾವೂದ್ ಶೇಖ್ ಅವರು ತಮ್ಮ ಶಿಷ್ಯಂದಿರೊಂದಿಗೆ ಹಳೆಯ ದಿನಗಳ ನೆನಪುಗಳನ್ನು ಮೆಲುಕು ಹಾಕಿದರು. ಅವರು ತಮ್ಮ ವಿದ್ಯಾರ್ಥಿಗಳೊಂದಿಗೆ ಕಳೆದ ಕ್ಷಣಗಳು ಅವರ ಜೀವನದಲ್ಲಿ ಅಮೂಲ್ಯವಾದವು ಎಂದು ಹೇಳಿದರು.
ಶಿಷ್ಯಂದಿರು ಮೈಮೂನಾ ದಾವೂದ್ ಶೇಖ್ ಅವರ ಮನೆಗೆ ಭೇಟಿ ನೀಡಿ, ಅವರನ್ನು ಸನ್ಮಾನಿಸಿದರು. ಆ ಸಮಯದಲ್ಲಿ ಮೊಹಮ್ಮದ್ ಶಫಿ ಶೇಖ್, ಇಬ್ರಾಹಿಂ ಮುಲ್ಲಾ, ನಿಸಾರ್ ಶೇಖ್, ಯಾಕೂಬ್ ಸೈಯದ್, ಮೈನುದ್ದೀನ್ ಮುಲ್ಲಾ, ರಿಜ್ವಾನ್ ಖಾನ್, ಹಿಫ್ಜಾ ಶೇಖ್, ರಮೀಜಾ ಶೇಖ್, ಫರ್ಹಾತ್ ಶೇಖ್, ಹಲೀಮಾ ಶೇಖ್ ಮತ್ತು ಬೀಬಿ ಶಮೀಮ್ ಉಪಸ್ಥಿತರಿದ್ದರು.

ಈ ಘಟನೆಯೂ ಒಳ್ಳೆಯ ಶಿಕ್ಷಕರು ಒಳ್ಳೆಯ ವಿದ್ಯಾರ್ಥಿಗಳ ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ. ಉತ್ತಮ ಶಿಕ್ಷಕರು ಮಕ್ಕಳ ಮೇಲೆ ಬೀರುವ ಅಪಾರ ಪ್ರಭಾವವನ್ನು ಸಾಬೀತುಪಡಿಸುತ್ತದೆ. 40 ವರ್ಷಗಳ ನಂತರವೂ ತಮ್ಮ ಶಿಕ್ಷಕರನ್ನು ಮರೆಯದೆ, ಅವರನ್ನು ಸನ್ಮಾನಿಸಿ, ಅವರನ್ನು ಗೌರವಿಸಿದ ಶಿಷ್ಯಂದಿರ ಈ ಕಾರ್ಯವು ಶ್ಲಾಘನೀಯವಾಗಿದೆ.