Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Tuesday, 3 September 2024

ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ : ಯುವ ಜನಾಂಗದಲ್ಲಿ ದೇಶಪ್ರೇಮ ಬೆಳೆಸುವ ಉದ್ದೇಶ


ಯಲ್ಲಾಪುರ : ಭಾರತ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ಯಲ್ಲಾಪುರ ಇವರ ಆಶ್ರಯದಲ್ಲಿ ತಾಲೂಕ ಮಟ್ಟದ ದೇಶಭಕ್ತಿ ಗೀತೆ ಗಾಯನ ಸ್ಪರ್ಧಾ ಕಾರ್ಯಕ್ರಮ ಮಂಗಳವಾರ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಸಭಾಭವನದಲ್ಲಿ ನಡೆಯಿತು.

   ಪಟ್ಟಣ ಪಂಚಾಯಿತಿ ಅಧ್ಯಕ್ಷ ನರ್ಮದಾ ನಾಯ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಯುವ ಜನಾಂಗದಲ್ಲಿ ಶಿಸ್ತು, ದೇಶಪ್ರೇಮ ಮತ್ತು ಸೇವಾ ಮನೋಭಾವ ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು. ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಘಟಕಗಳನ್ನು ಪ್ರಾರಂಭಿಸಬೇಕು ಎಂದು ಅವರು ಸಲಹೆ ನೀಡಿದರು.


 ವಿಕೇಂದ್ರೀಕರಣ ಮತ್ತು ರಾಜ್ಯ ಯೋಜನಾ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಮುಖ್ಯ ಅತಿಥಿಯಾಗಿ ಮಾತನಾಡಿ, ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸುವ ಮೂಲಕ ಉತ್ತಮ ಸಂಸ್ಕಾರಗಳನ್ನು ಕಲಿಸುವುದರ ಜೊತೆಗೆ ಉತ್ತಮ ಸಂಸ್ಕಾರ ಮತ್ತು ದೇಶ ಪ್ರೇಮ ಗುಣಗಳನ್ನು ಸ್ಕೌಟ್ಸ್ ಗೈಡ್ಸ್ ಬೆಳೆಸುವುದರಿಂದ ಮಕ್ಕಳು ಸಕ್ರಿಯರಾಗಿದ್ದಾರೆ ಎಂದು ಹೇಳಿದರು.

  ಪೊಲೀಸ್ ನಿರೀಕ್ಷಕ ರಮೇಶ್ ಹಾನಾಪುರ ಮಾತನಾಡಿ, ಸ್ಕೌಟ್ಸ್- ಗೈಡ್ಸ್ ಮೂಲಕ ದೇಶದ ಜವಾಬ್ದಾರಿಯುತ ಪ್ರಜೆಗಳಾಗಿ, ಶಾಂತಿ, ಸಹನೆ, ಘನತೆ, ಗೌರವ ಮತ್ತು ದೇಶಾಭಿಮಾನದ ಗುಣಗಳನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಹೇಳಿದರು. ಸಮಾಜದ ಅಭಿವೃದ್ಧಿಯಲ್ಲಿ ನಿಮ್ಮ ಪಾತ್ರವೂ ಇರಲಿ ಎಂದು ಅವರು ಉತ್ತೇಜಿಸಿದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಮಾತನಾಡಿ, ಸ್ಕೌಟ್ಸ್ ಗೈಡ್ಸ್ ತನ್ನ ಚಟುವಟಿಕೆಗಳ ಮೂಲಕ ಎಲ್ಲ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುತ್ತದೆ. ಸ್ವಂತ ವ್ಯಕ್ತಿತ್ವದ ಮೂಲಕ ಜವಾಬ್ದಾರಿಯುತ ನಾಗರಿಕರನ್ನಾಗಿಸುತ್ತದೆ. ಜೊತೆಗೆ ದೇಶ, ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಬದ್ಧರಾಗುವ ಗುಣಗಳನ್ನು ಬೆಳೆಸುವುದು ಎಂದು ಹೇಳಿದರು.

   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ಅಧ್ಯಕ್ಷ ನಂದನ ಬಾಳಗಿ ವಹಿಸಿದ್ದರು.

   ವೇದಿಕೆಯ ಮೇಲೆ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ, ತಾಲೂಕಾ ಪಂಚಾಯತಿ ಮಾಜಿ ಅಧ್ಯಕ್ಷೇ ಭವ್ಯಾ ಶೆಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ್ ತಾರೀಕೊಪ್ಪ ಇದ್ದರು.

   ಸ್ಕೌಟ್ಸ್ ಗೈಡ್ಸ್ ಪ್ರಧಾನ ಕಾರ್ಯದರ್ಶಿ ಸುಧಾಕರ ನಾಯಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಗಣೇಶ್ ಭಟ್ ವಂದಿಸಿದರು. ಕಾರ್ಯಕ್ರಮದಲ್ಲಿ ಎರಡು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಉಮ್ಮಚಗಿ ಮನಸ್ವಿನಿ ವಿದ್ಯಾಲಯದ ಶಿಕ್ಷಕರಿಗೆ ಸ್ಪರ್ಧೆಗಳಲ್ಲಿ ಜಯ


ಯಲ್ಲಾಪುರ: ಶಿಕ್ಷಕರ ದಿನಾಚರಣೆಯ ನಿಮಿತ್ತ ತಾಲೂಕಿನ ಯಲ್ಲಾಪುರದಲ್ಲಿ ಶಿಕ್ಷಕರಿಗಾಗಿ ಆಯೋಜಿಸಲಾಗಿದ್ದ ಸ್ಪರ್ಧೆಗಳಲ್ಲಿ ಉಮ್ಮಚಗಿ ಮನಸ್ವಿನಿ ವಿದ್ಯಾಲಯದ ಶಿಕ್ಷಕರು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

   ಪ್ರಾಥಮಿಕ ವಿಭಾಗದಲ್ಲಿ ಆಯೋಜಿಸಲಾಗಿದ್ದ ಆರು ಸ್ಪರ್ಧೆಗಳಲ್ಲಿ ನಾಲ್ಕು ಸ್ಪರ್ಧೆಗಳಲ್ಲಿ ಭಾಗವಹಿಸಿ, ಎಲ್ಲಾ ಸ್ಪರ್ಧೆಗಳಲ್ಲಿಯೂ ಸ್ಥಾನವನ್ನು ಪಡೆದಿದ್ದಾರೆ. ಅಭಿನಯ ಗೀತೆ ಸ್ಪರ್ಧೆಯಲ್ಲಿ ಶ್ರೀಕಲಾ ನಾಗರಾಜ ಹೆಗಡೆ ಪ್ರಥಮ ಸ್ಥಾನ ಪಡೆದರೆ, ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ನೇತ್ರಾವತಿ ಹೆಗಡೆ ಪ್ರಥಮ ಸ್ಥಾನ ಪಡೆದಿದ್ದಾರೆ. ಚೆಸ್ ನಲ್ಲಿ ಆಶಾ ಭಾಗ್ವತ್ ದ್ವಿತೀಯ ಸ್ಥಾನ ಪಡೆದರೆ, ಅಶಾ ಭಾಗ್ವತ್ ಮತ್ತು ಉಷಾ ಭಾಗ್ವತ್ ಕೇರಂ ಡಬಲ್ಸ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.


 ಶಿಕ್ಷಕರ ಈ ಸಾಧನೆಗೆ ಮನಸ್ವಿನಿ ವಿದ್ಯಾನಿಲಯದ ಅಧ್ಯಕ್ಷೆ ರೇಖಾ ಭಟ್ ಕೋಟೆಮನೆ ಹಾಗೂ ಮುಖ್ಯೋಪಾಧ್ಯಾಯಿನಿ ಸವಿತಾ ಭಟ್, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕ ಪೋಷಕರು ಅಭಿನಂದಿಸಿದ್ದಾರೆ. ಮನಸ್ವಿನಿ ಸಂಸ್ಥೆ ಕೆಲವೇ ವರ್ಷಗಳಲ್ಲಿ ಎಲ್ಲಾ ಕಡೆಗಳಲ್ಲಿ ತನ್ನ ಹೆಸರನ್ನು ಗಳಿಸುತ್ತಾ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಸಾಧನೆಯು ಮನಸ್ವಿನಿ ವಿದ್ಯಾಲಯದ ಬೆಳವಣಿಗೆಗೆ ಮುನ್ನುಡಿ ಬರೆಯುತ್ತಿದೆ.

ವೈ.ಟಿ.ಎಸ್.ಎಸ್ ಪದವಿ ಪೂರ್ವ ಕಾಲೇಜು ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ


ಯಲ್ಲಾಪುರ : ಇತ್ತೀಚೆಗೆ ನಡೆದ ಯಲ್ಲಾಪುರ ತಾಲೂಕಾ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸ್ಥಳೀಯ ವೈ.ಟಿ.ಎಸ್.ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಒಟ್ಟು 17 ಪ್ರಥಮ, 16 ದ್ವಿತೀಯ ಮತ್ತು 10 ಕ್ರೀಡೆಗಳಲ್ಲಿ ತೃತೀಯ ಸ್ಥಾನಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

  ಬಾಲಕಿಯರ ವಿಭಾಗದಲ್ಲಿ, ಬಾಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಶಟಲ್ ಬ್ಯಾಡ್ಮಿಂಟನ್, ಟೆನಿಕಾಯ್ಟ್, ಚೆಸ್, ಯೋಗ, ಗುಡ್ಡಗಾಡು ಓಟ, 100 ಮೀ ಹರ್ಡಲ್ಸ್‍ಗಳಲ್ಲಿ ಪ್ರಥಮ ಸ್ಥಾನ, ಚಕ್ರ ಎಸೆತ, ಹ್ಯಾಮರ್, ವಾಲಿಬಾಲ್, ಥ್ರೋಬಾಲ್, ಖೊ-ಖೊ, 4*100ಮೀ ರಿಲೇ, 100, 1500ಮೀ ಓಟಗಳಲ್ಲಿ ದ್ವಿತೀಯ, 3000ಮೀ , ಲಾಂಗ್‍ಜಂಪ್, ಟ್ರಿಪ್ಪಲ್ ಜಂಪ್‍ಗಳಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

 

 ಬಾಲಕರ ವಿಭಾಗದಲ್ಲಿ, 4100ಮೀ ರಿಲೇ, 4400 ರಿಲೇ, 100ಮೀ ಓಟ, ಲಾಂಗ್ ಜಂಪ್, ಯೋಗ, ಚೆಸ್, ಟೇಬಲ್ ಟೆನ್ನಿಸ್ ಮತ್ತು ಶಟಲ್ ಬ್ಯಾಡ್ಮಿಂಟನ್‍ಗಳಲ್ಲಿ ಪ್ರಥಮ ಸ್ಥಾನ , 1500ಮೀ ಓಟ, 100 ಮೀ ಹರ್ಡಲ್ಸ್, ಥ್ರೋಬಾಲ್, ಕಬ್ಬಡ್ಡಿ, ಖೊ-ಖೊ, ಟೆನ್ನಿಕಾಯ್ಟ್, ಬಾಲ್ ಬ್ಯಾಡ್ಮಿಂಟನ್‍ಗಳಲ್ಲಿ ದ್ವಿತೀಯ ಹಾಗೂ 100ಮೀ, 200ಮೀ, 3000ಮೀ ಓಟ, 5000ಮೀ ನಡಿಗೆ, 100ಮೀ ಹರ್ಡಲ್ಸ್, ಜಾವಲಿನ್‍ಗಳಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.

   ಈ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ರವಿಕುಮಾರ ಲಕ್ಷ್ಮಣ ಶಾನಭಾಗ, ಕಾರ್ಯದರ್ಶಿ ರಾಜೇಂದ್ರಪ್ರಸಾದ ಬಿ ಭಟ್ಟ ಹಾಗೂ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು, ಕಾಲೇಜಿನ ಪ್ರಾಂಶುಪಾಲ ಆನಂದ ಹೆಗಡೆ ಮತ್ತು ಕಾಲೇಜಿನ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿಗಳೂ ಅಭಿನಂದಿಸಿದ್ದಾರೆ.


ನಿವೃತ್ತ ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಎಸ್ ಎಲ್ ಜಾಲಿಸತ್ಕಿ


ಯಲ್ಲಾಪುರ : ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಯಲ್ಲಾಪುರ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸೆಪ್ಟೆಂಬರ್ 3ರಂದು ನಡೆದ ಸಭೆಯಲ್ಲಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶ್ರೀರಂಗ ಕಟ್ಟಿ ಅವರ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಎಸ್ ಎಲ್ ಜಾಲಿಸತ್ಕಿ ಅವರನ್ನು ಸರ್ವಾನುಮತದಿಂದ ಹೊಸ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.


    ಈ ಸಭೆಯಲ್ಲಿ, ಶ್ರೀರಂಗ ಕಟ್ಟಿ ತಮ್ಮ ಅಧಿಕಾರಾವಧಿಯಲ್ಲಿ ಸಂಘದ ಪರವಾಗಿ ಮಾಡಿದ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ಹಿಂದಿನ ಕಾರ್ಯದರ್ಶಿ ಸುರೇಶ ವಿ ಬೋರ್ಕರ್ ಸಂಘದ ಹಣಕಾಸಿನ ವಿವರಗಳನ್ನು ಸಭೆಯಲ್ಲಿ ಪ್ರಸ್ತುತಪಡಿಸಿದರು.


    ನೂತನ ಪದಾಧಿಕಾರಿಗಳ ನೇಮಕಾತಿಯಲ್ಲಿ, ಗೋಪಾಲ ನೇತ್ರೇಕರ್ ಅವರು ಕಾರ್ಯದರ್ಶಿಯಾಗಿ ಮತ್ತು ಶೋಭಾ ಎನ್ ಶೆಟ್ಟಿ ಅವರು ಉಪಾಧ್ಯಕ್ಷೆಯಾಗಿ ನಿಯೋಜನೆಗೊಂಡರು. ಇದಲ್ಲದೇ, ಸಂಘಕ್ಕೆ ಎಂಟು ಹೊಸ ಸದಸ್ಯರನ್ನು ಸೇರ್ಪಡೆ ಮಾಡಲಾಗಿದೆ.

    ಈ ಸಂದರ್ಭದಲ್ಲಿ, ಅನೇಕ ನಿವೃತ್ತ ಸರ್ಕಾರಿ ನೌಕರರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಮುಂದಿನ ಐದು ವರ್ಷಗಳ ಕಾಲ ಸಂಘದ ಉತ್ತಮ ಭವಿಷ್ಯಕ್ಕಾಗಿ ಎಲ್ಲರೂ ಸಹಕಾರ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು.

ಯಲ್ಲಾಪುರದಲ್ಲಿ ತೆಂಗಿನ ಮರದ ಉರುಳಿ ಮನೆಗೆ ಹಾನಿ : ನರ್ಮದಾ ನಾಯ್ಕ ಭೇಟಿ


ಯಲ್ಲಾಪುರ : ಪಟ್ಟಣದ ಗೋಪಾಲಕೃಷ್ಣಗಲ್ಲಿಯಲ್ಲಿ ಸೋಮವಾರ ಸಂಜೆ 5:00 ಗಂಟೆಯ ಸುಮಾರಿಗೆ ಭಾರೀ ಮಳೆ ಗಾಳಿಯಿಂದಾಗಿ ತೆಂಗಿನ ಮರ ಒಂದು ಬುಡದಲ್ಲಿ ಕತ್ತರಿಸಿ ಮನೆಯ ಮೇಲೆ ಬಿದ್ದು ಅಪಾರ ಹಾನಿಯಾಗಿದೆ.


 ಗೋಪಾಲಕೃಷ್ಣ ಗಲ್ಲಿ ನಿವಾಸಿ ಉಲ್ಲಾಸ ಬಾಂದೇಕರ ಅವರ ಮನೆಯ ಮೇಲೆ ಮರ ಬಿದ್ದಿದೆ. ಈ ಘಟನೆಯಲ್ಲಿ ಮನೆಯ ಒಂದು ಭಾಗದ ಸಂಪೂರ್ಣ ಹಂಚುಗಳು, ಪಕಾಶಿ ರೀಪು ಕಿತ್ತು ಬಿದ್ದಿವೆ. ಮನೆಯ ಬೆಲೆಬಾಳುವ ಸಾಮಗ್ರಿಗಳಿಗೂ ಹಾನಿಯಾಗಿದೆ.  


   ಮಂಗಳವಾರ ಬೆಳಿಗ್ಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ನರ್ಮದಾ ನಾಯ್ಕ್ ಹಾಗೂ ವಾರ್ಡ್ ಸದಸ್ಯ ಸೈಯದ್ ಕೆಸರಲ್ಲಿ ಮರ ಬಿದ್ದ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಉಲ್ಲಾಸ್ ಬಾಂದೇಕರ್ ಹಾನಿಯ ವಿವರವನ್ನು ಅಧ್ಯಕ್ಷರು ಹಾಗೂ ಸದಸ್ಯರಿಗೆ ನೀಡಿದರು.


ಯಲ್ಲಾಪುರದ ಕಾಳಮ್ಮನಗರದ ಶಿವಾನಂದ ನಾಯ್ಕ ಅಗಲಿಕೆ


ಯಲ್ಲಾಪುರ: ಪಟ್ಟಣ ಪಂಚಾಯಿತಿಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಕಾಳಮ್ಮನಗರ ದೇವಸ್ಥಾನ ಸಮಿತಿಯ ಮಾಜಿ ಅಧ್ಯಕ್ಷ ಶಿವಾನಂದ ನಾಯ್ಕ ಮಂಗಳವಾರ ನಸೂಕಿನಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.

  ಯಲ್ಲಾಪುರದಲ್ಲಿ ಶಿವಾನಂದ ನಾಯ್ಕ ಎಂದರೆ ಕೇವಲ ಕಾಳಮ್ಮನಗರದ ಶಿವಾನಂದ ನಾಯ್ಕ ಎನ್ನುವಷ್ಟರ ಮಟ್ಟಿಗೆ ಅವರು ಚಿರಪರಿಚಿತರಾಗಿದ್ದರು. ಯಲ್ಲಾಪುರ ಪಟ್ಟಣದಲ್ಲಿ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಅವರು ಶಿಕ್ಷಣ ಪ್ರೇಮಿಯಾಗಿದ್ದರು.

   ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿ ಪ್ರಾರಂಭದಿಂದಲೂ ಸಕ್ರಿಯವಾಗಿದ್ದ ಅವರು, ಕಾಳಮ್ಮನಗರ ದೇವಸ್ಥಾನ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ನೂತನ ಶಿಲಾಮಯ ದೇವಸ್ಥಾನ ನಿರ್ಮಾಣಕ್ಕೆ ಅವರು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದರು. ಕಾಳಮ್ಮನಗರ ಪ್ರಾಥಮಿಕ ಶಾಲೆಯ ಅಭಿವೃದ್ಧಿಗಾಗಿ ಅವರು ಸದಾ ಸಕ್ರಿಯವಾಗಿದ್ದರು. ಕಾಳಮ್ಮನಗರದಲ್ಲಿ ಗಣಪತಿ ಕಟ್ಟೆ ನಿರ್ಮಾಣ ಹಾಗೂ ಪ್ರತಿ ವರ್ಷ ಗಣೇಶೋತ್ಸವವನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

    ಸಮಕಾಲೀನರೊಂದಿಗೆ ಸಮಕಾಲಿನ ವ್ಯಕ್ತಿಯಾಗಿ, ಯುವಕರೊಂದಿಗೆ ಯುವಕರಾಗಿ, ತಮ್ಮ ಇಳಿವಯಸ್ಸಿನಲ್ಲೂ ಅವರು ಚಟುವಟಿಕೆಯಿಂದ ಕೆಲಸ ಮಾಡುತ್ತಿದ್ದರು. ಶಿವಾನಂದ ನಾಯ್ಕ ಅಗಲಿಕೆಯು ಅನೇಕರಿಗೆ ನೋವಿನ ಸಂಗತಿಯಾಗಿದೆ.

   ಯಲ್ಲಾಪುರ ಹಾಗೂ ಕಾಳಮ್ಮನಗರದ ಅಭಿವೃದ್ಧಿ, ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರವಾಗಿದೆ.

    ಶಿವಾನಂದ ನಾಯ್ಕ ಮೂಲತಃ ಕುಮಟಾದ ಕೊಡಕಣಿಯವರಾಗಿದ್ದು, ಹಲವಾರು ದಶಕಗಳ ಹಿಂದೆ ಉದ್ಯೋಗಕ್ಕಾಗಿ ಯಲ್ಲಾಪುರಕ್ಕೆ ಬಂದರು. ಕಾಳಮ್ಮನಗರದಲ್ಲಿ ಅವರು ಕಾಯಂ ನಿವಾಸಿಗಳಾಗಿ ಗುರುತಿಸಿಕೊಂಡಿದ್ದರು. ಅವರ ಪತ್ನಿ ಹಾಗೂ ಒಬ್ಬ ಪುತ್ರ ಈಗಾಗಲೇ ಮೃತಪಟ್ಟಿದ್ದಾರೆ. ಅವರ ಇಬ್ಬರು ಪುತ್ರರು ಹಾಗೂ ಅಪಾರ ಬಂದುಬಳಗ, ಮಿತ್ರರು ಶೋಕ ಸಾಗರದಲ್ಲಿದ್ದಾರೆ.

    ಶಿವಾನಂದ ನಾಯ್ಕ ಅಗಲಿಕೆಗೆ ಶಾಸಕ ಶಿವರಾಮ ಹೆಬ್ಬಾರ್, ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಎಂಎಲ್‌ಸಿ ಶಾಂತಾರಾಮ ಸಿದ್ದಿ, ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನರ್ಮದಾ ನಾಯ್ಕ, ಮಾಜಿ ಅಧ್ಯಕ್ಷರಾದ ಸುನಂದಾ ದಾಸ್, ಶಿರೀಶ ಪ್ರಭು, ರಾಮು ನಾಯ್ಕ, ಪ.ಪಂ ಉಪಾಧ್ಯಕ್ಷೆ ಅಮಿತ ಅಂಗಡಿ, ಪ್ರಮುಖರಾದ ವೇಣುಗೋಪಾಲ ಮದ್ಗುಣಿ, ವೈಟಿಎಸ್ಎಸ್ ನಿವೃತ್ತ ಪ್ರಾಂಶುಪಾಲರಾದ ಜಯರಾಮ ಗುನಗಾ ಹಾಗೂ ಶ್ರೀರಂಗ ಕಟ್ಟಿ, ಪ.ಪಂ ಮಾಜಿ ಸದಸ್ಯ ಗಜಾನನ ನಾಯ್ಕ ತಳ್ಳಿಕೇರಿ, ಪ.ಪಂ ಸದಸ್ಯೆ ಕಲ್ಪನಾ ನಾಯ್ಕ ಸೇರಿದಂತೆ ಹಲವಾರು ಜನರು ಸಂತಾಪ ಸೂಚಿಸಿದ್ದಾರೆ.

ಸೆ.5ರಂದು ಶಿಕ್ಷಕರ ದಿನಾಚರಣೆ: ಗೌರವ ಮತ್ತು ಪ್ರಶಸ್ತಿ

 

ಯಲ್ಲಾಪುರ : ಶಿಕ್ಷಕರ ದಿನಾಚರಣೆ ಮತ್ತು ಗುರು ಗೌರವಾರ್ಪಣಾ ಸಮಾರಂಭವು ಸೆ. 5ರಂದು ವೇದವ್ಯಾಸ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಯಲ್ಲಾಪುರ (ಶಿರಸಿ ಶೈಕ್ಷಣಿಕ ಜಿಲ್ಲೆ) ಮತ್ತು ಅಂಕೋಲಾ ಅರ್ಬನ್ ಕೋ-ಆಪ್ ಬ್ಯಾಂಕ್ ಲಿ., ಶಾಖೆ ಯಲ್ಲಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದೆ.

    ಕಾರ್ಯಕ್ರಮ ಬೆಳಿಗ್ಗೆ 9.30 ಘಂಟೆಗೆ ಆರಂಭವಾಗಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಉದ್ಘಾಟಿಸಲಿದ್ದಾರೆ. ಶಾಸಕ ಶಿವರಾಮ ಹೆಬ್ಬಾರ ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಲಿದ್ದಾರೆ.

   ಮುಖ್ಯ ಅತಿಥಿಗಳಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಎಮ್ಎಲ್‌ಸಿ ಶಾಂತಾರಾಮ ಸಿದ್ದಿ, ಆರ್.ಎಂ.ಒ. ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಪ.ಪಂ ಅಧ್ಯಕ್ಷೆ ನರ್ಮದಾ ರವಿ ನಾಯ್ಕ, ಉಪಾಧ್ಯಕ್ಷ ಅಮಿತ್ ಅಂಗಡಿ ಭಾಗವಹಿಸಲಿದ್ದಾರೆ.

   ವಿಶೇಷ ಆಹ್ವಾನಿತರಾಗಿ ಅಂಕೋಲಾ ಅರ್ಬನ್ ಕೋ-ಆಪ್ ಬ್ಯಾಂಕ್ ಅಧ್ಯಕ್ಷ ಭಾಸ್ಕರ್ ನಾರ್ವೇಕರ ಹಾಗೂ ಶಿಕ್ಷಕರ ವಿವಿಧ ಸಂಘದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಹಶೀಲ್ದಾರ ಅಶೋಕ ಭಟ್,  ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಹಾಗೂ ತಾಲೂಕಾ ಶಿಕ್ಷಕರ ಸಂಘದ ಪ್ರಕಟಣೆ ತಿಳಿಸಿದೆ.

  ಈ ಕಾರ್ಯಕ್ರಮದಲ್ಲಿ ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನವೂ ನಡೆಯಲಿದೆ.


ಹವ್ಯಕ ನೌಕರರ ಸಂಘದಿಂದ ಸಾಧಕರಿಗೆ ಪುರಸ್ಕಾರ,


 ಯಲ್ಲಾಪುರ: ಯಲ್ಲಾಪುರ ಹವ್ಯಕ ನೌಕರರ ಕ್ಷೇಮಾಭಿವೃದ್ಧಿ ಸಂಘವು ಪ್ರತಿವರ್ಷದಂತೆ ಈ ವರ್ಷವೂ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ವಿಶೇಷ ಸಾಧನೆ ಮಾಡಿದ ಮಕ್ಕಳಿಗೆ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿತು.

   ಶಾಸಕ ಶಿವರಾಮ ಹೆಬ್ಬಾರ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿವೃತ್ತ ಅಭಿಯಂತರ ವಿ.ಎಂ.ಭಟ್ಟ, ಶಿಕ್ಷಕರಾದ ಎನ್.ಎಸ್.ಭಟ್ಟ, ನಳಿನಿ ಹೆಗಡೆ, ಎಂ.ವಿ.ಹೆಗಡೆ, ಮಹಾದೇವಿ ಭಟ್ಟ, ಪಾರ್ವತಿ ಕವಡೀಕೆರೆ, ಗೋಪಾಲ ಭಟ್ಟ ಅವರಿಗೆ ಸನ್ಮಾನಿಸಲಾಯಿತು.


 ಜೊತೆಗೆ, ಡಾ.ಟಿ.ಎಸ್.ತಿಲಕರಾಜ, ರವಿಕಿರಣ ಹೆಗಡೆ, ಗಣಪತಿ ವಿ.ಭಟ್ಟ, ಶಿವರಾಮ ವಿ. ಭಟ್ಟ, ತೇಜಸ್ ಶ್ರೀಧರ ಹೆಗಡೆ, ಸಮೃದ್ಧಿ ಭಾಗ್ವತ, ಸಿಂಚನಾ ಜಡ್ಡಿಪಾಲ, ಭವ್ಯಾ ಭಾಗ್ವತ, ಪ್ರಜ್ವಲ್ ನಾಯ್ಕ, ಅನಂತಕುಮಾರ ಭಾಗ್ವತ, ನಯನಾ ಭಟ್ಟ, ಪ್ರಾರ್ಥನಾ ಭಟ್ಟ, ಜನ್ನಿಬಾಯಿ ಕೊಕರೆ, ಶ್ರೀರಾಮ ಕೆ.ಎಂ., ಕಾವ್ಯಾ ಗಣಪತಿ ಭಟ್ಟ, ಸಾತ್ವಿಕ ಜಿ.ಜೆ, ಶ್ರೀಲಕ್ಷ್ಮೀ.ಎಸ್.ಹೆಗಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

  ಪಂಚಾಯತ್ ರಾಜ್ ವಿಕೇಂದ್ರೀಕರಣ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ತಹಶೀಲ್ದಾರ ಅಶೋಕ ಭಟ್ಟ, ಟಿ.ಎಂ.ಎಸ್. ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ, ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರೀಗುಡ್ಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ, ಆರಕ್ಷಕ ಉಪನಿರೀಕ್ಷಕ ನಿರಂಜನ ಹೆಗಡೆ, ಹವ್ಯಕ ನೌಕರರ ಸಂಘದ ಅಧ್ಯಕ್ಷ ಡಿ.ಜಿ.ಹೆಗಡೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್. ಭಟ್ಟ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.