Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Wednesday 4 September 2024

ಜಿಲ್ಲಾ ಉಸ್ತುವಾರಿ ಸಚಿವರಿಗೆ ಗ್ರಾಮ ಪಂಚಾಯತಿಗಳ ಆರ್ಥಿಕ ಸ್ಥಿತಿಯ ಬಗ್ಗೆ ಮನವಿ


ಯಲ್ಲಾಪುರ : ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ. ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟ ಉತ್ತರ ಕನ್ನಡ ಸಂಚಾಲಕ ಎಂ. ಕೆ. ಭಟ್ಟ ಯಡಳ್ಳಿ ಅವರು ಇದರ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರಿಗೆ ಮನವಿ ಮಾಡಿದ್ದಾರೆ.

   15ನೇ ಹಣಕಾಸು ಅಲೋಕೇಶನ್‌ನ ಕ್ರಿಯಾ ಯೋಜನೆ ಕಳಿಸಿದರೂ ನಿಗದಿತ ಹಣ ಬಿಡುಗಡೆಯಾಗುತ್ತಿಲ್ಲ. ಕಸ ವಿಲೇವಾರಿ ಘಟಕ ಮತ್ತು ಪೆಟ್ರೋಲ್ ವಾಹನಗಳಿಗೆ ನಿರ್ವಹಣೆ ವೆಚ್ಚ ಮತ್ತು ಡ್ರೈವರ್‌ಗಳ ಸಂಬಳ ಇಲ್ಲ. ಅಭಿವೃದ್ಧಿ ಅನುದಾನವನ್ನು ನೌಕರರ ಸಂಬಳಕ್ಕೆ ಬಳಸಲಾಗುತ್ತಿದೆ. ಹೆಚ್ಚಿನ ಪಂಚಾಯತಗಳಲ್ಲಿ ಹೆಸೆಕ್ರೋ ಬಾಕಿ ಇಲ್ಲದಿದ್ದರೂ ಉಳಿದ ಹಣ ಅಭಿವೃದ್ಧಿಗೆ ಬಿಡುಗಡೆಯಾಗುತ್ತಿಲ್ಲ. 15ನೇ ಹಣಕಾಸು ಇನ್ನೂ ಬಾರದೇ ಕಾಯುತ್ತಿದೆ. 4-6 ವರ್ಷಗಳಿಂದ ಸಿಬ್ಬಂದಿ ನೇಮಕಾತಿ ನಡೆಯುತ್ತಿಲ್ಲ.


 ಪಂಚಾಯತದ ಕರಗಳಿಂದ ಸಂಗ್ರಹಿಸಿದ ಹಣದ ಶೇ.6 ಗ್ರಂಥಾಲಯದ ಹೆಸರಿನಲ್ಲಿ ಜಿ.ಪಂ. ಖಾತೆಗೆ ಸಂದಾಯ ಮಾಡಲಾಗಿದೆ, ಆದರೆ ಗ್ರಂಥಪಾಲಕರಿಗೆ ಹೆಚ್ಚಿನ ವೇತನ ನೀಡಲಾಗುತ್ತಿದೆ. ಜಲನಲ್ ಮಿತ್ರ ಯೋಜನೆಯ ತರಬೇತಿ ವೆಚ್ಚವನ್ನು ಪಂಚಾಯತಗಳಿಂದ ಕೇಳಲಾಗುತ್ತಿದೆ, ಇದು ಸರಿಯಲ್ಲ. ನರೇಗಾದಲ್ಲಿ ಪಂಚಾಯತಕ್ಕೆ ಬರುವ ಆಡಳಿತಾತ್ಮಕ ವೆಚ್ಚ ಶೆ.2 ರಷ್ಟು 3-4 ವರ್ಷಗಳಿಂದ ನಿಲ್ಲಿಸಲಾಗಿದೆ. ಬೊರ್‌ವೆಲ್ ನಿರ್ವಹಣೆಗಾಗಿ ಬರುವ ಹಣ ಕೂಡ ಬರುತ್ತಿಲ್ಲ.

   ಈ ಸಮಸ್ಯೆಗಳಿಂದ ಗ್ರಾಮ ಪಂಚಾಯತಿಗಳಲ್ಲಿ ಸಣ್ಣ ಪಟ್ಟ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಸಚಿವರು ಸರಕಾರದಲ್ಲಿ ಮಧ್ಯಸ್ಥಿಕೆ ವಹಿಸಬೇಕೆಂದು ಎಂ. ಕೆ. ಭಟ್ಟ ಯಡಳ್ಳಿ ಅವರು ಮನವಿ ಮಾಡಿದ್ದಾರೆ.


.

ಕಾಡು ಪ್ರಾಣಿಗಳಿಂದ ಬೆಳೆ ಹಾನಿ : ಜಯ ಕರ್ನಾಟಕ ಸಂಘಟನೆ ಮನವಿ


ಯಲ್ಲಾಪುರ : ತಾಲೂಕಿನ ಕಿರವತ್ತಿ ವಲಯ ಅರಣ್ಯ ಅಧಿಕಾರಿಗಳಿಗೆ ಕಾಡು ಪ್ರಾಣಿಗಳಿಂದ ರೈತರ ಬೆಳೆಗೆ ಹಾನಿಯಾಗುತ್ತಿರುವ ಕುರಿತು ಜಯ ಕರ್ನಾಟಕ ತಾಲೂಕಾ ಸಂಘಟನೆ, ರೈತರು ಮತ್ತು ಊರನಾಗರಿಕರ ವತಿಯಿಂದ ಬುಧವಾರ ಮನವಿ ಸಲ್ಲಿಸಲಾಯಿತು.

   ಕಿರವತ್ತಿ ವಲಯವು ದಟ್ಟಾರಣ್ಯದಿಂದ ಕೂಡಿರುವ ಕಾರಣ, ಈ ಭಾಗದ ನಿವಾಸಿಗಳು ಕೃಷಿಕರಾಗಿ ಕೃಷಿಯಿಂದ ಬರುವ ಆದಾಯದ ಮೇಲೆ ಅವಲಂಬಿತರಾಗಿದ್ದಾರೆ. ಕಿರವತ್ತಿ, ಸೋಮಾಪುರ, ದಾಂಡೇಲಿವಾಡಾ, ಪಾಣಿಗುಂಡಿ, ಬಸನಕೊಪ್ಪ, ಹುಣಸಗೇರಿ, ಯಲವಳ್ಳಿ, ಸಣ್ಣ ಯಲವಳ್ಳಿ, ಗುಡಂದೂರ, ಬೈಲಂದೂರ, ಬೈಲಂದೂರ ವಾಡಾ, ಹೊಸಳ್ಳಿ, ಅಲ್ಕೇರಿ, ಅಲ್ಕೇರಿವಾಡಾ, ಮಂಗ್ಯಾನತಾವರಗೇರಿ, ವಾಡಾ, ಮದನೂರ, ಖಂಡ್ರಾನಕೊಪ್ಪ, ಮಾದೇವಕೊಪ್ಪ, ಹುಲಗೋಡ ಮತ್ತು ಇತರ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳು ನುಗ್ಗಿ ರೈತರ ಬೆಳೆಯನ್ನು ನಾಶಪಡಿಸುತ್ತಿರುವುದನ್ನು ಜಯ ಕರ್ನಾಟಕ ತಾಲೂಕಾ ಸಂಘಟನೆ ಗಮನಿಸಿದೆ. 


  ರೈತರು ಸಂಕಷ್ಟಕ್ಕೊಳಗಾಗುತ್ತಿದ್ದು, ಅವರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಲಾಯಿತು. ಕಾಡು ಪ್ರಾಣಿಗಳು ಕೃಷಿ ಭೂಮಿಗಳಿಗೆ ನುಗ್ಗದಂತೆ ಕ್ರಮ ಕೈಗೊಳ್ಳುವುದು, ರೈತರಿಗೆ ಉಚಿತವಾಗಿ ಸೂಕ್ತ ಪರಿಕರಗಳನ್ನು ಒದಗಿಸುವುದು ಮತ್ತು ಬೆಳೆ ಹಾನಿಗೆ ಪರಿಹಾರ ನೀಡುವಂತೆ ಮನವಿ ಮಾಡಲಾಯಿತು.

      ಈ ಸಂದರ್ಭದಲ್ಲಿ ತಾಲೂಕು ಸಂಘಟಣೆಯ ಅಧ್ಯಕ್ಷರು ವಿಲ್ಸನ್ ಆ‌ರ್.ಫರ್ನಾಂಡಿಸ್‌, ತಾಲೂಕು ಎಸ್‌ಸಿ-ಎಸ್‌ಟಿ ಅಧ್ಯಕ್ಷ ಚನ್ನಪ್ಪ ಡಿ ಹರಿಜನ, ಮಹ್ಮದಅಲಿ ಪಟೇಲ್. ಹರೂನ ಶೇಖ, ರೈತ ಮುಖಂಡರು, ಸಂಚಾಲಕರು ಸುಭಾಸ ಡಿ. ಹರಿಜನ, ಜಾಫರ ಒಂಟಿ. ನೂರಅಹ್ಮದ ಶೇಖ, ಜೀವಾ ಕೆ, ರೈತ ಮುಖಂಡರು, ಸಲೀಮ ಒಂಟನಾಳ, ಖಲಂದರ ಪಿ. ಮುನ್ನಾ ಪಟೇಲ, ಆಲೇಕ್ಸ್‌ ಸಿದ್ದಿ, ಜಾಫರ ಒಂಟಿ, ಗಣಪತಿ ಶಿರನಾಳಕರ, ಜಾಕು ಸಿದ್ದಿ, ಮತ್ತು ಎಲ್ಲಾ ಘಟಕ ಅಧ್ಯಕ್ಷರು ಹಾಗೂ ಸದ್ಯಸರು ರೈತರು ಮತ್ತು ಊರನಾಗರಿಕರು ಉಪಸ್ಥಿತಿರಿದ್ದರು.

ದೇವಿ‌ಮೈದಾನ ಗಜಾನೋತ್ಸವ: ಸಡಗರ ಸಂಭ್ರಮದ ಸಿದ್ಧತೆ


ಯಲ್ಲಾಪುರ: ದೇವಿ‌ಮೈದಾನದಲ್ಲಿ ಸೆ. 7 ರಿಂದ 16 ರವರೆಗೆ ನಡೆಯಲಿರುವ ಗಜಾನೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲು ಸಮಿತಿ ಸಿದ್ಧತೆ ಮಾಡಿಕೊಂಡಿದೆ ಎಂದು ಸಮಿತಿ ಅಧ್ಯಕ್ಷ ಗಣೇಶ ಪತ್ತಾರ ಹೇಳಿದರು.

    ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ಸವದಲ್ಲಿ ಗಣಹವನ, ಅಥರ್ವಶೀರ್ಷ ಹವನ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು. ಪ್ರತಿನಿತ್ಯ ಸಾರ್ವಜನಿಕರಿಗೆ ಭೋಜನದ ವ್ಯವಸ್ಥೆ ಮಾಡಲಾಗಿದೆ.


  ಸೆ. 9 ರಿಂದ 15 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸವಣಗೇರಿ ಹುತ್ಕಂಡ ಶಾಲೆಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ, ಹುತ್ಕಂಡ ಸಾಧನಾ ಮಹಿಳಾ ಬಳಗದ ಭಜನೆ, ಆನಗೋಡದ ಮಹಾಗಣಪತಿ ಭಜನಾ ಮಂಡಳಿಯ ಭಜನೆ, ಸ್ಥಳೀಯ ಯಕ್ಷಗಾನ ಕಲಾವಿದರ ಗಾನ ವೈಭವ, ಮಾಗೋಡ ವೀರ ಮಾರುತಿ ತಾಳಮದ್ದಲೆ ಕೂಟದ ಸುಧನ್ಮಾರ್ಜುನ ತಾಳಮದ್ದಲೆ, ಪ್ರಸಿದ್ಧ ಕಲಾವಿದರ ಗಾನ ವೈಭವ, ಛದ್ಮವೇಷ ಹಾಗೂ ಅಭಿನಯಗೀತೆ ಸ್ಪರ್ಧೆಗಳು ನಡೆಯಲಿವೆ.

    ಸೆ. 16 ರಂದು ಮಹಾಪೂಜೆ, ಪ್ರಸಾದ ಭೋಜನ, ಫಲಾವಳಿ ಸವಾಲು ಕಾರ್ಯಕ್ರಮ ಹಾಗೂ ಸಂಜೆ ವಿಸರ್ಜನಾ ಮೆರವಣಿಗೆ ನಡೆಯಲಿದೆ ಎಂದು ಅವರು ತಿಳಿಸಿದರು.

    ಸಮಿತಿಯ ಕಾರ್ಯದರ್ಶಿ ಸಂಜೀವಕುಮಾರ ಹೊಸ್ಕೇರಿ, ಕಳೆದ ನಾಲ್ಕು ದಶಕಗಳಿಂದ ಸಮಿತಿಯು ದೇವರಿಗೆ ವಿಶೇಷವಾಗಿ ಬಂಗಾದ ಆಭರಣಗಳನ್ನು ಮಾಡಿಸಿ, ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಮಂಚೂಣಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ಹೇಳಿದರು.

   ಸಮಿತಿಯ ಸದಸ್ಯರುಗಳಾದ ವಿಜಯಶಂಕರ ನಾಯ್ಕ, ರಾಜು ಶೇಟ, ಗುರು ಕುರ್ಡೆಕರ, ಹನುಮಂತ ನೆರಳಗಿ, ವಿಶ್ವೇಶ್ವರ ಹೆಬ್ಬಾರ, ಅಮೃತ ಬದ್ದಿ, ಉಲ್ಲಾಸ ಪ್ರಭು, ಸೂರಜ್ ಶೆಟ್ಟಿ ಮತ್ತು ನಾರಾಯಣ ಭಟ್ಟ ಸುಣಜೋಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

.

ತಾರೆಹಳ್ಳಿ ಶಾಲೆ ಮಾಜಿ ಅಧ್ಯಕ್ಷರಿಗೆ ಬೀಳ್ಕೊಡುಗೆ


ಯಲ್ಲಾಪುರ: ತಾರೆಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಇತ್ತೀಚೆಗೆ ನಿರ್ಗಮಿಸಿದ ಉಮ್ಮಚ್ಗಿ ಗ್ರಾ.ಪಂ.ಸದಸ್ಯ ಖೈತಾನ್ ಡಿಸೋಜಾ ಅವರಿಗೆ ಊರ ನಾಗರೀಕರು, ಶಾಲೆಯ ಶಿಕ್ಷಕರು ಮತ್ತು ಮಕ್ಕಳಿಂದ ಬೀಳ್ಕೊಡುಗೆಯ ಸನ್ಮಾನ ನೀಡಲಾಯಿತು.


 "ಈ ಶಾಲೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ, ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ನಿಮ್ಮೆಲ್ಲರ ಸಹಾಯದಿಂದ ನಾನು ಈ ಸ್ಥಾನದಲ್ಲಿದ್ದೆ. ಕೆಲಸ ಮಾಡುತ್ತ ಇಷ್ಟೆಲ್ಲ ವರುಷಗಳು ಉರುಳಿದ್ದೇ ಗೊತ್ತಾಗಲಿಲ್ಲ" ಎಂದು ಡಿಸೋಜಾ ಅವರು ಮಾತನಾಡುತ್ತ ಹೇಳಿದರು. "ಈ ಶಾಲೆಗೆ ನನ್ನ ಸಹಾಯ ಸಹಕಾರ ಇನ್ನುಮುಂದೆಯೂ ಇರುತ್ತದೆ. ಅದನ್ನು ತಾವು ಯಾವ ಸಂದರ್ಭದಲ್ಲೂ ಕೇಳಿ ಬಳಸಿಕೊಳ್ಳಬಹುದು" ಎಂದು ಅವರು ಹೇಳಿದರು. 

 ಕಾರ್ಯಕ್ರಮದ ಅಧಕ್ಷತೆಯನ್ನು ಎಸ್ಡಿಎಂಸಿ ನೂತನ ಅಧ್ಯಕ್ಷ ವಿಲಾಸ ನಾಯ್ಕ ವಹಿಸಿದ್ದರು. ಉಮ್ಮಚ್ಗಿ ಗ್ರಾ.ಪಂ.ಸದಸ್ಯ ಅಶೋಕ ಪೂಜಾರಿ, ಎಸ್ಡಿಎಂಸಿ ಉಪಾಧ್ಯಕ್ಷೆ ನಾಗರತ್ನ ಪೂಜಾರಿ, ಮುಖ್ಯೋಪಾದ್ಯಾಯ ರಾಮದಾಸ ಪೈ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೀನಾಕ್ಷಿ ಬಾಯಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ, ವಂದನಾರ್ಪಣೆ ಸಲ್ಲಿಸಿದರು.

ಸವಣಗೇರಿ ಶಾಲೆಯಲ್ಲಿ ಅಥರ್ವ ಉದ್ಯಾನವನಕ್ಕೆ ಚಾಲನೆ

 

ಯಲ್ಲಾಪುರ: ಸವಣಗೇರಿ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ಅಥರ್ವ ಉದ್ಯಾನವನದಲ್ಲಿ ಗಿಡಗಳನ್ನು ನೆಡುವುದರೊಂದಿಗೆ ಉದ್ಯಾನವನಕ್ಕೆ ಚಾಲನೆ ನೀಡಲಾಯಿತು. ಪಾಲಕರ ಪೋಷಕರ ಮಕ್ಕಳ ಎಸ್ ಡಿ ಎಂ ಸಿ ಅವರ ಬಹುದಿನದ ಕನಸು ನನಸಾಗಿದೆ.

   ಈ ಕಾರ್ಯಕ್ಕೆ ಅನೇಕ ಮಹನೀಯರು ಸಹಕಾರ ನೀಡಿದ್ದಾರೆ. ಅವರೆಲ್ಲರಿಗೂ ಶಾಲೆಯ ವತಿಯಿಂದ ತುಂಬು ಹೃದಯದ ಅಭಿನಂದನೆಗಳು. ರವಿ ನಾಯ್ಕ ಕಾರ್ಯವನ್ನು ಮುತುವರ್ಜಿವಹಿಸಿ ನಿರ್ವಹಿಸಿದ್ದಾರೆ.

ಸುಬ್ಬಣ್ಣ ಉದ್ದ ಬೈಲ್ ಉಚಿತವಾಗಿ ಜೆಸಿಬಿಯನ್ನು ಒದಗಿಸಿದ್ದಾರೆ. ಶಿಕ್ಷಕ ರಾಮಚಂದ್ರ ನಾಯ್ಕ್ ಉಚಿತವಾಗಿ ಬೇಲಿಯ ಕಂಬವನ್ನು ಒದಗಿಸಿದ್ದಾರೆ. ವೆಂಕಟರಮಣ (ವೆಂಕಟೇಶ್) ಹೆಗಡೆ ಉತ್ತಮ ಜಾತಿಯ ಎಲ್ಲ ಸಸಿಗಳನ್ನು ಉಚಿತವಾಗಿ ಒದಗಿಸಿದ್ದಾರೆ.

   ವನಮಹೋತ್ಸವದಲ್ಲಿ ಶಾಲಾ ವಿದ್ಯಾರ್ಥಿಗಳು, ಪದೋನ್ನತ ಮುಖ್ಯ ಶಿಕ್ಷಕ ಸಂಜೀವ್ ಕುಮಾರ್, ಶಿಕ್ಷಕರು, ಟಿ. ಎಸ್. ಎಸ್ ನಿರ್ದೇಶಕ ಕೃಷ್ಣ ಹೆಗಡೆ, ವೆಂಕಟರಮಣ ಹೆಗಡೆ, ಆರ್. ಜಿ. ಭಟ್ಟ್, ಚಂದಗುಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಿಲ್ಪಾ ನಾಯ್ಕ, ರವಿ ನಾಯ್ಕ, ವಿಶ್ವನಾಥ್ ಭಟ್ಟ್, ರಾಘವೇಂದ್ರ ಭಟ್ಟ, ರಮೇಶ್ ಮರಾಠಿ, ಮುಕುಂದ ಗೊಂದಳಿ, ಜಾಬೀರ್ ಶೇಖ, ಸುನಂದಾ ಭಟ್ಟ, ಹಳೆಯ ವಿದ್ಯಾರ್ಥಿಗಳು ಸಮರ್ಥ ನಾಯ್ಕ, ಪವಿತ್ರಾ ಪಡ್ತಿ ಇದ್ದರು.


ಸಹ್ಯಾದ್ರಿ ಸಹಕಾರಿ ಸಂಘ: 41.44 ಲಕ್ಷ ರೂಪಾಯಿ ಲಾಭ


ಯಲ್ಲಾಪುರ: ಸಹ್ಯಾದ್ರಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘವು ಕಳೆದ ವರ್ಷ 41.44 ಲಕ್ಷ ರೂಪಾಯಿ ಲಾಭ ಗಳಿಸಿದೆ. ಗುಣಮಟ್ಟದ ಸೇವೆ, ನಿಖರ ತೂಕ ಮತ್ತು ಸಿಬ್ಬಂದಿಯ ಆತ್ಮೀಯ ಒಡನಾಟ ಇದಕ್ಕೆ ಕಾರಣ ಎಂದು ಸಂಘದ ಅಧ್ಯಕ್ಷ ಉಮೇಶ ಭಾಗ್ವತ್ ಮಂಗಳವಾರ ಬೆಳಿಗ್ಗೆ ಎಪಿಎಂಸಿ ಶಾಖೆಯಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.

   ಕಳೆದ ವರ್ಷ ಸಂಘವು ಶೇ 8ರಷ್ಟು ಡಿವಿಡೆಂಟ್ ನೀಡಿದೆ. ಈ ವರ್ಷ ಸದಸ್ಯರ ಸಭೆಯಲ್ಲಿ ಡಿವಿಡೆಂಟ್ ಘೋಷಣೆ ಮಾಡಲಾಗುವುದು. ಕಳಚೆ ಗ್ರಾಮ ಮೂಲವಾಗಿರುವ ಈ ಸಂಘವು ಕಳಚೆ ಮತ್ತು ಭಾಗಿನಕಟ್ಟಾ ಪ್ರದೇಶಗಳನ್ನು ತನ್ನ ಕಾರ್ಯಕ್ಷೇತ್ರವಾಗಿ ಹೊಂದಿದೆ. ಯಲ್ಲಾಪುರ ಸೇರಿದಂತೆ ವಿವಿಧ ಪ್ರದೇಶಗಳು ಸಂಘದ ವ್ಯವಹಾರಿಕ ಕ್ಷೇತ್ರಗಳಾಗಿವೆ.


  ಕಳೆದ ಎರಡು ವರ್ಷಗಳಿಂದ ಸಂಘವು ಅಡಿಕೆ ವಿಕ್ರಿ ವಹಿವಾಟು ನಡೆಸುತ್ತಿದೆ. 10 ಸಹಕಾರಿ ಸಂಘಗಳ ಸಹಕಾರದೊಂದಿಗೆ ಈ ಕಾರ್ಯವನ್ನು ಮುಂದುವರೆಸಲಾಗಿದೆ. ಜೊಯಿಡಾ, ಶಿರಸಿ, ಅಂಕೋಲಾದ ಕೆಲ ಸಹಕಾರಿ ಸಂಘಗಳು ಸಹ್ಯಾದ್ರಿ ಸಂಘದಲ್ಲಿ ಖಾತೆ ತೆರೆದಿವೆ.

    ಈ ವರ್ಷದಿಂದ 'ಸಹ್ಯಾದ್ರಿ ಕ್ಷೇಮನಿಧಿ' ಎಂಬ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಸಂಘದಲ್ಲಿ ವ್ಯವಹಾರ ನಡೆಸುವವರ ಅಕಾಲಿಕ ಮರಣ ಹಾಗೂ ಆಪತ್ಕಾಲದಲ್ಲಿ ಆರ್ಥಿಕ ಸಹಾಯ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶ. ಕನಿಷ್ಠ 25 ಸಾವಿರ ರೂಪಾಯಿಗಳಿಂದ 1 ಲಕ್ಷ ರೂಪಾಯಿಯವರೆಗೆ ಆರ್ಥಿಕ ನೆರವು ಸಿಗುತ್ತದೆ ಎಂದು ಭಾಗ್ವತ್ ವಿವರಿಸಿದರು.

   'ಸಹ್ಯಾದ್ರಿ ಕ್ಷೇಮನಿಧಿ' ಯೋಜನೆಯ ಸದುಪಯೋಗಕ್ಕಾಗಿ ಸಂಘದ ಮೂಲಕ ಅಡಿಕೆ ವಿಕ್ರಿ ಮಾಡುವುದು ಕಡ್ಡಾಯ ಎಂದು ನಿಯಮಗಳ ಬಗ್ಗೆ ತಿಳಿಸಿದರು.

   ಸಂಘದ ಉಪಾಧ್ಯಕ್ಷ ರಾಘವೇಂದ್ರ ಕೋಣೆಮನೆ, ನಿರ್ದೇಶಕರಾದ ರಾಘವೇಂದ್ರ ಭಟ್ಟ, ಸೂರ್ಯನಾರಾಯಣ ಭಟ್ಟ, ಶ್ರೀಕಾಂತ ಹೆಬ್ಬಾರ, ರಾಮಕೃಷ್ಣ ಹೆಗಡೆ, ಶ್ರೀಪಾದ ಗಾಂಯ್ಕರ, ಗಣಪತಿ ಗೌಡ, ಅರುಣ ನಾಯ್ಕ, ವಿನುತಾ ಗದ್ದೆ, ಮುಖ್ಯಕಾರ್ಯನಿರ್ವಾಹಕ ದತ್ತಾತ್ರೇಯ ಹೆಗಡೆ, ಶಾಖಾ ವ್ಯವಸ್ಥಾಪಕ ಅನಂತ ಹೆಗಡೆ ಇದ್ದರು.

ಯಲ್ಲಾಪುರ ತಾ.ಪಂ ಸಮಿತಿಯ ಸ್ಥಳ ಪರಿಶೀಲನೆ: ಜೀವವೈವಿಧ್ಯ ತಾಣಗಳ ಸಂರಕ್ಷಣೆಗೆ ಕ್ರಮ


ಯಲ್ಲಾಪುರ: ತಾಲೂಕಿನ ಪ್ರಮುಖ ಜೀವವೈವಿಧ್ಯ ತಾಣಗಳಾದ ಹುತ್ಕಂಡದ ಸೀತಾ ಅಶೋಕವನ, ಸಹಸ್ರಳ್ಳಿಯ ಮುಂಡಿಗೆಕೆರೆ, ಕರಿಯವ್ವನಗುಂಡಿಯ ಪಾರಂಪರಿಕ ಬೀಟೆ ವೃಕ್ಷ ಮತ್ತು ದೇಹಳ್ಳಿ ಕಾಡಿನ ಅಪರೂಪದ ಮರದರಶಿಣ ಬಳ್ಳಿಯನ್ನು ಸಂರಕ್ಷಣೆ ಮಾಡುವುದು, ಅವುಗಳ ಮಹತ್ವವನ್ನು ಸಾರುವುದು, ಹಾಗೂ ಅವುಗಳ ಉಪಯೋಗವನ್ನು ವ್ಯಕ್ತಗೊಳಿಸುವ ಉದ್ದೇಶದಿಂದ ತಾಲೂಕಾ ಜೀವವೈವಿಧ್ಯ ನಿರ್ವಹಣಾ ಸಮಿತಿಯ ತಂಡ ಮಂಗಳವಾರ ಈ ಸ್ಥಳಗಳಿಗೆ ಭೇಟಿ ನೀಡಿತು.


 ಚಂದಗುಳಿ ಪಂಚಾಯತ ಆವರಣದಲ್ಲಿ ನಡೆದ ಸಮಾಲೋಚನೆಗೆ ಜೀವವೈವಿಧ್ಯ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಚಾಲನೆ ನೀಡಿದರು. ನಂತರ ಮಾತನಾಎಇದ ಅವರು, ರಾಜ್ಯದಲ್ಲೇ ಅಪರೂಪವಾದ ಮರದರಶಿಣ ಬಳ್ಳಿಯನ್ನು ಉಳಿಸುವ ಕುರಿತು ಯೋಜನೆ ರೂಪಿಸಬೇಕು. ಈಗಾಗಲೇ ಕೈಗಾ ನರೇಂದ್ರ ತಂತಿ ಮಾರ್ಗದಿಂದ ಹಲವು ಭಾಗಗಳು ನಾಶವಾಗಿವೆ. ಇನ್ನುಳಿದ ಭಾಗಗಳನ್ನು ಉಳಿಸಲು ಅರಣ್ಯ ಇಲಾಖೆ, ಗ್ರಾಮ ಪಂಚಾಯತ, ಸಮಿತಿ ಹಾಗೂ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.


 ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಮಾತನಾಡಿ, ಜೀವವೈವಿಧ್ಯ ಸಮಿತಿಯ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಬೇಕಾಗಿದೆ. ಜೀವವೈವಿಧ್ಯ ಸಂಕುಲದ ಉಳಿವಿಗೆ ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.


    ಸಹಸ್ರಳ್ಳಿ ಕೆರೆ ಮೇಲಿನ ಒತ್ತುವರಿಯನ್ನು ತಡೆಗಟ್ಟುವ ಬಗ್ಗೆ ಸ್ಥಳೀಯರು ದೂರನ್ನು ನೀಡಿದರು. ಕೆರೆ ಸಂರಕ್ಷಣೆ, ಬೇಡ್ತಿ ನದಿ ತಟದಲ್ಲಿ ನಡೆಯುತ್ತಿರುವ ಕಲ್ಲು ಕ್ವಾರಿ ಮತ್ತು ಅಕ್ರಮ ಮರಳು ಸಾಗಣೆ ತಡೆಯುವ ಬಗ್ಗೆ ಅಧಿಕಾರಿಗಳು ಚರ್ಚಿಸಿದರು. ಅಲ್ಲಿಗೆ ಬರುವ ಅಪರೂಪದ ಪಕ್ಷಿಸಂಕುಲಗಳ ಸಂರಕ್ಷಣೆಯ ಅಗತ್ಯತೆಯನ್ನು ಒತ್ತಿ ಹೇಳಲಾಯಿತು.

    ತಾಲೂಕು ಜೀವವೈವಿಧ್ಯ ನಿರ್ವಹಣಾ ಸಮಿತಿಯ ಸದಸ್ಯ ನರಸಿಂಹ ಸಾತೊಡ್ಡಿ ಮಾದರಿ ಜೀವವೈವಿಧ್ಯ ಸಮಿತಿಯ ಚಟುವಟಿಕೆಗಳ ಬಗ್ಗೆ ಪ್ರಾಸ್ತಾವಿಕವಾಗಿ ವಿವರ ನೀಡಿದರು. 


  ಈ ನಾಲ್ಕು ಜೀವವೈವಿಧ್ಯ ತಾಣಗಳಿಗೆ ಭೇಟಿ ನೀಡಿದ ತಂಡದಲ್ಲಿ.ಆರ್.ಹೆಗಡೆ ತೊಂಡೆಕೆರೆ, ಕೆ.ಎಸ್.ಭಟ್ಟ ಆನಗೋಡ, ಚಂದ್ಗುಳಿ ಪಂಚಾಯತ ಅಧ್ಯಕ್ಷೆ ಶಿಲ್ಪಾ ರವಿ‌ ನಾಯ್ಕ, ಸದಸ್ಯರಾದ ಆರ್.ಎಸ್.ಭಟ್ಟ, ನೇತ್ರಾವತಿ ಹೆಗಡೆ, ಮದನೂರು ಪಂಚಾಯತ ಅಧ್ಯಕ್ಷ ರಾಜೇಶ ತಿನೇಕರ್, ಸದಸ್ಯ ಶಹಪೂರಕರ್, ದೆಹಳ್ಳಿ ಗ್ರಾ.ಪಂ ಅಧ್ಯಕ್ಷ ಶ್ರೀಪತಿ ಮುದ್ದೆಪಾಲ್, ಉಪಾಧ್ಯಕ್ಷ ಮಂಜುನಾಥ ಗುಮ್ಮಾನಿ, ಸದಸ್ಯರುಗಳು, ಏಸಿಎಫ್ ಹಿಮವತಿ ಭಟ್ಟ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ ದನವಾಡಕರ್, ಯಲ್ಲಾಪುರ ವಲಯ ಅರಣ್ಯಾಧಿಕಾರಿ ನರೇಶ ಜಿ.ವಿ, ಡಿ.ಆರ್.ಎಫ್ ಓ ಗಳಾದ ಅಶೋಕಹಳ್ಳಿ, ಪ್ರಭಾಕರ, ಅಲ್ತಾಪ್, ಶಿವಾನಂದ ಕಾರಟ್ಟಿ, ಪಿಡಿಓಗಳಾದ ರಾಜೇಶ ಶೇಟ್ ಚಂದ್ಗುಳಿ, ನಸ್ರೀನಾ, ನಾರಾಯಣ ಗೌಡ ಆನಗೋಡ, ಕಾರ್ಯದರ್ಶಿ ತುಕಾರಾಮ ನಾಯ್ಕ, ಬಿಷ್ಣಪ್ಪ ಚಲವಾದಿ ಮದನೂರು, ತಾ.ಪಂ ಯೋಜನಾಧಿಕಾರಿ ರಾಘವ, ವಿಷಯ ನಿರ್ವಾಹಕಿ  ಮಮತಾ ಗೌಡ, ಕೃಷಿ ಇಲಾಖೆಯ ಎಂ.ಜಿ.ಭಟ್ಟ, ಅರಣ್ಯ ಇಲಾಖೆಯ ಸಿಬ್ಬಂದಿಗಳು ಆಯಾಪ್ರದೇಶದಲ್ಲಿ ಗ್ರಾಮಸ್ಥರು, ಜೇನು ತಜ್ಞ ರಾಮಾ ಮರಾಠಿ ಸೇರದಂತೆ ನಾಟಿವೈದ್ಯರು ಮತ್ತಿತರರು ಪಾಲ್ಗೊಂಡಿದ್ದರು. 


.