Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Friday, 12 July 2024

ಜುಲೈ 17 ರಂದು ಮಾಗೋಡದಲ್ಲಿ ಸಂಜೆ 6 ರಿಂದ ಬೆಳಗ್ಗೆ 6 ರವರೆಗೆ ನಿರಂತರವಾಗಿ ತಾಳಮದ್ದಲೆ

ಯಲ್ಲಾಪುರ : ತಾಲೂಕಿನ ಮಾಗೋಡಿನ ಶ್ರೀ ವೀರಮಾರುತಿ ತಾಳಮದ್ದಲೆ ಕೂಟ ಆಷಾಢ ಏಕಾದಶಿಯಂದು ಎರಡನೇ ವರ್ಷದ ಪ್ರಸಂಗ ಪಂಚಕ ಕಾರ್ಯಕ್ರಮ ಸಂಘಟನೆಗೆ ಸಜ್ಜುಗೊಂಡಿದೆ. ಈ ಬಾರಿ ಜುಲೈ 17 ರಂದು ಸಂಜೆ 6 ರಿಂದ ಜುಲೈ 18ರ ಬೆಳಗ್ಗೆ 6 ರವರೆಗೆ ನಿರಂತರವಾಗಿ ತಾಳಮದ್ದಲೆಯ ಮೂಲಕ ಆಷಾಢ ಏಕಾದಶಿಯ ಪರ್ವಕಾಲದಲ್ಲಿ ಕಲಾರಾಧನೆ ನಡೆಯಲಿದೆ.
     ಕಳೆದ ವರ್ಷ ಆಷಾಢ ಏಕಾದಶಿಯಂದು ಹೊಸ ಕಲ್ಪನೆಯೊಂದಿಗೆ ಆರಂಭವಾದ ಪ್ರಸಂಗ ಪಂಚಕ ಕಾರ್ಯಕ್ರಮ ಅಪಾರ ಮೆಚ್ಚುಗೆ ಗಳಿಸಿತ್ತು. ಮಾಗೋಡ ಸುತ್ತಮುತ್ತಲಿನ 40 ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿ ನಿರಂತರ 12 ತಾಸುಗಳ ತಾಳಮದ್ದಲೆಯನ್ನು ಯಶಸ್ವಿಗೊಳಿಸಿದ್ದರು. ಕಲಾವಿದರೊಂದಿಗೆ ಕಲಾಭಿಮಾನಿಗಳಿಗೂ ನಿರಂತರ ಲಘು ಉಪಾಹಾರ, ಪಾನೀಯ ವ್ಯವಸ್ಥೆ, ಸೊಳ್ಳೆಗಳ ಕಾಟಕ್ಕೆ ಅಡಿಕೆ ಸಿಪ್ಪೆಯ ಹೊಗೆ ವ್ಯವಸ್ಥೆ ಇತ್ಯಾದಿ ವಿಶೇಷತೆಗಳಿಂದ ಕಾರ್ಯಕ್ರಮ ಗಮನ ಸೆಳೆದಿತ್ತು. 
  ಎಲ್ಲದಕ್ಕಿಂತ ಮುಖ್ಯವಾಗಿ ಸಮಯ ಪಾಲನೆ ಪ್ರಸಂಗ ಪಂಚಕದ ವೈಶಿಷ್ಟ್ಯ. ನಿಗದಿತ ಸಮಯಕ್ಕೆ ಆರಂಭವಾಗಿ, ನಿಗದಿತ ಸಮಯಕ್ಕೆ ಕಾರ್ಯಕ್ರಮ ಮುಕ್ತಾಯವಾಗುವುದು. ಪ್ರತಿ ಪ್ರಸಂಗಕ್ಕೂ ನಿರ್ದಿಷ್ಟ ಸಮಯ, ಅದೇ ಸಮಯಕ್ಕೆ ಸರಿಯಾಗಿ ಪ್ರಸಂಗ ಪೂರ್ಣಗೊಳಿಸುವುದು, ಅದಕ್ಕೆ ಅಗತ್ಯ ಸಿದ್ಧತೆಗಳು ಎಲ್ಲವನ್ನೂ ಅಚ್ಚುಕಟ್ಟಾಗಿ ನಡೆಸುವ ಈ ಸಂಘಟನೆ ಇತರರಿಗೆ ಮಾದರಿಯಾಗಿದೆ. 
    ಮೊದಲ ವರ್ಷದ ಯಶಸ್ಸಿನ ನಂತರ ಎರಡನೇ ಹೆಜ್ಜೆ ಇಡಲು ಮುಂದಾಗಿರುವ ಕೂಟ, ಈ ಬಾರಿಯೂ ಯಶಸ್ವಿ ಸಂಘಟನೆಗೆ ಮುಂದಾಗಿದೆ. ಕಚ-ದೇವಯಾನಿ, ಪಾದುಕಾ ಪ್ರದಾನ, ರುಕ್ಮಿಣಿ ಕಲ್ಯಾಣ, ಬಬ್ರುವಾಹನ ಹಾಗೂ ಮೀನಾಕ್ಷಿ ಕಲ್ಯಾಣ ತಾಳಮದ್ದಲೆಗಳು ನಡೆಯಲಿವೆ. ಸ್ಥಳೀಯ ಹಾಗೂ ಸುತ್ತಮುತ್ತಲಿನ 50 ಕ್ಕೂ ಹೆಚ್ಚು ಹಿರಿ-ಕಿರಿಯ ಕಲಾವಿದರು ಭಾಗವಹಿಸಲಿದ್ದಾರೆ. ಕಲಾಭಿಮಾನಿಗಳಿಗೆ ನಿರಂತರವಾಗಿ ಲಘು ಉಪಾಹಾರ, ಪಾನೀಯ ವ್ಯವಸ್ಥೆ ಇರಲಿದೆ. ಆಷಾಢ ಏಕಾದಶಿಯ ಪರ್ವಕಾಲದಲ್ಲಿ, ದೇವರ ಸನ್ನಿಧಿಯಲ್ಲಿ ಆತಿಥ್ಯ, ಆತ್ಮೀಯತೆಯೊಂದಿಗೆ ಕಲಾರಾಧನೆ ನಡೆಸುವುದು ಕೂಟದ ಉದ್ದೇಶವಾಗಿದೆ. 
   ಕೂಟದ ಅಧ್ಯಕ್ಷ ನಾರಾಯಣ ಭಟ್ಟ ಮೊಟ್ಟೆಪಾಲ, ಸಂಚಾಲಕ ನರಸಿಂಹ ಭಟ್ಟ ಕುಂಕಿಮನೆ, ಭಾಗವತ ಮಹಾಬಲೇಶ್ವರ ಭಟ್ಟ ಬೆಳಶೇರ ಅವರ ನೇತೃತ್ವದಲ್ಲಿ ಕೂಟದ ಕಲಾವಿದರು ಸಂಘಟನೆಯಲ್ಲಿ ನಿರತರಾಗಿದ್ದಾರೆ. 
ಕೂಟದ ವಿಶೇಷತೆ:
ಸ್ಥಳೀಯ ಹವ್ಯಾಸಿ ಕಲಾವಿದರೇ ಸೇರಿ ಶ್ರೀ ವೀರಮಾರುತಿ ತಾಳಮದ್ದಲೆ ಕೂಟದ ಮೂಲಕ ಕಲಾ ಸೇವೆ ಮಾಡುತ್ತಿದ್ದಾರೆ. ಪ್ರತಿ ಏಕಾದಶಿಯಂದು ಮಾಗೋಡಿನ ವೀರಮಾರುತಿಯ ಸನ್ನಿಧಿಯಲ್ಲಿ ತಾಳಮದ್ದಲೆ ಮಾಡುತ್ತ ಬಂದಿದ್ದಾರೆ. ತಾಲೂಕಿನ ವಿವಿಧೆಡೆ ತಾಳಮದ್ದಲೆ ನಡೆಸಿಕೊಟ್ಟಿದ್ದಾರೆ. ಕಳೆದ ವರ್ಷದಿಂದ ಆಷಾಢ ಏಕಾದಶಿಯ ದಿನ ಪ್ರಸಂಗ ಪಂಚಕ ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ಮಾದರಿಯಾಗಿದೆ.