ಯಲ್ಲಾಪುರ : ಹೆದ್ದಾರಿ ನಿರ್ಮಾಣ ಸಂಸ್ಥೆಯ ಅಚಾತುರ್ಯದಿಂದ ಅಂಕೋಲಾದ ಶಿರೂರ ಬಳಿಯ ಎನ್‌ಎಚ್ 66 ರಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ಹಲವು ಜನ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪ್ರದೇಶದಲ್ಲಿ ರಸ್ತೆಯನ್ನು ಕಟ್ಟುವಾಗ ತಡೆಗೋಡೆ ಅಥವಾ ಎತ್ತರದ ಕಬ್ಬಿಣದ ತಂತಿ ಬೇಲಿ ನಿರ್ಮಾಣ ಮಾಡದೇ ಇರುವ ಕಾರಣ ಈ ಅನಾಹುತ ಸಂಭವಿಸಿದೆ. ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ಹೆದ್ದಾರಿ ನಿರ್ಮಾಣ ಸಂಸ್ಥೆಗಳು 1 ಕೋಟಿ ರೂಗಳ ಪರಿಹಾರವನ್ನು ನೀಡಬೇಕು ಎಂದು ಉ.ಕ ಲಾರಿ ಮಾಲಿಕರ ಪರವಾಗಿ ಯಲ್ಲಾಪುರದ ಮಹೇಶ ನಾಯ್ಕ ಆಗ್ರಹಿಸಿದ್ದಾರೆ.
ಉತ್ತರ ಭಾರತದ ಹಲವು ಭಾಗಗಳಲ್ಲಿ, ಗಾಳಿ, ಮಂಜು ಮತ್ತು ಪರ್ವತ ಕರಗುವ ಸಂದರ್ಭದಲ್ಲಿ ಜೀವಾಪಾಯ ತಪ್ಪಿಸಲು ಕಾಂಕ್ರೀಟ್ ಹಾಗೂ ಕಬ್ಬಿಣದ ತಡೆ ನಿರ್ಮಾಣವನ್ನು ಮಾಡಲಾಗುತ್ತದೆ. ಆದರೆ, ಅಧಿಕ ಮಳೆ ಸುರಿಯುವ ಅಂಕೋಲಾದಲ್ಲಿ ಯಾಕೆ ಈ ರೀತಿಯ ಸುರಕ್ಷಾ ಕ್ರಮಗಳನ್ನು ಅನುಸರಿಸಲಾಗಿಲ್ಲ ಎಂದವರು ಪ್ರಶ್ನಿಸಿದ್ದಾರೆ.
ಈ ಭೂಕುಸಿತದಿಂದಾಗಿ ಉತ್ತರಕನ್ನಡ ಜಿಲ್ಲೆಯ ಈ ಭಾಗದಲ್ಲಿ ಹತ್ತಕ್ಕೂ ಹೆಚ್ಚು ಜನರು ಸಜೀವ ಸಮಾಧಿಯಾಗಿದ್ದಾರೆ ಎಂಬುದಾಗಿ ವರದಿಯಾಗಿದೆ. ಅವೈಜ್ಞಾನಿಕ ರಸ್ತೆ ನಿರ್ಮಾಣದ ಕುರಿತು ಹಲವು ಸಂಘಟನೆಗಳ ಮುಖಂಡರು ಯಾಕೇ ಮಾತನಾಡುತ್ತಿಲ್ಲ, ಹೆದ್ದಾರಿ ನಿರ್ಮಾಣ ಸಂಸ್ಥೆಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಯಾಕೆ ಒತ್ತಾಯಿಸುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.