ವರದಿ ; ಜಗದೀಶ ನಾಯಕ
ಯಲ್ಲಾಪುರ ; ಪಟ್ಟಣದ ಬೆಲ್ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಳೆದ ಹತ್ತು ತಿಂಗಳಿಂದ ಸಂಬಳ ನೀಡಲಿಲ್ಲ, ಸ್ವಂತ ನಿರ್ವಹಣೆ ಕಷ್ಟ ಸಾಧ್ಯ ಎಂದು ಕೈಚೆಲ್ಲಿ ಸೋಮವಾರ ಕಂಪೌಂಡ್ ಗೇಟ್ ಹಾಗೂ ಇಂದಿರಾ ಕ್ಯಾಂಟೀನ್ ಗೆ ಚಾವಿ ಹಾಕಿ ಬಂದ್ ಮಾಡಿದ್ದಾರೆ.
ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡ ಕೂಲಿ ಕಾರ್ಮಿಕರಿಗೆ, ಬೀದಿ ಬದಿಯ ವ್ಯಾಪಾರಿಗಳಿಗೆ ಹಸಿವು ನೀಗಿಸಲು ಕರ್ನಾಟಕದ ಎಲ್ಲ ತಾಲೂಕುಗಳಲ್ಲಿ ಒಂದು, ಮಹಾನಗರಗಳಲ್ಲಿ ಐದರವರೆಗೆ ಇಂದಿರಾ ಕ್ಯಾಂಟೀನ್ ಸ್ಥಾಪಿಸಿ ಜನರಿಗೆ ಅನುಕೂಲ ಮಾಡಿ ಕೊಟ್ಟಿದ್ದರು. ಕಡಿಮೆ ಹಣದಲ್ಲಿ ಊಟ ಉಪಹಾರ ಟೀ ಹೀಗೆ ಬಡವರ ಹೊಟ್ಟೆಯ ಹಸಿವನ್ನು ಈ ಕ್ಯಾಂಟೀನ್ ನೀಗಿಸುತ್ತಿತ್ತು.
ಯಲ್ಲಾಪುರದಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಹಣೆಯ ಗುತ್ತಿಗೆ ಪಡೆದ ಗುತ್ತಿಗೆದಾರರಿಗೆ ಸಕಾಲದಲ್ಲಿ ಹಣ ಸರ್ಕಾರದಿಂದ ಪಾವತಿಯಾಗಿಲ್ಲ ಎನ್ನಲಾಗಿದೆ. ಹೀಗಾಗಿ ಕೆಲವು ತಿಂಗಳ ಹಿಂದಿನಿಂದ ಗುತ್ತಿಗೆ ಪಡೆದ ಸಂಸ್ಥೆ, ಇಲ್ಲಿಯ ಕೆಲಸಗಾರರಿಗೆ ನಿರ್ವಹಣೆಯ ಜವಾಬ್ದಾರಿಯನ್ನು ನೀಡಿತ್ತು. ಸ್ಥಳೀಯ ಕಿರಾಣಿ ಅಂಗಡಿಯಲ್ಲಿ, ತರಕಾರಿ ಅಂಗಡಿಗಳಲ್ಲಿ, ಗ್ಯಾಸ್ ವಿತರಕರಲ್ಲಿ ಉದ್ರಿಯಾಗಿ ಖರೀದಿಸಿ ಇಂದೀರಾ ಕ್ಯಾಂಟೀನ್ ನಡೆಸುತ್ತಿದ್ದರು. ಕಿರಾಣಿ ತರಕಾರಿ ಗ್ಯಾಸ್ ಹಾಗೂ ಇನ್ನಿತರ ಅಂಗಡಿಗಳಲ್ಲಿ ಸಾಲದ ಬಾಕಿ ಏರುತ್ತಾ ಹೋಗಿದ್ದರಿಂದ ಅವರು ಕೂಡ ಈಗ ಸಾಮಗ್ರಿಗಳನ್ನು ಕೊಡುವುದು ನಿಲ್ಲಿಸಿದ್ದಾರೆ ಎನ್ನಲಾಗಿದೆ.
ಮಾಡಲು ಏನು ಕೆಲಸವಿಲ್ಲದೆ ಸುಮಾರು ಐವರು ಕಾರ್ಮಿಕರು ಮತ್ತು ಅಡುಗೆಯವರು ಹತ್ತು ತಿಂಗಳ ಹಿಂದೆ ನೀಡುತ್ತಿದ್ದ ಸಂಬಳವೂ ಇಲ್ಲದೆ, ಉದ್ರಿ ತಂದ ಸಾಮಾಗ್ರಿಗಳ ವಸ್ತುಗಳ ಹಣವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಹೀಗಾಗಿ ಸೋಮವಾರದಿಂದ ಕಂಪೌಂಡ್ ಗೇಟ್ ಹಾಗೂ ಇಂದಿರಾ ಕ್ಯಾಂಟೀನಿಗೆ ಚಾವಿ ಹಾಕಿ ಬಂದ್ ಮಾಡಿದ್ದಾರೆ.
ಬಡ ಕೂಲಿ ಕಾರ್ಮಿಕರಿಗೆ ಎಂಟು ತಿಂಗಳಿಂದ ಸಂಬಳ ನೀಡದೆ ಇರುವುದು ದೊಡ್ಡ ಅನ್ಯಾಯ ;
ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಗಜಾನನ ನಾಯ್ಕ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ ಕಟ್ಟಿಮನಿ ಅಭಿಪ್ರಾಯ ಪಟ್ಟು, ಇಂದಿರಾ ಕ್ಯಾಂಟೀನ್ ಕೂಲಿ ಕಾರ್ಮಿಕರು ಇಂದು ದುಡಿದು ಇಂದೆ ತಿನ್ನುವ ಸ್ಥಿತಿಯಲ್ಲಿರುವಂತವರು. ಕೂಲಿಕಾರ್ಮಿಕರಿಗೆ ಕಳೆದ ಹತ್ತು ತಿಂಗಳಿಂದ ಸಂಬಳ ನೀಡದೆ ಇರುವುದು ದೊಡ್ಡ ಅನ್ಯಾಯವಾಗಿದೆ. ಶಾಸಕರು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು, ಕಾರ್ಮಿಕ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರರಲ್ಲಿ ಹಲವಾರು ಬಾರಿ ಮನವಿ ಮಾಡಿದರು ಕೂಡ ಈ ಬಗ್ಗೆ ಯಾರೂ ಕ್ರಮ ಕೈಗೊಂಡಿಲ್ಲ. ಭರವಸೆಯನ್ನು ನೀಡಲಾಯಿತು ವಿನಹ ನೀಡಿರುವ ಭರವಸೆಯನ್ನು ಈಡೇರಿಸುವ ಪ್ರಯತ್ನ ನಡೆದಿಲ್ಲ ಎಂದು ಹೇಳುತ್ತಾರೆ.
ಇಂದಿರಾ ಕ್ಯಾಂಟೀನ್ ವ್ಯವಸ್ಥಾಪಕರಿಗೂ ಸಂಬಳ ಇಲ್ಲ;
ಕಳೆದ ಹತ್ತು ತಿಂಗಳಿಂದ ಇಂದಿರಾ ಕ್ಯಾಂಟೀನ್ ನಲ್ಲಿ ಕೆಲಸ ಮಾಡುವ ವ್ಯವಸ್ಥಾಪಕರಿಗೂ ಸಹಾಯಕರಿಗೂ ಸಂಬಳ ನೀಡಿಲ್ಲ. ಐದು ಕೆಲಸಗಾರರಿಗೆ ಸರಾಸರಿ 10 ಸಾವಿರದಂತೆ ಹತ್ತು ತಿಂಗಳ ಸಂಬಳ ಒಂದು ಲಕ್ಷ ರೂ ಬರಬೇಕಾಗಿದೆ.