ಯಲ್ಲಾಪುರ: ಶನಿವಾರ, ಎರಡು ಮಹತ್ವದ ಪುಸ್ತಕಗಳು ಬಿಡುಗಡೆಯಾದವು. ಈ ಪುಸ್ತಕಗಳು ರಾಜ್ಯದ ಎಲ್ಲೆಡೆ ವ್ಯಾಪಕವಾಗಿ ಬಳಸಿದಾಗ, ಶಿರಸಿ ಶೈಕ್ಷಣಿಕ ಜಿಲ್ಲೆಗೆ ಗೌರವವನ್ನೂ ಹೆಚ್ಚಿಸಲಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಪ್ರಾಥಮಿಕ ಪ್ರೌಢ ಶಿಕ್ಷಣ ನಿರ್ದೇಶಕ ಎಂ ಎಸ್ ಪ್ರಸನ್ನಕುಮಾರ್ ಹೇಳಿದರು.
ಪಟ್ಟಣದ ಅಡಿಕೆ ಭವನದಲ್ಲಿ ಜುಲೈ 20ರಂದು ನಡೆದ ಕಾರ್ಯಕ್ರದಲ್ಲಿ "ದೈಹಿಕ ಶಿಕ್ಷಣ ದರ್ಶಿಕಾ" ಮತ್ತು "ಇ-ಶಿಕ್ಷಣ ಸುರಭಿ" ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಶಿರಸಿ ಜಿಲ್ಲೆಯ ಶಾಲಾ ಶಿಕ್ಷಕರು ರಾಜ್ಯಮಟ್ಟದಲ್ಲಿ ಅಗತ್ಯವಾದ ಏಕರೂಪ ಪಠ್ಯಕ್ರಮ ರೂಪಿಸಿ ಕೊಟ್ಟಿದ್ದಾರೆ. ಈ ಭಾಗದ ಶಿಕ್ಷಕರು ತಮ್ಮ ಅಧ್ಯಯನ ಶೀಲತೆಗೆ ಹೆಸರಾಗಿದ್ದಾರೆ. ಶಿಕ್ಷಣಕ್ಕೆ ಮಾದರಿಯಾಗಿರುವ ಈ ಪುಸ್ತಕಗಳು, ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಲು ಸಹಾಯವಾಗಲಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶಿರಸಿ ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಾರಿ ಬಸವರಾಜ ಮಾತನಾಡಿ, ಈ ಪುಸ್ತಕಗಳು ಬೇರೆ ತಾಲೂಕುಗಳಲ್ಲಿಯೂ ವಿಸ್ತಾರಗೊಳಿಸಲಾಗುವುದು ಎಂದರು.
ನಿವೃತ್ತ ಉಪನಿರ್ದೇಶಕ ವಸಂತ ಭಂಡಾರಿ, ದೈಹಿಕ ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡಿ, ಇದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ ಎಂದರು.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಶ್ರೀರಾಮ ಹೆಗಡೆ ಮತ್ತು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ್ ತಾರಿಕೊಪ್ಪ ಕೂಡ ಪುಸ್ತಕಗಳ ಕುರಿತಂತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕಗೈದರು.
ವೇದಿಕೆಯಲ್ಲಿ ಡಯಟ್ ಶಿರಸಿ ಪ್ರಾಚಾರ್ಯ ಎಂ.ಎಸ್. ಹೆಗಡೆ, ಜಿಲ್ಲಾ ಅಕ್ಷರ ದಾಸೋಹ ನೋಡಲ್ ಅಧಿಕಾರಿ ಸದಾನಂದ ಸ್ವಾಮಿ, ಶಿರಸಿ ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ನಾರಾಯಣ ಎಚ್. ನಾಯಕ, ಜಿ.ಪ್ರೌ.ಶಾ ಶಿ ಸಂಘದ ಅಧ್ಯಕ್ಷ ಅಜಯ ನಾಯಕ, ಜಿ.ದೈ.ಶಾ ಶಿ ಸಂಘದ ನಾರಾಯಣ ನಾಯಕ, ಪ್ರಮುಖರಾದ ಚಂದ್ರಶೇಖರ ಸಿ ಎಸ್, ಆರ್ ಆರ್ ಭಟ್ ಇದ್ದರು.