ಯಲ್ಲಾಪುರ : ಅಂಕೋಲಾ ತಾಲೂಕಿನ ಶಿರೂರು ಭಾಗದಲ್ಲಿ ಸಂಭವಿಸಿದ ಈ ಗುಡ್ಡ ಕುಸಿತದಿಂದ ಗುಡ್ಡದಿಂದ ಮಣ್ಣು ರಸ್ತೆ ಮೇಲೆ ಬಿದ್ದಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ಸ್ಥಳೀಯ ಅಧಿಕಾರಿಗಳು ನಿರಂತರವಾಗಿ ತೆರವು ಕಾರ್ಯ ನಡೆಸುತ್ತಿರುವುದರಿಂದ ಹತ್ತಿರದ ಪ್ರದೇಶಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ ಮಂಗಳೂರು ಕಾರವಾರ ಯಲ್ಲಾಪುರ. ಶಿರಸಿ ರಸ್ತೆ ಮಾರ್ಗದಲ್ಲಿ ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದೇ ಎಂದು ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಎಂ ನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಹನ ಚಾಲಕರು, ಯಲ್ಲಾಪುರದಿಂದ ಮಂಗಳೂರು ಕಡೆಗೆ ಪ್ರಯಾಣಿಸುವ ವಾಹನಗಳು ಬಾಳೆಗುಳಿ ಕ್ರಾಸಿಂದ ಹೊಸಕಂಬಿ, ಹಿಲ್ಲೂರು, ಮಾದನಗೇರಿ ಕ್ರಾಸ್, ಕುಮಟಾ ಮುಖಾಂತರ ಪ್ರಯಾಣಿಸಬಹುದು. ಭಟ್ಕಳದಿಂದ ಕಾರವಾರಕ್ಕೆ ಬರುವ ವಾಹನಗಳು ಕುಮಟಾ, ಮಾದನಗೇರಿ ಕ್ರಾಸ್ ಮೂಲಕ ಹಿಲ್ಲೂರು, ಹೊಸಕಂಬಿ, ಬಾಳೆಗುಳಿ ಮುಖಾಂತರ ಕಾರವಾರಕ್ಕೆ ಸಾಗಬಹುದು.
ಶಿರಸಿ-ಕುಮಟಾ ರಸ್ತೆಯಲ್ಲಿ ದೇವಿಮನೆ ಮತ್ತು ರಾಗಿಹೋಸಳ್ಳಿ ಮಧ್ಯದಲ್ಲೂ ಗುಡ್ಡ ಕುಸಿತ ಸಂಭವಿಸಿರುವ ಕಾರಣ, ಈ ಮಾರ್ಗದಲ್ಲಿಯೂ ಸಂಚಾರ ಸ್ಥಗಿತವಾಗಿದೆ. ಮುಂದಿನ ಕೆಲವು ದಿನಗಳಲ್ಲಿಯೂ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ, ಮತ್ತಷ್ಟು ಗುಡ್ಡ ಕುಸಿಯುವ ಭೀತಿ ಇದೆ. ಆದ್ದರಿಂದ, ಸಾರ್ವಜನಿಕರು ಈ ಸಮಯದಲ್ಲಿ ಪರ್ಯಾಯ ಮಾರ್ಗಗಳನ್ನು ಅನುಸರಿಸುವುದು ಅತ್ಯಂತ ಅಗತ್ಯವಾಗಿದೆ. ಶಿರಸಿಯಿಂದ ಕುಮಟಾ, ಯಲ್ಲಾಪುರ ಹಾಗೂ ಭಟ್ಕಳ ಮಾರ್ಗವಾಗಿ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂದುವರಿಸಬಹುದು.
ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಗುಡ್ಡ ಕುಸಿತವಾಗಿದೆ. ಈ ಅವಘಡದಿಂದ ಹಲವು ವಾಹನಗಳು ಹಾಗೂ ವಾಸ್ತವ್ಯದ ಮನೆಗಳು ನದಿಯ ಪಾಲಾಗಿವೆ. ಭಾರಿ ಪ್ರಮಾಣದಲ್ಲಿ ಮಣ್ಣು ರಸ್ತೆಯ ಮೇಲೆ ಬಿದ್ದಿದ್ದು, ಸ್ಥಳೀಯ ಪ್ರಾಧಿಕಾರಗಳು ತೆರವು ಕಾರ್ಯವನ್ನು ಕೈಗೊಳ್ಳುತ್ತಿದ್ದಾರೆ. ತಾತ್ಕಾಲಿಕವಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಿದ್ದಾರೆ.