ಯಲ್ಲಾಪುರ : ಇಂದು ನಮಗೆ ಇಂಟರ್ನೆಟ್ ಜಗತ್ತಿನ ದರ್ಶನವನ್ನು ಮಾಡಿದೆ, ಅದರಲ್ಲಿಯೂ ಯುಟ್ಯೂಬ್ ಹೈ ರೆಸುಲೇಷನ್ ವಿಡಿಯೋಗಳು ಸ್ವತಃ ನಾವೇ ಆ ತಾಣಗಳಿಗೆ ಹೋಗಿ ಭೇಟಿ ಕೊಟ್ಟಿದ್ದೇವೆ ಅನ್ನುವಂತಹ ಅನುಭವವನ್ನು ನೀಡುತ್ತಿವೆ. ಯಲ್ಲಾಪುರದಲ್ಲಿಯೂ ಅಂತಹ ಒಂದು ಯೂಟ್ಯೂಬ್ ಚಾನೆಲ್ ಇತ್ತೀಚೆಗೆ ಪ್ರಾರಂಭವಾಗಿದೆ. ಯಲ್ಲಾಪುರದ ಗತವೈಭವ, ಸಂಸ್ಕೃತಿ, ಸಂಸ್ಕಾರ, ಇತಿಹಾಸವನ್ನು ಹಿರಿಯ ತಲೆಮಾರುಗಳಿಂದ ಇಂದಿನ ತಲೆಮಾರಿಗೆ ತಿಳಿಸುವ ಕಾರ್ಯ ಈ ಯುಟ್ಯೂಬ್ ಚಾನೆಲ್ ನಿಂದ ಆಗುತ್ತಿದೆ. ಅದೇ, 'ನಮಸ್ತೆ ಯಲ್ಲಾಪುರ' ಹೆಸರಿನ 'ಸಂಜೆ ಸೂರ್ಯ' ಯೂಟ್ಯೂಬ್ ಚಾನಲ್.
ಕಳೆದ 18 ವರ್ಷದಿಂದ ಪತ್ರಿಕಾ ಕ್ಷೇತ್ರದಲ್ಲಿ ಗುರುತಿಸಿಕೊಂಡು, ಅಂದು ಯಲ್ಲಾಪುರದ ವರದಿಗಾರರೊಬ್ಬರಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಸುಂದರವಾಗಿ ಲೇಖನ, ವರದಿ ಬರೆಯುವ ತಾಲೂಕಿನ ಮಾಗೋಡ ನಿವಾಸಿ ಸತೀಶ ಮಾಗೋಡ ಯೂಟ್ಯೂಬ್ ಚಾನಲ್ ಒಂದನ್ನು ಪ್ರಾರಂಭ ಮಾಡಿದ್ದಾರೆ. 'ನಮಸ್ತೆ ಯಲ್ಲಾಪುರ' ಹೆಸರಿನ 'ಸಂಜೆ ಸೂರ್ಯ' ಯೂಟ್ಯೂಬ್ ಚಾನಲ್ ಯಲ್ಲಾಪುರದ ಹಲವಾರು ಪ್ರಕೃತಿ ಸೌಂದರ್ಯಗಳನ್ನು ಬಣ್ಣಿಸಿ ಸುದ್ದಿ ಮಾಡಿದೆ.
ವಿಶ್ರಾಂತ ಪ್ರಾಂಶುಪಾಲ ಶ್ರೀರಂಗ ಕಟ್ಟಿ ಅವರನ್ನು ಸಂದರ್ಶಿಸಿ "ನಮ್ಮೂರೆನಮಗೆ ಚಂದ" 50 ವರ್ಷದ ಹಿಂದಿನ ಯಲ್ಲಾಪುರವನ್ನು ಕಣ್ಣಿಗೆ ಕಟ್ಟುವಂತೆ ಚಾನೆಲ್ ಬಿತ್ತರಿಸಿದೆ. ಖ್ಯಾತ ವೈದ್ಯರಾದ ಡಾ. ಸೌಮ್ಯ ಕೆ.ವಿ ಅವರ ಸಂದರ್ಶನದಲ್ಲಿ "ಈ ಮಕ್ಕಳೇಕೆ ಹೀಗಾಡ್ತವೆ" ಮಕ್ಕಳ ಜಾಗೃತಿ ಬಗ್ಗೆ ವರದಿ ಮಾಡಲಾಗಿದೆ. ಇನ್ನೂ "ಮೈ ಮರೆತರೇ ಸಾವು ಖಚಿತ" ಪ್ರವಾಸಿಗರಿಗಾಗಿ ಜಾಗೃತಿ, ಮಾಗೋಡ ಫಾಲ್ಸ್ ಸೌಂದರ್ಯದ ಕುರಿತು ಯುಟ್ಯೂಬ್ ಚಾನಲ್ ಬಿತ್ತರಿಸಿದೆ.
ಯಾವುದೇ ಹಣ ಮಾಡುವ ಉದ್ದೇಶ, ಜಾಹೀರಾತು ಪ್ರಕಟಿಸುವ ಉದ್ದೇಶವಿಲ್ಲದೆ, ತಮ್ಮನ್ನು ತಾವು ಪ್ರದರ್ಶಿಸಿಕೊಳ್ಳದೇ(ಮೂಗಿನ ಹೊಳ್ಳೆ ತೋರಿಸದೇ), ಹೊಗಳಿಕೊಂಡು(ತಮ್ಮ ಪರವಾಗಿಯೇ ಬರೆದುಕೊಂಡು) ಚಾನೆಲ್ ಬಗ್ಗೆ ಬಣ್ಣಿಸಿಕೊಂಡು ಪ್ರದರ್ಶಿಸಿಕೊಳ್ಳದೇ ಸತೀಶ್ ಮಾಗೋಡ ಎಲೆ ಮರಿಯ ಕಾಯಾಗಿ ಕೆಲಸ ಮಾಡುತ್ತಿದ್ದಾರೆ. ಚಾನಲಿನ ಪ್ರತಿಯೊಂದು ಎಪಿಸೋಡ್ ನೋಡಿದಾಗ ನನ್ನ ಹಿಂದಿನ ಮಿತ್ರ ಸತೀಶ ಅವರನ್ನು ಸಂಪರ್ಕಿಸಿ ಯಲ್ಲಾಪುರ ನ್ಯೂಸ್ ಗೆ ವರದಿ ಮಾಡುವ ಎಂದು ಅನಿಸಿತ್ತು. ಬಹಳಷ್ಟು ದುಂಬಾಲು ಬಿದ್ದ ನಂತರ ಕೆಲವೇ ಕೆಲವು ಮಾತುಗಳನ್ನು ಆಡಲು ಒಪ್ಪಿಕೊಂಡರು ಅಷ್ಟೇ. ತನ್ನ ಫೋಟೋ ನೀಡಲು ಒಪ್ಪಿಕೊಳ್ಳಲಿಲ್ಲ.
ಸತೀಶ ಮಾಗೋಡ ಮಾತಿನಲ್ಲಿ ' ನಮಸ್ತೆ ಯಲ್ಲಾಪುರ'
ಅಲ್ಲೆಲ್ಲೋ ಪರ ಊರಿನಲ್ಲಿ ಕುಳಿತವರಿಗೆ ನಮ್ಮೂರಿನ ಕೊಂಡಿ ಕಳಚೋದಿಲ್ಲ ನೋಡಿ. ಮೆಜೆಸ್ಟಿಕ್ ಹತ್ರ ಸುಯ್ಯ್ ಅಂತ ನಮ್ಮೂರ ಪಾಸಿಂಗ್ ಇರೋ ಕಾರ್ ಹಾದುಹೋದ್ರೆ ಒಂದ್ ನಿಮಿಷ ಅತ್ತಲೇ ನೋಡ್ತೀರ್ತೀವಿ. ಯಾವುದಾದ್ರೂ ಶಾಪಿಂಗ್ ಮಾಲ್ ನಲ್ಲಿ ಜೋನಿ ಬೆಲ್ಲದ ಡಬ್ಬಿ ಕಂಡ್ರೆ ರೇಟ್ ಎಷ್ಟು ಅಂತಾನೂ ನೋಡದೆ ಖರೀದಿ ಮಾಡಿಬಿಡ್ತೀವಿ. ಯಲ್ಲಾಪುರ ಜಾತ್ರೆ ಅಂದ್ರೆ ಎಲ್ಲಾದ್ರೂ ಓಡಿ ಬರ್ತೀವಿ.
ಯಾಕೆ? ದೇಹ ಎಲ್ಲೆಲ್ಲೋ ಇದ್ರೂ ಮನಸ್ಸು ಮಾತ್ರ ಇಲ್ಲೇ ಇದೆಯಲ್ಲ! ಯಲ್ಲಾಪುರ! ಇದು ಎಲ್ಲರಪುರ!
ನಮ್ಮೂರ ಸೆಳೆತವೇ ಅಂಥದ್ದು ನೋಡಿ. ಬೆಂಗಳೂರು, ಮೈಸೂರು ಅಥವಾ ಇನ್ನೆಲ್ಲೇ ಇದ್ರೂ ಅಲ್ಲೇ ಒಂದು ಮಿನಿ ಯಲ್ಲಾಪುರವನ್ನು ಸೃಷ್ಟಿಸಿಕೊಂಡ ಬಂಧುಗಳಿಗೆ ನಮ್ಮ ಪ್ರಯತ್ನದ ಅರ್ಪಣೆ.
ಈಗ 25 ವರ್ಷಗಳ ಹಿಂದೆ ನಮ್ಮ ಯಲ್ಲಾಪುರ ಹೇಗಿತ್ತು? ನಮ್ಮ ತಲೆಮಾರಿನ ಮಂದಿಗೆ ಗೊತ್ತಿದೆ. 50 ವರ್ಷಗಳ ಹಿಂದೆ? ನನಗೆ ಗೊತ್ತಿಲ್ಲದಿದ್ದರೂ ನನ್ನ ತಂದೆಗೆ ಗೊತ್ತು. 75 ವರ್ಷಗಳ ಹಿಂದೆ? ನನಗೂ, ತಂದೆಗೂ ತಿಳಿಯದ ವಿಷಯ ನನ್ನ ಅಜ್ಜನಿಗೆ ಗೊತ್ತು! ಆ ವಿಚಾರಗಳು ನಮ್ಮ ಮುಂದಿನ ತಲೆಮಾರಿಗೂ ತಿಳಿಯಲಿ ಎಂಬುದೇ ನಮ್ಮ ಉದ್ದೇಶ. ಆ ಪ್ರಯತ್ನವೇ ' ನಮಸ್ತೇ ಯಲ್ಲಾಪುರ '
ಇದರೊಂದಿಗೆ, ಹೊಸ ವಿಚಾರಗಳನ್ನೂ, ಎಲ್ಲಿಯೂ ' ಅಸಡ್ಡಾಳು ' ಎನ್ನಿಸದ, ನಾನ್ಸೆನ್ಸ್ ಎಂಬ ಭಾವನೆ ಬಾರದ, ಉಪಯುಕ್ತ ವಿಚಾರಗಳನ್ನೂ ಸಂಪನ್ಮೂಲ ವ್ಯಕ್ತಿಗಳ ಸಹಕಾರದೊಂದಿಗೆ ನಿಮ್ಮೆದುರು ಇಡುತ್ತಿದ್ದೆವೆ.
ನನ್ನ ವೃತ್ತಿ ಕೃಷಿ. ಪ್ರವೃತ್ತಿ ಪತ್ರಿಕೋದ್ಯಮ. ರಾಜ್ಯದ ಬಹುತೇಕ ಪತ್ರಿಕೆಗಳಲ್ಲಿ ಲೇಖನ, ನುಡಿಚಿತ್ರಗಳು ಪ್ರಕಟವಾಗಿವೆ. ಕೆಲ ಕಾಲ ವರದಿಗಾರನಾಗಿ ಸಂಯುಕ್ತ ಕರ್ನಾಟಕ, ಧ್ಯೆಯನಿಸ್ಟ ಪತ್ರಕರ್ತ, ಸಂಜೆ ದರ್ಪಣ ಪತ್ರಿಕೆಗಳಲ್ಲಿ, ವಿಜಯವಾಣಿ ಪತ್ರಿಕೆಯಲ್ಲೂ ಕೆಲಸ ಮಾಡಿದ್ದೇನೆ.
ಸದ್ಯ, ಹಾಸನ ಹಾಗೂ ಚಿಕ್ಕಮಗಳೂರಿನ ಜನಮಿತ್ರ ದಿನಪತ್ರಿಕೆಯಲ್ಲಿ ವಿಶೇಷ ಪ್ರತಿನಿಧಿಯಾಗಿದ್ದೆನೆ. ಸೈಬರ್ ಕ್ರೈಂ ಗೆ ಸಂಬಂಧಿಸಿ 100 ಕ್ಕೂ ಹೆಚ್ಚು ಲೇಖನಗಳ ಮೂಲಕ ಜಾಗೃತಿ ಮೂಡಿಸಿದ ತೃಪ್ತಿಯಿದೆ. ಗದಗ ಜಿಲ್ಲೆಯ ವಿಜಯಸಾಕ್ಷಿ ದಿನಪತ್ರಿಕೆಯಲ್ಲಿ ಉಪ ಸಂಪಾದಕನಾಗಿ ನನ್ನ ಮನೆ ಮಾಗೋಡದಿಂದಲೇ ಕೆಲಸ ಮಾಡುತ್ತಿದ್ದೆನೆ. ಪರಿಸರ, ಜೀವವೈವಿಧ್ಯ, ವಿಜ್ಞಾನ ನನ್ನ ಆಸಕ್ತಿಯ ವಿಷಯ.
ಯಲ್ಲಾಪುರ ತಾಲೂಕಿನ ಬಗ್ಗೆ, ಇತಿಹಾಸ, ಬೆಳವಣಿಗೆಯ ಬಗ್ಗೆ ಒಂದಿಷ್ಟು ಮಾಹಿತಿ ಕ್ರೋಡೀಕರಿಸಿ ಮುಂದಿನ ಪೀಳಿಗೆಗೂ ಪರಿಚಯಿಸಬೇಕು ಅನ್ನೋದು ನಮ್ಮ ಚಾನೆಲ್ ಉದ್ದೇಶ ಎಂದು ಹೇಳುತ್ತಾರೆ.
ಫೋಟೊಗ್ರಾಫರ್, ಫೇಜಿನೇಟರ್, ಕೃಷಿಕ ಸತೀಶ ಮಾಗೋಡ
ಉತ್ತಮ ಶುದ್ಧ ಬರಹದ ಪತ್ರಕರ್ತರಾಗಿರುವ ಸತೀಶ ಮಾಗೋಡ್ ಒಳ್ಳೆಯ ಫೋಟೋಗ್ರಾಫರ್ ಕೂಡ ಹೌದು, ಯಾವುದೇ ಚಿತ್ರೀಕರಣವನ್ನು ಮಾಡುವಾಗ ಕ್ಯಾಮರವನ್ನು ಸ್ವಲ್ಪವೂ ಅಲುಗಾಡಿಸಿದೆ(ಗಿರಿಗಿಟ್ಟಿ ಕ್ಯಾಮೇರಾಮನ್ ಆಗದೇ) ಸ್ಟೆಬಿಲೈಜ್ ಆಗಿ ಚಿತ್ರೀಕರಣ ಮಾಡಿ ವೀಕ್ಷಕರಿಗೆ ಸ್ಪಷ್ಟ ವಿಡಿಯೋವನ್ನು ರವಾನಿಸುತ್ತಾರೆ. ಮುದ್ರಣ ಮಾಧ್ಯಮದ ಒಳ್ಳೆಯ ಪೇಜಿನೇಟರ್ ಕೂಡ ಹೌದು. ವಿಡಿಯೋ ಎಡಿಟರ್ ಕೂಡ, ಇವರು ಚಿತ್ರಿಕರಿಸಿರುವ ಪ್ರಸ್ತುತ ಪಡಿಸಿರುವ, ಯುಟ್ಯೂಬ್ ಚಾನಲ್ ವೈಸ್ ಓವರ್ ಬೇರೆಯವರದಾಗಿದ್ದರೂ ಸ್ಕ್ರಿಪ್ಟ್ ಸತೀಶ ಅವರದೇ ಆಗಿರುತ್ತದೆ. ವಿಡಿಯೋವನ್ನು ಇವರೇ ಎಡಿಟ್ ಮಾಡುತ್ತಾರೆ. ಹಾಗೆಯೇ ಹೈ ರೆಸುಲೇಷನ್ ವಿಡಿಯೋಗಳನ್ನು ಯೂಟ್ಯೂಬ್ ಗೆ ಅಪ್ಲೋಡ್ ಮಾಡುತ್ತಾರೆ.
ಬಹುಮುಖ ಪ್ರತಿಭೆಯ ಸತೀಶ್ ಮಾಗೋಡ ಓರ್ವ ವೈಜ್ಞಾನಿಕ ತಳಹದಿಯ ಮೇಲೆ ಕೃಷಿಕ, ತಮ್ಮ ಗದ್ದೆಯಲ್ಲಿ ತರಕಾರಿ ಬೆಳೆಯುವ ಪ್ರಗತಿಪರ ರೈತ, ಕಡಿಮೆ ನೀರು, ಕಡಿಮೆ ಸ್ಥಳ, ಜೈವಿಕ ಗೊಬ್ಬರ ಬಳಸಿ ಬೆಳೆಸಿರುವ ಇವರ ತರಕಾರಿಗೆ ಹಲವಾರು ಕಡೆಗಳಲ್ಲಿ ಬೇಡಿಕೆ ಇದೆ. ನಿರ್ದಿಷ್ಟಪಡಿಸಿದ ಗ್ರಾಹಕರಿಕಷ್ಟೇ ಇವರು ತಮ್ಮ ತರಕಾರಿಗಳನ್ನು ಪೂರೈಸುತ್ತಾರೆ.
ಯಲ್ಲಾಪುರವನ್ನು ಜಗತ್ತಿಗೆ ಪರಿಚಯಿಸುವ ಯಲ್ಲಾಪುರದ ಇತಿಹಾಸವನ್ನು ಇಂದಿನ ಪೀಳಿಗೆ ತಲುಪಿಸುವ ಸತೀಶ್ ಮಾಗೋಡು ಅವರ ಪ್ರಯತ್ನ 'ನಮಸ್ತೆ ಯಲ್ಲಾಪುರ' 'ಸಂಜೆ ಸೂರ್ಯ' ಯೂಟ್ಯೂಬ್ ಚಾನಲ್ ಯಶಸ್ವಿಯಾಗಲಿ ಎಂದು ಯಲ್ಲಾಪುರ ನ್ಯೂಸ್ ಹಾರೈಸುತ್ತದೆ.