Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Tuesday, 16 July 2024

ಯಲ್ಲಾಪುರ, ಅರಣ್ಯದಲ್ಲಿ ಹೆಚ್ಚು ಕಾಣಸಿಗುವ ಮಲಬಾರ್ ಟ್ರೀ ಟೋಡ್ ಕಪ್ಪೆಗಳು

ಯಲ್ಲಾಪುರ : ಸಾಮಾನ್ಯವಾಗಿ ಕಪ್ಪೆಗಳಲ್ಲಿ ಕಪ್ಪೆ ಮತ್ತು ನೆಲಗಪ್ಪೆ ಎಂಬ ಎರಡು ಮುಖ್ಯ ವರ್ಗೀಕರಣವಿರುವಾಗ, ಮೇಲ್ನೋಟಕ್ಕೆ ಅವು ಒಂದೇ ರೀತಿಯಂತೆ ಕಾಣಬಹುದು. ಕಪ್ಪೆಗಳು ಮೃದು ಚರ್ಮ ಹೊಂದಿದ್ದು, ಆಕರ್ಷಕ ನೋಟವನ್ನು ಕೊಡುತ್ತವೆ. ನೆಲಗಪ್ಪೆ ಒಂದು ಒರಟಾದ ಚರ್ಮ ಹೊಂದಿದ್ದು, ನೆಲದ ಮೇಲೆ ಹೆಚ್ಚು ಕಾಣಸಿಗುತ್ತವೆ. 
   ಕಪ್ಪೆಗಳನ್ನು ಅವಾಸವನ್ನು  ಜಲವಾಸಿ, ಅರೆಜಲವಾಸಿ, ವೃಕ್ಷವಾಸಿ, ನೆಲವಾಸಿ, ಹುದುಗು ವಾಸಿ ಹೀಗೆ ಐದು ಪ್ರಕಾರಗಳಾಗಿ ವಿಂಗಡಿಸಲಾಗಿದೆ. ಈ ವಿಭಜನೆಗೆ ಅನುಗುಣವಾಗಿ, ಕಪ್ಪೆಗಳನ್ನು ಪೊದೆಕಪ್ಪೆ, ಮರಗಪ್ಪೆ, ತೇಲುವ ಕಪ್ಪೆ, ಕುಣಿಯುವ ಕಪ್ಪೆ, ಇರುಳು ಕಪ್ಪೆ, ಹುದುಗು ಕಪ್ಪೆ ಇತ್ಯಾದಿ ಹೆಸರಿನಿಂದ ಗುರುತಿಸಲಾಗುತ್ತದೆ.
   ಪರಿಸರ ಸ್ನೇಹಿ ಕಪ್ಪೆಗಳ ಬಗ್ಗೆ ತಿಳಿದುಕೊಂಡಿರುವ ಬಾರೆ ಗ್ರಾಮದ ಗೋಪಾಲಕೃಷ್ಣ ಹೆಗಡೆ ಯಲ್ಲಾಪುರ, ಅರಣ್ಯದಲ್ಲಿ ಹೆಚ್ಚು ಕಾಣಸಿಗುವ ಮಲಬಾರ್ ಟ್ರೀ ಟೋಡ್ ಕಪ್ಪೆಗಳಬಗ್ಗೆ ಕೆಲವೊಂದಿಷ್ಟು‌ ಮಾಹಿತಿ‌ ನೀಡಿದ್ದಾರೆ.
     ಮಲಬಾರ್ ಟ್ರೀ ಟೋಡ್ (Pedostibes tuberculosus) ಎಂಬ ಮರವಾಸಿ ಕಪ್ಪೆಯನ್ನು 1876ರಲ್ಲಿ ಪತ್ತೆಹಚ್ಚಲಾಯಿತು. 2004ರಲ್ಲಿ ಡಾ. ಕೆ ವಿ ಗುರುರಾಜ್ ಅವರು ಅದನ್ನು ಮತ್ತೊಮ್ಮೆ ಗುರುತಿಸಿದರು. ಅಂದಿನಿಂದ, ಗುರುರಾಜ್ ಅವರು "ಮ್ಯಾಪಿಂಗ್ ಮಲಬಾರ್ ಟ್ರೀ ಟೋಡ್" ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು, ಕಪ್ಪೆಗಳ ಆವಾಸ ಸ್ಥಳಗಳ ಬಗ್ಗೆ ಅಧ್ಯಯನ ನಡೆಸಿದರು. ಈ ಅಧ್ಯಯನದಲ್ಲಿ, "ಫ್ರಾಗ್ ವಾಚ್" ಎಂಬ ಆಪ್‌ ಅನ್ನು ಬಿಡುಗಡೆ ಮಾಡಲಾಗಿದ್ದು, ಜನರು ಕಪ್ಪೆಗಳ ಫೋಟೋಗಳನ್ನು ಆ್ಯಪ್ನಲ್ಲಿ ಹಾಕಿ ಮಾಹಿತಿಯನ್ನು ಶೇರ್ ಮಾಡಬಹುದು. ಈ ಪ್ರಯತ್ನದ ಫಲವಾಗಿ, ಮಲಬಾರ್ ಟ್ರೀ ಟೋಡ್ ಕರ್ನಾಟಕ, ಮಹಾರಾಷ್ಟ್ರ, ಕೇರಳದ ವಿವಿಧ ಪ್ರದೇಶಗಳಲ್ಲಿ ಕಂಡುಬಂದಿತು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಇಡಗುಂದಿ, ತೆಲಂಗಾರ್, ವಜ್ರಳ್ಳಿ, ಬಾಸಲ್ ಮುಂತಾದ ಸ್ಥಳಗಳಲ್ಲಿ ಈ ಕಪ್ಪೆಗಳು ಹೆಚ್ಚು ಕಾಣಸಿಗುತ್ತವೆ.
   ಜೂನ್ ತಿಂಗಳಿಂದ ಆಗಸ್ಟ್ ಅವಧಿಯಲ್ಲಿ ಈ ಮರವಾಸಿ ಕಪ್ಪೆಗಳು ತಮ್ಮ ವಂಶಾಭಿವೃದ್ಧಿಗಾಗಿ ಮರದಿಂದ ಕೆಳಕ್ಕೆ ಬರುತ್ತವೆ. ಮಳೆಗಾಲದ ಪ್ರಾರಂಭದ ಸಮಯದಲ್ಲಿ, ಸಣ್ಣ ತೊರೆಗಳಲ್ಲಿ ಮತ್ತು ಹಳ್ಳಗಳ ಅಂಚುಗಳಲ್ಲಿ ಇರುವ ವೃಕ್ಷಗಳಲ್ಲಿ ಇವುಗಳು ಕಂಡುಬರುತ್ತವೆ. ಕಪ್ಪೆಗಳ ಕೂಗಿನಿಂದ ಆವಾಸಸ್ಥಾನವನ್ನು ಗುರುತಿಸಲು ಸಾಧ್ಯ.
   ಇಂಡಿಯಾ ಬಯೋ ಡೈವರ್ಸಿಟಿ ಪೊರ್ಟಲ್  ಸೇರಿದಂತೆ ಹಲವಾರು "ನಾಗರೀಕ ವಿಜ್ಞಾನ ವೇದಿಕೆಗಳು" ಕಪ್ಪೆಗಳ ಸಂರಕ್ಷಣಾ ಕಾರ್ಯದಲ್ಲಿ ನಿರಂತರ ಶ್ರಮಿಸುತ್ತಿವೆ. ಈ ವೇದಿಕೆ, ಭಾರತೀಯ ಜೀವ ವೈವಿಧ್ಯದ ಮಾಹಿತಿಯನ್ನು ಸ್ಥಳೀಯ ಆಸಕ್ತರಿಂದ ಸಂಗ್ರಹಿಸಿ, ಪ್ರಾದೇಶಿಕವಾಗಿ ಸಂರಕ್ಷಣೆಗಾಗಿ ಉಪಯೋಗಿಸುತ್ತದೆ. 
    ಹೀಗೆ, ಹೆಚ್ಚು ಕಪ್ಪೆಗಳ ಅಧ್ಯಯನ ನಡೆಯಲಿ, ಜನಸಾಮಾನ್ಯರಿಗೂ ಕಪ್ಪೆಗಳ ಮಹತ್ವದ ಬಗ್ಗೆ ಅರಿವು ಮೂಡಲಿ ಎಂದು ಪರಮೇಶ್ವರ ಹೆಗಡೆ ಹೇಳುತ್ತಾರೆ.