ಯಲ್ಲಾಪುರ: ವಜ್ರಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಜುಲೈ 10ರಂದು ನಡೆದ ಗ್ರಾಮ ಸಭೆಯಲ್ಲಿ ಬಸ್ ನಿಲ್ದಾಣ ಪಕ್ಕದಲ್ಲಿ ವೀರ ಸಾವರ್ಕರ್ ಅವರ ಪ್ರತಿಮೆ ಸ್ಥಾಪನೆ ಕುರಿತು ಚರ್ಚೆ ನಡೆಯಿತು. ಈ ಚರ್ಚೆಯಲ್ಲಿ ಕಾಂಗ್ರೆಸ್ ಬೆಂಬಲಿತ ಆಡಳಿತ ಪಕ್ಷ ಹಾಗೂ ಬಿಜೆಪಿ ಬೆಂಬಲಿತ ಸಾರ್ವಜನಿಕರ ಮಧ್ಯೆ ಮಾತಿನ ಚಕಮಕಿ ನಡೆದು, ವಜ್ರಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗಂಗಾ ಕೋಮಾರ್ ಸಾರ್ವಜನಿಕರನ್ನು ಹೊರದಬ್ಬಿ ಬಾಗಿಲು ಹಾಕುವುದಾಗಿ ಹೇಳಿರುವ ಘಟನೆ ನಡೆದಿದೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ತಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಈ ಕುರಿತು ನುಡಿಜೇನು ಪ್ರತಿನಿಧಿಯೊಂದಿಗೆ ಮಾತನಾಡಿದ ವಜ್ರಳ್ಳಿ ವೀರ ಸಾವರ್ಕರ್ ಪ್ರತಿಮೆ ಅನಾವರಣ ಸಮಿತಿಯ ಸಂಚಾಲಕ ವಿ ಎನ್ ಭಟ್ಟ ನೆಡಗಿಮನೆ, ಗ್ರಾಮ ಸಭೆಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಂದ ಜನರು ಆಗಮಿಸಿದ್ದರು ಎಂದರು. ಯಲ್ಲಾಪುರ ಕೃಷಿ ಇಲಾಖೆ ಅಧಿಕಾರಿಗಳಾದ ನಾಗರಾಜ ನಾಯ್ಕ ಮತ್ತು ವಜ್ರಳ್ಳಿ ಗ್ರಾಪಂ ಅಧ್ಯಕ್ಷ ಭಗೀರಥ ನಾಯ್ಕ ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ, ಸಮಿತಿಯವರು ಎಂಟು ತಿಂಗಳ ಹಿಂದೆ ವಜ್ರಳ್ಳಿಯಲ್ಲಿ ವೀರ ಸಾವರ್ಕರ್ ಅವರ ಪ್ರತಿಮೆ ಸ್ಥಾಪನೆಗೆ ಪಂಚಾಯತ್ ಪರವಾನಿಗೆಗಾಗಿ ಅರ್ಜಿ ಕೊಟ್ಟಿದ್ದರು ಆದರೆ ಇದುವರೆಗೆ ಪರವಾನಿಗೆ ನೀಡಿಲ್ಲ.
ಗ್ರಾಮ ಪಂಚಾಯಿತಿ ಸಭೆಯಲ್ಲಿ ಸಾವರ್ಕರ್ ಸಮಿತಿಯವರು ಮತ್ತು ಸಾರ್ವಜನಿಕರು ಪರವಾನಿಗೆ ನೀಡಲು ಒತ್ತಾಯಿಸಿದರು. ಗ್ರಾಪಂ ಅಧ್ಯಕ್ಷರು ಮತ್ತು ನೋಡಲ್ ಅಧಿಕಾರಿಗಳು, ತೀರ್ಮಾನಿಸಲು ಗ್ರಾಮ ಸಭೆಗೆ ಅಧಿಕಾರವಿಲ್ಲ ಎಂದರು.
ಗ್ರಾಮ ಸಭೆಯ ಅಧಿಕಾರ ಹಾಗೂ ನಿರ್ಣಯವನ್ನು ಗಾಳಿಗೆ ತೂರಿ ರಾಜಕೀಯ ಕಾರಣಕ್ಕಾಗಿ ಸಾವರ್ಕರ್ ಪ್ರತಿಮೆ ಸ್ಥಾಪಿಸಲು ಪರವಾನಿಗೆ ನೀಡುತ್ತಿಲ್ಲ ಎಂದು ಬಿಜೆಪಿ ಪರ ಜನ ವಾದಿಸಿದರು. ಕಾನೂನು ಪ್ರಕಾರ ಪರವಾನಿಗೆ ಪಡೆದು ಪ್ರತಿಮೆ ಸ್ಥಾಪನೆ ನಡೆಸುತ್ತೇವೆ, ಶಾಸಕರ ಅಣತಿಯಂತೆ ಇಲ್ಲಿಯ ಪಂಚಾಯತಿ ನಡೆದುಕೊಳ್ಳುತ್ತಿದೆ. ದೇಶಭಕ್ತನ ಪ್ರತಿಮೆ ಸ್ಥಾಪಿಸಿದರೆ ಶಾಸಕರಿಗೆ ಏನು ಹಾನಿಯಾಗುತ್ತದೆ ತಿಳಿಯುತ್ತಿಲ್ಲ ಎಂದು ವಿ ಎನ್ ಭಟ್ಟ ಹೇಳಿದರು.