ಯಲ್ಲಾಪುರ: ಅರಬೈಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಡುಗುಂದಿ ಕೆಳಾಸೆಯ ಮೇಲಿನಮನೆ ಗ್ರಾಮದಲ್ಲಿ 220 ವೊಲ್ಟ್ ವಿದ್ಯುತ್ ತಂತಿಯೊಂದು ಭೂಮಿಯಿಂದ ಕೆಲವೇ ಅಡಿ ಅಂತರದಲ್ಲಿ ಜೋತು ಬಿದ್ದಿದ್ದು, ಅಲ್ಲಿಯ ಸುಮಾರು 50ಕ್ಕೂ ಹೆಚ್ಚು ಜನರಿಗೆ ಅಪಾಯವನ್ನುಂಟುಮಾಡಿದೆ.
ಈ ಭಾಗದಲ್ಲಿ ಎಂಟರಿಂದ ಹತ್ತು ಕುಟುಂಬಗಳು ವಾಸವಾಗಿದ್ದು, 40 ರಿಂದ 50 ಜನರು ವಾಸಿಸುತ್ತಿದ್ದಾರೆ. ಈ ಜನರಲ್ಲಿ ಹತ್ತಕ್ಕೂ ಹೆಚ್ಚು ಜನ ಶಾಲೆಗಳಿಗೆ ಹೋಗುವ ಮಕ್ಕಳಿದ್ದಾರೆ. ಕಳೆದ ಒಂದು ವರ್ಷದಿಂದ ಹೊಲ ಹಾಗೂ ತೋಟದ ಮಧ್ಯದಲ್ಲಿ ಹಾದುಹೋಗುತ್ತಿರುವ ಈ 220 ವೊಲ್ಟ್ ಮನೆ ಪೂರೈಕೆಯ ತೆರೆದ ತಂತಿಗಳು ಭೂಮಿಯಿಂದ ನಾಲ್ಕು ಐದು ಅಡಿ ಅಂತರದಲ್ಲಿ ಸಾರ್ವಜನಿಕರಿಗೆ ಅಪಾಯಕಾರಿಯಾಗಿ ಜೀತು ಬಿದ್ದಿದ್ದು, ತೋಟ ಗದ್ದೆಯಲ್ಲಿ ಮೇಯಲು ತೆರಳಿರುವ ಜಾನುವಾರುಗಳ ಜೀವಕ್ಕೂ ಕುತ್ತು ತರುವಂತಿದೆ.
ಕಳೆದ ಒಂದು ವರ್ಷದ ಹಿಂದೆ ಹೊಸದಾಗಿ ಕೆಳಸೆಯ ಎರಡು ಭಾಗಗಳಿಗೆ ಹೊಸದಾಗಿ ಕಂಬಗಳನ್ನು ಸ್ಥಾಪಿಸಿ ತಂತಿಯನ್ನು ಎಳೆಯಲಾಗಿದೆ. ಅದರಲ್ಲಿಮೇಲಿನಮನೆ ಭಾಗಗ ಕೂಡ ಒಂದು. ಕೆಳಾಸೆ ಕಿರಿಯ ಪ್ರಾಥಮಿಕ ಶಾಲೆಯ ಪಕ್ಕದಲ್ಲಿ ಟ್ರಾನ್ಸ್ಫಾರ್ಮರ್ ಜೋಡಿಸುವುದು ಬಾಕಿಯಿದೆ. ಆಗ ಹೊಸ ವಿದ್ಯುತ್ ಮಾರ್ಗಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದರೆ ಬಹುತೇಕ ಸಮಸ್ಯೆ ಬಗೆಹರಿಯುತ್ತದೆ. ಕಳೆದ ಒಂದು ವರ್ಷದಿಂದ ಸಂಪರ್ಕಕ್ಕಾಗಿ ಕಾದು ಕುಳಿತಿರುವ ಕಂಬ ಹಾಗೂ ತಂತಿಗಳು ಹಾಗೆಯೇ ಹೆಸ್ಕಾಂ ನಿಷ್ಕ್ರಿಯತೆಗೆ ಸಾಕ್ಷಿಯಾಗಿ ನಿಂತಿವೆ. ಮಳೆಗಾಲದ ಈ ಸಂದರ್ಭದಲ್ಲಿ ಜೋತು ಬಿದ್ದಿರುವ ತಂತಿ ಅಪಾಯಕಾರಿಯಾಗಿದ್ದು ಹೆಸ್ಕಾಂನವರು ಕೂಡಲೇ ಹೊಸ ಲೈನಿಗೆ ವಿದ್ಯುತ್ ಸಂಪರ್ಕ ನೀಡಿ ಅಪಾಯವನ್ನು ತಪ್ಪಿಸಬೇಕೆಂದು ಸ್ಥಳೀಯ ಮೇಲಿನಮನೆ ನಿವಾಸಿ ಶ್ರೀನಾಥ್ ಕೃಷ್ಣ ಸಿದ್ದಿ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.