ಯಲ್ಲಾಪುರ : ಜುಲೈ 16 ರಂದು ನಡೆದ ಮಾವಿನಮನೆ ಗ್ರಾಮ ಪಂಚಾಯತದ ತುರ್ತು ಸಭೆಯಲ್ಲಿ, ಅತಿಯಾದ ಮಳೆಯಿಂದಾಗಿ ಅಪಾಯಕಾರಿ ಪರಿಸ್ಥಿತಿಯಲ್ಲಿರುವ ನಾಲ್ಕು ಕುಟುಂಬಗಳಿಗೆ ತಾತ್ಕಾಲಿಕ ಸ್ಥಳಾಂತರದ ನಿರ್ಣಯ ಕೈಗೊಳ್ಳಲಾಯಿತು.
ಮಾವನಮನೆ ಗ್ರಾಪಂ ಅಧ್ಯಕ್ಷ ಸುಬ್ಬಣ್ಣ ಕುಂಟೇಗಾಳಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ತಾಲೂಕಿನ ಜೋಗಾಳಕೇರಿ-ಅಲ್ಲೆಕೊಪ್ಪ ಗ್ರಾಮದಲ್ಲಿ ವಾಸಿಸುವ ಈ ಕುಟುಂಬಗಳ ಮನೆಗಳ ಕೆಳಭಾಗದಲ್ಲಿ ಹರಿಯುವ ಹಳ್ಳವು ಅತೀಯಾದ ಮಳೆಯಿಂದಾಗಿ ತುಂಬಿ ಹರಿಯುತ್ತಿದೆ. ಹಳ್ಳದ ದಡ ಕುಸಿಯುವ ಸಾಧ್ಯತೆ ಇರುವುದರಿಂದ, ಈ ಕುಟುಂಬಗಳಿಗೆ ತಕ್ಷಣದ ಸುರಕ್ಷತೆಯನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ಚರ್ಚೆಯ ನಂತರ, ಮಳೆಗಾಲ ಮುಗಿಯುವವರೆಗೆ ಈ ಕುಟುಂಬಗಳಿಗೆ ಮಲವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪಕ್ಕದಲ್ಲಿರುವ ಖಾಲಿ ಕಟ್ಟಡದಲ್ಲಿ ವಸತಿ ಕಲ್ಪಿಸಲು ಠರಾವು ನಿರ್ಣಯ ಮಾಡಲಾಯಿತು.
ಈ ನಿರ್ಧಾರವನ್ನು ತಂಗು ವೆಂಕಣ್ಣ ಕುಣಬಿ, ಗಣಪತಿ ತಿಮ್ಮಣ್ಣ ಕುಣಬಿ, ಗಣಪತಿ ನೆಮ್ಮ ಕುಣಬಿ ಮತ್ತು ನೆಮ್ಮಾ ಗಣೇಶ ಕುಣಬಿ ಎಂಬ ನಾಲ್ಕು ಕುಟುಂಬಗಳಿಗೆ ಸೂಚನೆ ನೀಡಿ ಒಪ್ಪಿಸಲಾಯಿತು.
ಪಂಚಾಯತಿಯ ತುರ್ತು ಕ್ರಮಕ್ಕೆ ಸ್ಥಳೀಯರು ಸ್ವಾಗತ ಕೋರಿದ್ದಾರೆ. ಮಳೆಯಿಂದಾಗಿ ಅಪಾಯಕ್ಕೆ ಸಿಲುಕಿದ್ದ ಕುಟುಂಬಗಳಿಗೆ ಪಂಚಾಯತಿ ತ್ವರಿತವಾಗಿ ಸ್ಪಂದಿಸಿ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿದ್ದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.