Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Wednesday, 10 July 2024

News: ✒️✒️ ಯಲ್ಲಾಪುರದ ತೌಫಿಕ್ ಶೇಖ್ ವಿರುದ್ಧ ಮಾದಕ ವಸ್ತು ಸೇವನೆ ಪ್ರಕರಣದ ದಾಖಲುNews: ✒️✒️ ಗಂಡ ಕಾಣೆಯಾಗಿರುವುದಾಗಿ ಪತ್ನಿಯಿಂದ ಪೊಲೀಸ್ ಠಾಣೆಗೆ ದೂರು

ಗಂಡ ಕಾಣೆಯಾಗಿರುವುದಾಗಿ ಪತ್ನಿಯಿಂದ ಪೊಲೀಸ್ ಠಾಣೆಗೆ ದೂರು 
ಯಲ್ಲಾಪುರ ; ತಾಲೂಕಿನ ಚವತ್ತಿ, ಬಾಳೆಹದ್ದ ಗ್ರಾಮದಲ್ಲಿ ಪತಿ ಕಾಣೆಯಾದ ಘಟನೆಗೆ ಸಂಬಂಧಿಸಿದಂತೆ ಕಾಣೆಯಾದತನ‌ ಪತ್ನಿ ಬುಧವಾರ ಯಲ್ಲಾಪುರ ಪೊಲೀಸ್ ಠಾಣೆಗೆ ದೂರು‌ ನೀಡಿದ್ದಾರೆ.
    ಬಾಳೆಹದ್ದು ನಿವಾಸಿ, ಶ್ರೀಧರ ರಾಮಾ ಮೊಗೇರ(46) ಎಂಬಾತ  ಜುಲೈ 8ರಂದು ಸಂಜೆ 6:00 ಗಂಟೆಗೆ ತಮ್ಮ ಮನೆಯಿಂದ ಹೊರಗಡೆ ಹೋದ ಮೇಲೆ ಮರಳಿ ಮನೆಗೆ ಬಂದಿಲ್ಲ, ಎಂದು ಸೌಭಾಗ್ಯ ಶ್ರೀಧರ ಮೊಗೇರ್ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ. ತನ್ನ ಗಂಡನನ್ನು ಹುಡುಕಲು ಸಾಕಷ್ಟು ಪ್ರಯತ್ನಪಟ್ಟರೂ, ಅವರನ್ನು ಕಂಡುಹಿಡಿಯಲು ವಿಫಲವಾಗಿದ್ದೆವೆ. ಈ ಕಾರಣದಿಂದ ವಿಳಂಬವಾಗಿ ಪೊಲೀಸ್ ಠಾಣೆಗೆ ದೂರು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 
  ಯಲ್ಲಾಪುರ ಠಾಣೆಯ ಪಿಎಸ್ಐ ಸಿದ್ದಪ್ಪ ಗುಡಿ ಅವರು ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆ ಪ್ರಾರಂಭಿಸಿದ್ದಾರೆ. 

ಯಲ್ಲಾಪುರದ ತೌಫಿಕ್ ಶೇಖ್ ವಿರುದ್ಧ ಮಾದಕ ವಸ್ತು ಸೇವನೆ ಪ್ರಕರಣದ ದಾಖಲು
ಯಲ್ಲಾಪುರ ; ಯಲ್ಲಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಶ್ಯಾಮ್ ಪಾವಸ್ಕರ್ ಯಲ್ಲಾಪುರದ ಶಾರದಾಗಲ್ಲಿಯ ನಿವಾಸಿ ತೌಫಿಕ್ ಶೇಖ್(22);ಎನ್ನುವವರು ಗಾಂಜಾ ಮಾದಕ ವಸ್ತು ಸೇವನೆಯ ಆರೋಪ ದಾಖಲಿಸಿದ್ದಾರೆ.
         ಪಟ್ಟಣದ ಬಿಲಾಲ್ ಮಸೀದಿ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಜುಲೈ 10ರಂದು ತೌಫಿಕ್ ಶೇಖ ಗಾಂಜಾ ಸೇವನೆ ಮಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈ ಸಂದರ್ಭದಲ್ಲಿ, ಪಿಎಸ್‌ಐ ಶ್ಯಾಮ ಪಾವಸ್ಕರ್ ಅವರ ನೇತೃತ್ವದಲ್ಲಿ ತೌಫಿಕ್‌ನನ್ನು ಸ್ಥಳದಲ್ಲೇ ಬಂಧಿಸಲಾಗಿದ್ದು, ತಕ್ಷಣವೇ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ವೈದ್ಯಕೀಯ ವರದಿ ಪ್ರಕಾರ, ತೌಫಿಕ್ ಗಾಂಜಾ ಸೇವನೆ ಮಾಡಿದನ್ನು ದೃಢಪಟ್ಟಿದೆ.
    ಗಾಂಜಾ ಸೇವನೆಯ ಮಾಹಿತಿ ದೃಢಪಟ್ಟ ಹಿನ್ನೆಲೆಯಲ್ಲಿ, ಮಹಿಳಾ ಹೆಡ್ ಕಾನ್ಸಟೇಬಲ್ ರೇಣುಕಾ ಬೆಳಗಟ್ಟಿ ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಆ್ಯಕ್ಟ್ ಕಲಂ 27 (ಬಿ) ಅಡಿಯಲ್ಲಿ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.

 

ಅಂಗನವಾಡಿ ಕಾರ್ಯಕರ್ತರು ಸಹಾಯಕರನ್ನು ಸರ್ಕಾರಿ ನೌಕರರಂತೆ ಖಾಯಂ ಮಾಡಬೇಕು, ಮಕ್ಕಳು‌ಮಹಿಳೆಯರ ಬಗ್ಗೆ ಸರ್ಕಾರ ಕಾಳಜಿ ವಹಿಸಿ : ಅಂಗನವಾಡಿ ನೌಕರರ ಸಂಘದ ಮನವಿ

ಯಲ್ಲಾಪುರ ;  ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಯಲ್ಲಾಪುರ ತಾಲೂಕಾ ಸಮಿತಿಯ ಸದಸ್ಯರು ತಮ್ಮ ವಿವಿಧ ಬೇಡಿಕೆ‌ ಈಡೇರಿಸುವಂತೆ ಆಗ್ರಹಿಸಿ ತಹಶೀಲ್ದಾರರ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬುಧವಾರ ಮನವಿ ರವಾನಿಸಿದರು. 
  2024-25ರ ಬಜೆಟ್‌ನಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ಸಾಕಷ್ಟು ಹಣಕಾಸು ಮೀಸಲಿಡಬೇಕು,  ಅಂಗನವಾಡಿಗಳನ್ನು ಬಲಪಡಿಸಲು ಮತ್ತು ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಶಾಸನಬದ್ಧ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿದರು.
  ಮನವಿಯಲ್ಲಿ ಜುಲೈ ತಿಂಗಳು ಕೇಂದ್ರ ಸರ್ಕಾರವು ಮಂಡಿಸಲಿರುವ 2024-25 ರ ಬಜೆಟ್‌ನಲ್ಲಿ ಮಹಿಳೆಯರು, ಮಕ್ಕಳು ಮತ್ತು ಹದಿಹರೆಯದವರಲ್ಲಿನ ಅಪೌಷ್ಟಿಕತೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಮತ್ತು ಅಂಗನವಾಡಿ ಕಾರ್ಮಿಕರಿಗೆ ಸ್ಥಿರ ಉದ್ಯೋಗ ಖಾತ್ರಿಪಡಿಸುವಂತೆ ಒತ್ತಾಯಿಸಲಾಯಿತು.
    ಪೌಷ್ಟಿಕತೆಯ ಕೊರತೆ ದೇಶದ ಪ್ರಮುಖ ಸಮಸ್ಯೆಯಾಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ  -6 ನ ಪ್ರಕಾರ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಮೂರನೇ ಒಂದು ಭಾಗದಷ್ಟು ಮಕ್ಕಳು ಕುಂಠಿತ ಬೆಳವಣಿಗೆಯಿಂದ ಬಳಲುತ್ತಿದ್ದಾರೆ. ರಕ್ತಹೀನತೆಯು ಮಹಿಳೆಯರಲ್ಲಿ ಶೆ.57.03ಕ್ಕಿಂತ ಹೆಚ್ಚು, ಹದಿಹರೆಯದವರಲ್ಲಿ ಶೇ. 59.1, ಗರ್ಭಿಣಿಯರಲ್ಲಿ ಶೆ.52.2 ಮತ್ತು ಆರು ವರ್ಷದೊಳಗಿನ ಮಕ್ಕಳಲ್ಲಿ ಶೇ. 67.1 ರಷ್ಟಿದೆ. ಪ್ರತಿ ವರ್ಷ ಸರಾಸರಿ ಆರು ವರ್ಷದೊಳಗಿನ ಸುಮಾರು 9 ಲಕ್ಷ ಮಕ್ಕಳು ಮೃತಪಡುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
   ಈ ಸಮಸ್ಯೆಯನ್ನು ಪರಿಹರಿಸಲು ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಯೋಜನೆ  ಜಾರಿಗೊಳಿಸಲಾಗಿದೆ. ಈ ಯೋಜನೆಯು ದೇಶದ ಸುಮಾರು 8 ಕೋಟಿ ಮಕ್ಕಳ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣವನ್ನು ಒದಗಿಸುತ್ತಿದೆ. ಈ ಯೋಜನೆಯನ್ನು ಇನ್ನಷ್ಟು ಬಲಪಡಿಸಬೇಕು‌ ಎಂದು ಆಗ್ರಹಿಸಲಾಗಿದೆ.
   ಮುಂಬರುವ ಬಜೆಟಿನಲ್ಲಿ ಐಸಿಡಿಎಸ್‌ಗೆ ಹೆಚ್ಚಿನ ಹಣ ಹಂಚಿಕೆಯಾಗಬೇಕು. ಸಂಪೂರ್ಣ ಮೂಲಭೂತ ಸೌಕರ್ಯ ಮತ್ತು ಉತ್ತಮ ಗುಣಮಟ್ಟದ ಆಹಾರದೊಂದಿಗೆ ಐಸಿಡಿಎಸ್ ಯೋಜನೆಯನ್ನು ಬಲಪಡಿಸಬೇಕು. ಅಂಗನವಾಡಿಗಳಲ್ಲಿ ಇಸಿಸಿಇ ಘಟಕಗಳನ್ನು ಬಲಪಡಿಸುವುದು, ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರನ್ನು ಗ್ರೇಡ್ 3 ಮತ್ತು ಗ್ರೇಡ್ 4 ಸರ್ಕಾರಿ ನೌಕರರಂತೆ ಖಾಯಂ ಮಾಡಬೇಕು. ಗ್ರಾಚ್ಯುಟಿ ಕುರಿತು ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೊಳಿಸಬೇಕು. ಅಂಗನವಾಡಿ ನೌಕರರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಗುರುತಿಸಬೇಕು. ಯಾವುದೇ ರೂಪದಲ್ಲಿ ಐಸಿಡಿಎಸ್ ಅನ್ನು ಖಾಸಗೀಕರಣಗೊಳಿಸಬಾರದು. ಈ‌ ಮುಂತಾದ ಬೇಡಿಕೆಗಳ ಬಗ್ಗೆ ಮನವಿಯಲ್ಲಿ ಬೇಡಿಕೆ ಇಡಲಾಗಿದೆ.
   ತಹಶೀಲ್ದಾರ ಅಶೋಕ‌ ಭಟ್ ಮನವಿ ಸ್ವೀಕರಿಸಿದರು. ಅಂಗನವಾಡಿ ನೌಕರರ ಸಂಘ ತಾಲೂಕಾ ಸಮಿತಿಯ ಅಧ್ಯಕ್ಷೆ ಲಲಿತಾ ಹೆಗಡೆ, ಕಾರ್ಯದರ್ಶಿ ಲಕ್ಷ್ಮೀ ಸಿದ್ದಿ, ಖಜಾಂಚಿ ಗೌರಿ‌ ಮರಾಟೆ, ತ್ರೀಶಾ ಅರಬೈಲ್, ಲಕ್ಷ್ಮೀ ಮರಾಟೆ, ರೇಣುಕಾ ಶಿಂದೆ, ವಿಶಾಲ ಮುಂತಾದವರಿದ್ದರು. 

ಯಲ್ಲಾಪುರದ ಪದವಿ ಕಾಲೇಜಿನಲ್ಲಿ ಎನ್.ಎಸ್.ಎಸ್. ವಿದ್ಯಾರ್ಥಿಗಳಿಗೆ ಡೆಂಗಿ ಜಾಗೃತಿ ತರಬೇತಿ

ಯಲ್ಲಾಪುರ : ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ತಾಲೂಕಾ ಆರೋಗ್ಯ ಅಧಿಕಾರಿಗಳ ಕಚೇರಿ ಆಶ್ರಯದಲ್ಲಿ ಎನ್.ಎಸ್.ಎಸ್.‌ ವಿದ್ಯಾರ್ಥಿಗಳಿಗೆ ಡೆಂಗಿ ರೋಗ ಹಾಗೂ ಲಾರ್ವಾ ಸಮೀಕ್ಷೆ ಕುರಿತು ಬುಧವಾರ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 
 
  ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.‌ ಟಿ. ಭಟ್ಟ, ಡೆಂಗಿ ರೋಗದ ಲಕ್ಷಣಗಳು, ರೋಗನಿರೋಧಕ ಕ್ರಮಗಳು, ಮತ್ತು ಲಾರ್ವಾ ಉತ್ಪತ್ತಿ ತಾಣಗಳನ್ನು ಗುರುತಿಸುವ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ತರಬೇತಿಯ ವೇಳೆ, ಲಾರ್ವಾ ನಿಯಂತ್ರಣ ಹಾಗೂ ಡೆಂಗಿ ಹರಡುವಿಕೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು. .
  ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ ತಾಳಿಕೋಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳು ಯುವ ಸಮೂಹವನ್ನು ಆರೋಗ್ಯಕರ ಸಮುದಾಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಲು ಉತ್ತೇಜಿಸುತ್ತದೆ. ಡೆಂಘಿ ನಿಯತ್ರಣ ಲಾರ್ವಾ ನಾಶದ ಕುರಿತು ಮಾಹಿತಿ, ಮಾರ್ಗದರ್ಶನ ನೀಡಿದರು. 
  ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್.‌ ಡಿ. ಜನಾರ್ಧನ,  ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಿದ್ಯಾರ್ಥಿಗಳನ್ನು ಆರೋಗ್ಯದ ಮಹತ್ವವನ್ನು ಅರಿತು, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದರು. 
   ಉಪನ್ಯಾಸಕಿ ಸವಿತಾರವರು ಸ್ವಸ್ಥ, ಆರೋಗ್ಯ ಪೂರ್ಣ ವಾತಾವರಣ ನಿರ್ಮಾಣದ‌ ಕುರಿತು ವಿದ್ಯಾರ್ಥಿಗಳಿಗೆ ‌ಮಾಹಿತಿ ನೀಡಿದರು.
    ಕಾರ್ಯಕ್ರಮದ ಮುಖ್ಯ ಉದ್ದೇಶ, ಎನ್.ಎಸ್.ಎಸ್.‌ ವಿದ್ಯಾರ್ಥಿಗಳನ್ನು ಡೆಂಗಿ ಎದುರಿಸಲು ವಿದ್ಯಾರ್ಥಿಗಳನ್ನು  ಸಜ್ಜುಗೊಳಿಸುವುದು, ಲಾರ್ವಾ ಸಮೀಕ್ಷೆ ಮಾಡುವ ಕೌಶಲವನ್ನು ನೀಡುವುದು, ಮತ್ತು ಸ್ಥಳೀಯ ಸಮುದಾಯದಲ್ಲಿ ಆರೋಗ್ಯ ದೃಷ್ಟಿಯಿಂದ ಬದಲಾವಣೆ ತರುವಂತೆ ಪ್ರೇರೇಪಿಸುವುದಾಗಿತ್ತು. 
 

News: ✒️✒️ ತೋಟಗಾರಿಕೆ ಇಲಾಖೆ ವತಿಯಿಂದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.News by: ✒️✒️ ಜುಲೈ 31ರೊಳಗೆ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ರೈತರು ಹೆಸರು ನೋಂದಾಯಿಸಿ

IMG-20240710-175337
ತೋಟಗಾರಿಕೆ ಇಲಾಖೆ ವತಿಯಿಂದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಯಲ್ಲಾಪುರ ; ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಅಳವಡಿಸಲು ರೈತರು ಅರ್ಜಿ ಸಲ್ಲಿಸಬಹುದಾಗಿದೆ. ತೋಟಗಾರಿಕೆಯಲ್ಲಿ ಬಳಸಬಹುದಾದ ವಿವಿಧ ಯಂತ್ರೋಪಕರಣ ಖರೀದಿಸಲು ಹಾಗೂ ಸೋಲಾರ್ ಪಂಪಸೆಟ್ ಗಳನ್ನು ಖರೀದಿಸಲು ಆಸಕ್ತ ರೈತರು ಇಲಾಖೆಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಸತೀಶ ಹೆಗಡೆ ಹಾಗೂ ಸಹಾಯಕ ತೋಟಗಾರಿಕಾ ಅಧಿಕಾರಿ  ಕೀರ್ತಿ ಬಿ ಎಮ್ ತಿಳಿಸಿದ್ದಾರೆ.
IMG-20240710-175325 ಅವರು ಈ ಕುರಿತು ಹೇಳಿಕೆ‌ ನೀಡಿ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ವಿವಿಧ ಅಳತೆಯ ನೀರು ಸಂಗ್ರಹಣಾ ಘಟಕಗಳಿಗೆ ಹಾಗೂ ಲಘು ಪೋಷಕಾಂಶಗಳ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ. ತಾಳೆ ಬೆಳೆ ಅಭಿವೃದ್ಧಿ ಯೋಜನೆಯಡಿ ತಾಳೆ ಬೆಳೆ ಪ್ರದೇಶ ವಿಸ್ತರಣೆ ಕಾರ್ಯಕ್ರಮಕ್ಕೆ ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಡಿ ಪ್ರದೇಶ ವಿಸ್ತರಣೆಗೆ ಉತ್ತಮ ಗುಣಮಟ್ಟದ ಸಸಿಗಳನ್ನು ಉಚಿತವಾಗಿ ವಿತರಿಸಲಾಗುವುದು ಹಾಗೂ ಅಂತರ ಬೆಳೆ ಬೆಳೆಯಲು ಕೂಡ ಅವಕಾಶವಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ. 

ಜುಲೈ 31ರೊಳಗೆ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ರೈತರು ಹೆಸರು ನೋಂದಾಯಿಸಿ
ಯಲ್ಲಾಪುರ : ತಾಲೂಕಿನಲಿ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯು ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳನ್ನು ಒಳಗೊಂಡಿದ್ದು ಅಡಿಕೆಗೆ ಒಟ್ಟು ವಿಮಾಮೊತ್ತ ಪ್ರತಿ ಎಕರೆಗೆ 51,200 ರೂ, ಇರಲಿದ್ದು ರೈತರು ಪಾವತಿಸಬೇಕಾದ ಒಟ್ಟು ವಿಮಾ ಕಂತು 2,590 ರೂ ಇರಲಿದೆ. ಕಾಳುಮೆಣಸು ಬೆಳೆಗೆ ಒಟ್ಟು ವಿಮಾ ಮೊತ್ತ18,800 ರೂ ಇರಲಿದ್ದು, ರೈತರು ಪಾವತಿಸಬೇಕಾದ ವಿಮಾ ಕಂತು 951 ರೂ ಆಗಲಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಸತೀಶ ಹೆಗಡೆ   ತಿಳಿಸಿದ್ದಾರೆ.
     ಬೆಳೆ ಸಾಲ ಪಡೆದ ರೈತರು ಸಂಬಂಧಿಸಿದ ಬ್ಯಾಂಕಗಳ ಮೂಲಕ ಹಾಗೂ ಬೆಳೆ ಸಾಲ ಪಡೆಯದ ರೈತರು ಬ್ಯಾಂಕ, ಸಾಮಾನ್ಯ ಸೇವಾ ಕೇಂದ್ರ , ಗ್ರಾಮ ಒನ್ ಕೇಂದ್ರಗಳ ಮೂಲಕ ಯೋಜನೆಯಡಿ ನೋಂದಾಯಿಸಬಹುದಾಗಿದೆ. ರೈತರ ನೋಂದಣಿಗೆ ಎಫ್. ಐ. ಡಿ. ಕಡ್ಡಾಯವಾಗಿದೆ. ಬೆಳೆ ಸಾಲ ಪಡೆಯುವ ರೈತರು ಸದರಿ ಯೋಜನೆಯಿಂದ ಹೊರಗುಳಿಯಲು ಇಚ್ಛಿಸಿದಲ್ಲಿ ಅಂತಿಮ ದಿನಾಂಕದ ಒಂದು ವಾರದ ಒಳಗಾಗಿ ಸಂಬಂಧಿಸಿದ ಬ್ಯಾಂಕ ವ್ಯವಸ್ಥಾಪಕರಿಗೆ ಲಿಖಿತವಾಗಿ ತಿಳಿಸಬಹುದಾಗಿರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
IMG-20240710-175309

ಯಲ್ಲಾಪುರದಲ್ಲಿ ಆರು ಜನರಿಗೆ ಡೆಂಘಿ, ಜುಲೈ ತಿಂಗಳಲ್ಲಿ‌ ಯಾವುದೇ ಡೆಂಘಿ ಪ್ರಕರಣ‌ ದೃಢಪಟ್ಟಿಲ್ಲ ವರದಿ : ಜಗದೀಶ ನಾಯಕ

ಯಲ್ಲಾಪುರ ; ರಾಜ್ಯದಾದ್ಯಂತ ಡೆಂಘಿ ಜ್ವರ ವ್ಯಾಪಕವಾಗಿ ಹರಡುತ್ತಿದ್ದು, ಜನತೆ ಆತಂಕಿತರಾಗಿದ್ದಾರೆ. ಯಲ್ಲಾಪುರ ತಾಲೂಕಿನಲ್ಲಿಯೂ ಆರು ಜನರಲ್ಲಿ ಡೆಂಘಿ ಜ್ವರ ಪಾಸಿಟಿವ್ ಬಂದಿದ್ದು, ಆರೋಗ್ಯ ವಿಲಾಖೆ ಸಾಕಷ್ಟು‌ ಮುಂಜಾಗ್ರತಾ ಕ್ರಮ, ಜನರಲ್ಲಿ‌ಜಾಗೃತಿ ಮೂಡಿಸುವ ಕೆಲಸ‌ ಮಾಡುತ್ತಿದೆ.
   ತಾಲೂಕಾ ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ಪ್ರಕಾರ ಯಲ್ಲಾಪುರ ತಾಲೂಕಿನಲ್ಲಿ ಮೇ ಹಾಗೂ ಜೂನ್ ತಿಂಗಳಲ್ಲಿ ಒಟ್ಟು ಆರು ಜನರಿಗೆ ಡೆಂಘಿ ಜ್ವರದ ಪಾಸಿಟಿವ್ ಪರಿಣಾಮ ಕಂಡು ಬಂದು ದೃಢಪಟ್ಟಿದೆ. ಹಿಂದೆ 77 ರಕ್ತದ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕಳಿಸಿಕೊಡಲಾಗಿದ್ದು ಅದರಲ್ಲಿ ಆರು ಜನರು ಮಾತ್ರ ದೃಢಪಟ್ಟಿದೆ. ಇತ್ತೀಚೆಗೆ 7 ಜನರ ರಕ್ತದ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕಳಿಸಿಕೊಡಲಾಗಿದ್ದೆ ಅದರ ಫಲಿತಾಂಶ ಇನ್ನು ಬರುವುದು ಬಾಕಿ ಇದೆ. ಪ್ರತಿ ಮಳೆಗಾಲದಲ್ಲಿಯೂ ಸಹಜವಾಗಿ ಕಂಡುಬರುವ ವೈರಲ್ ಜ್ವರ ಬರುತ್ತಿದ್ದು ಇವೆಲ್ಲವುಗಳು ಡೆಂಘಿ ಪ್ರಕರಣಗಳಲ್ಲ, ಖಾಸಗಿ ಆಸ್ಪತ್ರೆಯಲ್ಲಿ ಜ್ವರದ ಕಾರಣಕ್ಕೆ ಚಿಕಿತ್ಸೆ ಪಡೆಯುವ ರೋಗಿಗಳು ಸಂಶಯ ಪದವಾಗಿ ಕಂಡು ಬಂದರೆ ಖಾಸಗಿ ಆಸ್ಪತ್ರೆಯ ವೈದ್ಯರು, ತಾಲೂಕ ಆರೋಗ್ಯ ಅಧಿಕಾರಿ ಕಚೇರಿಗೆ ಮಾಹಿತಿ ನೀಡುತ್ತಾರೆ. ಅಥವಾ ರಕ್ತ ಪರೀಕ್ಷೆಗಾಗಿ ತಾಲೂಕ ಆಸ್ಪತ್ರೆಗೆ ಕಳಿಸುತ್ತಾರೆ. ಜುಲೈ ತಿಂಗಳಲ್ಲಿ ಯಾವುದೇ ಒಂದು ಡೆಂಘಿ ಪ್ರಕರಣ ದೃಢಪಟ್ಟಿಲ್ಲ. ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನಿಗಾ ವಹಿಸಬೇಕು. ಸೊಳ್ಳೆಗಳನ್ನು ಕಡೆಯದಂತೆ ಮುಂಜಾಗ್ರತೆ ವಹಿಸಬೇಕು ಎಂದು ಅವರು ಸೂಚಿಸಿದ್ದಾರೆ.
   ಯಲ್ಲಾಪುರದ ತಾಲೂಕಾ ಆಸ್ಪತ್ರೆಯಲ್ಲಿ ಡೆಂಘಿ ರೋಗಿಗಳಗಾಗಿ ಸುಸಜ್ಜಿತವಾಗಿರುವ 20 ಬೆಡ್ ಗಳನ್ನು ಪ್ರತ್ಯೇಕ ವಾರ್ಡ್ ಮೀಸಲಿಡಲಾಗಿದೆ. 6 ಜನ ಡೆಂಘಿ ದೃಢಪಟ್ಟ ಕೆಲವು ಜನ‌ ಈ ವಾರ್ಡ್ ನಲ್ಲಿದ್ದು ಚಿಕಿತ್ಸೆ ಪಡೆದು‌ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂದು ಡಾ.ಪವಾರ ಮಾಹಿತಿ ನೀಡಿದರು.

ಪಟ್ಟಣ ಪಂಚಾಯತಿ ನಿರ್ಲಕ್ಷ ; 
ಪಟ್ಟಣದ ಸ್ವಚ್ಛತೆ ಕಾಪಾಡುವಲ್ಲಿ ಪಟ್ಟಣ ಪಂಚಾಯಿತಿ ಬಹಳಷ್ಟು ನಿರ್ಲಕ್ಷ ದೂರ ನಿಂತಿದೆ ಎಂದು ಹಲವಾರು ಜನ ಆರೋಪಿಸಿದ್ದಾರೆ. ಲೋಕಸಭಾ ಚುನಾವಣಾ ನೀತಿ ಸಮಿತಿ ಜಾರಿಯಾಗಿದ್ದರಿಂದ, ಮಳೆಗಾಲದ ಮುನ್ನ ಎಲ್ಲ ಗಠಾರುಗಳ ಸ್ವಚ್ಛತೆ ಮಾಡಬೇಕಾಗಿತ್ತು ಆದರೆ ಚುನಾವಣಾ ನೀತಿ ಸಂಹಿತೆ ಅಡ್ಡ ಬಂದಿತ್ತು. ಅದಸಿಕಾರ ಇಲ್ಲದೇ, ಪಟ್ಟಣ ಪಂಚಾಯಿತಿ ಸದಸ್ಯರು ಕೂಡ ಹಲ್ಲು ಕಿತ್ತ ಹಾವಿನಂತಾಗಿದ್ದು, ಅವರಿಗೂ ಸ್ವಚ್ಛತೆಯ ಬಗ್ಗೆ ಹೇಳಿಕೊಳ್ಳುವ ಅಧಿಕಾರ ಇಲ್ಲವಾಗಿದೆ. ಡೆಂಘಿ ಹರಡುತ್ತಿರುವ ಈ ಸಂದರ್ಭದಲ್ಲಿ ಎಲ್ಲ ಚರಂಡಿಗಳು, ಸೊಳ್ಳೆಯ ಆವಸಾ ತಾಣಗಳಲ್ಲಿ ಫಾಗಿಂಗ್, ಕ್ರಿಮಿನಾಶಕ ಸಿಂಪಡಿಸಿಲ್ಲ ಎಂದು ಅಲ್ಲಿಯ ಜನ ಹೇಳಿಕೊಳ್ಳುತ್ತಿದ್ದಾರೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಒಂದೇರಡು ದಿನ ಸಮರೂಪಾದಿಯಲ್ಲಿ ಸೊಳ್ಳೆಯ ಆವಾಸ ತಾಣಗಳ ನಾಶ ಮಾಡುವ ಕಾರ್ಯ ಮಾಡಬೇಕು. ಯಲ್ಲಾಪುರದ ಶಿಕ್ಷಿತರು ಪ್ರಜ್ಞಾವಂತರು ಹೇಳಿಕೊಳ್ಳುವ ನಾಗರಿಕರು ಕೂಡ ತಮ್ಮ ಜವಾಬ್ದಾರಿ ಅರಿತು ಚರಂಡಿಯಲ್ಲಿ ನೀರು ನಿಲ್ಲಲು ಅವಕಾಶವಾಗದಂತೆ ಗಟಾರದಲ್ಲಿ ತೆಂಗಿನ‌ ಗರಿ, ಕತ್ತರಿಸಿದ ಹೂವಿನ ಗಿಡ, ಕಸ ಕಡ್ಡಿಗಳನ್ನು ಎಸೆಯುವುದು ನಿಲ್ಲಿಸಬೇಕು. ಅಂದಾಗ ಮಾತ್ರ ಆಡಳಿತದೊಂದಿಗೆ ಸಾರ್ವಜನಿಕರು ಕೈಜೋಡಿಸಿ ಸಂಪೂರ್ಣವಾಗಿ ಡೆಂಘಿ ರೋಗದ ಜೊತೆಗೆ ಇನ್ನಿತರ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಗಟ್ಟಬಹುದಾಗಿದೆ. 

 ಡೆಂಘಿ ಜ್ವರದ ಸರಳ‌ಮಾಹಿತಿ :
ಸೊಳ್ಳೆ ಕಚ್ಚುವಿಕೆಯಿಂದ ಬರುವ  ತೀವೃ ಜ್ವರ ನೋವುಗಳು, ರಕ್ತಸ್ರಾವ ಲಕ್ಷಣಗಳಾಗಿವೆ. ಸೊಳ್ಳೆಗಳನ್ನು ನಿಯಂತ್ರಿಸಿ, ನೀರಿನ ಶೇಖರಣೆಯನ್ನು ತಡೆಯಿರಿ, ಸೊಳ್ಳೆ ನಿವಾರಕಗಳನ್ನು ಬಳಸಿ ತಡೆಗಟ್ಟಬಹುದಾಗಿದೆ. ಡೆಂಘಿಗೆ ಯಾವುದೇ ನಿರ್ದಿಷ್ಟ ಔಷಧಿ ಇಲ್ಲ, ಜ್ವರ ಮತ್ತು ನೋವುಗಳಿಗೆ ಚಿಕಿತ್ಸೆ ನೀಡಬಹುದು, ಗಂಭೀರ ಸಂದರ್ಭಗಳಲ್ಲಿ ಆಸ್ಪತ್ರೆಯಲ್ಲಿ‌ ದಾಖಲಾಗಬೇಕು. ಜ್ವರ ಬಂದರೆ ವೈದ್ಯರನ್ನು ಭೇಟಿ ಮಾಡಬೇಕು. ಡೆಂಗಿ ಜ್ವರ ತಡೆಗಟ್ಟಲು ಮುನ್ನೆಚ್ಚರಿಕೆಗಳನ್ನು ಅನುಸರಿಸಿ, ಡೆಂಗಿ ಜ್ವರವನ್ನು ಸರಿಯಾದ ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆಗಳಿಂದ ನಿರ್ವಹಿಸಬಹುದು.

ವಿಶ್ವದರ್ಶನ ಬಿಸಿಎ ಕಾಲೇಜಿಗೆ ಶೇ.100 ಫಲಿತಾಂಶ

ಯಲ್ಲಾಪುರ : ಕರ್ನಾಟಕ ವಿಶ್ವವಿದ್ಯಾಲಯದ 2023- 24ನೇ ಸಾಲಿನ ಬಿಸಿಎ ಒಂದನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಪಟ್ಟಣದ ವಿಶ್ವದರ್ಶನ ಬಿಸಿಎ ಕಾಲೇಜು ಶೇ. 100 ಫಲಿತಾಂಶ ಸಾಧಿಸಿದೆ.
   ಈ ಕಾಲೇಜಿನ 69 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.
 
 ನಿರೀಕ್ಷಾ ಆಚಾರ್ಯ 648/700(ಶೇ. 92.57) ಅಂಕದೊಂದಿಗೆ ಪ್ರಥಮ, ಮೇಘನಾ ಭಟ್  647/700(ಶೇ. 92.43) ಅಂಕದೊಂದಿಗೆ ದ್ವಿತೀಯ, ಕೆ. ವೈ ಕಾವ್ಯ 637/700(ಶೇ. 91) ಅಂಕದೊಂದಿಗೆ ತೃತೀಯ ಸ್ಥಾನ ಹಾಗೂ ತಿಲಕ್ ಬಾಂದೇಕರ್ 629/700(ಶೇ. 89.86) ಅಂಕದೊಂದಿಗೆ ನಾಲ್ಕನೇ ಸ್ಥಾನ ಗಳಿಸಿರುತ್ತಾರೆ. ಅಲ್ಲದೆ 28 ವಿದ್ಯಾರ್ಥಿಗಳು ಶೇ. 80,
18 ವಿದ್ಯಾರ್ಥಿಗಳು ಶೇ. 70, 24 ವಿದ್ಯಾರ್ಥಿಗಳು ಶೇ.60 ಕ್ಕಿಂತ ಹೆಚ್ಚು ಅಂಕದೊಂದಿಗೆ ಉತ್ತೀರ್ಣಗೊಂಡು ತಾಂತ್ರಿಕ ಶಿಕ್ಷಣದಲ್ಲಿ ಯಶಸ್ಸು ಗಳಿಸಿರುತ್ತಾರೆ.
    ಇವರಿಗೆ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು, ಆಡಳಿತ ಮಂಡಳಿ, ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಉಪನ್ಯಾಸಕ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

ಕಾಗೇರಿ ಜನ್ಮ ದಿನ ವಜ್ರೇಶ್ವರಿ ದೇವಸ್ಥಾನದಲ್ಲಿ ಬಿಜೆಪಿಯವರಿಂದ ವಿಶೇಷ ಪೂಜೆ

ಯಲ್ಲಾಪುರ : ತಾಲೂಕಿನ ವಜ್ರಳ್ಳಿಯ ವಜ್ರೇಶ್ವರಿ ದೇವಸ್ಥಾನದ ಆವರಣದಲ್ಲಿ ನೂತನ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಯವರ ಹುಟ್ಟು ಹಬ್ಬದ ನಿಮಿತ್ತ ವಜ್ರಳ್ಳಿ ಭಾಗದ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿ , ಸಿಹಿ ಹಂಚಿದರು.
 
  ಕಾಗೇರಿಯವರಿಗೆ ಹುಟ್ಟು ಹಬ್ಬದ ಶುಭಾಶಯಗಳ ತಿಳಿಸಿ ಸಾಮಾಜಿಕ ಕಾರ್ಯಕರ್ತ ವಿ ಎನ್ ಭಟ್ಟ ನಡಿಗೆಮನೆ, ನಮ್ಮ ಜಿಲ್ಲೆಯ ಕನಸು ನನಸು ಮಾಡುವ ನಾಯಕ ಕಾಗೇರಿ, ನೂತನ ಸಂಸದ ವಿಶ್ವೇಶ್ವರ ಕಾಗೇರಿಯವರ ಹುಟ್ಟು ಹಬ್ಬದ ಸಂದರ್ಭದಲ್ಲಿ ವಜ್ರೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ದೇಶದ ಅಭ್ಯುದಯಕ್ಕೆ ಪ್ರಾರ್ಥಿಸಿದ್ದೇವೆ ಎಂದರು.
       ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಉಮೇಶ ಭಾಗ್ವತ, ಆದರ್ಶ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದತ್ತಾತ್ರೇಯ ಭಟ್ಟ ತಾರಗಾರ, ಗ್ರಾಮ ಪಂಚಾಯಿತಿ ಸದಸ್ಯರಾದ ಜಿ ಆರ್ ಭಾಗ್ವತ, ವೀಣಾ ಗಾಂವ್ಕರ, ತಿಮ್ಮಣ್ಣ ಗಾಂವ್ಕರ  ಮಹೇಶ ಗಾಂವ್ಕರ, ನವೀನ ಕಿರಗಾರೆ, ದೇವಸ್ಥಾನದ ಅರ್ಚಕ ತಿಮ್ಮಣ್ಣ ಕೋಮಾರ ಮುಂತಾದವರು ಇದ್ದರು.

ಯಲ್ಲಾಪುರ ಮೀನು ಮಾರುಕಟ್ಟೆಗೆ ಬಂದ 30 ಕೆ.ಜಿ ಕಟ್ಲಾ ಮೀನು

ಯಲ್ಲಾಪುರ ; ಪಕ್ಕದ ಹಳಿಯಾಳ ತಾಲೂಕಿನ ತಟ್ಟಿಹಳ್ಳ ಡ್ಯಾಮಿನಲ್ಲಿ ವೃತ್ತಿಪರ ಮೀನುಗಾರರು ಹಿಡಿದ ಮೂವತ್ತು ಕೆಜಿ ಕಟ್ಲಾ ಮೀನು ಯಲ್ಲಾಪುರ ಮೀನು ಮಾರುಕಟ್ಟೆಗೆ ಬುಧವಾರ ಮಾರಾಟಕ್ಕೆ ಬಂದಿತ್ತು.
    ಯಲ್ಲಾಪುರದ ಪ್ರಮುಖ ಮೀನು ಮಾರಾಟಗಾರರ ಸೈಯದ್ ಬಶೀರ್ ಮತ್ತು ಜ್ಞಾನೇಶ್ವರ್ ಈ ಮೀನನ್ನು ಖರೀದಿಸಿ ನಂತರ ಅದನ್ನು ಕತ್ತರಿಸಿ ಮೀನಿನ ಗ್ರಾಹಕರಿಗೆ ಮಾರಿದ್ದಾರೆ.
   4800 ರೂ ಗೆ ಈ ಕಟ್ಲಾ ಮೀನನ್ನು ಯಲ್ಲಾಪುರದ ಮೀನು ಮಾರಾಟಗಾರರು ಖರೀದಿಸಿದ್ದರು. 
    ಅತ್ಯಂತ ದೊಡ್ಡ ಕಟ್ಲಾಮೀನಿಗೆ ಬಹಳಷ್ಟು ಬೇಡಿಕೆ ಇದ್ದು, ಸಿಹಿ ನೀರಿನ ಮೀನ ಖಾದ್ಯ ಇಷ್ಟ ಪಡುವ ಮೀನು ಪ್ರಿಯರು ಮುಗಿಬಿದ್ದು ಮೀನನ್ನು ಕೊಳ್ಳುತ್ತಾರೆ. ಇಷ್ಟು ದೊಡ್ಡ ಮೀನಿನಲ್ಲಿ ಮುಳ್ಳಿನ ಪ್ರಮಾಣ ಇರುವುದೇ ಇಲ್ಲ. ಹೀಗಾಗಿ ದೊಡ್ಡಮೀನಿಗೆ ಕತ್ತರಿಸಿ ಮಾರಿದಾಗ ಅತೀ ಹೆಚ್ಚು ಬೇಡಿಕೆ ಮಾರುಕಟ್ಟೆಯಲ್ಲಿದೆ.
    ಪ್ರತಿ ವರ್ಷ ಸಮುದ್ರದ ಮೀನುಗಾರಿಕೆ ನಿಷೇಧ ಮತ್ತು ತುಪಾನ್ ಮುಂತಾದ ಕಾರಣಗಳಿಂದ ಸಮುದ್ರದ ಮೀನು ಮಾರುಕಟ್ಟೆಗೆ ಬಾರದೆ ಇದ್ದಾಗ, ಯಲ್ಲಾಪುರದ ಮೀನು ಮಾರುಕಟ್ಟೆಗೆ ಹಳಿಯಾಳ, ದಾಂಡೇಲಿ, ಕಿರವತ್ತಿ ಮುಂತಾದ ಕಡೆಗಳಿಂದ ಸಿಹಿ ನೀರಿನ ಮೀನು ಮಾರುಕಟ್ಟೆಗೆ ಬರುತ್ತದೆ. 
    ಕೆಲವು ವರ್ಷಗಳ ಹಿಂದೆ ಯಲ್ಲಾಪುರದಲ್ಲಿ ಉದ್ಯೋಗ ಕಂಡುಕೊಂಡಿರುವ ಕರಾವಳಿ ಪ್ರದೇಶದ ಜನ ಈ ಮೀನನ್ನು ಸೇವಿಸಲು ಅನುಮಾನ ಪಡುತ್ತಿದ್ದರು. ಆದರೆ, ಇದೀಗ ಮೀನಿನ ಖಾದ್ಯದ ರುಚಿಯನ್ನು ಕಂಡ ಅವರು ಕೂಡ, ಯಲ್ಲಾಪುರದಲ್ಲಿ ಮೀನು ಖರೀದಿಸಿ ತಮ್ಮ ಊರಾದ ಅಂಕೋಲಾ, ಕಾರವಾರ, ಕುಮಟಾದ ತಮ್ಮ ಸಂಬಂಧಿಗಳಿಗೆ ಮೀನಿನ ಕೊರತೆ ಇದ್ದಾಗ ಇದೆ ಸಿಹಿ ನೀರಿನ ಮೀನನ್ನು ಕಳಿಸಿಕೊಡುತ್ತಾರೆ. 

ವಜ್ರಳ್ಳಿ ಗ್ರಾಮ ಸಭೆ ; ಪಿಎಚ್‌ಸಿಯಲ್ಲಿ ವೈದ್ಯರ ಕೊರತೆ, ಪ್ರವಾಸಿಗರಿಂದ ಸ್ಥಳೀಯರಿಗೆ ತೊಂದರೆ ಕುರಿತು ಚರ್ಚೆ

ಯಲ್ಲಾಪುರ : ತಾಲೂಕಿನ ವಜ್ರಳ್ಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಸಭೆಯು ವಜ್ರಳ್ಳಿ ಗ್ರಾಮ ಅಧ್ಯಕ್ಷ ಭಗಿರಥ ನಾಯ್ಕ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
     ವಜ್ರಳ್ಳಿಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ನಿಷ್ಕ್ರಿಯವಾಗಿದೆ. ಖಾಯಂ ವೈದ್ಯರಿಲ್ಲದೇ ಸೇವೆ ಅನಾಥವಾಗಿದೆ. ಡೆಂಗ್ಯೂನಂತಹ ಅಪಾಯಕಾರಿ ರೋಗ ಭೀತಿ ಇದ್ದರೂ ಆರೋಗ್ಯ ಇಲಾಖೆ ವಜ್ರಳ್ಳಿಯ ಭಾಗದ ಸೇವೆ ಬಗ್ಗೆ ಲಕ್ಷವಹಿಸುತ್ತಿಲ್ಲ. ಕೈಗಾ ಸಮೀಪವಿರುವ ಹಳ್ಳಿಗಳಲ್ಲಿ ಹೀಗಾದರೆ ಜನರ ಆರೋಗ್ಯ ಸಮಸ್ಯೆಗಳ ಬಗೆಗೆ ಉತ್ತರಿಸುವವರಾರು.  ಸಮರ್ಪಕ ಸೇವೆ ನೀಡದ ವಜ್ರಳ್ಳಿಯ ಆಸ್ಪತ್ರೆಗೆ ಅನಾರೋಗ್ಯ ಕಾಡಿದರೆ ರೋಗಿಗಳ  ಗತಿ ಏನು ಎಂದು ಸ್ಥಳೀಯ ನಿವಾಸಿ ತಿಮ್ಮಣ್ಣ ಕೋಮಾರ ಪ್ರಶ್ನಿಸಿದರು.
   
  ವಜ್ರಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳೀಯರಿಗೆ ಹೊರಗಿನ ಪ್ರವಾಸಿಗರಿಂದ ತೊಂದರೆಗಳು ಆಗುತ್ತಿರುವ ಕುರಿತು ಗ್ರಾಮ ಸಭೆಯಲ್ಲಿ ಸಾರ್ವಜನಿಕರಿಂದ ದೂರುಗಳನ್ನು ಬಂದವು.  ಹಿನ್ನೆಲೆಯಲ್ಲಿ ಪೋಲೀಸ್ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಚಿನ್ನಾಪುರ ಕ್ರಾಸ್ ನಲ್ಲಿ ಪೋಲೀಸ್ ಚೆಕ್ ಪೋಸ್ಟ್ ಮಾಡಿ ಎಂದು ಬೀಟ್ ಪೋಲಿಸ್ ರ ಬಳಿ ವಿ.ಎನ್ ಭಟ್ಟ ನಡಿಗೆ ಮನೆ, ಡಿ ರವೀಂದ್ರ  ಹೊನ್ನಗದ್ದೆ ಆಗ್ರಹಿಸಿ, ಪೋಲೀಸ್ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಲಿಖಿತವಾಗಿ ಮನವಿ ಮಾಡಿದರು.
   ಕಳಚೆಯಲ್ಲಿ ಅಡಿಕೆ ತೋಟದ ಜಮೀನಿನ ಭಾಗಾಯ್ತ ದಾಖಲೆಯಲ್ಲಿ ಕ್ಷೇತ್ರದ ತರಿ ಅಂತ ದಾಖಲೆ ತೋರಿಸುತ್ತಿದೆ. ಕ್ಷೇತ್ರವು ಕಡಿಮೆ ಎಂದು ಕಳಚೆಯ ಆರ್ ಪಿ ಹೆಗಡೆ ಪ್ರಶ್ನಿಸಿದರು. ಆಗ ಕಂದಾಯ ಇಲಾಖೆಯವರಿಂದ ಸಮರ್ಪಕ ಉತ್ತರ ಸಿಗಲಿಲ್ಲ.
    ಪಶು ಸಂಗೋಪನೆ ಇಲಾಖೆಯಿಂದ ಕೆ ಜಿ ಹೆಗಡೆ ಮಾಹಿತಿ ನೀಡಿ, ಇಲಾಖೆಯಲ್ಲಿ ಮೇವಿನ ಬೀಜ, ಹುಲ್ಲು ಕತ್ತರಿಸುವ ಯಂತ್ರದ ಲಭ್ಯತೆ ಇದೆ .ಪಶು ಸಹಾಯವಾಣಿ 1962 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದರು.
    ಸಹಾಯಕ ತೋಟಗಾರಿಕೆ ಅಧಿಕಾರಿ ಕೀರ್ತಿ ಬಿ ಎಂ ಮಾತನಾಡಿ, ಬೆಳೆವಿಮೆ ಕೃಷಿಕರಿಗೆ ನೆರವಾಗಲಿದೆ. ನೀರು ಸಂಗ್ರಹ ಘಟಕ ಸ್ಥಾಪನೆ, ಹನಿ ನೀರಾವರಿ ಮಾಡಲು ಸಹಾಯಧನದ ವಿವರ ತಿಳಿಸಿದರು.
   ಐದರಿಂದ ಆರು ಕೋಟಿ ರೂ ಬೆಳೆವಿಮೆ ಯಲ್ಲಾಪುರ ತಾಲ್ಲೂಕಿನ ರೈತರಿಗೆ ನಷ್ಟವಾಗಿದೆ. ಎಂದು ಬೀಗಾರಿನ ರಾಘವೇಂದ್ರ ಭಟ್ಟ ಗಮನ ಸೆಳೆದರು. ಇತ್ತೀಚೆಗೆ ಕಡಿಮೆ ಬೆಳೆ ವಿಮೆ ಸಂದಾಯವಾಗಿದೆ. ಮಳೆಯ ಮಾಪನ ಮಾಹಿತಿ ಸಂಗ್ರಹದ ಕುರಿತಾಗಿ ಚರ್ಚೆಯಾಯಿತು.
    ಮಹಿಳಾ ಮಕ್ಕಳ ಇಲಾಖೆಯಿಂದ ಅಂಗನವಾಡಿ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟದಲ್ಲಿ ಊಟದ ಬಗ್ಗೆ ಗಮನ ಹರಿಸಲು ಸಾರ್ಜನಿಕರು ಇಲಾಖೆಯ ಸಿಬ್ಬಂದಿಗಳಿಗೆ ವಿನಂತಿಸಿದರು. ಹೆಸ್ಕಾಂ ವಿದ್ಯುತ್ ವ್ಯತ್ಯಯದ ಕುರಿತು ಸಾರ್ವಜನಿಕರಿಂದ ಅನೇಕ ಸಮಸ್ಯೆಗಳು ಕೇಳಿಬಂದವು.
    ಶಿಕ್ಷಣ ಇಲಾಖೆಯ ಕಂಚೀಮನೆ ಶಾಲೆ ಶಿಥಿಲಗೊಂಡರೂ ತೆರವುಗೊಳಿಸಿಲ್ಲ. ಎಂದು ಸಭೆಯಲ್ಲಿ ಸ್ಥಳೀಯರು ವಿಷಯ ಪ್ರಸ್ತಾಪಿಸಿದರು.
     ಪಂಚಾಯಿತಿ ಉಪಾಧ್ಯಕ್ಷೆ ಗಂಗಾ ಕೋಮಾರ, ಸದಸ್ಯರಾದ ಗಜಾನನ ಭಟ್ಟ, ಜಿ ಆರ್ ಭಾಗ್ವತ, ತಿಮ್ಮಣ್ಣ ಗಾಂವ್ಕರ. ರತ್ನಾ ಬಾಂದೇಕರ್, ಪುಷ್ಪಾ ಆಗೇರ, ವೀಣಾ ಗಾಂವ್ಕರ , ಲಲಿತಾ  ಸಿದ್ದಿ ವೇದಿಕಡಯಲ್ಲಿದ್ದರು.
    ನೋಡೆಲ್ ಅಧಿಕಾರಿ ನಾಗರಾಜ ನಾಯ್ಕ ನಿರ್ವಹಿಸಿದರು. ಪಿಡಿಓ ಸಂತೋಷಿ ಆರ್ ಬಂಟ್ ಸ್ವಾಗತಿಸಿ, ವಂದಿಸಿದರು .

News: ✒️✒️ ಸಂಸದ ಕಾಗೇರಿ ಜನ್ಮ ದಿನ, ಯಲ್ಲಾಪುರ ಬಿಜೆಪಿ‌ ಮಂಡಲದಿಂದ ಸಿಹಿ ಹಂಚಿಕೆ News: ✒️✒️ ಅರೆಬೇಣದ ಕಾಡಿನಲ್ಲಿ ಆಕರ್ಷಕ ಮೊಗ್ಗು, ಹೂವು News: ✒️✒️ ಜು.11 ಮತ್ತು 12 ಉಮ್ಮಚಗಿ ವಾರ್ಡ ಮತ್ತು ಗ್ರಾಮ ಸಭೆ

ಸಂಸದ ಕಾಗೇರಿ ಜನ್ಮ ದಿನ ಯಲ್ಲಾಪುರ ಬಿಜೆಪಿ‌ ಮಂಡಲದಿಂದ ಸಿಹಿ ಹಂಚಿಕೆ

ಯಲ್ಲಾಪುರ : ಉತ್ತರ ಕನ್ನಡ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ 63 ವರ್ಷಕ್ಕೆ 64ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಜನ್ಮದಿನದಂದು ಭಾರತೀಯ ಜನತಾ ಪಾರ್ಟಿ ಎಲ್ಲಾಪುರ ಮಂಡಳಿ ಪದಾಧಿಕಾರಿಗಳು ವನವಾಸಿ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಸಿಹಿ ವಿತರಿಸಿ ಶಾಲುಗಳನ್ನು ನೀಡಿದರು.
   ಈ ಸಂಧರ್ಭದಲ್ಲಿ ಬಿಜೆಪಿ ಮಂಡಳ ಹಿರಿಯ ಕಾರ್ಯಕರ್ತ ಗಣಪತಿ ಬೋಳಗುಡ್ಡೆ, ನಿಕಟಪೂರ್ವ ಅಧ್ಯಕ್ಷ GN ಗಾಂವ್ಕರ ಮತ್ತು, ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಮತ್ತು ಪ್ರದೀಪ ಯಲ್ಲಾಪುರಕರ ಇದ್ದರು.

ಅರೆಬೇಣದ ಕಾಡಿನಲ್ಲಿ ಆಕರ್ಷಕ ಮೊಗ್ಗು, ಹೂವು

ಯಲ್ಲಾಪುರ ; ಅಂಕೋಲಾ ತಾಲೂಕಿನ ಅರೆಬೇಣದ ಕಾಡಿನ ರಸ್ತೆಯಲ್ಲಿ ಶಿಕ್ಷಕ ಮಹಾದೇವ ಸಂಬಾಜಿ ಅವರ ಜೊತೆಯಲ್ಲಿ ವಿಶ್ರಾಂತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಕಾಡಿನ‌ ಮಧ್ಯ ತೆರಳುತ್ತಿದ್ದಾಗ ಕಾಡಿನಲ್ಲಿ ಹೂಗಿಡವೊಂದು ಬಿಟ್ಟ ಮೊಗ್ಗು, ಹೂವು ತುಂಬಿದ ಚಿಕ್ಕ ರೆಂಬೆ ಬಹುವಾಗಿ ಆಕರ್ಷಣೆ ಮಾಡಿಸಿದೆ. 
   ಈ ಹೂವಿನ ಚಿತ್ರ ತೆಗೆದು ಬೀರಣ್ಣ ನಾಯಕ ಮೊಗಟಾರವರು ಯಲ್ಲಾಪುರ ನ್ಯೂಸ್ ಓದುಗರಿಗರಿಗೆ ನೀಡಿದ್ದಾರೆ.

ಜು.11 ಮತ್ತು 12 ಉಮ್ಮಚಗಿ ವಾರ್ಡ ಮತ್ತು ಗ್ರಾಮ ಸಭೆ
ಯಲ್ಲಾಪುರ : 2024-25ನೇ ಸಾಲಿನ ಉಮ್ಮಚಗಿ ಗ್ರಾಪಂ ವಾರ್ಡ್ ಸಭೆಗಳು ಜುಲೈ 11ರಂದು ಉಮ್ಮಚಗಿ ಪಂಚಾಯತ ವ್ಯಾಪ್ತಿಯ ಚವತ್ತಿ, ಬೆಳಗುಂದ್ಲಿ ದೇವಸ್ಥಾನದ ಆವಾರ, ಶೀಗೇಮನೆ, ಹಲಸಿನಕೊಪ್ಪ ಕಿರಿಯ ಪ್ರಾಥಮಿಕ ಸರಕಾರಿ ಶಾಲೆ, ಕೋಟೆಮನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕ್ರಮಾನುಸಾರ ಬೆಳಿಗ್ಗೆ10 ಗಂಟೆ,  11  ಗಂಟೆ, ಮಧ್ಯಾನ್ಹ 12-30 ಗಂಟೆ, ಮಧ್ಯಾನ್ಹ 3 ಗಂಟೆ, ಮಧ್ಯಾನ್ಹ 4 ಗಂಟೆಗೆ ನಡೆಯಲಿದೆ. 
   ಜುಲೈ 12ರಂದು ಬೆಳಿಗ್ಗೆ 10-30 ಕ್ಕೆ ಉಮ್ಮಚಗಿ ವಿದ್ಯಾಗಣಪತಿ ದೇವಸ್ಥಾನ ಪಕ್ಕದ ಸಭಾಭವನದಲ್ಲಿ ಗ್ರಾಮಸಭೆ ನಡೆಯಲಿದ್ದು, ಪಂಚಾಯತ ವ್ಯಾಪ್ತಿಯ ಗ್ರಾಮಸ್ತರು ಸಮಯಕ್ಕೆ ಸರಿಯಾಗಿ ಆಗಮಿಸಿ ಮುಂದಿನ ಆರ್ಥಿಕ ವರ್ಷದಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಮ್ಮ ಬೇಡಿಕೆ ಮತ್ತು ಸಲಹೆ ಸೂಚನೆಗಳನ್ನು ನೀಡಬೇಕಾಗಿ ಅಧ್ಯಕ್ಷ ಕುಪ್ಪಯ್ಯ ಪೂಜಾರಿ ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ನಸ್ರೀನಾ ಎಕ್ಕುಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

News: ✒️✒️ ಅವಾಂತರ ಸೃಷ್ಟಿಸಿದ ಯಲ್ಲಾಪುರದ ಮಳೆ ಎರಡು ದಿನಗಳಿಂದ ಕಡಿಮೆಯಾಗಿದೆ. .News by: ✒️✒️ ಜಗದೀಶ‌ ನಾಯಕ





ಯಲ್ಲಾಪುರ : ಕಳೆದ ಎರಡು ದಿನಗಳಿಂದ(ಸೋಮವಾರ ಮಂಗಳವಾರ) ಯಲ್ಲಾಪುರ ತಾಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಕಳೆದ ವಾರ ಬಿಟ್ಟುಬಿಡದೆ ಸುರಿದ ಮಳೆ ತೀವ್ರ ಅವಘಡಗಳನ್ನು ಸೃಷ್ಟಿಸಿತ್ತು. ಈ ಮಳೆಯ ಪರಿಣಾಮದಿಂದ ಕೆಳಮಟ್ಟದ ಅನೇಕ ಸೇತುವೆಗಳ ಮೇಲೆ ಹಳ್ಳದ ನೀರು ಹರಿದು, ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿತ್ತು.
  ಮುಖ್ಯವಾಗಿ ಇಡಗುಂದಿ ಪಂಚಾಯಿತಿ ವ್ಯಾಪ್ತಿಯ ಪಣಸಗುಳಿ ಸೇತುವೆಯ ನೀರು ಹರಿದು ಶಾಲಾ ವಿದ್ಯಾರ್ಥಿಗಳು ಶಾಲೆಗೆ ತೆರಳದಂತ ಸ್ಥಿತಿ ನಿರ್ಮಾಣವಾಗಿತ್ತು. ಇದೇ ಸಮಯದಲ್ಲಿ, ಬೀಗಾರ್ ಮತ್ತು ಬಾಗಿನಕಟ್ಟ ರಸ್ತೆಯ ಮಣ್ಣು ಕುಸಿದು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಇದರ ಪರಿಣಾಮವಾಗಿ ಸ್ಥಳೀಯರು ಬಹಳ ಸಂಕಷ್ಟವನ್ನು ಅನುಭವಿಸಬೇಕಾಯಿತು.
   ಮಳೆಯಿಂದಾಗಿ ವಿದ್ಯುತ್ ತಂತಿಗಳ ಮೇಲೆ ಮರದ ಕೊಂಬೆಗಳು ಬಿದ್ದ ಪರಿಣಾಮ ಹಲವಾರು ಭಾಗಗಳಲ್ಲಿ ವಿದ್ಯುತ್ ಕಡಿತಗೊಂಡು ಸಾರ್ವಜನಿಕರಿಗೆ, ಮೊಬೈಲ್ ಸ್ಥಿರ ದೂರವಾಣಿ ಸಂಪರ್ಕಕ್ಕೆ ತೊಂದರೆಯಾಗಿತ್ತು. 
   ರಾಷ್ಟ್ರೀಯ ಹೆದ್ದಾರಿಯ 63ರ ಮೇಲೆ ಅರಭೈಲ್ ಘಟ್ಟದಲ್ಲಿ ಮಳೆಯಿಂದಾಗಿ ಆಗಾಗ ಮರಗಳು ಬಿದ್ದಿರುವುದರಿಂದ ಹೆದ್ದಾರಿ ಸಂಚಾರಕ್ಕೂ ಕೂಡ ವ್ಯತ್ಯಾಸವಾಗಿತ್ತು. ಇದರ ಪರಿಣಾಮವಾಗಿ ಬಹಳಷ್ಟು ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. 
   ವಿವಿಧ ಇಲಾಖೆಯ ಅಧಿಕಾರಿಗಳು ಈ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ವಿವಿಧ ಕ್ರಮಗಳನ್ನು ಕೈಗೊಂಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸಹಕರಿಸುತ್ತಿದ್ದು, ಸಾರ್ವಜನಿಕರಿಗೆ ತ್ವರಿತವಾಗಿ ಸಹಾಯಹಸ್ತವನ್ನು ನೀಡುವ ಪ್ರಯತ್ನ ಮಾಡುತ್ತಿದ್ದಾರೆ. 
   ಕಳೆದ ಎರಡು ದಿನಗಳಿಂದ ಸ್ಥಗಿತವಾಗಿರುವ ಮಳೆ ಸಾರ್ವಜನಿಕರಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗಿದ್ದು, ಎಂದಿನಂತೆ ಜನ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶಾಲಾ ವಿದ್ಯಾರ್ಥಿಗಳು ಶಾಲೆಗೆ ಕಾಲೇಜಿಗೆ ತೆರಳಿ ಸುರಕ್ಷಿತವಾಗಿ ಮನೆಗೆ ಮರಳುತ್ತಿದ್ದಾರೆ.
  ಅವಾಂತರವನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಅಧಿಕಾರಿಗಳ ನಿರ್ವಹಣಾ ಕಾರ್ಯವು ಜನರಲ್ಲಿ ವಿಶ್ವಾಸವನ್ನು ಹುಟ್ಟಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಚೇತರಿಸಿಕೊಳ್ಳುವುದೇ ಅಲ್ಲದೆ, ಜನಜೀವನ ಸಾಮಾನ್ಯ ಸ್ಥಿತಿಗೆ ಮರಳುವ ಸಾಧ್ಯತೆಗಳಿವೆ.