Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Thursday, 11 July 2024

News: ✒️✒️ ಶೆವ್ಕಾರ ಹೆಗಡೆಕೊಪ್ಪದ ಗಣೇಶ್ ಶ್ರೀಧರ್ ಭಟ್ ಸಿ ಎ ಉತ್ತೀರ್ಣNews: ✒️✒️ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ಉದ್ಘಾಟನೆNews: ✒️✒️ ಸರ್ಕಾರಿ ನೌಕರರ ಚುನಾವಣೆಗೆ ಕರಡು ಮತದಾರರ ಪಟ್ಟಿ ಪ್ರಕಟ

ಶೆವ್ಕಾರ ಹೆಗಡೆಕೊಪ್ಪದ ಗಣೇಶ್ ಶ್ರೀಧರ್ ಭಟ್ ಸಿ ಎ ಉತ್ತೀರ್ಣ
ಯಲ್ಲಾಪುರ : ಪ್ರಸ್ತುತ ವರ್ಷದ ಸಿಎ ಪರೀಕ್ಷೆಯಲ್ಲಿ ಅಂಕೋಲಾ ತಾಲೂಕಿನ ಶೆವಕಾರ, ಹೆಗಡೆಕೊಪ್ಪದ ಗಣೇಶ ಶ್ರೀಧರ ಭಟ್ಟ ಸಿಎ (ಚಾರ್ಟರಡ್ ಅಕೌಂಟೆಂಟ್) ಪರೀಕ್ಷೆಯಲ್ಲಿ ತೆರ್ಗಡೆಯಾಗಿದ್ದಾನೆ.
 
  ಶೆವಕಾರ, ಹೆಗಡೆಕೊಪ್ಪದ ಶ್ರೀಧರ್ ಭಟ್ ಹಾಗೂ ಸಾವಿತ್ರಿ ಭಟ್ ದಂಪತಿಗಳ ಪುತ್ರನಾಗಿರುವ ಶ್ರೀಧರ ಭಟ್, ಎಲ್ಲಾಪುರದ ಐ ಟಿ ಎಸ್ ಎಸ್ ಕನ್ನಡ ಮಾಧ್ಯಮದ ಪ್ರೌಢಶಾಲೆಯಲ್ಲಿ ಓದಿರುವ ಮಾಜಿ ವಿದ್ಯಾರ್ಥಿಯಾಗಿದ್ದಾನೆ. 
  ಈತನ ಸಾಧನೆಗೆ ಪಾಲಕರು ಊರಿನ ನಾಗರಿಕರು ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

 ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ಉದ್ಘಾಟನೆ
ಯಲ್ಲಾಪುರ: ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಹೊಸ ಶೈಕ್ಷಣಿಕ ಸಾಲಿಗೆ ನಡೆದ ವಿದ್ಯಾರ್ಥಿ ಸಂಸತ್ತು ಚುನಾವಣೆಯ ಉದ್ಘಾಟನೆ ಕಾರ್ಯಕ್ರಮವನ್ನು ಗುರುವಾರ ಸಂಸ್ಥೆಯ ಸಂಸ್ಥೆಯ ಸಿಇಓ ಅಜಯ ಭಾರತೀಯ ಉದ್ಘಾಟಿಸಿದರು. 
 
 ಅವರು, ದೇಶ ಸೇವೆಗೆ ಜೀವನದ ಸ್ವಲ್ಪ ಸಮಯ ಮೀಸಲಿಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಪಿ ಯು ಕಾಲೇಜಿನ ಉಪನ್ಯಾಸಕಿ ಕವಿತಾ ಹೆಬ್ಬಾರ, ವಿದ್ಯಾರ್ಥಿ ಸಂಸತ್ತಿಗೆ ಆಯ್ಕೆಯಾದವರು ಶಾಲಾ ನಿಯಮದಂತೆ ಕರ್ತವ್ಯ ನಿರ್ವಹಿಸಬೇಕು ಎಂದರು.
    ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ವಿದ್ಯಾರ್ಥಿಗಳಿಗೆ ಕರ್ತವ್ಯದ ಪಟ್ಟಿ ಹಸ್ತಾಂತರಿಸಿದರು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶ್ಯಾಮಲಾ ಕೆರೆಗೆದ್ದೆ ಪ್ರಮಾಣವಚನ ಬೋಧಿಸಿದರು. 
   ಮೇಧಾ ಭಟ್ ಪ್ರಾರ್ಥಿಸಿದರು, ಭುವನೇಶ್ವರಿ ಗೌಡ ನಿರೂಪಿಸಿದರು, ಅರ್ಪಿತಾ ಹೆಗಡೆ ಸ್ವಾಗತಿಸಿದರು, ಮಂಜುನಾಥ ಸಿ ವಂದಿಸಿದರು.

ಸರ್ಕಾರಿ ನೌಕರರ ಚುನಾವಣೆಗೆ ಕರಡು ಮತದಾರರ ಪಟ್ಟಿ ಪ್ರಕಟ
ಯಲ್ಲಾಪುರ ; ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ 2024-25 ರ ಅವಧಿಯ ಚುನಾವಣೆಗೆ ಕರಡು ಮತದಾರರ ಪಟ್ಟಿಯನ್ನು ಬುಧವಾರ ನೌಕರರ ಭವನದಲ್ಲಿ ಪ್ರಕಟಿಸಿಲಾಗಿದೆ‌ ಎಂದು ಪ್ರಧಾನ ಕಾರ್ಯದರ್ಶಿ ಶರಣಪ್ಪ ಗೊಜನೂರ ತಿಳಿಸಿದ್ದಾರೆ.
   ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ರಾಜ್ಯ ಕಾರ್ಯಕಾರಿ ಸಮಿತಿಯು ಕೈಗೊಂಡ ಸರ್ವಾನುಮತದ ನಿರ್ಣಯದಂತೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ 2024 ರಿಂದ 2029 ನೇ ಸಾಲಿನ ಅವಧಿಗೆ ಎಲ್ಲಾ ಹಂತದ ಚುನಾವಣಾ ಪ್ರಕ್ರಿಯೆಗಳನ್ನು ಕೈಗೊಳ್ಳಲು ಸಂಘದ ಬೈಲಾ ನಿಯಮ 47ರ ರೀತ್ಯ ಕರಡು ಮತದಾರರ ಪಟ್ಟಿಯನ್ನು ಯಲ್ಲಾಪುರ ತಾಲೂಕಿನ ಎಲ್ಲ ಇಲಾಖೆಗಳಿಂದ ಪಡೆದು ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ವಿವರದಂತೆ ಇಂದು ಜುಲೈ 10 ರಂದು ಕರಡು ಮತದಾರರ ಪಟ್ಟಿಯನ್ನು ತಾಲೂಕ ಶಾಖೆ ಯಲ್ಲಾಪುರದ ನೌಕರರ ಭವನದ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ‌ ಎಂದು ಸಂಘದ ಕಾರ್ಯದರ್ಶಿ ಶರಣಪ್ಪ ಗೊಜನೂರ ಹಾಗೂ ಕಾರ್ಯದರ್ಶಿ ಸಂಜೀವ ಹೊಸ್ಕೇರಿ ತಿಳಿಸಿದ್ದಾರೆ.
   ಜುಲೈ 10 ರಿಂದ 20 ರ ವರೆಗೆ ಈ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಮನವಿ ಆಕ್ಷೇಪಗಳನ್ನು ಸಲ್ಲಿಸುವವರು ಸೂಕ್ತ ದಾಖಲೆಗಳೊಂದಿಗೆ ಯಲ್ಲಾಪುರ ತಾಲೂಕ್ತ ಶಾಖೆಗೆ ಸಲ್ಲಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಶರಣಪ್ಪ ಗೊಜನೂರ ಪ್ರಧಾನ ಕಾರ್ಯದರ್ಶಿ ಮೊ; 8970375369 ಸಂಜೀವಕುಮಾರ್ ಹೊಸ್ಕೇರಿ ಮೊ ; 9448611151 ಸಂಪರ್ಕಿಸಲು ಕೋರಲಾಗಿದೆ.

ವಜ್ರಳ್ಳಿ ಗ್ರಾಮಸಭೆಯಲ್ಲಿ ವೀರ ಸಾವರ್ಕರ ಪ್ರತಿಮೆ ಸ್ಥಾಪನೆ ರಾಜಕೀಯ ಗುದ್ದಾಟ

ಯಲ್ಲಾಪುರ: ವಜ್ರಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಜುಲೈ 10ರಂದು ನಡೆದ ಗ್ರಾಮ ಸಭೆಯಲ್ಲಿ ಬಸ್ ನಿಲ್ದಾಣ ಪಕ್ಕದಲ್ಲಿ ವೀರ ಸಾವರ್ಕರ್ ಅವರ ಪ್ರತಿಮೆ ಸ್ಥಾಪನೆ ಕುರಿತು ಚರ್ಚೆ ನಡೆಯಿತು. ಈ ಚರ್ಚೆಯಲ್ಲಿ ಕಾಂಗ್ರೆಸ್ ಬೆಂಬಲಿತ ಆಡಳಿತ ಪಕ್ಷ ಹಾಗೂ ಬಿಜೆಪಿ ಬೆಂಬಲಿತ ಸಾರ್ವಜನಿಕರ ಮಧ್ಯೆ ಮಾತಿನ ಚಕಮಕಿ ನಡೆದು, ವಜ್ರಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗಂಗಾ ಕೋಮಾರ್ ಸಾರ್ವಜನಿಕರನ್ನು ಹೊರದಬ್ಬಿ ಬಾಗಿಲು ಹಾಕುವುದಾಗಿ ಹೇಳಿರುವ ಘಟನೆ ನಡೆದಿದೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ತಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು.
  ಈ ಕುರಿತು ನುಡಿಜೇನು ಪ್ರತಿನಿಧಿಯೊಂದಿಗೆ ಮಾತನಾಡಿದ ವಜ್ರಳ್ಳಿ ವೀರ ಸಾವರ್ಕರ್ ಪ್ರತಿಮೆ ಅನಾವರಣ ಸಮಿತಿಯ ಸಂಚಾಲಕ ವಿ ಎನ್ ಭಟ್ಟ ನೆಡಗಿಮನೆ, ಗ್ರಾಮ ಸಭೆಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಂದ ಜನರು ಆಗಮಿಸಿದ್ದರು ಎಂದರು. ಯಲ್ಲಾಪುರ ಕೃಷಿ ಇಲಾಖೆ ಅಧಿಕಾರಿಗಳಾದ ನಾಗರಾಜ ನಾಯ್ಕ ಮತ್ತು ವಜ್ರಳ್ಳಿ ಗ್ರಾಪಂ ಅಧ್ಯಕ್ಷ ಭಗೀರಥ ನಾಯ್ಕ ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ, ಸಮಿತಿಯವರು ಎಂಟು ತಿಂಗಳ ಹಿಂದೆ ವಜ್ರಳ್ಳಿಯಲ್ಲಿ ವೀರ ಸಾವರ್ಕರ್ ಅವರ ಪ್ರತಿಮೆ ಸ್ಥಾಪನೆಗೆ ಪಂಚಾಯತ್ ಪರವಾನಿಗೆಗಾಗಿ ಅರ್ಜಿ ಕೊಟ್ಟಿದ್ದರು ಆದರೆ ಇದುವರೆಗೆ ಪರವಾನಿಗೆ ನೀಡಿಲ್ಲ.
   ಗ್ರಾಮ ಪಂಚಾಯಿತಿ ಸಭೆಯಲ್ಲಿ ಸಾವರ್ಕರ್ ಸಮಿತಿಯವರು ಮತ್ತು ಸಾರ್ವಜನಿಕರು ಪರವಾನಿಗೆ ನೀಡಲು ಒತ್ತಾಯಿಸಿದರು. ಗ್ರಾಪಂ ಅಧ್ಯಕ್ಷರು ಮತ್ತು ನೋಡಲ್ ಅಧಿಕಾರಿಗಳು, ತೀರ್ಮಾನಿಸಲು ಗ್ರಾಮ ಸಭೆಗೆ ಅಧಿಕಾರವಿಲ್ಲ ಎಂದರು. 
   ಗ್ರಾಮ ಸಭೆಯ ಅಧಿಕಾರ ಹಾಗೂ ನಿರ್ಣಯವನ್ನು ಗಾಳಿಗೆ ತೂರಿ ರಾಜಕೀಯ ಕಾರಣಕ್ಕಾಗಿ ಸಾವರ್ಕರ್ ಪ್ರತಿಮೆ ಸ್ಥಾಪಿಸಲು ಪರವಾನಿಗೆ ನೀಡುತ್ತಿಲ್ಲ ಎಂದು ಬಿಜೆಪಿ ಪರ ಜನ ವಾದಿಸಿದರು. ಕಾನೂನು ಪ್ರಕಾರ ಪರವಾನಿಗೆ ಪಡೆದು ಪ್ರತಿಮೆ ಸ್ಥಾಪನೆ ನಡೆಸುತ್ತೇವೆ, ಶಾಸಕರ ಅಣತಿಯಂತೆ ಇಲ್ಲಿಯ ಪಂಚಾಯತಿ ನಡೆದುಕೊಳ್ಳುತ್ತಿದೆ. ದೇಶಭಕ್ತನ‌ ಪ್ರತಿಮೆ‌‌ ಸ್ಥಾಪಿಸಿದರೆ ಶಾಸಕರಿಗೆ ಏನು ಹಾನಿಯಾಗುತ್ತದೆ ತಿಳಿಯುತ್ತಿಲ್ಲ ಎಂದು ವಿ ಎನ್ ಭಟ್ಟ ಹೇಳಿದರು.  
  ಇದೀಗ ವಜ್ರಳ್ಳಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಮಧ್ಯೆ ತೀವ್ರ ವಾಗ್ವಾದದ ವಿಷಯವಾಗಿದೆ. 

ಉಚಗೇರಿ, ಮಜ್ಜಿಗೆಹಳ್ಳದ ಭಾಗು ಡೋಯಿಪಡೆ ಸಿ.ಎ ಉತ್ತೀರ್ಣ

ಯಲ್ಲಾಪುರ : ತಾಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಉಚಗೇರಿ ಗ್ರಾಮದ ಮಜ್ಜಿಗೆಹಳ್ಳದ ಭಾಗು ಡೋಯಿಪಡೆ ಸಿ.ಎ. (ಚಾರ್ಟೆಡ್ ಅಕೌಂಟೆಂಟ್) ಪರೀಕ್ಷೆಯಲ್ಲಿ ಉತ್ತೀರ್ಣನಾಗುವ ಮೂಲಕ ತಾಲೂಕಿಗೆ ಮತ್ತು ತಮ್ಮ ದನಗರ ಗೌಳಿ ಸಮುದಾಯಕ್ಕೆ ಗೌರವ ತಂದಿದ್ದಾನೆ. 
  ಪ್ರಾಥಮಿಕ ಶಿಕ್ಷಣವನ್ನು ಉಚಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರ್ಣಗೊಳಿಸಿದ ಈತ, ಕಾತೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್.ಸಿ ಮುಗಿಸಿ, ಶಿರಸಿ ಎಂಇಎಸ್ ಕಾಲೇಜಿನಲ್ಲಿ ಪಿಯುಸಿ, ಧಾರವಾಡದಲ್ಲಿ ಪದವಿ ಪಡೆದು ನಂತರ ಸಿ.ಎ. ಪರೀಕ್ಷೆ ಕಟ್ಟಿ, ಇದೀಗ ಉತ್ತೀರ್ಣನಾಗಿದ್ದಾನೆ.

ಅರಬೈಲ್ ಘಟ್ಟದ ಟ್ರಾಫಿಕ್ ಜಾಮ್ ವರದಿಗೆ ಸ್ಪಂದಿಸಿ ಪೀನ ದರ್ಪಣ ಅಳವಡಿಸಿದ ಪೊಲೀಸ್ ಇಲಾಖೆ

ಯಲ್ಲಾಪುರ: ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಕೆಟ್ಟು ನಿಂತ ವಾಹನಗಳಿಂದಾಗಿ ವಾಹನ ಸಂಚಾರ ಅಡಚಣೆಯಾಗಿತ್ತು. ಈ ಕುರಿತು ಯಲ್ಲಾಪುರ ನ್ಯೂಸ್ ವರದಿ ಪ್ರಕಟಿಸಿದ ನಂತರ, ಯಲ್ಲಾಪುರ ಪೊಲೀಸ್ ಇಲಾಖೆ ತಕ್ಷಣವೇ ಕ್ರಮ ಕೈಗೊಂಡು ಬಹುತೇಕ ತಿರುವುಗಳಲ್ಲಿ ಪೀನ (ಕಾನ್ವೆಕ್ಸ್) ದರ್ಪಣಗಳನ್ನು ಅಳವಡಿಸಿದೆ. ಇದು ವಾಹನ ಚಾಲಕರಿಗೆ ಅನುಕೂಲ ಮಾಡಿಕೊಟ್ಟಿದೆ.
   ಪೊಲೀಸ್ ನಿರೀಕ್ಷಕರಾದ ರಮೇಶ್ ಹಾನಾಪುರ್ ಮಾರ್ಗದರ್ಶನದಲ್ಲಿ ಟ್ರಾಫಿಕ್ ಪೊಲೀಸ್ ಉಪ ನಿರೀಕ್ಷಕರಾದ ನಸ್ರೀನ್ ತಾಜ್ ಚಟ್ಟರಗಿ ಅವರ ತಂಡ, ಗಾರೆ ಕೆಲಸದವರ ಸಹಾಯದಿಂದ ಶಾಶ್ವತವಾಗಿ ಪೀನ ದರ್ಪಣಗಳು ಮತ್ತು ಸೂಚನಾ ಫಲಕಗಳನ್ನು ಅಳವಡಿಸಿದರು. 
  ರಸ್ತೆಯ ಮಧ್ಯ ರಸ್ತೆಯಲ್ಲಿ ಕೆಟ್ಟು ನಿಂತ ವಾಹನಗಳನ್ನು ಪಕ್ಕಕ್ಕೆ ಸರಿಸಲು ಎಲ್ಲಾ ಕ್ರಮಗಳನ್ನು ಅವರು ಕೈಗೊಂಡಿದ್ದಾರೆ.

ಅಸಮರ್ಪಕ ವಿದ್ಯುತ್ : ಕಂಪ್ಲಿ ಮತ್ತು ಹಾಸಣಗಿ ಗ್ರಾಪಂ ಸದಸ್ಯರಿಂದ ಪ್ರತಿಭಟನೆಯ ಎಚ್ಚರಿಕೆ

ಯಲ್ಲಾಪುರ : ತಾಲೂಕಿನ ಕಂಪ್ಲಿ ಮತ್ತು ಹಾಸಣಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆಯನ್ನು ಸರಿಪಡಿಸುವಂತೆ ಆಗಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಸಾರ್ವಜನಿಕರು ಗುರುವಾರ ಮಂಚಿಕೇರಿ ಹೆಸ್ಕಾಂ ಶಾಖಾಧಿಕಾರಿ ನಾಗಾರಾಜ ಆಚಾರಿಗೆ ಮನವಿ ಸಲ್ಲಿಸಿದರು.
   ಮಂಚಿಕೇರಿ ಹೆಸ್ಕಾಂ ಶಾಖೆಯ ವ್ಯಾಪ್ತಿಯಲ್ಲಿ ಬರುವ ಕಂಪ್ಲಿ ಮತ್ತು ಹಾಸಣಗಿ ಪಂಚಾಯತ ಗ್ರಾಮಸ್ಥರು ಕಳೆದ ಒಂದು ತಿಂಗಳಿಂದ ಊರಿನಲ್ಲಿ ವಿದ್ಯುತ್‌ ದಿನಕ್ಕೆ 3 ತಾಸು ಸರಿಯಾಗಿ ಇರುವುದೇ ಕಷ್ಟವಾಗಿದೆ. ಮಳೆಗಾಲದ ಪ್ರಾರಂಭದಲ್ಲಿ ವಿದ್ಯುತ್ ಸರಿಯಾಗಿ ಕೊಡಲು ಬೇಕಾದ ವ್ಯವಸ್ಥೆಯನ್ನು ತಾವುಗಳು ಮಾಡಿಕೊಳ್ಳದೇ ಹೋದಲ್ಲಿ ತಮ್ಮ ಇಲಾಖೆಯ ನಿಷ್ಕಾಳಜಿಯನ್ನು ತೋರಿಸುತ್ತದೆ. ವಿದ್ಯುತ್ ವ್ಯವಸ್ಥೆಯನ್ನು ಸರಿಪಡಿಸಿ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಅಂತ ತಿಳಿದಿದ್ದೇವೆ' ಈ ಕೂಡಲೇ ವಿದ್ಯುತ್ ಬಳಕೆದಾರರಾದ ನಾವುಗಳು ಬರುವ ಇನ್ನೊಂದು ವಾರದಲ್ಲಿ ಈ ವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಮನವಿಯಲ್ಲಿ ಕೇಳಿಕೊಂಡಿದ್ದಾರೆ. 
    ಇನ್ನೊಂದು ವಾರದಲ್ಲಿ ವಿದ್ಯುತ್ ಅವ್ಯವಸ್ಥೆಯನ್ನು ಸರಿಪಡಿಸದೇ ಹೋದಲ್ಲಿ ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
   ಮನವಿ ನೀಡುವ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಘವೇಂದ್ರ ಭಟ್ ಹಾಸಣಗಿ, ಕಂಪ್ಲಿ ಪಂಚಾಯತಿ ಉಪಾಧ್ಯಕ್ಷ ಸದಾಶಿವ ಚಿಕ್ಕೋತಿ, ಸದಸ್ಯ ರಘುಪತಿ ಹೆಗಡೆ, ಹಾಸಣಗಿ ಪಂಚಾಯಿತಿ ಅಧ್ಯಕ್ಷೆ ವಿನೋದಾ ಬಿಲ್ಲವ, ಉಪಾಧ್ಯಕ್ಷ ಪುರಂದರ ನಾಯ್ಕ, ಪ್ರಮುಖರಾದ ಪವನ್ ಕೈಸರಕರ್, ದಿನಕರ ಪೂಜಾರಿ, ಮುಸ್ತಾಕ್ ಶೇಖ್, ಬಾಲಚಂದ್ರ ಹೆಗಡೆ, ಹಿರಿಯಾ ಪೂಜಾರಿ ಹಾಗೂ ಇನ್ನಿತರರು ಇದ್ದರು.
    ಹೆಸ್ಕಾಂ ಶಾಖಾಧಿಕಾರಿ ನಾಗರಾಜ ಆಚಾರಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಶೀಘ್ರವಾಗಿ ದುರಸ್ತಿ ಮಾಡಲಾಗುವುದು ಎಂದು ಭರವಸೆ ನೀಡಿದರು.

News: ✒️✒️ ಬಿಸಗೋಡ ಸರ್ಕಾರಿ ಪ್ರೌಢ ಶಾಲೆಯ ಸಂಸತ್ತು ಉದ್ಘಾಟನೆNews: ✒️✒️ ಜುಲೈ 13ರಂದು ಯಲ್ಲಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ

ಯಲ್ಲಾಪುರ: ಬಿಸಗೋಡ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಶಾಲಾ ಸಂಸತ್ತನ್ನು ಉದ್ಘಾಟಿಸಿ, ಟಿಎಂಎಸ್ ಅಧ್ಯಕ್ಷ ನಾರಾಯಣ ಭಟ್ ಅಗ್ಗಾಶಿಕುಂಬ್ರಿ ಮಾತನಾಡಿದರು.
    ಅವರು, ಶಾಲಾ ಸಂಸತ್ತಿನ ಮೂಲಕ ಯುವಜನಾಂಗದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸಿ, ಪ್ರಜ್ಞಾವಂತ ಮತದಾರರನ್ನು ನಿರ್ಮಾಣ ಮಾಡುವುದು ಪ್ರಮುಖವಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ಶಿಕ್ಷಣದ ಮೌಲ್ಯಗಳ ಜೊತೆಗೆ ಜೀವನ ಶಿಕ್ಷಣವನ್ನು ಪಡೆಯುವುದು ಅನಿವಾರ್ಯತೆಯಾಗಿದೆ. ಪ್ರಬುದ್ಧ ಸಮಾಜ ನಿರ್ಮಾಣಕ್ಕೆ ಶಾಲಾ ಸಂಸತ್ತು ಸಹಕಾರಿಯಾಗಬೇಕು ಎಂದು ಕರೆ ನೀಡಿದರು.   
       ನಂತರ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳು ಸಹಕಾರ ಕ್ಷೇತ್ರ, ಕೃಷಿ ಬೆಳವಣಿಗೆ, ಬಹುಪಕ್ಷ ಪದ್ಧತಿ, ವಿಭಕ್ತ ಕುಟುಂಬ ಪದ್ಧತಿ, ಪ್ರತಿಭಾ ಪಲಾಯನ ಮುಂತಾದ ವಿಷಯಗಳ ಕುರಿತು ಸಂವಾದ ನಡೆಸಿ ಮಾಹಿತಿ ಪಡೆದರು. 
 ಶಾಲೆಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಧನುಷ್ ಕೆಎಂ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಗಣಪತಿ ಭಟ್ ವಹಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾದ ವಿನೋದ ನಾಯಕ ಪ್ರಮಾಣವಚನ ಬೋಧಿಸಿದರು.      
   ಶಾಲೆಯ ಮುಖ್ಯೋಪಾಧ್ಯಾಯ ಎಂ ಆರ್ ನಾಯಕ, ಶಿಕ್ಷಕರುಗಳಾದ ಶಾಲಿನಿ ನಾಯಕ, ಶ್ರೀಧರ ಹೆಗಡೆ, ಶೈಲಾ ಭಟ್ಟ, ವಿ ಎಂ ಭಟ್, ಸದಾನಂದ ದಬಗಾರ, ರವಿಕುಮಾರ ಕೆ.ಎನ್, ನಾಗರಾಜ್ ಹೆಗಡೆ ಉಪಸ್ಥಿತರಿದ್ದರು.

ಜುಲೈ 13ರಂದು ಯಲ್ಲಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ 
ಯಲ್ಲಾಪುರ ; ಕಾಲೇಜು ಶಿಕ್ಷಣ ಇಲಾಖೆ, ಯಲ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಆಶ್ರಯದಲ್ಲಿ ಜುಲೈ 13ರ ಬೆಳಿಗ್ಗೆ 10.00 ಗಂಟೆಗೆ 'ಕಾಲೇಜು ವಾರ್ಷಿಕೋತ್ಸವ' ಕಾರ್ಯಕ್ರಮ ನಡೆಯಲಿದೆ ಎಂದು ಪ್ರಾಂಶುಪಾಲರಾದ ಡಾ. ಆರ್.ಡಿ. ಜನಾರ್ಧನ್ ತಿಳಿಸಿದ್ದಾರೆ.
  ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಿವರಾಮ ಹೆಬ್ಬಾರ್ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಸಂಗೀತ ಕಲಾವಿದ ಪ್ರಸನ್ನ ವೈದ್ಯ ಹೆಗ್ಗಾರ್  ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಆರ್.ಡಿ. ಜನಾರ್ಧನ್  ವಹಿಸಲ್ಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

News: ✒️✒️ ಯಲ್ಲಾಪುರದ ಸಂಸ್ಕೃತಿ, ಸಂಸ್ಕಾರ, ಇತಿಹಾಸ, ಪ್ರಕೃತಿಯನ್ನು ಅಷ್ಟೆ ಸುಂದರವಾಗಿ ತಿಳಿಸಿಕೊಡುವ ಯಲ್ಲಾಪುರದ ಯೂಟ್ಯೂಬ್ ಚಾನಲ್ ' ನಮಸ್ತೆ ಯಲ್ಲಾಪುರ'News by: ✒️✒️ ಜಗದೀಶ‌ ನಾಯಕ

ಯಲ್ಲಾಪುರ :  ಇಂದು ನಮಗೆ ಇಂಟರ್ನೆಟ್ ಜಗತ್ತಿನ ದರ್ಶನವನ್ನು ಮಾಡಿದೆ, ಅದರಲ್ಲಿಯೂ ಯುಟ್ಯೂಬ್ ಹೈ ರೆಸುಲೇಷನ್ ವಿಡಿಯೋಗಳು ಸ್ವತಃ ನಾವೇ ಆ ತಾಣಗಳಿಗೆ ಹೋಗಿ ಭೇಟಿ ಕೊಟ್ಟಿದ್ದೇವೆ ಅನ್ನುವಂತಹ ಅನುಭವವನ್ನು ನೀಡುತ್ತಿವೆ. ಯಲ್ಲಾಪುರದಲ್ಲಿಯೂ ಅಂತಹ ಒಂದು ಯೂಟ್ಯೂಬ್ ಚಾನೆಲ್ ಇತ್ತೀಚೆಗೆ ಪ್ರಾರಂಭವಾಗಿದೆ. ಯಲ್ಲಾಪುರದ ಗತವೈಭವ, ಸಂಸ್ಕೃತಿ, ಸಂಸ್ಕಾರ, ಇತಿಹಾಸವನ್ನು ಹಿರಿಯ ತಲೆಮಾರುಗಳಿಂದ ಇಂದಿನ ತಲೆಮಾರಿಗೆ ತಿಳಿಸುವ ಕಾರ್ಯ ಈ ಯುಟ್ಯೂಬ್ ಚಾನೆಲ್ ನಿಂದ ಆಗುತ್ತಿದೆ. ಅದೇ, 'ನಮಸ್ತೆ ಯಲ್ಲಾಪುರ' ಹೆಸರಿನ 'ಸಂಜೆ ಸೂರ್ಯ' ಯೂಟ್ಯೂಬ್ ಚಾನಲ್.
  ಕಳೆದ 18 ವರ್ಷದಿಂದ ಪತ್ರಿಕಾ ಕ್ಷೇತ್ರದಲ್ಲಿ ಗುರುತಿಸಿಕೊಂಡು, ಅಂದು ಯಲ್ಲಾಪುರದ ವರದಿಗಾರರೊಬ್ಬರಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಸುಂದರವಾಗಿ ಲೇಖನ, ವರದಿ ಬರೆಯುವ ತಾಲೂಕಿನ ಮಾಗೋಡ ನಿವಾಸಿ ಸತೀಶ ಮಾಗೋಡ ಯೂಟ್ಯೂಬ್ ಚಾನಲ್ ಒಂದನ್ನು ಪ್ರಾರಂಭ ಮಾಡಿದ್ದಾರೆ. 'ನಮಸ್ತೆ ಯಲ್ಲಾಪುರ' ಹೆಸರಿನ 'ಸಂಜೆ ಸೂರ್ಯ' ಯೂಟ್ಯೂಬ್ ಚಾನಲ್ ಯಲ್ಲಾಪುರದ ಹಲವಾರು ಪ್ರಕೃತಿ ಸೌಂದರ್ಯಗಳನ್ನು ಬಣ್ಣಿಸಿ ಸುದ್ದಿ ಮಾಡಿದೆ.
ವಿಶ್ರಾಂತ ಪ್ರಾಂಶುಪಾಲ ಶ್ರೀರಂಗ ಕಟ್ಟಿ ಅವರನ್ನು ಸಂದರ್ಶಿಸಿ "ನಮ್ಮೂರೆ‌ನಮಗೆ ಚಂದ" 50 ವರ್ಷದ ಹಿಂದಿನ ಯಲ್ಲಾಪುರವನ್ನು ಕಣ್ಣಿಗೆ ಕಟ್ಟುವಂತೆ ಚಾನೆಲ್ ಬಿತ್ತರಿಸಿದೆ. ಖ್ಯಾತ ವೈದ್ಯರಾದ ಡಾ. ಸೌಮ್ಯ ಕೆ.ವಿ ಅವರ ಸಂದರ್ಶನದಲ್ಲಿ "ಈ ಮಕ್ಕಳೇಕೆ ಹೀಗಾಡ್ತವೆ" ಮಕ್ಕಳ ಜಾಗೃತಿ ಬಗ್ಗೆ ವರದಿ ಮಾಡಲಾಗಿದೆ. ಇನ್ನೂ "ಮೈ ಮರೆತರೇ ಸಾವು‌ ಖಚಿತ" ಪ್ರವಾಸಿಗರಿಗಾಗಿ ಜಾಗೃತಿ, ಮಾಗೋಡ ಫಾಲ್ಸ್ ಸೌಂದರ್ಯದ ಕುರಿತು ಯುಟ್ಯೂಬ್ ಚಾನಲ್ ಬಿತ್ತರಿಸಿದೆ.
   ಯಾವುದೇ ಹಣ ಮಾಡುವ ಉದ್ದೇಶ, ಜಾಹೀರಾತು ಪ್ರಕಟಿಸುವ ಉದ್ದೇಶವಿಲ್ಲದೆ, ತಮ್ಮನ್ನು ತಾವು ಪ್ರದರ್ಶಿಸಿಕೊಳ್ಳದೇ(ಮೂಗಿನ ಹೊಳ್ಳೆ ತೋರಿಸದೇ), ಹೊಗಳಿಕೊಂಡು(ತಮ್ಮ ಪರವಾಗಿಯೇ ಬರೆದುಕೊಂಡು) ಚಾನೆಲ್ ಬಗ್ಗೆ ಬಣ್ಣಿಸಿಕೊಂಡು ಪ್ರದರ್ಶಿಸಿಕೊಳ್ಳದೇ ಸತೀಶ್ ಮಾಗೋಡ ಎಲೆ ಮರಿಯ ಕಾಯಾಗಿ ಕೆಲಸ ಮಾಡುತ್ತಿದ್ದಾರೆ. ಚಾನಲಿನ ಪ್ರತಿಯೊಂದು ಎಪಿಸೋಡ್ ನೋಡಿದಾಗ ನನ್ನ ಹಿಂದಿನ ಮಿತ್ರ ಸತೀಶ ಅವರನ್ನು ಸಂಪರ್ಕಿಸಿ ಯಲ್ಲಾಪುರ ನ್ಯೂಸ್ ಗೆ ವರದಿ ಮಾಡುವ ಎಂದು ಅನಿಸಿತ್ತು. ಬಹಳಷ್ಟು ದುಂಬಾಲು ಬಿದ್ದ ನಂತರ ಕೆಲವೇ ಕೆಲವು ಮಾತುಗಳನ್ನು ಆಡಲು ಒಪ್ಪಿಕೊಂಡರು ಅಷ್ಟೇ. ತನ್ನ ಫೋಟೋ ನೀಡಲು ಒಪ್ಪಿಕೊಳ್ಳಲಿಲ್ಲ. 
    
ಸತೀಶ ಮಾಗೋಡ ಮಾತಿನಲ್ಲಿ ' ನಮಸ್ತೆ ಯಲ್ಲಾಪುರ'
 ಅಲ್ಲೆಲ್ಲೋ ಪರ ಊರಿನಲ್ಲಿ ಕುಳಿತವರಿಗೆ ನಮ್ಮೂರಿನ ಕೊಂಡಿ ಕಳಚೋದಿಲ್ಲ ನೋಡಿ. ಮೆಜೆಸ್ಟಿಕ್ ಹತ್ರ ಸುಯ್ಯ್ ಅಂತ ನಮ್ಮೂರ ಪಾಸಿಂಗ್ ಇರೋ ಕಾರ್ ಹಾದುಹೋದ್ರೆ ಒಂದ್ ನಿಮಿಷ ಅತ್ತಲೇ ನೋಡ್ತೀರ್ತೀವಿ. ಯಾವುದಾದ್ರೂ ಶಾಪಿಂಗ್ ಮಾಲ್ ನಲ್ಲಿ ಜೋನಿ ಬೆಲ್ಲದ ಡಬ್ಬಿ ಕಂಡ್ರೆ ರೇಟ್ ಎಷ್ಟು ಅಂತಾನೂ ನೋಡದೆ ಖರೀದಿ ಮಾಡಿಬಿಡ್ತೀವಿ. ಯಲ್ಲಾಪುರ ಜಾತ್ರೆ ಅಂದ್ರೆ ಎಲ್ಲಾದ್ರೂ ಓಡಿ ಬರ್ತೀವಿ. 
   ಯಾಕೆ? ದೇಹ ಎಲ್ಲೆಲ್ಲೋ ಇದ್ರೂ ಮನಸ್ಸು ಮಾತ್ರ ಇಲ್ಲೇ ಇದೆಯಲ್ಲ! ಯಲ್ಲಾಪುರ! ಇದು ಎಲ್ಲರಪುರ! 
ನಮ್ಮೂರ ಸೆಳೆತವೇ ಅಂಥದ್ದು ನೋಡಿ. ಬೆಂಗಳೂರು, ಮೈಸೂರು ಅಥವಾ ಇನ್ನೆಲ್ಲೇ ಇದ್ರೂ ಅಲ್ಲೇ ಒಂದು ಮಿನಿ ಯಲ್ಲಾಪುರವನ್ನು ಸೃಷ್ಟಿಸಿಕೊಂಡ ಬಂಧುಗಳಿಗೆ ನಮ್ಮ ಪ್ರಯತ್ನದ ಅರ್ಪಣೆ.
ಈಗ 25 ವರ್ಷಗಳ ಹಿಂದೆ ನಮ್ಮ ಯಲ್ಲಾಪುರ ಹೇಗಿತ್ತು? ನಮ್ಮ ತಲೆಮಾರಿನ ಮಂದಿಗೆ ಗೊತ್ತಿದೆ. 50 ವರ್ಷಗಳ ಹಿಂದೆ? ನನಗೆ ಗೊತ್ತಿಲ್ಲದಿದ್ದರೂ ನನ್ನ ತಂದೆಗೆ ಗೊತ್ತು. 75 ವರ್ಷಗಳ ಹಿಂದೆ? ನನಗೂ, ತಂದೆಗೂ ತಿಳಿಯದ ವಿಷಯ ನನ್ನ ಅಜ್ಜನಿಗೆ ಗೊತ್ತು! ಆ ವಿಚಾರಗಳು ನಮ್ಮ ಮುಂದಿನ ತಲೆಮಾರಿಗೂ ತಿಳಿಯಲಿ ಎಂಬುದೇ ನಮ್ಮ ಉದ್ದೇಶ. ಆ ಪ್ರಯತ್ನವೇ ' ನಮಸ್ತೇ ಯಲ್ಲಾಪುರ '
   ಇದರೊಂದಿಗೆ, ಹೊಸ ವಿಚಾರಗಳನ್ನೂ, ಎಲ್ಲಿಯೂ ' ಅಸಡ್ಡಾಳು ' ಎನ್ನಿಸದ, ನಾನ್ಸೆನ್ಸ್ ಎಂಬ ಭಾವನೆ ಬಾರದ, ಉಪಯುಕ್ತ ವಿಚಾರಗಳನ್ನೂ ಸಂಪನ್ಮೂಲ ವ್ಯಕ್ತಿಗಳ ಸಹಕಾರದೊಂದಿಗೆ ನಿಮ್ಮೆದುರು ಇಡುತ್ತಿದ್ದೆವೆ.
    ನನ್ನ ವೃತ್ತಿ ಕೃಷಿ. ಪ್ರವೃತ್ತಿ ಪತ್ರಿಕೋದ್ಯಮ. ರಾಜ್ಯದ ಬಹುತೇಕ ಪತ್ರಿಕೆಗಳಲ್ಲಿ ಲೇಖನ, ನುಡಿಚಿತ್ರಗಳು ಪ್ರಕಟವಾಗಿವೆ. ಕೆಲ ಕಾಲ ವರದಿಗಾರನಾಗಿ ಸಂಯುಕ್ತ ಕರ್ನಾಟಕ, ಧ್ಯೆಯನಿಸ್ಟ ಪತ್ರಕರ್ತ, ಸಂಜೆ ದರ್ಪಣ ಪತ್ರಿಕೆಗಳಲ್ಲಿ, ವಿಜಯವಾಣಿ ಪತ್ರಿಕೆಯಲ್ಲೂ ಕೆಲಸ ಮಾಡಿದ್ದೇನೆ.
 ಸದ್ಯ, ಹಾಸನ ಹಾಗೂ ಚಿಕ್ಕಮಗಳೂರಿನ ಜನಮಿತ್ರ ದಿನಪತ್ರಿಕೆಯಲ್ಲಿ ವಿಶೇಷ ಪ್ರತಿನಿಧಿಯಾಗಿದ್ದೆನೆ. ಸೈಬರ್ ಕ್ರೈಂ ಗೆ  ಸಂಬಂಧಿಸಿ 100 ಕ್ಕೂ ಹೆಚ್ಚು ಲೇಖನಗಳ ಮೂಲಕ ಜಾಗೃತಿ ಮೂಡಿಸಿದ ತೃಪ್ತಿಯಿದೆ. ಗದಗ ಜಿಲ್ಲೆಯ ವಿಜಯಸಾಕ್ಷಿ ದಿನಪತ್ರಿಕೆಯಲ್ಲಿ ಉಪ ಸಂಪಾದಕನಾಗಿ ನನ್ನ ಮನೆ ಮಾಗೋಡದಿಂದಲೇ ಕೆಲಸ ಮಾಡುತ್ತಿದ್ದೆನೆ. ಪರಿಸರ, ಜೀವವೈವಿಧ್ಯ, ವಿಜ್ಞಾನ ನನ್ನ ಆಸಕ್ತಿಯ ವಿಷಯ.
  ಯಲ್ಲಾಪುರ ತಾಲೂಕಿನ ಬಗ್ಗೆ, ಇತಿಹಾಸ, ಬೆಳವಣಿಗೆಯ ಬಗ್ಗೆ ಒಂದಿಷ್ಟು ಮಾಹಿತಿ ಕ್ರೋಡೀಕರಿಸಿ ಮುಂದಿನ ಪೀಳಿಗೆಗೂ ಪರಿಚಯಿಸಬೇಕು ಅನ್ನೋದು ನಮ್ಮ ಚಾನೆಲ್ ಉದ್ದೇಶ ಎಂದು‌ ಹೇಳುತ್ತಾರೆ.

ಫೋಟೊಗ್ರಾಫರ್, ಫೇಜಿನೇಟರ್, ಕೃಷಿಕ ಸತೀಶ ಮಾಗೋಡ
   ಉತ್ತಮ ಶುದ್ಧ ಬರಹದ ಪತ್ರಕರ್ತರಾಗಿರುವ ಸತೀಶ ಮಾಗೋಡ್ ಒಳ್ಳೆಯ ಫೋಟೋಗ್ರಾಫರ್ ಕೂಡ ಹೌದು, ಯಾವುದೇ ಚಿತ್ರೀಕರಣವನ್ನು ಮಾಡುವಾಗ ಕ್ಯಾಮರವನ್ನು ಸ್ವಲ್ಪವೂ ಅಲುಗಾಡಿಸಿದೆ(ಗಿರಿಗಿಟ್ಟಿ ಕ್ಯಾಮೇರಾಮನ್ ಆಗದೇ) ಸ್ಟೆಬಿಲೈಜ್ ಆಗಿ ಚಿತ್ರೀಕರಣ ಮಾಡಿ ವೀಕ್ಷಕರಿಗೆ ಸ್ಪಷ್ಟ ವಿಡಿಯೋವನ್ನು ರವಾನಿಸುತ್ತಾರೆ. ಮುದ್ರಣ ಮಾಧ್ಯಮದ ಒಳ್ಳೆಯ ಪೇಜಿನೇಟರ್ ಕೂಡ ಹೌದು. ವಿಡಿಯೋ ಎಡಿಟರ್ ಕೂಡ, ಇವರು ಚಿತ್ರಿಕರಿಸಿರುವ ಪ್ರಸ್ತುತ ಪಡಿಸಿರುವ, ಯುಟ್ಯೂಬ್ ಚಾನಲ್ ವೈಸ್ ಓವರ್ ಬೇರೆಯವರದಾಗಿದ್ದರೂ ಸ್ಕ್ರಿಪ್ಟ್ ಸತೀಶ ಅವರದೇ ಆಗಿರುತ್ತದೆ. ವಿಡಿಯೋವನ್ನು ಇವರೇ ಎಡಿಟ್ ಮಾಡುತ್ತಾರೆ. ಹಾಗೆಯೇ ಹೈ ರೆಸುಲೇಷನ್ ವಿಡಿಯೋಗಳನ್ನು ಯೂಟ್ಯೂಬ್ ಗೆ ಅಪ್ಲೋಡ್ ಮಾಡುತ್ತಾರೆ.
    ಬಹುಮುಖ ಪ್ರತಿಭೆಯ ಸತೀಶ್ ಮಾಗೋಡ ಓರ್ವ  ವೈಜ್ಞಾನಿಕ ತಳಹದಿಯ ಮೇಲೆ ಕೃಷಿಕ, ತಮ್ಮ ಗದ್ದೆಯಲ್ಲಿ ತರಕಾರಿ ಬೆಳೆಯುವ ಪ್ರಗತಿಪರ ರೈತ, ಕಡಿಮೆ ನೀರು, ಕಡಿಮೆ ಸ್ಥಳ, ಜೈವಿಕ ಗೊಬ್ಬರ ಬಳಸಿ ಬೆಳೆಸಿರುವ ಇವರ ತರಕಾರಿಗೆ ಹಲವಾರು ಕಡೆಗಳಲ್ಲಿ ಬೇಡಿಕೆ ಇದೆ. ನಿರ್ದಿಷ್ಟಪಡಿಸಿದ ಗ್ರಾಹಕರಿಕಷ್ಟೇ ಇವರು ತಮ್ಮ ತರಕಾರಿಗಳನ್ನು ಪೂರೈಸುತ್ತಾರೆ. 
    ಯಲ್ಲಾಪುರವನ್ನು ಜಗತ್ತಿಗೆ ಪರಿಚಯಿಸುವ ಯಲ್ಲಾಪುರದ ಇತಿಹಾಸವನ್ನು ಇಂದಿನ ಪೀಳಿಗೆ ತಲುಪಿಸುವ ಸತೀಶ್ ಮಾಗೋಡು ಅವರ ಪ್ರಯತ್ನ 'ನಮಸ್ತೆ ಯಲ್ಲಾಪುರ' 'ಸಂಜೆ ಸೂರ್ಯ' ಯೂಟ್ಯೂಬ್ ಚಾನಲ್ ಯಶಸ್ವಿಯಾಗಲಿ ಎಂದು ಯಲ್ಲಾಪುರ ನ್ಯೂಸ್ ಹಾರೈಸುತ್ತದೆ.



✒️✒️ ಅರಬೈಲ ಘಟ್ಟದಲ್ಲಿ ಕೆಟ್ಟು ನಿಂತ ವಾಹನಗಳಿಂದಾಗಿ ಟ್ರಾಫಿಕ್ ಜಾಮ್

ಯಲ್ಲಾಪುರ : ಪ್ರತಿದಿನ 9,000 ಹೆಚ್ಚು ವಾಹನಗಳನ್ನು ಸಹಿಸಿಕೊಳ್ಳುತ್ತಿರುವ ಅರೆಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ 63ರ ಮೇಲೆ ಕೆಟ್ಟು ನಿಂತ ವಾಹನಗಳಿಂದ ಟ್ರಾಫಿಕ್ ಜಾಮ್ ಉಂಟಾಗಿ ಇನ್ನಿತರ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ಗುರುವಾರ ಬೆಳಿಗ್ಗೆ ಕೂಡ ಇಂತಹ ಘಟನೆ ನಡೆದಿದ್ದು ಸುಮಾರು 30 ನಿಮಿಷ ವಾಹನಗಳು ಸಂಚಾರಕ್ಕೆ ವಿಳಂಬವಾಗಿ ನಲಸಂಚರಿಸಿವೆ. 
   ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ಮತ್ತು ಘಟ್ಟದ ಕೆಳಗಿನ ಪ್ರದೇಶವನ್ನು ಬೆಸೆಯುವ ಆರು ಮೈಲಿ ಉದ್ದದ ಅರಬೈಲ್ ಘಟ್ಟ ಭಾರಿ ವಾಹನಗಳ ಚಾಲಕರು ಹರಸಾಹಸ ಪಟ್ಟು ದಾಟಬೇಕಾಗಿದೆ. ಪರಿಣಿತ ಚಾಲಕರು ಮಾತ್ರ ಈ ರಸ್ತೆಯನ್ನು ಯಶಸ್ವಿಯಾಗಿ ದಾಟಿಸುತ್ತಾರೆ. ಅರಬೈಲ ಘಟ್ಟಕ್ಕೆ ಹೊಸದಾಗಿ ಬಂದ ಚಾಲಕರು ತಮ್ಮ ವಾಹನಗಳನ್ನು ರಸ್ತೆ ಪಕ್ಕ ಉರಳಿಸಿಕೊಳ್ಳುತ್ತಿದ್ದಾರೆ, ಇಲ್ಲವೇ ಅಪಘಾತಕ್ಕೆ  ಮಾಡುತ್ತಿರುವುದು ಹೆಚ್ಚಾಗಿ ಕಂಡುಬರುತ್ತದೆ. ಅತಿ ಹೆಚ್ಚಿನ 'ಯು' ಆಕಾರದ ತಿರುವುಗಳಲ್ಲಿ ನಿಯಂತ್ರಣ ಕಳೆದುಕೊಂಡ ಚಾಲಕರು ಅಪಘಾತಕ್ಕೆ ಇಡಾಗುತ್ತಿದ್ದಾರೆ. ಅಷ್ಟೇ ಅಲ್ಲದೆ, ಅತಿ ಭಾರದ ವಾಹನಗಳ ಎಂಜಿನ್, ಟೈಯರ್ ಘಟ್ಟದ ಮೇಲೆ ಸಾಮಗ್ರಿಗಳನ್ನು ಸಾಗಿಸುತ್ತಿರುವಾಗ ಸಾಮರ್ಥ್ಯ ಕಳೆದುಕೊಂಡು ಕೆಟ್ಟು ನಿಲ್ಲುತ್ತವೆ. ಎಲ್ಲಂದರಲ್ಲಿ ಕೆಟ್ಟು ನಿಲ್ಲುವ ವಾಹನಗಳಿಂದಾಗಿ ಹಿಂದೆ ಹಾಗೂ ಮುಂದಿನಿಂದ ಬರುವ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ.
  ರಸ್ತೆಯಲ್ಲಿ ಕೆಟ್ಟು ನಿಂತ ವಾಹನದ ಪರಿಣಾಮವಾಗಿ ಅರಬೈಲ್ ಘಟ್ಟದಲ್ಲಿ ಗುರುವಾರ ಮುಂಜಾನೆ 8-45 ರಿಂದ ಅರ್ಧ ಗಂಟೆ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು, ನೂರಾರು ವಾಹನಗಳು ಹೆದ್ದಾರಿಯ ಎರಡು ಬದಿಯಲ್ಲಿ, ಶಿರಲೆ ಕ್ರಾಸ್ ನಿಂದ ಆರಂಭವಾದ ಸುಮಾರು ನಾಲ್ಕು ಕಿ .ಮಿ ಅರಬೈಲ್ ಮಾರುತಿ ದೇವಸ್ಥಾನದವರೆಗೂ ತಲುಪಿತ್ತು. 
     ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಹೆದ್ದಾರಿ ನಡುವಿನ ಲಾರಿ ತೆರವುಗೊಳಿಸಬೇಕಿದೆ. ಇಲ್ಲದಿದ್ದರೆ ಮಧ್ಯಾಹ್ನದವರೆಗೂ ಇದೇ ಸಮಸ್ಯೆ ಮುಂದುವರೆಯಲಿದೆ ಎಂದು, ಸ್ಥಳೀಯ ವಾಹನ ಚಾಲಕರು ಹಾಗೂ ಪ್ರಯಾಣಿಕರು ಹೇಳುತ್ತಾರೆ.  
.
(ವರದಿ : ದತ್ತಾತ್ರೇಯ ಕಣ್ಣಿಪಾಲ, ವಜ್ರಳ್ಳಿ )
.

ಕುಂದೂರು ಗ್ರಾಮದಲ್ಲಿ ಮಳೆಗೆ ಕೊಚ್ಚಿ ಹೋದ ಕಾಲ ಸಂಕ

ಯಲ್ಲಾಪುರ :  ಹಾಸಣಗಿ ಪಂಚಾಯತಿ ವ್ಯಾಪ್ತಿಯ ಯಡಳ್ಳಿ ಸಮೀಪದ ಕುಂದೂರು ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಕೆಲ ವರ್ಷದ ಹಿಂದೆ‌ ನಿರ್ಮಿಸಲಾದ ಕಾಲು ಸಂಕ ಗುರುವಾರ ನಸೂಕಿನಲ್ಲಿ ಕೊಚ್ಚಿಹೋಗಿದೆ. 
   ಸ್ಥಳೀಯ ನಾಗರಿಕರಿಗಾಗಿ ಎನ್‌ಆರ್‌ಇಜಿ ಯೋಜನೆಯಲ್ಲಿ 1.5 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕಾಲು ಸಂಕ ಮಳೆಯಿಂದಾಗಿ ಕೊಚ್ಚಿ ಹೋಗಿದ್ದು, ಈ ಭಾಗದ ಜನ ಸಂಚರಿಸಲು ಸಂಕಷ್ಟ ಪಡುವಂತಾಗಿದೆ. 
  ಕೊಚ್ಚಿ ಹೋದ ಕಾಲು ಸಂಕದ ಕೆಳಗೆ ತುಂಬಿ ಹರಿಯುತ್ತಿರುವ ಹಳ್ಳದ ನೀರಿನಿಂದಾಗಿ ಜನ ಮನೆ, ತೋಟಕ್ಕೆ ಹೋಗಲು ಪರದಾಡುವಂತಾಗಿದೆ. ಹಳ್ಳದ ನೀರಿನ ಹರಿವು ಕಡಿಮೆ ಇರುವ ಕಡೆ ತೆರಳಿ ತಮ್ಮ ಮನೆ ಹಾಗೂ ತೋಟಕ್ಕೆ ಹೋಗುವ ದುಸ್ಥಿತಿ ನಿರ್ಮಾಣವಾಗಿದೆ.
   ಸಂಬಂಧಪಟ್ಟ ಇಲಾಖೆಯವರು ಹಾಗೂ ಗ್ರಾಮ ಪಂಚಾಯತಿಯವರು ಕೂಡಲೇ ಕಾಲು ಸಂಕವನ್ನು ದುರಸ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹಾಸಣಗಿ ಪಂಚಾಯಿತಿ ಸದಸ್ಯ ಎಂ ಕೆ ಭಟ್ ಯಡಳ್ಳಿ ಆಗ್ರಹಿಸಿದ್ದಾರೆ. 

(ವರದಿ : ವಿಕಾಸ್ ನಾಯ್ಕ ಮಂಚಿಕೇರಿ)
.
.