ಯಲ್ಲಾಪುರ ; ವಜ್ರಳ್ಳಿ ಗ್ರಾಮದಲ್ಲಿ ಅಪ್ರತಿಮ ಸ್ವತಂತ್ರ ಸೇನಾನಿ ವೀರ ಸಾವರ್ಕರ ಪ್ರತಿಮೆ ಸ್ಥಾಪಿಸಲು ಸ್ಥಳೀಯ ಶಾಸಕರ ಅನುಯಾಯಿಗಳು ವಿರೋಧಿಸುತ್ತಿದ್ದಾರೆ. ಅವರಿಗೆ ಅಧಿಕಾರಿಗಳು ಸಾಥ‌್ ನೀಡಿದ್ದಾರೆ. ಇದು ಜುಲೈ 10ರಂದು ನಡೆದ ವಜ್ರಳ್ಳಿ ಗ್ರಾ.ಪಂ ಗ್ರಾಮ ಸಭೆಯಲ್ಲಿ ಸ್ಪಷ್ಟವಾಗಿದೆ ಎಂದು ವಜ್ರಳ್ಳಿಯ ವೀರ ಸಾವರ್ಕರ ಪ್ರತಿಮೆ ಅನಾವರಣ ಸಮಿತಿ ಸಂಚಾಲಕ ವಿ ಎನ್ ಭಟ್ ನೆಡಿಗೆಮನೆ ಆಪಾದಿಸಿದರು.
ಅವರು, ಸೋಮವಾರ ಬೆಳಿಗ್ಗೆ ಯಲ್ಲಾಪುರದ ಬಿಜೆಪಿ ಮಂಡಲ ಕಚೇರಿಯಲ್ಲಿ ವಜ್ರಳ್ಳಿಯ ವೀರ ಸಾವರ್ಕರ ಪ್ರತಿಮೆ ಸ್ಥಾಪಿಸಲು ಆಗುತ್ತಿರುವ ಅಡಚಣೆಯ ಕುರಿತು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ವಜ್ರಳ್ಳಿಯಲ್ಲಿ ಸಾವರ್ಕರ ಪ್ರತಿಮೆ ಸ್ಥಾಪನೆಗೆ ಎಂಟು ತಿಂಗಳ ಹಿಂದೆ ಗ್ರಾ.ಪಂ ಅರ್ಜಿ ನೀಡಲಾಗಿತ್ತು. ಪುತ್ಥಳಿ ಸ್ಥಾಪನೆಗೆ ವಜ್ರಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಗಾ.ಪಂನವರೆ ಪರವಾನಿಗೆ ನೀಡಬೇಕು. ತಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಅರ್ಜಿಯನ್ನು ತಹಶೀಲ್ದಾರರಿಗೆ ಕಳಸಿದ್ದಾರೆ. ಗ್ರಾಮ ಸಭೆಯಲ್ಲಿ ಪ್ರತಿಮೆ ಸ್ಥಾಪನೆಗೆ ಒಪ್ಪಿದ್ದಾರೆ. ನೋಡಲ್ ಅಧಿಕಾರಿ ವಿವಾದ ಸೃಷ್ಟಿಯಾಗಬಹುದು ಎಂದು ಹೇಳಿ ತಪ್ಪು ತಳುವಳಿಕೆ ನೀಡಿದ್ದಾರೆ. ಗ್ರಾಪಂ ಉಪಾಧ್ಯಕ್ಷೆ ಸಭೆಯಿಂದ ಹೊರ ಹಾಕುವ ಬೆದರಿಕೆ ಹಾಕಿದ್ದಾರೆ. ಸಾವರ್ಕರ್ ಪ್ರತಿಮೆ ಸ್ಥಾಪಿಸಲು ಸರಕಾರಿ ಆದೇಶ ಅಥವಾ ಕೋರ್ಟ್ ನಿರ್ಣಯ ಇದ್ದ ಬಗ್ಗೆ ತಿಳಿಸಲಿ. 6 ಗ್ರಾಪಂ ಸದಸ್ಯರು ವಿರೋಧಿಸುತ್ತಿದ್ದಾರೆ. ಶಾಸಕರ ಅನುಯಾಯಿಗಳ ವಿರೋಧ ಕಂಡು ಬಂದಿದೆ. ಶಾಸಕರು ಮುತುವರ್ಜಿವಹಿಸಿ ಅನುಯಾಯಿಗಳಿಗೆ ಹೇಳಿ ಪ್ರತಿಮೆ ಸ್ಥಾಪನೆಗೆ ಅವಕಾಶ ಮಾಡಿಕೊಡಬೇಕು ಎಂದರು.
ಬಿಜೆಪಿ ಯಲ್ಲಾಪುರ ಮಂಡಲ ಅಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, "ವೀರ ಸಾವರ್ಕರ್ ರಾಷ್ಟ್ರೀಯ ಆರಾಧಕರು ಸಾಂಸ್ಕೃತಿಕ ಪ್ರತಿನಿಧಿ ಹಿಂದುತ್ವದ ಮೌಲ್ಯಗಳನ್ನು ಪ್ರತಿಪಾದಿಸುವಲ್ಲಿ ಪ್ರಮುಖರು. ವಜ್ರಳ್ಳಿ ಭಾಗದಲ್ಲಿ ದಿವ್ಯ ಚೇತನ ವೀರ ಸಾವರ್ಕರ್ ಪುತ್ಥಳಿಯನ್ನು ನಿರ್ಮಿಸಲು ಬಿಜೆಪಿ ಮಂಡಲದ ಸಂಪೂರ್ಣ ಬೆಂಬಲವಿದೆ. ವಜ್ರಳ್ಳಿಯಲ್ಲಿ ಪುತ್ಥಳಿ ನಿರ್ಮಾಣ ಸಮಿತಿಯವರು, ಕಳೆದ ಒಂದು ವರ್ಷದಿಂದ ಕಾನೂನಾತ್ಮಕವಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ. ಆದರೆ, ದೇಶ ವಿರೋಧಿ ಮನೋಸ್ಥಿತಿಯನ್ನು ಹೊಂದಿರುವ ಮತ್ತು ಕಾಂಗ್ರೆಸ್ ಸೈದಾಂತಿಕ ಹಿನ್ನೆಲೆ ಹೊಂದಿರುವವರು ವೀರ ಸಾವರ್ಕರ್ ಪುತ್ಥಳಿ ನಿರ್ಮಾಣವನ್ನು ವಿರೋಧಿಸುತ್ತಿದ್ದಾರೆ. ಬಿಜೆಪಿ ಮಂಡಲ, ನಿಷ್ಠೆಯೊಂದಿಗೆ ಈ ಸ್ಥಳದಲ್ಲಿಯೇ ವೀರ ಸಾವರ್ಕರ್ ಪುತ್ಥಳಿ ನಿರ್ಮಾಣವಾಗಬೇಕೆಂದು ಒತ್ತಾಯಿಸುತ್ತದೆ. ಅಲ್ಲದೆ, ಗ್ರಾಮಸಭೆಯಲ್ಲಿ ಪಂಚಾಯಿತಿ ಸದಸ್ಯರು ಹಾಗೂ ಜನರ ಭಾವನೆಗೆ ಗೌರವ ನೀಡಿದ ಅಧಿಕಾರಿಗಳಲ್ಲಿ ಪುತ್ಥಳಿ ನಿರ್ಮಾಣಕ್ಕೆ ಏನು ತೊಡಕುಗಳಿವೆ ಎಂಬುದನ್ನು ಲಿಖಿತ ರೂಪದಲ್ಲಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಭಾರತೀಯ ಜನತಾ ಪಕ್ಷದ ಪ್ರಮುಖ ಉಮೇಶ್ ಭಾಗವತ, ವೀರ ಸಾವರ್ಕರ ಪ್ರತಿಮೆ ಸ್ಥಾಪನೆಗೆ "ವಜ್ರಳ್ಳಿಯಲ್ಲಿ ಹಿಂದೂಗಳ ವಿರೋಧ ಖಂಡನೀಯ," ಎಂದು ಅವರು ಹೇಳಿದರು. ಕೆಲ ಪಂಚಾಯತಿ ಸದಸ್ಯರು, ಪಂಚಾಯತಿ ಅಧ್ಯಕ್ಷರು, ಮತ್ತು ನೋಡಲ್ ಅಧಿಕಾರಿಗಳು ಪ್ರತಿಮೆ ಸ್ಥಾಪನೆಗೆ ವಿರೋಧಿಸಿರುವುದನ್ನು ಪ್ರಶ್ನಿಸಿ, "ನಾವು ಹೋರಾಟದ ಮೂಲಕ ಪ್ರತಿಮೆ ಸ್ಥಾಪನೆ ಮಾಡುತ್ತೇವೆ," ಎಂದು ಭಾಗವತ ಹೇಳಿದರು.
ಗ್ರಾಪಂ ಸದಸ್ಯ ಜಿ ಆರ್ ಭಾಗವತ ಹೇಳಿದರು, "ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮಸಭೆಯ ನಿರ್ಣಯವೇ ಅಂತಿಮವಾದುದು, ಸಭೆಯಲ್ಲಿ ಜನಾಭಿಪ್ರಾಯ ಪಡೆದು ಠರಾವು ಬರೆಯಬೇಕು. ಜುಲೈ 10ರ ಗ್ರಾಮಸಭೆಯಲ್ಲಿ ಉಳಿದವರಿಗೆ ಮಾತನಾಡಲು ಅವಕಾಶ ನೀಡದಂತೆ, ನೋಡಲ್ ಅಧಿಕಾರಿ ಗ್ರಾ.ಪಂ. ಸದಸ್ಯರಂತೆ, ಪಕ್ಷದ ಪ್ರತಿನಿಧಿಯಂತೆ ವರ್ತಿಸಿದ್ದಾರೆ," ಎಂದು ಅವರು ಆಪಾದಿಸಿದರು. "ಯಾರೂ ಏನೇ ವಿರೋಧಿಸಿದರು, ನಾವು ನಿಗದಿತ ಸ್ಥಳದಲ್ಲಿ ವೀರಸಾವರ್ಕರ ಪ್ರತಿಮೆ ಸ್ಥಾಪಿಸುತ್ತೇವೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೀರ ಸಾವರ್ಕರ ಪ್ರತಿಮೆ ಅನಾವರಣ ಸಮಿತಿಯ ಕಾರ್ಯದರ್ಶಿ ಮಹೇಶ ಗಾಂವ್ಕರ, ಸದಸ್ಯರಾದ ರಾಘವೇಂದ್ರ ಭಟ್ಟ, ರಾಜಶೇಖರ ಗಾಂವ್ಕರ, ವಜ್ರಳ್ಳಿ ಗ್ರಾಪಂ ಸದಸ್ಯ ತಿಮ್ಮಣ್ಣ ಗಾಂವ್ಕರ, ಬಿಜೆಪಿ ಪ್ರಮುಖ ತಿಮ್ಮಣ್ಣ ಕೋಮಾರ್, ಯುವಕ ಸಂಘದ ಅಧ್ಯಕ್ಷ ಸತೀಶ ಕುಂಬ್ರಿ, ಯುವ ಮೋರ್ಚಾ ಕಾರ್ಯದರ್ಶಿ ನವೀನ ಕಿರವಾಡ, ಬಿಜೆಪಿ ತಾಲೂಕಾ ಮಾದ್ಯಮ ವಕ್ತಾರ ಕೆ ಟಿ ಭಟ್ ಉಪಸ್ಥಿತರಿದ್ದರು.