Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Wednesday, 17 July 2024

ಮನಸೆಳೆದ ಮಹಿಳಾ ತಾಳಮದ್ದಲೆ ಸುಧನ್ವ ಮೋಕ್ಷ' ಬಂಗ್ಲಿ ಘಟ್ಟದಲ್ಲಿ ಸಣ್ಣ ಪ್ರಮಾಣದ ಕುಸಿತ

ಯಲ್ಲಾಪುರ: ಬಿಸಗೋಡಿನ `ವೀರಾಂಜಿನೇಯ ಮಹಿಳಾ ತಾಳಮದ್ದಲೆ ಕೂಟದವರು ಆನಗೋಡಿನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಗುರುವಾರ ಸಂಜೆ `ಸುಧನ್ವ ಮೋಕ್ಷ' ತಾಳಮದ್ದಲೆ ಪ್ರದರ್ಶಿಸಿದರು. 
    ಆಷಾಡ ಏಕಾದಶಿ ನಿಮಿತ್ತ ಈ ಕಾರ್ಯಕ್ರಮ ನಡೆದಿದ್ದು, ಪ್ರೇಕ್ಷಕರನ್ನು ರಂಜಿಸಿತು. ಇದಕ್ಕೂ ಮುನ್ನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸುದರ್ಶನ ಸೇವಾ ಪ್ರತಿಷ್ಠಾನದವರು ಕಾರ್ಯಕ್ರಮ ಸಂಯೋಜಿಸಿದ್ದು, ಭಾಗವಹಿಸಿದ ಕಲಾವಿದರು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿಭಾಯಿಸಿದರು.
     ಭಾಗವತರಾಗಿ ತಿಮ್ಮಣ್ಣ ಭಾಗವತ್ ಗಾಣಗದ್ದೆ, ಮದ್ದಳೆ ಸುಬ್ರಾಯ್ ಭಟ್ ಗಾಣಗದ್ದೆ, ಚಂಡೆ ನಾಗರಾಜ್ ಭಟ್ ಕವಡಿಕೆರೆ, ಸುದನ್ವನಾಗಿ ಸುಮಾ‌ ಭಟ್ಟ ಬಿಸಗೋಡ, ಅರ್ಜುನ ನಯನಾ ಭಟ್ಟ ಗಣಪೂಮನೆ, ಹಂಸದ್ವಜ ಪಾರ್ವತಿ ಭಟ್ಟ ಕಿಚ್ಚುಪಾಲ್, ಪ್ರಭಾವತಿ ಮೀನಾಕ್ಷಿ ಭಟ್ ಕೆಳಗಿನಪಾಲ್ ಹಾಗೂ ಕೃಷ್ಣನಾಗಿ ವೀಣಾ ಭಟ್ ಬರಗದ್ದೆ ಭಾಗವಹಿಸಿದ್ದರು.

ರಾಮನಗುಳಿ ಬಂಗ್ಲಿ ಘಟ್ಟದಲ್ಲಿ ಸಣ್ಣ ಪ್ರಮಾಣದ ಕುಸಿತ
ಯಲ್ಲಾಪುರ : ಅಂಕೋಲಾ ತಾಲೂಕಿನ ರಾಮನಗುಳಿ ಗ್ರಾಮದ ಸಮೀಪದ ರಾಷ್ಟ್ರೀಯ ಹೆದ್ದಾರಿ ಪಕ್ಕ  ಬಂಗ್ಲಿ ಘಟ್ಟದ ಮೇಲಿನ ಗುಡ್ಡ ಸಣ್ಣ ಪ್ರಮಾಣದಲ್ಲಿ‌ ಕುಸಿಯತೊಡಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ
  ಘಟ್ಟದ ಮೇಲೆ ನೀರಿನೊಂದಿಗೆ ಮಣ್ಣ ಸವೆಯುತ್ತಿದೆ. ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿತ ಆಗುತ್ತಿದೆ. ವಾಹನ ಸವಾರರು ಈ ಭಾಗದಲ್ಲಿ ಎಚ್ಚರಿಕೆಯಿಂದ ಸಂಚಾರ ಮಾಡಬೇಕಿದೆ. ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ತೋರದೆ ಗಮನವಹಿಸಬೇಕಿದೆ‌ ಎಂದು ಗುಳ್ಳಾಪುರದ ಗುತ್ತಿಗೆದಾರರಾದ ಆನಂದ ನಾಯ್ಕ ತಿಳಿಸಿದ್ದಾರೆ.

ನಿರಂತರ ಮಳೆ: ಭೂಕುಸಿತ ಪ್ರದೇಶಗಳ ನಿವಾಸಿಗಳಿಗೆ ಮುನ್ನೆಚ್ಚರಿಕೆಯ ಸೂಚನೆ

bbb
ಯಲ್ಲಾಪುರ: ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ, ವಜ್ರಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳಚೆ, ಬೀಗಾರ, ಹೊನ್ನಗದ್ದೆ ಸೇರಿದಂತೆ ಇತರ ಭೂಕುಸಿತ ಪ್ರದೇಶಗಳಲ್ಲಿ ಇರುವ ನಿವಾಸಿಗಳಿಗೆ ತುರ್ತಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮುನ್ನೆಚ್ಚರಿಕೆಯ ಸೂಚನಾ ಪತ್ರವನ್ನು ಬುಧವಾರ ಜಾರಿಗೊಳಿಸಲಾಗಿದೆ. IMG-20240717-203131 ಮುನ್ನೆಚ್ಚರಿಕೆಯ ಕ್ರಮವಾಗಿ, ಈ ಪ್ರದೇಶದ ನಿವಾಸಿಗಳು ಸುರಕ್ಷಿತ ದೃಷ್ಟಿಯಿಂದ ವಜ್ರಳ್ಳಿ ಗ್ರಾಮ ಪಂಚಾಯತ್ ವತಿಯಿಂದ ತೆರೆಯಲಾಗುವ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುವಂತೆ ತಿಳಿಸಲಾಗಿದೆ.
ಕಳಚೆ ಭಾಗದ ಭೂಕುಸಿತ ಸ್ಥಳದಲ್ಲಿರುವ ಮನೆಗಳಿಗೆ ಬುಧವಾರ ಭೇಟಿ ನೀಡಿ, ಮುನ್ನೆಚ್ಚರಿಕೆ ಪತ್ರಗಳನ್ನು ನೀಡಲಾಗಿದೆ ಎಂದು ವಜ್ರಳ್ಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷಿ ಬಂಟ್ ತಿಳಿಸಿದ್ದಾರೆ. ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರಾದ ದೀಪಿಕಾ ಹೊಸಮನಿ, ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ, ಭೂಕುಸಿತದ ಕುರಿತು ಮಾಹಿತಿ ನೀಡಿದ್ದಾರೆ.

ಮರ ಬಿದ್ದು 6 ವಿದ್ಯುತ್ ಕಂಬಗಳು ಧರೆಗೆ

ವಜ್ರಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ, ಹೊನ್ನಗದ್ದೆ ಗ್ರಾಮದ ವೀರಭದ್ರ ದೇವಸ್ಥಾನದ ಬಳಿ ಮಂಗಳವಾರ ರಾತ್ರಿ ಮರ ಬಿದ್ದು ಆರು ವಿದ್ಯುತ್ ಕಂಬಗಳು ಧರೆಗುರುಳಿವೆ. ಈ ಘಟನೆಯಿಂದ ಕಂಚಿಮನೆ ಭಾಗದ ಜನರಿಗೆ ಕೆಲವು ಗಂಟೆಗಳ ಕಾಲ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ನಂತರ ಮರವನ್ನು ಒಂದು ಭಾಗದಲ್ಲಿ ತೆರವುಗೊಳಿಸಿ, ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ.

ಯಲ್ಲಾಪುರದಲ್ಲಿ ಶೃದ್ದೆ ಭಕ್ತಿಯಿಂದ ಮೊಹರಂ ಅಚರಣೆ

ಯಲ್ಲಾಪುರ : ಕರ್ಬಲಾ ಕದನದಲ್ಲಿ ಚಿತ್ರಹಿಂಸೆಗೆ ಒಳಗಾಗಿ ಮರಣ ಹೊಂದಿದ ಪ್ರವಾದಿ ಮುಹಮ್ಮದ್ ಮೊಮ್ಮಗ ಹಸನ್ ಹುಸೇನ್ ಅವರ ಅಮರತ್ವವನ್ನು ಸ್ಮರಿಸುವ ದಿನವನ್ನು ಮೊಹರಂ ಎಂದು ಯಲ್ಲಾಪುರ ಪಟ್ಟಣದದಲ್ಲಿ ಮುಸ್ಲಿಂ ಸಮಾಜದವರು ಬುಧವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
  ಸಂಭ್ರಮ-ದುಃಖ, ಸೋಲು-ಗೆಲುವಿನ, ನೋವು-ನಲಿವಿನ ಮಿಳಿತವೇ ಮೊಹರಂ. ಕಳೆದ 9 ದಿನಗಳಿಂದ ಪಟ್ಟಣದ 8 ಕಡೆಗಳಲ್ಲಿ ಮೊಹರಂ ಪಂಜಾ ಸ್ಥಾಪಿಸಲಾಗಿತ್ತು ನಾಯ್ಕನಕೇರಿಯಲ್ಲಿ ಬಾರಾ ಇಮಾಮ್, ತಟಗಾರ್ ಕ್ರಾಸ್ ಬಳಿ ರಾಜೇಬಕ್ಷೇ, ನೂತನನಗರ ಜಡ್ಡಿಯಲ್ಲಿ ಇಮಾಂಖಾಸಿಂ, ಮಚ್ಚಿಗಲ್ಲಿಯಲ್ಲಿ ಹಸನ್-ಹುಸೇನ್, ವಲೀಶಾ ಗಲ್ಲಿಯಲ್ಲಿ ಮೌಲಾಲಿ ಹಾಗೂ ದರ್ಗಾ ಗಲ್ಲಿಯಲ್ಲಿ ಬಿಬಿ ಫಾತೀಮಾ ಪಂಜಾ ಹಾಗೂ ಡೋರಿಗಳನ್ನು ಸ್ಥಾಪಿಸಲಾಗಿತ್ತು. 
   ಬುಧವಾರ ಮಧ್ಯಾಹ್ನ‌ 3 ಗಂಟೆಯ ಸಮಯಕ್ಕೆ ದರ್ಗಾಗಲ್ಲಿ ಬಿಬಿ ಫಾತಿಮಾ ಪಂಜಾದ ಕಡೆಗರ ಉಳಿದ 7 ಪಂಜಾ ಡೋರಿಗಳು‌ ಬಂದವು. ಅಲ್ಲಿಂದ ಎಲ್ಲ ಡೋರಿ, ಪಂಚಾಗಳು ಮೆರವಣಿಗೆಯಲ್ಲಿ ತೆರಳಿ‌ ಧಾರ್ಮಿಕ ಗೀತೆ, ಮುಂತಾದವುಗಳೊಂದಿಗೆ ದೇವಿ ಟೆಂಪಲ್ ರಸ್ತೆಯಿಂದ ಗಾಂಧಿ ವೃತ್ತಕ್ಕೆ ಆಗಮಿಸಿ ರಾಷ್ಟ್ರೀಯ ಹೆದ್ದಾರಿ‌ ಮೂಲಕ ಜೋಡಕೆರೆಗೆ ತೆರಳಿ ಅಲ್ಲಿ ಮೊಹರಂ ಹಬ್ಬ ಕೊನೆಗೊಂಡಿತು. 
   ಮೊಹರಂ ಕಮಿಟಿ ಅಧ್ಯಕ್ಷ ಮೂದೀನ್ ಶೇಖ, ಉಪಾಧ್ಯಕ್ಷ ಅಜಗರ್, ಕಾರ್ಯದರ್ಶಿ ಜಕ್ರೀಯಾ ಮುಲ್ಲಾ ಮುಂತಾದವರು ಮೋಹರಂ ಆಚರಣೆ ಶಾಂತಿಯುತವಾಗಿ ನಡೆಯುವಂತೆ ಮುಂದಾಳತ್ವ ವಹಿಸಿದ್ದರು. 
   ಪೊಲೀಸ್ ನಿರೀಕ್ಷಕರಾದ ರಮೇಶ ಹಾನಾಪುರ, ಪಿಎಸ್ಐಗಳಾದ ಸಿದ್ದಪ್ಪ ಗುಡಿ, ನಿರಂಜನ‌ ಹೆಗಡೆ, ನಸ್ರೀನ್‌ತಾಜ್ ಚಟ್ಟರಗಿ, ಶ್ಯಾಮ ಪಾವಸ್ಕರ್ ಹಾಗೂ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ ಏರ್ಪಡಿಸಿದ್ದರು.
.

ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಆಕಳ ಕರು ಸಾವು

ಯಲ್ಲಾಪುರ : ಮೇಯಲು ಮನೆಯಿಂದ ಹೊರಗೆ ಬಿಟ್ಟಿದ್ದ ಆಕಳು ಕರುವಿಗೆ ವಿದ್ಯುತ್ ತಂತಿ ತಗಲಿ ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಹಾಸಣಗಿ ಪಂಚಾಯಿತಿ ವ್ಯಾಪ್ತಿಯ ಯಡಳ್ಳಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
   ರಾಜು ಗಣಪಾ ಸಿದ್ದಿ ಎಂಬುವರಿಗೆ ಸೇರಿದ್ದ ಒಂದು ವರ್ಷದ ಹಸುವಿನ ಕರು ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಸ್ಥಳದಲ್ಲಿ ಮೃತಪಟ್ಟಿದೆ. 
   ಈ ಭಾಗದಲ್ಲಿ 1969ರಲ್ಲಿ ವಿದ್ಯುತ್ ತಂತಿಯನ್ನು ಎಳೆಯಲಾಗಿದ್ದು ಅವು ಇದೀಗ, ಸಂಪೂರ್ಣವಾಗಿ ಹಾಳಾಗಿದೆ. ಆಗಾಗ ತುಂಡಾಗಿ ಬಿಡುವುದನ್ನು ಕಾಣಬಹುದಾಗಿದ್ದು, ಹೆಸ್ಕಾಂನವರು ಬಿದ್ದಿರುವ ತುಂಡು ತಂತಿಗಳನ್ನು ಮತ್ತೆ ಜೋಡಿಸಿ ಸ್ಥಳೀಯರಿಗೆ ಆತಂಕವನ್ನು ತಂದಿಟ್ಟಿದ್ದಾರೆ.
ಸಂಪೂರ್ಣವಾಗಿ ವಿದ್ಯುತ್ ತಂತಿ ತೆಗೆದು ಬೇರೆ ತಂತಿಯನ್ನು ಜೋಡಿಸಬೇಕು ಎಂದು ಹಾಸಣಗಿ ಪಂಚಾಯಿತಿ ಸದಸ್ಯ ಎಂ ಕೆ ಬಟ್ ಯಡಳ್ಳಿ ಆಗ್ರಹಿಸಿದ್ದಾರೆ.

ಕಿರವತ್ತಿಯಲ್ಲಿ ಶ್ರದ್ಧೆ ಭಕ್ತಿಯಿಂದ ಮೊಹರಂ ಆಚರಣೆ

 

IMG-20240717-145152 ಯಲ್ಲಾಪುರ ; ತಾಲೂಕಿನ ಅತಿ ದೊಡ್ಡ ಗ್ರಾಮವಾಗಿರುವ ಕಿರವತ್ತಿಯಲ್ಲಿ ಬುಧವಾರ ಮುಸ್ಲಿಂ ಸಮುದಾಯದವರು ಶ್ರದ್ಧೆ ಹಾಗೂ ಭಕ್ತಿ ನೋವು ನಲಿವುಗಳಿಂದ ಮಮ್ಮದ್ ಪೈಗಂಬರ್ ಮೊಮ್ಮಕ್ಕಳಾದ ಹಸನ್ ಮತ್ತು ಹುಸೇನ್ ಇಸ್ಲಾಂ ರಕ್ಷಣೆಗಾಗಿ ಬಲಿದಾನ ಗೈದ ದಿನವನ್ನು ಮೋಹರಂ ಎಂದು ಆಚರಿಸಿದರು. IMG-20240717-145143 ಕಿರವತ್ತಿ ಮೋಹರಂ ಕಮಿಟಿ ವತಿಯಿಂದ ಆಚರಿಸಲಾದ ಮೊಹರಂ ಹಬ್ಬದ ನೇತೃತ್ವವನ್ನು ಮಕ್ಸೂದ್ ಶೇಖ, ಹರೂನ್ ಶೇಖ, ಕುತುಬ್ ಅಂಚಿ, ಮುಸ್ತಾಕ ಶೇಖ, ಅಹ್ಮದ್ ಕೋಳಿಕೇರಿ, ಫಜ್ಜು ಮುಲ್ಲಾ, ಮೌಲಾಲಿ ಪಟೇಲ್, ಮೆಹಬೂಬ್ ಅಲಿ ಬಮ್ಮಕಟ್ಟಿ ಮುಂತಾದವರು ವಹಿಸಿದ್ದರು. ಯಲ್ಲಾಪುರ ಪೊಲೀಸ್‌ರು ಸೂಕ್ತ ಬಂಧೋಬಸ್ತ ಕೈಗೊಂಡಿದ್ದರು.  IMG-20240717-145131 IMG-20240717-145143

ಯಲ್ಲಾಪುರದಲ್ಲಿ ರಾತ್ರಿ ಮಳೆಯಿಂದಾದ ಅವಾಂತರಗಳು, ಮನೆ ಕುಸಿತ, ಅಡ್ಡ ಬಿದ್ದ ಮರ, ವಿದ್ಯುತ್ ವ್ಯತ್ಯಯ

ಯಲ್ಲಾಪುರ ; ಮಂಗಳವಾರ ರಾತ್ರಿಯಿಂದ ಸುರಿದ ಬಾರಿ ಮಳೆಗೆ ಯಲ್ಲಾಪುರ ಪಟ್ಟಣದಲ್ಲಿ ಹಲವಾರು ಅವತಾರ ಅವಾಂತರಗಳು ನಿರ್ಮಾಣವಾಗಿದೆ.
     ಬಾರಿ ಮಳೆಯಿಂದಾಗಿ ಮಂಜುನಾಥ ನಗರದಲ್ಲಿ ಹಳೆ ಮನೆ ಗೋಡೆಯೊಂದು ನಿರ್ಮಾಣ ಹಂತದ ಕಟ್ಟಡದ ಗೋಡೆ ಮೇಲೆ ಉರುಳಿ ಬಿದ್ದಿರುವ ಕಾರಣಕ್ಕೆ, ನಿರ್ಮಾಣ ಹಂತದ‌ ಕಟ್ಟಡಕ್ಕೆ ಹಾನಿಯಾಗಿದೆ. ಬೀಮವ್ವ ಬೋವಿ ವಡ್ಡರ್ ಎಂಬುವರ ಹಳೆಯ ಮನೆಯ ಗೋಡೆ ಎಡಬಿಡದೆ ಸುರಿಯುತ್ತಿರುವ ಮಳೆಯ ಹೊಡೆತಕ್ಕೆ ಕುಸಿದು ಪಕ್ಕದಲ್ಲಿ ನಿರ್ಮಿಸುತ್ತಿರುವ ಮಣಿಕಂಠ ಉಣಕಲ್ ಅವರ ಮನೆ ಗೋಡೆಯ ಮೇಲೆ ಬಿದ್ದ ಪರಿಣಾಮ ಆ ಗೋಡೆಯು ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೆ ಅವಘಡ ಸಂಭವಿಸಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಬೇಟಿ ನೀಡಿದ ಮಂಜುನಾಥ ನಗರ ವಾರ್ಡ್ ಸದಸ್ಯ ಸತೀಶ್ ಶಿವಾನಂದ ನಾಯ್ಕ ವಾಸ್ತವಿಕ ಸ್ಥಿತಿಯನ್ನು ತಹಶೀಲ್ದಾರ ಕಚೇರಿಗೆ ಮಾಹಿತಿ ನೀಡಿದ್ದಾರೆ.
    ಯಲ್ಲಾಪುರ ಪಟ್ಟಣ ಪಂಚಾಯಿತಿ ವಾರ್ಡ್ ನಂಬರ್ 2 ರ ಮಹಿಳಾ ಮಂಡಲದ ಎದುರು ಮರವೊಂದು ರಸ್ತೆಯ ಮೇಲೆ ಬಿದ್ದು ಸಂಚಾರಕ್ಕೆ ವ್ಯರ್ಥ್ಯವಾಗಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ವಾರ್ಡ್ ಸದಸ್ಯ ಕೇಸರಲಿ ಸಯ್ಯದ್ ಮರವನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. 
   ಕಿರವತ್ತಿ ಪವರ್ ಗ್ರಿಡ್ ನಿಂದ ಯಲ್ಲಾಪುರಕ್ಕೆ ಸಬ್ ಸ್ಟೇಷನ್ ಗೆ ಸಂಪರ್ಕವಿರುವ ವಿದ್ಯುತ್ ಮಾರ್ಗದ ಮೇಲೆ ಬೃಹತ್ ಮರ ಒಂದು ಉರುಳಿ ಬಿದ್ದ ಪರಿಣಾಮ ಬೆಳಗ್ಗೆಯಿಂದ ವ್ಯತ್ಯಯಗೊಂಡಿದ್ದ ವಿದ್ಯುತ್ ಸಂಜೆ 4:00 ವರೆಗೆ ಮರು ಸ್ಥಾಪನೆ ಕಷ್ಟ ಎಂದು ಹೇಳಲಾಗುತ್ತಿದೆ.
  ಗ್ರಾಮೀಣ ಭಾಗದಲ್ಲಿ ಸುರಿದ ಮಳೆಯಿಂದಾದ ಅವಾಂತರಗಳ ಬಗ್ಗೆ ಇನ್ನಷ್ಟೆ ತಿಳಿದು ಬರಬೇಕಾಗಿದೆ. 

ತೆಂಗಿನಗೇರಿಯಲ್ಲಿ ಚಿರತೆ ದಾಳಿ: ಇಬ್ಬರು ರೈತರಿಗೆ ಗಾಯ,

ಯಲ್ಲಾಪುರ: ತಾಲೂಕಿನ ತೆಂಗಿಗೇರಿಯಲ್ಲಿ ಬುಧವಾರ ಬೆಳಿಗ್ಗೆ ಹೊಲದಲ್ಲಿ ಎಮ್ಮಗಳನ್ನು‌ ಮೇಯಿಸಲು ತೆರಳಿದ ಇಬ್ಬರು ರೈತರ ಮೇಲೆ ಚಿರತೆ ದಾಳಿ ನಡೆಸಿ, ಇಬ್ಬರು ರೈತರು ಗಾಯಗೊಂಡಿರುವ ಘಟನೆ ನಡೆದಿದೆ. 
   ಗಾಯಗೊಂಡ ರೈತರು ಕೋಳಿಕೇರಿಯ ದೇಶಪಾಂಡೆನಗರದ ನಿವಾಸಿಗಳಾದ ಸೋನು ಘಾಟು ಕೊಕರೆ (32) ಮತ್ತು ಲಕ್ಷ್ಮಣ ವಾಘು ಕೊಕರೆ (37) ಎಂದು ಗುರುತಿಸಲಾಗಿದೆ.
   ಗಾಯಾಳುಗಳನ್ನು ತಕ್ಷಣವೇ ತಾಲೂಕಿನ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. 
  ರೈತರು ತೆಂಗಿನಗೇರಿ ಹೊಲದಲ್ಲಿ ಎಮ್ಮೆಗಳನ್ನು‌ ಮೇಯಿಸಲು ತೆರಳಿದಾಗ ಎಮ್ಮೆಗಳ ಜೊತೆ ನಾಯಿ ಕೂಡ ಹೊರಟಿದ್ದು, ನಾಯಿಯನ್ನು‌ ಕಂಡ ಚಿರತೆ ದಾಳಿ‌ಮಾಡಿದೆ. ಓರ್ವ ರೈತನ‌ಮೇಲೆ ದಾಳಿ‌ಮಾಡಿದ ಚಿರತೆಯಿಂದ ರೈತನನ್ನು ತಪ್ಪಿಸಲು ಇನ್ನೋರ್ವ ಹೋದಾಗ ಆತನ‌ ಮೇಲೂ ಚಿರತೆ ದಾಳಿ‌ ಮಾಡಿದೆ. 
 
   ಅಸ್ಪತ್ರೆಗೆ ಪ್ರಭಾರೆ ಆರ್.ಎಫ್.ಓ ಡಿ.ಎಲ್. ಮಿರ್ಜಾನಕರ, ಡಿ.ಆರ್.ಎಫ್.ಓ ಮಂಜುನಾಥ ಕಾಂಬಳೆ, ಯಲ್ಲಾಪುರ ಡಿ.ಆರ್.ಎಫ್.ಓ ಶರಣು, ಹಾಗೂ ನಿವೃತ್ತ ಆರ್‌ಎಫ್‌ಓ ಮಠ ಭೇಟಿ ನೀಡಿದ್ದಾರೆ. ಡಿಎಫ್‌ಓ ಹರ್ಷಬಾನು ಹಾಗೂ ಎಸಿಎಫ್ ಎಚ್ ಸಿ ಆನಂದ ಮಾರ್ಗದರ್ಶನದಲ್ಲಿ ಅರಣ್ಯ ಸಿಬ್ಬಂದಿಗಳು‌ಪ್ರಕರಣ ದಾಖಲಿಸಿಕೊಂಡಿದ್ದಾರೆ.
   ಇತ್ತೀಚಿಗೆ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ಈ ದಾಳಿಯಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಹಳ್ಳಿಗಳಲ್ಲಿ, ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಜಾನುವಾರುಗಳು, ಮನೆ ಕಾಯುತ್ತಿರುವ ನಾಯಿಗಳನ್ನು ರಾತ್ರಿ-ಹಗಲು ಎನ್ನದೆ ಕಾಡುಪ್ರಾಣಿಗಳು ಹಿಡಿದುಕೊಂಡು ಹೋಗುತ್ತಿರುವುದರಿಂದ, ಗ್ರಾಮದ ಜನರು ಭಯದಿಂದ ದಿನ ಕಳೆಯುತ್ತಿದ್ದಾರೆ. 
  ಈಗಾಗಲೇ ಪ್ರಸ್ತುತ ಘಟನೆಗೆ ಸಂಬಂಧಿಸಿದಂತೆ, ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳೀಯರಲ್ಲಿ ಭರವಸೆ ನೀಡಿದ್ದು, ಸಮಸ್ಯೆಯನ್ನು ಪರಿಹರಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲಿಸುತ್ತಿದ್ದಾರೆ.

ಯಲ್ಲಾಪುರ ಪೂರೈಕೆಯಾಗುವ ಮಾರ್ಗದ ಮೇಲೆ ಮರ ಬಿದ್ದು ವಿದ್ಯುತ್ ವ್ಯತ್ಯಯ ನಾಲ್ಕು ಗಂಟೆಯ ಸುಮಾರಿಗೆ ವಿದ್ಯುತ್ ಸಂಪರ್ಕ ಸಾಧ್ಯತೆ

ಯಲ್ಲಾಪುರ ; ತಾಲೂಕಿನ‌ ಕೋಳಿಕೇರಿ ಸಮೀಪದ ದೇಶಪಾಂಡೆ ನಗರ ಡೊಮಗೇರಿ ಹತ್ತಿರ ಬೃಹತ್ ಮರವೊಂದು ಯಲ್ಲಾಪುರಕ್ಕೆ ಪೂರೈಕೆಯಾಗುತ್ತಿರುವ ವಿದ್ಯುತ್ ಯಂತಿಯ ಮೇಲೆ ಬಿದ್ದ ಪರಿಣಾಮ ವಿದ್ಯುತ್ ವ್ಯತ್ಯಯವಾಗಿದೆ.
   ಯಲ್ಲಾಪುರ ಹೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ದುರಸ್ಥಿ‌ಕಾರ್ಯ ಕೈಗೊಂಡಿದ್ದು, ವಿದ್ಯುತ್ ಸಂಪರ್ಕಕ್ಕೆ ಬುಧವಾರ ಸಂಜೆ 4.00ಯವರೆಗೂ ಸಮಯ ತೆಗೆದುಕೊಳ್ಳಿದೆ‌ ಎಂದು ಹೆಸ್ಕಾಂ ಕಚೇರಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದ್ದಾರೆ.

ಯಲ್ಲಾಪುರ ಪಟ್ಟಣದಲ್ಲಿ‌ ನಸೂಕಿನಿಂದಲೆ ಸುರಿಯುತ್ತಿರುವ ಬಾರಿಮಳೆ

ಯಲ್ಲಾಪುರ: ಯಲ್ಲಾಪುರ ಪಟ್ಟಣದಲ್ಲಿ ಬುಧವಾರ ನಸೂಕಿಂದ ನಿರಂತರವಾಗಿ ಮಳೆಯಾಗುತ್ತಿದೆ. ಮಂಗಳವಾರ ಸಂಜೆಯವರೆಗೆ ತಣ್ಣಗಾಗಿ ಹನಿಹನಿಯಾಗಿ ಸುರಿದ ಮಳೆ, ಬೆಳಿಗ್ಗೆ ಐದು ಗಂಟೆಯಿಂದ ಮಾತ್ರ ದೋ ಎಂದು ಸುರಿಯುತ್ತಿದೆ. 
   ಮಂಗಳವಾರ ಬೆಳಿಗ್ಗೆ 8.30ರಿಂದ ಬುಧವಾರ ಬೆಳಿಗ್ಗೆ 8.30ರವರೆಗೆ ಕಂದಾಯ ಇಲಾಖೆಯ ಮಳೆಮಾಪನದ ಪ್ರಕಾರ 50.6 ಮಿ.ಮೀ ಮಳೆಯಾಗಿದೆ. ಈ ವರೆಗೂ ಯಲ್ಲಾಪುರ ತಾಲೂಕಿನಲ್ಲಿ 1159.4 ಮಿ.ಮೀ ಮಳೆ ದಾಖಲಾಗಿದೆ.
   ನಿರಂತರ ಮಳೆಯ ಕಾರಣದಿಂದ ಜನಜೀವನಕ್ಕೆ ತೊಂದರೆ ಉಂಟಾಗಿದೆ. ಹೊಲಗಳು ನೀರಿನಿಂದ ಮುಚ್ಚಿಕೊಂಡಿವೆ ಮತ್ತು ಹಳ್ಳಗಳು ತುಂಬಿ ಹರಿಯುತ್ತಿವೆ. ಶಾಂತವಾದ ರಸ್ತೆಗಳು ಜಲಾವೃತಗೊಂಡು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ನಗರದಲ್ಲಿ ಕೆಲವು ಕಡೆಗಳಲ್ಲಿ ಬೆಳಿಗ್ಗೆಯಿಂದಲೇ ವಿದ್ಯುತ್ ಕಡಿತವಾಗಿದೆ.
   ಕಂದಾಯ ಇಲಾಖೆಯ ಮಾಹಿತಿ ಪ್ರಕಾರ, ಈ ವರೆಗೆ ಮಳೆಯ ಹಾನಿ ಕುರಿತು ಯಾವುದೇ ಪ್ರಮುಖ ವರದಿ ಲಭ್ಯವಿಲ್ಲ ಎಂದಿದ್ದಾರೆ.
   ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಇನ್ನಷ್ಟು ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರೈತರು ಮತ್ತು ಸಾಮಾನ್ಯ ನಾಗರಿಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಲಹೆ ನೀಡಲಾಗಿದೆ.

ನಾಯಿ ಬೇಟೆಗೆ ಬಂದ ಚಿರತೆ, ನಾಯಿ ಪಂಜರದಲ್ಲಿ‌ ಕಂಡು ನಿರಾಶೆಯ ಯಿಂದ ಮರಳಿದೆ.

ಯಲ್ಲಾಪುರ : ತಾಲೂಕಿನ ತುಂಬೆಬೀಡಿನ ನಾಗೇಂದ್ರ ಉಮಾಮಹೇಶ್ವರ ಹೆಗಡೆ ಅವರ ಮನೆ ಅಂಗಳದಲ್ಲಿ ಚಿರತೆಯೊಂದು ಬುಧವಾರ ಮುಂಜಾನೆ 1.45 ಕ್ಕೆ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
  ಮನೆ ಅಂಗಳದಲ್ಲಿ ಇರುತ್ತಿದ್ದ ನಾಯಿಯನ್ನು ಹುಡುಕುತ್ತಾ ಬಂದ ಚಿರತೆ, ನಾಯಿಯನ್ನು ಪಂಜರದಲ್ಲಿ ನೋಡಿ ಎಳೆಯಲು ಹಲವು ಪ್ರಯತ್ನ‌ನಡೆಸಿದೆ. ನಾಯಿ ಗಾಢ ನಿದ್ದೆಯಲ್ಲಿ ಮಲಗಿತ್ತು. ಚಿರತೆ ಸಮೀಪ ಬಂದು ನಾಯಿಯನ್ನು ಮೂಸಿ ನೋಡಿದರೂ, ನಾಯಿ ಎಚ್ಚೆತ್ತುಕೊಳ್ಳಲಿಲ್ಲ. ಬೇಟೆ ತನ್ನ ಪಾಲಿಗೆ ಸಿಕ್ಕಿಲ್ಲ ಎಂದು ಅರಿತ ಚಿರತೆ ಮರಳಿ ಹೋಗುವ ಸಂದರ್ಭದಲ್ಲಿ ನಾಯಿ ಎದ್ದು ಬೊಗಳಿದೆ.
   ಗ್ರಾಮೀಣ ಭಾಗದಲ್ಲಿ ಕಾಡುಪ್ರಾಣಿಗಳು ಮನೆಯವರೆಗೂ ಬಂದು, ದನ ಕರುಗಳನ್ನ ತಿಂದು ಹಾಕಿದ ಘಟನೆಗಳು ಬಹಳಷ್ಟು ನಡೆದಿದೆ. ಇದೇ ರೀತಿ ಇಂದು ನಸೂಕು ಹರಿಯುವ ಮುನ್ನ ಕೂಡ ಚಿರತೆ, ಅಂಗಳದಲ್ಲಿ ಕಾಣಿಸಿಕೊಂಡು ಭಯಭೀತಿ ಮೂಡಿಸಿದ ಘಟನೆ ನಡೆದಿದೆ. 
   ಅರಣ್ಯ ಇಲಾಖೆಯವರು, ಈ ರೀತಿ ಊರಿಗೆ ಬಂದ ಪ್ರಾಣಿಗಳನ್ನು ಬೋನಿನಲ್ಲಿ ಹಿಡಿದು, ದಟ್ಟ ಅರಣ್ಯ ಅಥವಾ ಕಾದಿರಿಸಿದ ಅರಣ್ಯದಲ್ಲಿ ತೆಗೊಂಡು ಹೋಗಿ ಬಿಡುವುದು ಸೂಕ್ತವಾಗಿದೆ. ಚಿರತೆ ಮನೆಯ ಅಂಗಳಕ್ಕೆ ಬಂದಿರುವ ಕುರಿತು ಅರಣ್ಯ ಇಲಾಖೆಯವರಿಗೆ ಕೂಡ ತಿಳಿಸಲಾಗಿದೆ ಎಂದು ಹಾಸಣಗಿ ಗ್ರಾಮ ಪಂಚಾಯಿತಿ ಸದಸ್ಯರಾದ ಎಮ್. ಕೆ. ಭಟ್ ಯಡಳ್ಳಿ ತಿಳಿಸಿದ್ದಾರೆ.

ಮಾವಿನಮನೆ ಪಂಚಾಯತದ ಸಭೆಯಲ್ಲಿ ಅಪಾಯಕಾರಿ ಪರಿಸ್ಥಿತಿಯಲ್ಲಿರುವ ಕುಟುಂಬಗಳ ತಾತ್ಕಾಲಿಕ ಸ್ಥಳಾಂತರ ನಿರ್ಧಾರ

ಯಲ್ಲಾಪುರ : ಜುಲೈ 16 ರಂದು ನಡೆದ ಮಾವಿನಮನೆ ಗ್ರಾಮ ಪಂಚಾಯತದ ತುರ್ತು ಸಭೆಯಲ್ಲಿ, ಅತಿಯಾದ ಮಳೆಯಿಂದಾಗಿ ಅಪಾಯಕಾರಿ ಪರಿಸ್ಥಿತಿಯಲ್ಲಿರುವ ನಾಲ್ಕು ಕುಟುಂಬಗಳಿಗೆ ತಾತ್ಕಾಲಿಕ ಸ್ಥಳಾಂತರದ ನಿರ್ಣಯ ಕೈಗೊಳ್ಳಲಾಯಿತು.
   ಮಾವನಮನೆ ಗ್ರಾಪಂ ಅಧ್ಯಕ್ಷ ಸುಬ್ಬಣ್ಣ ಕುಂಟೇಗಾಳಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ,   ತಾಲೂಕಿನ ಜೋಗಾಳಕೇರಿ-ಅಲ್ಲೆಕೊಪ್ಪ ಗ್ರಾಮದಲ್ಲಿ ವಾಸಿಸುವ ಈ ಕುಟುಂಬಗಳ ಮನೆಗಳ ಕೆಳಭಾಗದಲ್ಲಿ ಹರಿಯುವ ಹಳ್ಳವು ಅತೀಯಾದ ಮಳೆಯಿಂದಾಗಿ ತುಂಬಿ ಹರಿಯುತ್ತಿದೆ. ಹಳ್ಳದ ದಡ ಕುಸಿಯುವ ಸಾಧ್ಯತೆ ಇರುವುದರಿಂದ, ಈ ಕುಟುಂಬಗಳಿಗೆ ತಕ್ಷಣದ ಸುರಕ್ಷತೆಯನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಸಭೆಯಲ್ಲಿ ಚರ್ಚಿಸಲಾಯಿತು.
   ಚರ್ಚೆಯ ನಂತರ, ಮಳೆಗಾಲ ಮುಗಿಯುವವರೆಗೆ ಈ ಕುಟುಂಬಗಳಿಗೆ ಮಲವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪಕ್ಕದಲ್ಲಿರುವ ಖಾಲಿ ಕಟ್ಟಡದಲ್ಲಿ ವಸತಿ ಕಲ್ಪಿಸಲು ಠರಾವು  ನಿರ್ಣಯ ಮಾಡಲಾಯಿತು.
    ಈ ನಿರ್ಧಾರವನ್ನು ತಂಗು ವೆಂಕಣ್ಣ ಕುಣಬಿ, ಗಣಪತಿ ತಿಮ್ಮಣ್ಣ ಕುಣಬಿ, ಗಣಪತಿ ನೆಮ್ಮ ಕುಣಬಿ ಮತ್ತು ನೆಮ್ಮಾ ಗಣೇಶ ಕುಣಬಿ ಎಂಬ ನಾಲ್ಕು ಕುಟುಂಬಗಳಿಗೆ ಸೂಚನೆ ನೀಡಿ ಒಪ್ಪಿಸಲಾಯಿತು.
   ಪಂಚಾಯತಿಯ ತುರ್ತು ಕ್ರಮಕ್ಕೆ ಸ್ಥಳೀಯರು ಸ್ವಾಗತ ಕೋರಿದ್ದಾರೆ. ಮಳೆಯಿಂದಾಗಿ ಅಪಾಯಕ್ಕೆ ಸಿಲುಕಿದ್ದ ಕುಟುಂಬಗಳಿಗೆ ಪಂಚಾಯತಿ ತ್ವರಿತವಾಗಿ ಸ್ಪಂದಿಸಿ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿದ್ದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
   ಈ ಕುಟುಂಬಗಳಿಗೆ ಸುರಕ್ಷಿತ ಸ್ಥಳಾಂತರಕ್ಕೆ ಅಗತ್ಯ ಸಹಾಯ ಮತ್ತು ಸೌಲಭ್ಯಗಳನ್ನು ಒದಗಿಸಲು ಪಂಚಾಯತಿ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ಮಳೆಯ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು ಅಗತ್ಯವಿದ್ದಲ್ಲಿ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪಂಚಾಯತ ಅಧ್ಯಕ್ಷ ಸುಬ್ಬಣ್ಣ ಕುಂಟೇಗಾಳಿ ತಿಳಿಸಿದ್ದಾರೆ.