Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Friday, 19 July 2024

ವಲಿಶಾಗಲ್ಲಿಯಲ್ಲಿ ದೂಮಿಕರಣ, ನೂತನನಗರದಲ್ಲಿ ಲಾರ್ವ ನಾಶ ಜಾಗೃತಿ

ಯಲ್ಲಾಪುರ : ಪಟ್ಟಣದ ವಲಿಶಾಗಲ್ಲಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ದೂಮಿಕರಣ (ಫಾಗಿಂಗ್) ಪಟ್ಟಣ ಪಂಚಾಯಿತಿ ವಾರ್ಡ್ ಸದಸ್ಯ ಹೆಸರು ಸೈಯದ್ ಅಲಿ ನೇತೃತ್ವದಲ್ಲಿ ನಡೆಯಿತು.
   ಕೆಜಿಎಸ್ ಪ್ರಾಥಮಿಕ ಶಾಲೆ ಅಂಗನವಾಡಿ ವ್ಯಾಯಾಮ ಶಾಲೆ ಮುಂತಾದ ಕಡೆ ಫಾಗಿಂಗ್ ಮಾಡಲಾಯಿತು. ಮತ್ತು ಅಲ್ಲಿಯ ಜನರಲ್ಲಿ ಮನೆಯ ಸಮೀಪ ನೀರು ಸಂಗ್ರಹವಾಗಿ ಅಲ್ಲಿ ಸೊಳ್ಳೆ ಉತ್ಪತ್ತಿ ತಾಣವಾಗದಂತೆ ನೋಡಿಕೊಳ್ಳಲು ಲಾರ್ವ ನಾಶಪಡಿಸಲು ಮಾಹಿತಿ ನೀಡಲಾಯಿತು. 
   ಈ ಭಾಗದಲ್ಲಿ ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿದ್ದು ಶಾಲೆಯಲ್ಲಿಸೊಳ್ಳೆ ಬದುಕಿ ಹಚ್ಚಿ ಪಾಠ ಮಾಡುವ ಅನಿವಾರ್ಯತೆ ಬಂದುಬಿಟ್ಟಿದೆ ಎಂದು ಮಕ್ಕಳ ಪಾಲಕರು ತಿಳಿಸುತ್ತಾರೆ. ಯುಗಾದಿಚ್ಚಿನ ಗಮನವನ್ನು ಶಾಲೆ ಅಂಗನವಾಡಿ ಕಡೆಗಳಲ್ಲಿ ಕೇಂದ್ರೀಕರಿಸಿ ಕೆಲಸವನ್ನು ಮಾಡಲಾಯಿತು.
   ಕೆಜಿಎಸ್ ಶಾಲೆಯ ಶಿಕ್ಷಕಿ ಸರಸ್ವತಿ ಪಟ್ಟಣ ಪಂಚಾಯತಿ ಸಿಬ್ಬಂದಿಗಳು ಆರೋಗ್ಯ ಸಿಬ್ಬಂದಿಗಳು ಇದ್ದರು.

ನೂತನ ನಗರದಲ್ಲಿ ಲಾರ್ವ ನಾಶ ಜಾಗೃತಿ
ಯಲ್ಲಾಪುರ : ಪಟ್ಟಣದ ನೂತನ ನಗರದ ವಿವಿಧ ಕಡೆಗಳಲ್ಲಿ ಶುಕ್ರವಾರ ಡೆಂಗ್ಯೂ ಹರಡದಂತೆ ಸೊಳ್ಳೆಗಳನ್ನು ನಾಶಪಡಲು ಲಾರ್ವ ನಾಶ ಕಾರ್ಯಕ್ರಮಗಳನ್ನು ಆರೋಗ್ಯ ಇಲಾಖೆ ಪಟ್ಟಣ ಪಂಚಾಯಿತಿ ಹಾಗೂ ಸ್ಥಳೀಯರ ಮೂಲಕ ಹಮ್ಮಿಕೊಳ್ಳಲಾಗಿತ್ತು.
   ಪಟ್ಟಣ ಪಂಚಾಯಿತಿ ಸದಸ್ಯ ಅಬ್ದುಲ್ ಅಲಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಿ ತಮ್ಮ ಮನೆಯ ಸ್ವಚ್ಛತೆಯ ಬಗ್ಗೆ ಹಾಗೂ ಅಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ತಡೆಯಲು ಬಾಳ ದಿನದಿಂದ ಸಂಗ್ರಹದ ನೀರನ್ನು ಚೆಲ್ಲಿ ಆರೋಗ್ಯ ಇಲಾಖೆಯ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.

ಗುಡ್ಡ ಕುಸಿಯುವ ಭೀತಿ ಹೊನ್ನಗದ್ದೆಯಲ್ಲಿ ಐದು ಮನೆಯವರು ಆತಂಕದಲ್ಲಿ

ಯಲ್ಲಾಪುರ : ತಾಲೂರಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ವಜ್ರಳ್ಳಿ ಪಂಚಾಯಿತಿ ವ್ಯಾಪ್ತಿಯ ಹೊನ್ನಗದ್ದೆಯ ಗಿಡಗಾರಿ ರಸ್ತೆಯ ಮೇಲಿನ ಗುಡ್ಡ ಕುಸಿಯುವ ಭೀತಿ ಆವರಿಸಿದ್ದು, ರಸ್ತೆಯ ಕೆಳಗಿನ ಐದು ಮನೆಗಳ ಕುಟುಂಬದವರು ಆತಂಕದಲ್ಲಿ ದಿನ ಕಳೆಯುವಂತಾಗಿದೆ.
 
   ಹೊನ್ನಗದ್ದೆಯ ಗಿಡಗಾರಿ ಭಾಗದ ಸುಭಾಷ್ ಭಟ್ ಗಿಡಗಾರಿ, ಮಂಜುನಾಥ ವಿ ಭಟ್ಟ, ಗೋಪಾಲ ಕೃಷ್ಣ ಭಟ್ಟ, ಶಿವರಾಮ ಭಟ್ಟ, ಕೃಷ್ಣ ಭಟ್ಟ ಇವರ ಮನೆಗಳು ಗುಡ್ಡ ಕುಸಿಯುವ ಭೀತಿಯನ್ನು ಎದುರಿಸುತ್ತಿವೆ. ಇದೇ ರೀತಿ ನಿರಂತರವಾಗಿ ಮಳೆ ಸುರಿದರೆ ಅಪಾಯ ತಪ್ಪಿದ್ದಲ್ಲ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಕಳೆದ ಒಂದು ವಾರದಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಯಲ್ಲಾಪುರ ತಾಲೂಕಿನ ಪಟ್ಟಣ ಹಾಗೂ ಗ್ರಾಮೀಣ ಭಾಗಗಳ ಜನತೆ ಅನೇಕ ಸಮಸ್ಯೆಗಳನ್ನು ಎದುರಿಸುವಂತೆ ಆಗಿದೆ. ಪ್ರಮುಖವಾಗಿ ಹಳ್ಳಕೊಳ್ಳಗಳು ತುಂಬಿರುವುದರಿಂದ ಶಾಲಾ ಮಕ್ಕಳು ಮನೆಯಿಂದ ಶಾಲೆಗೆ ಹೋಗಿ ಬರದಂತಾಗಿದ್ದು, ಶಾಲೆಗೆ ರಜೆ ಘೋಷಣೆ ಆಗಿರುವುದರಿಂದ ಸಧ್ಯ ನಿರಾತಂಕಿತರಾಗಿದ್ದಾರೆ. ಬಹುತೇಕ ಯಲ್ಲಾಪುರದ ಗ್ರಾಮೀಣ ಭಾಗದಲ್ಲಿ ಬಹಳಷ್ಟು ಅಂತರದಲ್ಲಿ ಗುಡ್ಡ ಕಣಿವೆಗಳ ಮಧ್ಯೆ ಒಂದೊಂದು ಮನೆಯಿದ್ದು ಅದರಲ್ಲಿಯೂ ವಜ್ರಳ್ಳಿ ಕಳಚೆಯಂತಹ ಪ್ರದೇಶಗಳು ಈಗಾಗಲೇ ಭೂಕುಸಿತವಾಗಿದೆ, ಮತ್ತು ಭೂಕುಸಿತದ ಪ್ರದೇಶವಾಗಿ ಗುರುತಿಸಿಕೊಂಡಿದೆ. ಹೊನ್ನಗದ್ದೆ ರಸ್ತೆ ಕೂಡ ಗುಡ್ಡ ತಗ್ಗಿನಿಂದ ಕೂಡಿದ್ದು ನಿರಂತರವಾಗಿ ಮಳೆ ಸುರಿಯುತ್ತಿದ್ದರೆ, ಮಣ್ಣುಹಸಿಯಾಗಿ ದೊಡ್ಡ ಪ್ರಮಾಣದಲ್ಲಿ ಕುಸಿಯುವ ಆತಂಕ ಎದುರಾಗಿದೆ.
   ಯಾವುದೇ ಅಪಾಯ ಸಂಭವಿಸುವ ಮುಂಚಿತವಾಗಿ ಸ್ಥಳೀಯರನ್ನು ಜನರನ್ನು ಸುರಕ್ಷಿತವಾದ ಸ್ಥಳಕ್ಕೆ ಸ್ಥಳಾಂತರಿಸುವುದು ಅಥವಾ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ ಎಂದು ಅಪಾಯದ ಅಂಚಿನಲ್ಲಿ ದಿನ ದೂಡುತ್ತಿರುವ ಜನ ಹೇಳುತ್ತಾರೆ. 

ಅರಬೈಲ್ ಡಬ್ಗುಳಿ ರಸ್ತೆಯಲ್ಲಿ ಭೂಕುಸಿತ

ಯಲ್ಲಾಪುರ : ವಾರದಿಂದ ಎಡೆಬಿಡದೆ ಸುರಿದ ಭಾರಿ ಮಳೆಗೆ ಯಲ್ಲಾಪುರ ತಾಲೂಕಿನ ಅರಬೈಲ ಗ್ರಾಮದ ಪಕ್ಕದ ಡಬ್ಗುಳಿ ಗ್ರಾಮದ ಅರಣ್ಯದಲ್ಲಿ ಗುಡ್ಡ ಕುಸಿತವಾಗಿದೆ. ಆದರೆ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮತ್ತು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
 
    ತಾಲ್ಲೂಕಿನಲ್ಲಿ ಕಳೆದ ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ತಾಲೂಕಿನ ಹಳ್ಳ ಕೊಳ್ಳಗಳು ತುಂಬಿ ನದಿಯಾಗಿ ಪರಿವರ್ತನೆಗೊಂಡಿವೆ. ಯಲ್ಲಾಪುರ ತಾಲೂಕು ಸೇರಿದಂತೆ ಪಕ್ಕದ ಅಂಕೋಲಾ ತಾಲ್ಲೂಕು ಹಾಗೂ ಸುತ್ತಮುತ್ತಲ ತಾಲ್ಲೂಕುಗಳ ಗಡಿ ಭಾಗದಲ್ಲಿ
ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಅದೇ ರೀತಿ ತಾಲ್ಲೂಕಿನ ಡಬ್ಗುಳಿಯಲ್ಲಿ ಗುಡ್ಡಗಳ ಕುಸಿತದ ಪರಿಣಾಮ ನೀರು ಹರಿದು ಹೋಗಲು ಅಳವಡಿಸಲಾದ ಪೈಪ್‌ಗಳು ಕಿತ್ತು ಹೋಗಿದೆ. ಅನೇಕ ಮರಗಿಡಗಳು ಕಿತ್ತು ಗುಡ್ಡದ ಮಣ್ಣಿನೊಂದಿಗೆ ಹರಿದು ತಗ್ಗು ಪ್ರದೇಶಕ್ಕೆ ಬಂದು ಬಿದ್ದಿವೆ. 
    ಪ್ರತ್ಯಕ್ಷದರ್ಶಿಗಳ ಪ್ರಕಾರ ಜುಲೈ 2019ರಲ್ಲಿಯೂ ಇದೇ ರೀತಿ  ಭೂ ಕುಸಿತವಾಗಿತ್ತು. ಈಗ ಮತ್ತದೆ ರೀತಿಯ ಭೂಕುಸಿತವಾಗಿದೆ. ರಾಷ್ಟ್ರೀಯ ಹೆದ್ದಾರಿ ನಿರ್ವಹಣ ಘಟಕದವರು ಜೆಸಿಪಿ ಬಳಸಿ ರಸ್ತೆ ಬಿಟ್ಟಿದ್ದ ಮಣ್ಣನ್ನು ತೆರವುಗೊಳಿಸಿದ್ದಾರೆ. ಸ್ಥಳಕ್ಕೆ ತಾಲೂಕಿನ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಿರವತ್ತಿ ಹಿಂದೂ ರುದ್ರಭೂಮಿಗೆ ಮೂಲಭೂತ ಸೌಲಭ್ಯ ಒದಗಿಸುವಂತೆ ಬಿಜೆಪಿ ಆಗ್ರಹ

ಯಲ್ಲಾಪುರ : ತಾಲೂಕಿನ ಕಿರವತ್ತಿಯ ಹಿಂದೂ ರುದ್ರಭೂಮಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಆಗ್ರಹಿಸಿ
ಭಾರತೀಯ ಜನತಾ ಪಾರ್ಟಿ ಯಲ್ಲಾಪುರ ಮಂಡಳ, ಯಲ್ಲಾಪುರ ಯುವ ಮೋರ್ಚಾ ಹಾಗೂ ವಿವಿಧ ಘಟಕಗಳ ಪ್ರಮುಖರು ಶುಕ್ರವಾರ ಕಿರವತ್ತಿ ಗ್ರಾಮ  ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಿದರು.
   ಕಿರವತ್ತಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಕಿರವತ್ತಿಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಹಿಂದೂ ರುದ್ರಭೂಮಿಯಲ್ಲಿ ಶವ ಸಂಸ್ಕಾರಕ್ಕೆ ಒಂದು ಕಟ್ಟೆ ನಿರ್ಮಾಣ ಮಾಡಲಾಗಿದೆ. ರುದ್ರ ಭೂಮಿಯಲ್ಲಿ ಅತ್ಯವಶ್ಯವಾಗಿರುವ ಮೂಲಭೂತ ಸೌಕರ್ಯಗಳಿಲ್ಲದೇ,  ಶವ ಸಂಸ್ಕಾರಕ್ಕೆ ಬರುವ ಜನರಿಗೆ ತೊಂದರೆಯಾಗಿದೆ.  
 ಪ್ರಮುಖವಾಗಿ ವಿದ್ಯುತ್ ವ್ಯವಸ್ಥೆ, ನೀರಿನ ವ್ಯವಸ್ಥೆ,  ರಸ್ತೆ, ಪೂರ್ಣಗೊಳ್ಳದಿರುವುದು, ಶವ ಸಂಸ್ಕಾರದ ಕಟ್ಟೆಯ ಹತ್ತಿರ ಸುತ್ತಲೂ ಸಿಮೆಂಟ್ ಕಾಂಕ್ರೀಟ್ ಅಳವಡಿಸುವ ಕಾಮಗಾರಿ ಅತ್ಯವಶ್ಯವಾಗಿ ಆಗಬೇಕಾಗಿದೆ. ಹತ್ತಿರದಲ್ಲಿ ಹಾದು ಹೋಗಿರುವ ವಿದ್ಯುತ್ ಮಾರ್ಗದಿಂದ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಕಂಬಗಳನ್ನು ಅಳವಡಿಸಿ ಹೊಸದಾಗಿ ವಿದ್ಯುತ್ ತಂತಿ ಮಾರ್ಗ ಅಳವಡಿಸಬೇಕಾಗಿದೆ. ಹೀಗಾಗಿ ಅಗತ್ಯವಾಗಿರುವ ಕಾಮಗಾರಿಗಳನ್ನು ಕೂಡಲೇ ಮಂಜೂರು ನೀಡಿ ಹಿಂದು ರುದ್ರ ಭೂಮಿಯಲ್ಲಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ. 
   ಕಿರವತ್ತಿ ಪಂಚಾಯತಿಯಿಂದ ಸ್ಮಶಾನಕ್ಕೆ ಸಂಬಂಧಿಸಿ ಯಾವುದೇ ಕ್ರಮ ಕೈಗೊಳ್ಳದೆ ಇದ್ದಲ್ಲಿ ಪಂಚಾಯತ ಎದುರು ಸಾರ್ವಜನಿಕರ ಸಹಯೋಗದೊಂದಿಗೆ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಕೂಡ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ. 
     ಬಿಜೆಪಿ ಮಂಡಲ ಅಧ್ಯಕ್ಷ ಪ್ರಸಾದ ಹೆಗಡೆ ಬಿಜೆಪಿ ಯುವ ಮೋರ್ಚಾ ಪ್ರಧಾನ  ಅಧ್ಯಕ್ಷ ರಜೆ ತುಂಬಿದ ಪ್ರಧಾನ ಕಾರ್ಯದರ್ಶಿ ಪ್ರಭು ಚಿಂಚಕಂಡಿ ಹಾಗೂ ರಾಘವೇಂದ್ರ ಕುಂದರಗಿ, ಯಲ್ಲಾಪುರ ಪ.ಪಂ ಸದಸ್ಯ ಸೋಮೇಶ್ವರ ನಾಯ್ಕ, ಬಿಜೆಪಿ ಎಸ್ ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅರ್ಜುನ ಬೆಂಗೇರಿ, ಬಿಜೆಪಿ ಓಬಿಸಿ ಮೋರ್ಚಾ ಸದಸ್ಯ ಪರಶುರಾಮ ಮುಗಳಿ, ವೈದ್ಯ ಡಾ. ಅಶೋಕ ದಿಬ್ಬದಮನಿ, ಬಿಜೆಪಿ ಪ್ರಮುಖರಾದ ಕೇಶವ ಕಾಂಬಳೆ, ವಿಶಾಲ ಸೋನಾರ್, ರವಿ ಶಿಂದೆ, ಪರಶುರಾಮ ತಿರುಕಪ್ಪನವರ್, ದೇವರಾಜ ಗಸ್ತಿ, ಗಾಂಧಿ ಸೋಮಪೂರಕರ, ಜಗ್ಗು ಹುಂಬೆ, ಭಾಗು ಪಟಗಾರೆ, ಬಿಜ್ಜು ಪಿಂಗಳೆ ಮುಂತಾದವರು ಮನವಿ ನೀಡುವ ಸಂದರ್ಭದಲ್ಲಿ ಇದ್ದರು. 
    ಪಿಡಿಓ ಅಣ್ಣಪ್ಪ ವಡ್ಡರ್ ಮನವಿ ಸ್ವೀಕರಿಸಿ ಸಾಧ್ಯವಿರುವ ಎಲ್ಲ ಮೂಲಭೂತ ಸೌಕರ್ಯವನ್ನು ಒದಗಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಯಲ್ಲಾಪುರದಲ್ಲಿ ಡೆಂಗ್ಯೂ ರೋಗದ ಮುಂಜಾಗ್ರತಾ ಕ್ರಮವಾಗಿ ಲಾರ್ವಾ ಉತ್ಪತ್ತಿ ತಾಣಗಳ ನಾಶ

ಯಲ್ಲಾಪುರ : ಪಟ್ಟಣದಲ್ಲಿ ಡೆಂಗ್ಯೂ ರೋಗದ ಮುಂಜಾಗ್ರತಾ ಕ್ರಮವಾಗಿ ಪಟ್ಟಣ ಪಂಚಾಯತ ಜನಪ್ರತಿನಿಧಿಗಳ ಸಹಕಾರದೊಂದಿಗೆ ಶುಕ್ರವಾರ ಲಾರ್ವಾ ಉತ್ಪತ್ತಿ ತಾಣಗಳ ನಾಶ ಚಟುವಟಿಕೆ ಹಮ್ಮಿಕೊಳ್ಳಲಾಗಿತ್ತು.            
     ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಡೆಂಗ್ಯೂ ನಿಯಂತ್ರಣದಲ್ಲಿ ಇದು ಅತ್ಯಂತ ಸಹಕಾರಿ ಆಗಲಿದೆ. ಮನೆ ಮನೆಗೆ ತೆರಳಿ ಲಾರ್ವಾ ಉತ್ಪತ್ತಿ ತಾಣಗಳ ಪತ್ತೆ ಹಚ್ಚಿ ನಾಶ ಮಾಡಲಾಯಿತು.   ಜನರಿಗೆ ಡೆಂಗ್ಯೂ ಕುರಿತು ಅರಿವು ಮೂಡಿಸಲಾಯಿತು.            
  ತಮ್ಮ ತಮ್ಮ ವಾರ್ಡಗಳಲ್ಲಿ ಆರೋಗ್ಯ ಸಹಾಯಕರ ಜೊತೆ ಭಾಗವಹಿಸಿದ್ದ ಮಂಜುನಾಥ ನಗರ ವಾರ್ಡ್ ಪಂಪಂ ಸದಸ್ಯ ಸತೀಶ ನಾಯ್ಕ. ರವೀಂದ್ರ ನಗರ ವಾರ್ಡ್ ಸದಸ್ಯ ಸೋಮೇಶ್ವರ ನಾಯ್ಕ, ಅಂಬೇಡ್ಕರ ನಗರ ವಾರ್ಡ್ ಸದಸ್ಯ ಜನಾರ್ಧನ ಪಾಟಣಕರ, ಉದ್ಯಮನಗರ ವಾರ್ಡ್ ಸದಸ್ಯೆ ಗೀತಾ ನಾಯ್ಕ, ಕಾಳಮ್ಮನಗರ ವಾರ್ಡ್ ಸದಸ್ಯೆ ನರ್ಮದಾ ನಾಯ್ಕ, ನೂತನನಗರ ವಾರ್ಡ್ ಸದಸ್ಯೆ ಪುಷ್ಪಾ ನಾಯ್ಕ, ಜಡ್ಡಿ ವಾರ್ಡ್ ಸದಸ್ಯ ಅಬ್ದುಲ್ ಅಲಿ ಹಮೀದ್ ಹಾಗೂ ಇತರ ಪಟ್ಟಣ ಪಂಚಾಯತ ಸದಸ್ಯರು ಲಾರ್ವಾ ನಾಶ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು.

ನೈಸರ್ಗಿಕ ವಿಕೋಪಕ್ಕೆ ಒಳಗಾದ ಜನರಿಗಾಗಿ ನಿಧಿ ಸಂಗ್ರಹ ನಿಯಮವೇನು ?

ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕರ್ನಾಟಕದ ಇತರೆ ಜಿಲ್ಲೆಗಳಲ್ಲಿ ನೈಸರ್ಗಿಕ ವಿಕೋಪಕ್ಕೆ ಒಳಗಾಗಿ ಹಲವಾರು ಜನರ ಪ್ರಾಣ ಹಾನಿ, ಆಸ್ತಿಪಾಸ್ತಿ ಹಾನಿಯಾಗಿದೆ, ಅದರಲ್ಲಿಯೂ ಉತ್ತರ ಕನ್ನಡ ಜಿಲ್ಲೆಯ ಅತಿ ಹೆಚ್ಚು ಹಾನಿಯನ್ನು ಅನುಭವಿಸಿದೆ.
    ಜೀವ ಆಸ್ತಿಪಾಸ್ತಿ ಕಳೆದುಕೊಂಡ ಕುಟುಂಬಗಳಿಗೆ ಸಹಾಯ ಮಾಡಲು ಹಲವಾರು ಸಂಘ ಸಂಸ್ಥೆಗಳು ಮುಂದೆ ಬರುತ್ತವೆ. ಜೊತೆಗೆ ಸಾರ್ವಜನಿಕವಾಗಿ ನಿಧಿಯನ್ನು ಸಂಗ್ರಹಿಸುತ್ತವೆ. ಕೆಲವು ವರ್ಷಗಳ ಹಿಂದೆ ಸಾರ್ವಜನಿಕವಾಗಿ ಸಂತ್ರಸ್ತರಿಗೆ ಅನುಕೂಲವಾಗಿ ಆರ್ಥಿಕ ಸಹಾಯ ನೀಡಲು ನಿಧಿ ಸಂಗ್ರಹಿಸಲು ಯಾವುದೇ ಕಾನೂನಿನ ತೊಡಕುಗಳು ನಿಯಮಾವಳಿಗಳು ಇರಲಿಲ್ಲ. ಆದರೆ ಈ ನಿಧಿ ಸಂಗ್ರಹಣೆಯಲ್ಲಿ ಆಗುತ್ತಿರುವ ವಂಚನೆಯನ್ನು ಪರಿಗಣಿಸಿ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ತಂದು, ಪ್ರಧಾನ ಮಂತ್ರಿ ಪರಿಹಾರ ನಿಧಿ ಮುಖ್ಯಮಂತ್ರಿ ಪರಿಹಾರ ನಿಧಿ ಈ ರೀತಿಯಲ್ಲಿ ನಿಧಿಯನ್ನು ಸಂಗ್ರಹಿಸಲು ಅವಕಾಶವನ್ನು ನೀಡಿದೆ. ಈ ಪರಿಹಾರ ನಿಧಿಗಳಿಗೆ ಹಣ ನೀಡಲು ಇಚ್ಛಿಸುವ ಯಾರೇ ಕೂಡ ನೇರವಾಗಿ ಹಣವನ್ನು ನೀಡಬಹುದು,
    ಆದರೆ ಸಾರ್ವಜನಿಕವಾಗಿ ಡಬ್ಬಿಗಳನ್ನು ಹಿಡಿದು ಹಣ ಸಂಗ್ರಹಣೆಗೆ ಮುಂದಾದರೆ ಅದಕ್ಕೆ ಹಲವಾರು ನಿಯಮಗಳು ಕಾನೂನುಗಳು ಪಾಲಿಸುವುದರೊಂದಿಗೆ, ಪರಮಾನಿಗೆಗಳು ಅಗತ್ಯವಾಗಿದೆ. ಸರ್ಕಾರ ನೈಸರ್ಗಿಕ ವಿಕೋಪದ ಪರಿಹಾರಾರ್ಥವಾಗಿ ಸಾರ್ವಜನಿಕರಿಂದ ನಿಧಿ ಸಂಗ್ರಹ ಘೋಷಣೆ ಯಾದಲ್ಲಿ ಈ ಕೆಳಗಿನ ಕೆಲವು ನಿಯಮಗಳನ್ನು ಅನುಸರಿಸಿ ನಿಧಿಯನ್ನು ಸಂತ್ರಸ್ತರಿಗಾಗಿ ಸಂಗ್ರಹಿಸಬಹುದಾಗಿದೆ. ಉತ್ತರ ಕನ್ನಡದಲ್ಲಿ ನೈಸರ್ಗಿಕ ವಿಕೋಪದಿಂದ ಆಗಿರುವ ಹಾನಿಗೆ ಸಂತಸ್ತರಿಗೆ ಪರಿಹಾರ ನೀಡಲು ಕೆಲವು ಯುವಕರು ವಿದ್ಯಾರ್ಥಿಗಳು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕಾಗಿ ಈ ಚಿಕ್ಕ ಲೇಖನವನ್ನು ನಮ್ಮ ಓದುಗರ ಮುಂದಿಡುವ ಪ್ರಯತ್ನ ಮಾಡುತ್ತಿದ್ದೇವೆ.
 
   ಭಾರತದಲ್ಲಿ ನೈಸರ್ಗಿಕ ವಿಕೋಪದ ಸಮಯದಲ್ಲಿ ಖಾಸಗಿ ಕ್ಷೇತ್ರದಿಂದ ನಿಧಿ ಸಂಗ್ರಹವು ನಿಯಮಿತವಾಗಿದೆ. "ನಿಷ್ಠೆ ಮತ್ತು ಸ್ಥಿರತೆ" ಎಂಬ ತತ್ವವನ್ನು ನೆನೆಸಿಕೊಂಡು, ಈ ಕ್ಷೇತ್ರದಲ್ಲಿ ಕೆಲವು ಪ್ರಮುಖ ನಿಯಮಗಳು ಮತ್ತು ಕಾನೂನುಗಳು ಕಾರ್ಯನಿರ್ವಹಿಸುತ್ತವೆ.

ರಿಜಿಸ್ಟ್ರೇಶನ್ ಮತ್ತು ಅನುಮತಿ : 
     ಯಾವುದೇ ಸಂಸ್ಥೆ ಅಥವಾ ವ್ಯಕ್ತಿಯು ನೈಸರ್ಗಿಕ ವಿಕೋಪದ ಸಮಯದಲ್ಲಿ ನಿಧಿ ಸಂಗ್ರಹಿಸಲು, ಮೊದಲಿಗೆ ಅವರು ರಾಷ್ಟ್ರೀಯ ಅಥವಾ ರಾಜ್ಯ ಸರ್ಕಾರದಿಂದ ಅನುಮತಿ ಪಡೆದುಕೊಳ್ಳಬೇಕು. ಇದು ಸತತವಾಗಿ ಸುಧಾರಿತ ಮಾಹಿತಿಯೊಂದಿಗೆ ನಡೆಯುತ್ತದೆ.

ಕಾನೂನು ನಿಯಮಗಳು : 
    "ಆರ್ಥಿಕ ಸಹಾಯ ಕಾನೂನು" ಅಡಿ, ವ್ಯಕ್ತಿಗಳು ಅಥವಾ ಸಂಸ್ಥೆಗಳು ಸಾರ್ವಜನಿಕವಾಗಿ ನಿಧಿ ಸಂಗ್ರಹಿಸುವಾಗ ಸರ್ಕಾರದ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇದರಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯುವುದು ಮತ್ತು ಹಣದ ವ್ಯಾಪಾರವನ್ನು ಸೂಕ್ತವಾಗಿ ದಾಖಲಿಸುವುದು ಒಳಗೊಂಡಿದೆ.  ಖಾಸಗಿಯವರು ನೈಸರ್ಗಿಕ ವಿಕೋಪದ ಕಡಿಮೆಗಳಲ್ಲಿ ನಿಧಿ ಸಂಗ್ರಹಿಸಲು ಸಂಬಂಧಪಟ್ಟ ಆಡಳಿತಾಧಿಕಾರಿಗಳ ಅನುಮೋದನೆ ಅಗತ್ಯ. ಹಣಕಾಸು ಸೇವೆಗಳ ನಿಯಂತ್ರಣ ಏಕಕಾಲಿಕ ನಿಯಮ (FCRA) ಅಡಿ, ಅಂತಾರಾಷ್ಟ್ರೀಯ ಕೊಡುಗೆಗಳಿಗೆ ಸರ್ಕಾರಿ ಅನುಮೋದನೆಯ ಅಗತ್ಯವಿದೆ.

ಮರುಪಾವತಿ ಮತ್ತು ಶ್ರೇಣೀಬದ್ಧತೆ :   
   ಖಾಸಗಿಯವರು ನೀಡುವ ಧನದ ಶ್ರೇಣೀಬದ್ಧತೆಯ ಮೇಲೆ ಕಾನೂನು ಕಟ್ಟಲೆಗಳಿರುತ್ತವೆ. ಎಲ್ಲ ಲೆಕ್ಕಗಳು, ಕಲೆಕ್ಟ್ ಮಾಡಿದ ಹಣ, ಮತ್ತು ಉಪಯೋಗಿತ ಉಲ್ಲೇಖಗಳನ್ನು ಸರಿಯಾಗಿ ದಾಖಲಿಸುವುದರಲ್ಲಿ ಖಾತರಿಯು ಮುಖ್ಯವಾಗಿದೆ. ಹಣಕಾಸು ಸಂಗ್ರಹಣೆ ಮತ್ತು ಬಳಕೆಯಾದ ನಂತರ, ವಿವರವಾದ ವರದಿಗಳನ್ನು ಸಲ್ಲಿಸಲು ಕಾನೂನು ಒತ್ತಾಯಿಸುತ್ತದೆ. ಈ ವರದಿಗಳು ಪ್ರಾಥಮಿಕ ಮತ್ತು ಮುಚ್ಚಳಿಕೆ ಹಾಗೂ ಲೆಕ್ಕಪತ್ರಗಳನ್ನು ಒಳಗೊಂಡಿರುತ್ತವೆ, ಮತ್ತು ಸರಕಾರಿಗೆ ಸಲ್ಲಿಸುವ ಅಗತ್ಯವಿದೆ.
  ಈ ನಿಯಮಗಳು ಖಾಸಗಿ ಕೊಡುಗೆಯು ದುರುಪಯೋಗವಾಗದಂತೆ, ಹಾಗೂ ಸಮಗ್ರ ನೈತಿಕತೆ ಮತ್ತು ಲೆಕ್ಕಾಪಾಖಾನದ ಉಲ್ಲೇಖವನ್ನು ನಿರ್ವಹಿಸಲು ಉದ್ದೇಶಿತವಾಗಿವೆ.

ಅಕ್ರಮ ಕ್ರಿಯೆಗಳು ಮತ್ತು ಶಿಕ್ಷೆಗಳು :
   ನಿಯಮಗಳ ಉಲ್ಲಂಘನೆಯಾಗುವ ಪರಿಸ್ಥಿತಿಯಲ್ಲಿ ಕಾನೂನು ಕಠಿಣ ಶಿಕ್ಷೆಗಳನ್ನು ವಿಧಿಸುತ್ತದೆ. ತಪ್ಪು ಹಣಕಾಸು, ಲೈಸೆನ್ಸಿಂಗ್ ಕೊರತೆಯು ದಂಡ ಅಥವಾ ಕಾನೂನು ಕ್ರಮಕ್ಕೆ ಕಾರಣವಾಗಬಹುದು.

ಡೆಂಗ್ಯೂ ನಿರ್ಮೂಲನೆಗೆ ರವೀಂದ್ರನಗರದಲ್ಲಿ ಜಾಗೃತಿ ಕಾರ್ಯಕ್ರಮ

ಯಲ್ಲಾಪುರ: ತಾಲೂಕಾ ಆರೋಗ್ಯಾಧಿಕಾರಿಗಳ‌ ಕಾರ್ಯಾಲಯ, ಆಯುಷ್ಮಾನ್ ಅರೋಗ್ಯ ಮಂದಿರ, ಪಟ್ಟಣ ಪಂಚಾಯತಿ, ಮತ್ತು ರವೀಂದ್ರನಗರ ಸ್ಥಳೀಯ ಸಂಘಗಳ ಸಹಯೋಗದಲ್ಲಿ ಡೆಂಗ್ಯೂ ರೋಗಕ್ಕೆ ಕಾರಣವಾಗಿರುವ ಸೊಳ್ಳೆ ಲಾರ್ವಾ ನಿರ್ಮೂಲನೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಶುಕ್ರವಾರ ಬೆಳಿಗ್ಗೆ ಆಯೋಜಿಸಲಾಯಿತು. 
   ಕಾರ್ಯಕ್ರಮದಲ್ಲಿ, ರವೀಂದ್ರ ನಗರವಾರ್ಡ್ ಸದಸ್ಯ ಸೋಮೇಶ್ವರ ನಾಯ್ಕ ಮಾತನಾಡಿ, ಡೆಂಗ್ಯೂ ರೋಗ ಹರಡದಂತೆ ತಡೆಯಲು ಸ್ವಚ್ಛತೆ ಕಾಪಾಡುವುದು ಮುಖ್ಯ. ತ್ಯಾಜ್ಯ ವಿಲೇವಾರಿ, ನೀರಿನ ಸಮರ್ಪಕ ನಿರ್ವಹಣೆ ಹಾಗೂ ಜನರಲ್ಲಿ ಜಾಗೃತಿ ಬೆಳೆಯುವುದು ಅಗತ್ಯ. ಕೀಟನಾಶಕ ಸಿಂಪಡಿಕೆ, ಕಸವನ್ನು ಸರಿಯಾಗಿ ವಿಲೇವಾರಿ ಮಾಡುವುದು ಮತ್ತು ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ತಡೆಯುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
 
  ಸಮುದಾಯ ಆರೋಗ್ಯ ಅಧಿಕಾರಿ ಪರಶುರಾಮ ಡೊಣೂರ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ರೇವತಿ ಬಿ. ನಾಯ್ಕ ಪ್ರಾತ್ಯಕ್ಷಿಕೆಯ ಮೂಲಕ ಲಾರ್ವ ನಾಶ‌ಮಾಡುವ ಕ್ರಮಗಳನ್ನು ಮನೆಗೆ ಮನೆಗೆ ತೋರಿಸಿಕೊಟ್ಟರು, 
   ಸೊಳ್ಳೆ ಲಾರ್ವಾ ನಿರ್ಮೂಲನೆ ಬಗ್ಗೆ ಮಾಹಿತಿ ನೀಡಲು ವಿಶೇಷ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಯಿತು. ಜನರಲ್ಲಿ ಡೆಂಗ್ಯೂ ಜಾಗೃತಿ ಮೂಡಿಸಲು ವಿವಿಧ ಉಪಾಯಗಳನ್ನು ವಿವರಿಸಲಾಯಿತು. ಈ ಕಾರ್ಯಕ್ರಮವು ಡೆಂಗ್ಯೂ ಮುಂಜಾಗ್ರತಾ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿತು.
   ಈ ಸಂದರ್ಭದಲ್ಲಿ ಸ್ಥಳೀಯರಾದ ಸಮೀರ್ ತೇಜೇಶ್, ಮುಸ್ತಫಾ, ಗಣೇಶ, ಅಖೀಲ್, ಆಕಾಶ ಮತ್ತು ಇತರರು ಸಹಕರಿಸಿದರು.