Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Saturday, 20 July 2024

ಯಲ್ಲಾಪುರದಲ್ಲಿ ದೈಹಿಕ ಶಿಕ್ಷಣ ದರ್ಶಿಕಾ ಹಾಗೂ ಇ-ಶಿಕ್ಷಣ ಸುರಭಿ ಪುಸ್ತಕ ಬಿಡುಗಡೆ

ಯಲ್ಲಾಪುರ: ಶನಿವಾರ, ಎರಡು ಮಹತ್ವದ ಪುಸ್ತಕಗಳು ಬಿಡುಗಡೆಯಾದವು. ಈ ಪುಸ್ತಕಗಳು ರಾಜ್ಯದ ಎಲ್ಲೆಡೆ ವ್ಯಾಪಕವಾಗಿ ಬಳಸಿದಾಗ, ಶಿರಸಿ ಶೈಕ್ಷಣಿಕ ಜಿಲ್ಲೆಗೆ ಗೌರವವನ್ನೂ ಹೆಚ್ಚಿಸಲಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಪ್ರಾಥಮಿಕ ಪ್ರೌಢ ಶಿಕ್ಷಣ ನಿರ್ದೇಶಕ ಎಂ ಎಸ್ ಪ್ರಸನ್ನಕುಮಾರ್ ಹೇಳಿದರು.
   ಪಟ್ಟಣದ ಅಡಿಕೆ ಭವನದಲ್ಲಿ ಜುಲೈ 20ರಂದು ನಡೆದ‌ ಕಾರ್ಯಕ್ರದಲ್ಲಿ "ದೈಹಿಕ ಶಿಕ್ಷಣ ದರ್ಶಿಕಾ" ಮತ್ತು "ಇ-ಶಿಕ್ಷಣ ಸುರಭಿ"  ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಶಿರಸಿ ಜಿಲ್ಲೆಯ ಶಾಲಾ ಶಿಕ್ಷಕರು ರಾಜ್ಯಮಟ್ಟದಲ್ಲಿ ಅಗತ್ಯವಾದ ಏಕರೂಪ ಪಠ್ಯಕ್ರಮ ರೂಪಿಸಿ ಕೊಟ್ಟಿದ್ದಾರೆ. ಈ ಭಾಗದ ಶಿಕ್ಷಕರು ತಮ್ಮ ಅಧ್ಯಯನ ಶೀಲತೆಗೆ ಹೆಸರಾಗಿದ್ದಾರೆ. ಶಿಕ್ಷಣಕ್ಕೆ ಮಾದರಿಯಾಗಿರುವ ಈ ಪುಸ್ತಕಗಳು, ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಲು ಸಹಾಯವಾಗಲಿವೆ ಎಂದರು.
  ‌ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶಿರಸಿ ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಾರಿ ಬಸವರಾಜ ಮಾತನಾಡಿ, ಈ ಪುಸ್ತಕಗಳು ಬೇರೆ ತಾಲೂಕುಗಳಲ್ಲಿಯೂ ವಿಸ್ತಾರಗೊಳಿಸಲಾಗುವುದು ಎಂದರು. 
   ನಿವೃತ್ತ ಉಪನಿರ್ದೇಶಕ ವಸಂತ ಭಂಡಾರಿ, ದೈಹಿಕ ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡಿ, ಇದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ ಎಂದರು. 
   ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಶ್ರೀರಾಮ ಹೆಗಡೆ ಮತ್ತು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ್ ತಾರಿಕೊಪ್ಪ ಕೂಡ ಪುಸ್ತಕಗಳ ಕುರಿತಂತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. 
   ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕಗೈದರು.
   ವೇದಿಕೆಯಲ್ಲಿ ಡಯಟ್ ಶಿರಸಿ ಪ್ರಾಚಾರ್ಯ ಎಂ.ಎಸ್. ಹೆಗಡೆ, ಜಿಲ್ಲಾ ಅಕ್ಷರ ದಾಸೋಹ ನೋಡಲ್ ಅಧಿಕಾರಿ ಸದಾನಂದ ಸ್ವಾಮಿ, ಶಿರಸಿ ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ನಾರಾಯಣ ಎಚ್. ನಾಯಕ, ಜಿ.ಪ್ರೌ.ಶಾ ಶಿ ಸಂಘದ ಅಧ್ಯಕ್ಷ ಅಜಯ ನಾಯಕ, ಜಿ.ದೈ.ಶಾ ಶಿ ಸಂಘದ ನಾರಾಯಣ ನಾಯಕ, ಪ್ರಮುಖರಾದ ಚಂದ್ರಶೇಖರ ಸಿ ಎಸ್, ಆರ್ ಆರ್ ಭಟ್ ಇದ್ದರು.
    ಸುಜಯ್ ಧುರಂದರ ಪ್ರಾರ್ಥಿಸಿದನು, ಶಿಕ್ಷಕಿಯರು ಸಮೂಹ ಗೀತೆ ಹಾಡಿದರು. ಶಿಕ್ಷಕರಾದ ಚಂದ್ರಹಾಸ ನಾಯ್ಕ, ಸಂತೋಷ ನಾಯ್ಕ ನಿರ್ವಹಿಸಿದರು, ಬಿ‌ಆರ್‌ಸಿ ಸಂಯೋಜನಾಧಿಕಾರಿ ಸಂತೋಷ ಜಿಗಳೂರು ಕೊನೆಯಲ್ಲಿ ವಂದಿಸಿದರು.

ಹೆಸ್ಕಾಂ ತಾಲೂಕ ಮಟ್ಟದ ಗ್ರಾಹಕರ ಸಂವಾದ ಹಾಗೂ ಕುಂದು ಕೊರತೆಯ ಸಭೆ

ಯಲ್ಲಾಪುರ : ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಗಮ(ಹೆಸ್ಕಾಂ) ತಾಲೂಕ ಮಟ್ಟದ ಗ್ರಾಹಕರ ಸಂವಾದ ಹಾಗೂ ಕುಂದು ಕೊರತೆಯ ಸಭೆ ಶನಿವಾರ ಬೆಳಿಗ್ಗೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಮಾಕಾಂತ್ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯುತು. 
  ಮಾವಿನಮನೆ ಗ್ರಾಪಂ ಅಧ್ಯಕ್ಷ ಸುಬ್ಬಣ್ಣ ಕುಂಟೇಗಾಳಿ, ಮಾವಿನಮನೆ ಪಂಚಾಯಿತಿಗೆ ಹೆಚ್ಚುವರಿ ಮೂರು ಲೈನಮೆನ್ ಮತ್ತು ಗ್ರಾಮೀಣ ಶಾಖೆಯು ಭೌಗೋಳಿಕವಾಗಿ ಬಹು ವಿಸ್ತಾರವಿರುವುದರಿಂದ ಗ್ರಾಮೀಣ ಶಾಖೆಯನ್ನು ಎರಡು ಶಾಖೆಯನ್ನಾಗಿ ವಿಂಗಡಿಸಬೇಕೆಂದು ಸಭೆಯಲ್ಲಿ ಮನವಿ ಮಾಡಿದರು.
   ಗ್ರಾಮ ಪಂಚಾಯಿತಿ ದೇಹಳ್ಳಿ ವೆಂಕಟರಮಣ ಭಟ್ ಬಳಗಾರ್ ತಮ್ಮ ಸಮಸ್ಯೆ ನಿವೇದಿಸಿ, ನಿರಂತರ ವಿದ್ಯುತ್ ನೀಡಲು ಮತ್ತು ಅಡಿಕೆಪಾಲ್ ಪರಿವರ್ತಕದ ಡಿ.ಓ.ಎಲ್ ಸರಿಪಡಿಸಲು ಮನವಿ ಮಾಡಿದರು.
    ಉಪ ವಿಭಾಗಾಧಿಕಾರಿ ರಮಾಕಂತ ನಾಯ್ಕ,  ಎಲ್ಲರ ಮನವಿಯನ್ನು ಆಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಯಾ ಶಾಖೆಯ ಶಾಖಾಧಿಕಾರಿಗಳಿಗೆ ಸೂಚಿಸಿದರು.
   ಸಭೆಯಲ್ಲಿ ಲೇಕ್ಕಾಧಿಕಾರಿ ವಿನಾಯಕ ಶೇಟ್, ಸಹಾಯಕ ಇಂಜಿನಿಯರ್ ತಾಂತ್ರಿಕ ಸಂತೋಷ್ ಬಾವಕರ್ ಕಿರಿಯ ಇಂಜಿನಿಯರ್ ಲಕ್ಷ್ಮಣ್ ಜೋಗಳೇಕರ್, ಗ್ರಾಮೀಣ ಕಿರಿಯ ಇಂಜಿನಿಯರಗಳಾದ ವಿಶಾಲ್ ಹೈಗಾರ್ ಕಿರವತ್ತಿ, ನಾಗರಾಜ ಆಚಾರಿ ಮಂಚಿಕೇರಿ ಸಭೆಯಲ್ಲಿದ್ದರು.
    ಯಲ್ಲಾಪುರ ಉಪ-ವಿಭಾಗದಲ್ಲಿ ಪ್ರತಿ ತಿಂಗಳು ಮೂರನೇ ಶನಿವಾರ ಗ್ರಾಹಕರ ಸಂವಾದ ಹಾಗೂ ಕುಂದು ಕೊರತೆಯ ಸಭೆ‌ ನಡೆಸಲಾಗುತ್ತದೆ.

ಯಲ್ಲಾಪುರದ ಮೂಲಕ ಶಿರೂರಿಗೆ ತೆರಳಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ

ಯಲ್ಲಾಪುರ: ಅಂಕೋಲಾದ ಶಿರೂರಿನಲ್ಲಿ ಗುಡ್ಡ ಕುಸಿತ ಉಂಟಾದ ಅವಘಡದ ಸ್ಥಳಕ್ಕೆ ಶನಿವಾರ ಭೇಟಿ ನೀಡಲು ಆಗಮಿಸಿದ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಯಲ್ಲಾಪುರದ ಗಾಂಧಿ ವೃತ್ತದ ಬಳಿ ಶನಿವಾರ ಬೆಳಿಗ್ಗೆ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸ್ವಾಗತಿಸಿದರು. ಬಳಿಕ ಅವರು ಅಂಕೋಲಾಕ್ಕೆ ತೆರಳಿದರು.
      ಕೇಂದ್ರ ಸಚಿವರಾಗಿ ಪ್ರಪ್ರಥಮ ಬಾರಿಗೆ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸುತ್ತಿರುವ ಕುಮಾರಸ್ವಾಮಿಯವರನ್ನು ಜಿಲ್ಲೆಗೆ ಬರಮಾಡಿಕೊಳ್ಳಲು ಕುಮಟಾ ಹಾಗೂ ಶಿರಸಿ ಕಡೆಯಿಂದ ಜೆಡಿಎಸ್ ಪ್ರಮುಖರು ಹಾಗೂ ಕಾರ್ಯಕರ್ತರು ಬಹಳಷ್ಟು ಜನ ಆಗಮಿಸಿದ್ದರು. ಏಕಾಏಕಿ ಮುಗಿಬಿದ್ದ ಜನರಿಂದಾಗಿ ಮಾಧ್ಯಮದವರೊಂದಿಗೆ ಎಚ್. ಡಿ. ಕುಮಾರಸ್ವಾಮಿ ಮಾತನಾಡಲು ಸಾಧ್ಯವಾಗದಂತಹ ಸ್ಥಿತಿ‌ ನಿರ್ಮಾಣವಾಯಿತು. 
   ಕುಮಾರಸ್ವಾಮಿ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ರಾಷ್ಟ್ರೀಯ ಹೆದ್ದಾರಿ 63ರ ಮೂಲಕ ಯಲ್ಲಾಪುರ ರಸ್ತೆ ಮಾರ್ಗವಾಗಿ ಅಂಕೋಲಾದ ಶಿರೂರು ತಲುಪಲಿದ್ದಾರೆ. ನಂತರ ಅಲ್ಲಿ ನಡೆದ ಗುಡ್ಡ ಕುಸಿತದಿಂದ ಸಂತ್ರಸ್ತರಾದ ಜನರನ್ನು ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಅಧಿಕಾರಿಗಳ ಜೊತೆ ಪರಿಹಾರ ಕಾರ್ಯಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಅಲ್ಲದೆ ಕೇಂದ್ರದಿಂದ ಹೊಸ ಪರಿಹಾರದ ಬಗ್ಗೆಯೂ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.
    ಯಲ್ಲಾಪುರದಲ್ಲಿ ಜೆಡಿಎಸ್ ಜಿಲ್ಲಾ ಪ್ರಮುಖರಾದ ಸೂರಜ್ ನಾಯ್ಕ ಸೋನಿ, ರಾಜೇಶ್ವರಿ ಹೆಗಡೆ ಶಿರಸಿ, ಬಿಜೆಪಿ ಮಂಡಲ ಅಧ್ಯಕ್ಷ ಪ್ರಸಾದ ಹೆಗಡೆ, ಬಿಜೆಪಿ ರಾಜ್ಯ ಮಾಧ್ಯಮ‌ ವಕ್ತಾರ ಹರಿಪ್ರಕಾಶ ಕೋಣೆಮನೆ, ತಾಲೂಕಾ ವಕ್ತಾರ ಕೆ ಟಿ ಹೆಗಡೆ, ಜೆಡಿಎಸ್ ಸುಧಾಕರ ನಾಯ್ಕ ಮಂಚಿಕೇರಿ, ಪ.ಪಂ ಸದಸ್ಯ ಸೋಮೇಶ್ವರ ನಾಯ್ಕ, ಪ.ಪಂ ಮಾಜಿ ಸದಸ್ಯ ಗಜಾನನ ನಾಯ್ಕ,  ಹಾಗೂ 100 ಕ್ಕೂ ಹೆಚ್ಚು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಯಲ್ಲಾಪುರ ಪಟ್ಟಣದಲ್ಲಿ ರಾತ್ರಿಯ ಮಳೆಗೆ ಮುರಿದುಬಿದ್ದ ಕಂಬಗಳು ; ವಿದ್ಯುತ್ ವ್ಯತ್ಯಯ

ಯಲ್ಲಾಪುರ, ; ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆ ಮತ್ತು ಗಾಳಿಯಿಂದ ಯಲ್ಲಾಪುರ ಪಟ್ಟಣದ ರವೀಂದ್ರನಗರದಲ್ಲಿ ವಿದ್ಯುತ್ ತಂತಿಯ ಮೇಲೆ ಮರದ ಟೊಂಗೆಗಳು ಬಿದ್ದು ನಾಲ್ಕು ಕಂಬಗಳು ಧರೆಗೆ ಉರುಳಿವೆ. ಈ ಘಟನೆಯಿಂದ ಪಟ್ಟಣದಲ್ಲಿ ರಾತ್ರಿಯಿಂದ ವಿದ್ಯುತ್ ವ್ಯತ್ಯಯ ಉಂಟಾಗಿ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.
  ಯಲ್ಲಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಜನರ ಜೀವನ ಅಸ್ತವ್ಯಸ್ತವಾಗಿದೆ. ಪಟ್ಟಣ ವ್ಯಾಪ್ತಿಯ ಮುಂಡಗೋಡ ರಸ್ತೆ ಲಿಂಗನಕೊಪ್ಪ ಶಾಲೆಯ ಸುತ್ತಮುತ್ತಲಿನ ಮನೆಗಳಿಗೆ ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಸಂಪರ್ಕ ಇಲ್ಲ ಎಂದು ವರದಿಯಾಗಿದೆ. ಇದರಿಂದಾಗಿ ಜನರು ಸಹಜ ಜೀವನ ನಡೆಸಲು ಬಿಕ್ಕಟ್ಟು ಎದುರಿಸುತ್ತಿದ್ದಾರೆ.
   ಲಿಂಗನಕೊಪ್ಪ ಶಾಲೆಯ ಪಕ್ಕದ ನಿವಾಸಿಗಳ ಮನೆಗೆ ಅತಿಯಾದ ವಿದ್ಯುತ್ ಪ್ರವಹಿಸಿ ಹಲವಾರು ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ಉಪಕರಣಗಳು ಸುಟ್ಟು ಹೋಗಿವೆ. ಅದೇ ರೀತಿ, ಗ್ರಾಮೀಣ ಭಾಗದಲ್ಲಿಯೂ ಕೂಡ ಕೆಲವು ಮನೆಗಳಿಗೆ ಹಲವು ದಿನಗಳಿಂದ ವಿದ್ಯುತ್ ಸಂಪರ್ಕ ಇಲ್ಲ ಎನ್ನುವ ದೂರುಗಳು ಕೇಳಿ ಬಂದಿವೆ.
   ಹೆಸ್ಕಾಂ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಿರಂತರವಾಗಿ ವಿದ್ಯುತ್ ಸಂಪರ್ಕ ನೀಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಒಂದು ಕಡೆ ಸರಿಯಾದ ವಿದ್ಯುತ್ ಸಂಪರ್ಕ ನೀಡಲು ಪ್ರಯತ್ನಿಸಿದಾಗ, ಇನ್ನೊಂದು ಕಡೆ ಮರ ಬಿದ್ದು ಅಥವಾ ಇತರ ಕಾರಣಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದೆ. ಇಂತಹ ಪ್ರಾಕೃತಿಕ ವಿಕೋಪಗಳ ನಡುವೆಯೂ, ರಾತ್ರಿ ಹಗಲು ಎನ್ನದೆ ಸೇವೆ ಸಲ್ಲಿಸುತ್ತಿರುವ ಹೆಸ್ಕಾಂ ಸಿಬ್ಬಂದಿಗಳ ಕರ್ತವ್ಯ ನಿಷ್ಠೆ ಶ್ಲಾಘನೀಯವಾಗಿದೆ. ಹಲವಾರು ಅಪಾಯಗಳನ್ನು ಎದುರಿಸುತ್ತಾ ನಾಗರಿಕರಿಗೆ ವಿದ್ಯುತ್ ಸಂಪರ್ಕ ಒದಗಿಸಲು ಅವರು ಮಾಡುವ ಪ್ರಯತ್ನವನ್ನು ಜನರು ಮೆಚ್ಚುತ್ತಿದ್ದಾರೆ.
   ಇಂತಹ ಘಟನೆಗಳು ಎದುರಾಗದಂತೆ ಮುನ್ನೆಚ್ಚರಿಕೆ ಯ ಕ್ರಮವಾಗಿ ಅರಣ್ಯ ಇಲಾಖೆ ಸ್ಥಳೀಯ ಜನರೊಂದಿಗೆ ಬೇಸಿಗೆಯಲ್ಲಿಯೇ ಮಾತುಕತೆ ನಡೆಸಿ  ಶಾಶ್ವತ ಪರಿಹಾರಕ್ಕಾಗಿ ಹೆಸ್ಕಾಂ ಸಂಸ್ಥೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಸೂಚಿಸಿದ್ದಾರೆ.

ಯಲ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೊಸ ಚೈತನ್ಯ!

ಯಲ್ಲಾಪುರ: ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸ ಚೈತನ್ಯ ತುಂಬಿಸಿಕೊಳ್ಳುತ್ತಿದೆ. ನೂತನ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡ ಡಾ.ಆರ್ ಡಿ ಜನಾರ್ದನ್ ಅವರು ಕಾಲೇಜಿನಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತರಲು ಮುಂದಾಗಿದ್ದಾರೆ.
   ಹಿಂದೆ ಒಂದೇ ಕೋಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಾಂಶುಪಾಲರ ಕೊಠಡಿ ಮತ್ತು ಸ್ಟಾಫ್ ರೂಮ್ ಅನ್ನು ಪ್ರತ್ಯೇಕಿಸಿ, ಸ್ವಚ್ಛ ಮತ್ತು ಸುಸಜ್ಜಿತ ಸ್ಥಳಗಳನ್ನು ನಿರ್ಮಿಸಲಾಗಿದೆ. ಕಾಲೇಜಿಗೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್ತು (NAAC) ಮಾನ್ಯತೆ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಗಳು ಅಂತಿಮಹಂತದಲ್ಲಿದೆ.
   ಕಳೆದ ಎರಡು ದಿನಗಳಿಂದ ಕಾಲೇಜಿನ ಕಟ್ಟಡದ ಒಳಾಂಗಣ ಮತ್ತು ಹೊರಾಂಗಣದಲ್ಲಿ ಬಣ್ಣ ಹಚ್ಚುವ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಸಾವಿರಾರು ವಿದ್ಯಾರ್ಥಿಗಳು ಓದಿರುವ ಹಾಗೂ ಓದುತ್ತಿರುವ ವಿದ್ಯಾರ್ಥಿಗಳಿಗೆ ಸುಣ್ಣ ಬಣ್ಣ ಹೊಸತನವನ್ನು ತಂದಿದೆ.  ವಿದ್ಯಾರ್ಥಿಗಳು ಕೂಡ ಈ ಕಾರ್ಯದಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ.
   ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕರು ಯಲ್ಲಾಪುರ ಕಾಲೇಜಿಗೆ ಇನ್ನಷ್ಟು ಅಮೂಲಾಗ್ರ ಬದಲಾವಣೆಗಳನ್ನು ತರಲಾಗುವುದಾಗಿ ಭರವಸೆ ನೀಡಿದ್ದಾರೆ. ಶಾಸಕರ ಇಚ್ಚೆಗೆ ಅನುಸಾರವಾಗಿ ಪ್ರಾಂಶುಪಾಲರೂ ಕೂಡ ತಮ್ಮ ಅಧ್ಯಕ್ಷೀಯ ಮಾತಿನಲ್ಲಿ ಈ ಬದಲಾವಣೆಗಳ ಪರಿಣಾಮಕಾರಿಯಾಗಿ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ. ಈ‌ಎಲ್ಲ ಬದಲಾವಣೆಗಳು ಇಲ್ಲಿ‌ವ್ಯಾಸಂಗ ಮಾಡುತ್ತಿರುವ ಯಲ್ಲಾಪುರದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
   ಹಿಂದೆ ಉನ್ನತ ಶಿಕ್ಷಣಕ್ಕಾಗಿ ಬೇರೆ ಬೇರೆ ಮಹಾನಗರಗಳಿಗೆ ತೆರಳುತ್ತಿದ್ದ ಯಲ್ಲಾಪುರದ ವಿದ್ಯಾರ್ಥಿಗಳು ಈಗ ಯಲ್ಲಾಪುರದಲ್ಲೇ ಉತ್ತಮ ಶಿಕ್ಷಣ ಪಡೆಯಬಹುದು ಎಂಬ ಭರವಸೆ ಮೂಡಿಸಲಿದೆ. ಈ ಬದಲಾವಣೆಗಳು ಯಲ್ಲಾಪುರದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಲಿವೆ ಎಂಬುದರಲ್ಲಿ ಸಂದೇಹವಿಲ್ಲ.