Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Monday, 22 July 2024

ಯಲ್ಲಾಪುರ: ಯಲ್ಲಾಪುರ ಲಾರಿ ಚಾಲಕರ ಮತ್ತು ಮಾಲಕರ ಸಂಘದ ಸದಸ್ಯರು ಸೋಮವಾರ ಅಂಕೋಲಾದ ಶಿರೂರು ಪ್ರದೇಶದಲ್ಲಿ ಗುಡ್ಡ ಕುಸಿದ ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ಪಕ್ಕದಲ್ಲಿ ನಿಂತ ಲಾರಿ ಚಾಲಕರು ಕ್ಲೀನರ್ ಗಳ ಪರಿಸ್ಥಿತಿಯನ್ನು ಅವಲೋಕಿಸಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಆಲಿಸಿದರು.
   ನಂತರ ಅಲ್ಲಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಭೇಟಿಯಾಗಿ, ರಸ್ತೆ ಪಕ್ಕದಲ್ಲಿ ನಿಂತಿರುವ ಲಾರಿಗಳ ಚಾಲಕರ ದೈನಂದಿನ ಊಟ ಇನ್ನಿತರ ವ್ಯವಸ್ಥೆಯ ಬಗ್ಗೆ ಗಮನ ಸೆಳೆದುರು. ಮತ್ತು ಮಣ್ಣಿನಡಿಯಲ್ಲಿ ಸಿಲುಕಿರುವ ಸಾಧ್ಯತೆಯುಳ್ಳ ಚಾಲಕರನ್ನು ಬೇಗ ಪತ್ತೆಹಚ್ಚಲು ಕೇಳಿಕೊಂಡರು.  
   ಈ ಸಂದರ್ಭದಲ್ಲಿ, ಯಲ್ಲಾಪುರ ಸಂಘದ ಅಧ್ಯಕ್ಷ ಸುಜಯ್ ಮರಾಠಿ, ಕಾರ್ಯದರ್ಶಿ ಅಮಿತ್ ನಾಯ್ಕ, ಖಜಾಂಚಿ ಖ್ವಾಜಾ ಅತ್ತರ್, ಗೌರವಾಧ್ಯಕ್ಷ ಮಹೇಶ ನಾಯ್ಕ, ನಾಗೇಂದ್ರ ಭಟ್, ಸುಧಿ ಭಟ್, ಅಮಿತ ನಾಯಕ, ಸಂಕೇತ ನಾಯಕ, ಸಾದಿಕ್, ಮುರಳಿ ರಾವಲ್ ಹಾಗೂ ಇನ್ನಿತರ ಸದಸ್ಯರು ಭಾಗವಹಿಸಿದರು. ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಪೊಲೀಸ್ ಎಸಿಪಿ ಮತ್ತು ಸಿಬ್ಬಂದಿಗಳು, ಹಾಗೆಯೇ ಕಾರವಾರ ಶಾಸಕರಾದ ಸತೀಶ್ ಸೈಲ್ ಅವರನ್ನು ಭೇಟಿ ಮಾಡಿ, ರಕ್ಷಣಾ ಕಾರ್ಯಗಳ ಬಗ್ಗೆ ಮಾಹಿತಿಯನ್ನು ಪಡೆದರು.
  ಚಾಲಕ ಅರ್ಜುನ್ ನ ಪತ್ತೆಹಚ್ಚುವ ಕುರಿತು ಅಧಿಕಾರಿಗಳು ಮತ್ತು ಚಾಲಕ ಮಾಲಿಕರ ನಡುವೆ ಮಾತಿನ ವಾಗ್ವಾದ ನಡೆಯಿತು. ರಸ್ತೆ ಪಕ್ಕದಲ್ಲಿ ನಿಂತಿರುವ ಲಾರಿ ಚಾಲಕರಿಗೆ ಊಟದ ವ್ಯವಸ್ಥೆ ಮಾಡುವಂತೆ ಯಲ್ಲಾಪುರ ಚಾಲಕ ಮಾಲಿಕ ಸಂಘದವರು ಜಿಲ್ಲಾಡಳಿತವನ್ನು ಕೇಳಿಕೊಂಡರು.
   ಯಲ್ಲಾಪುರ ಸಂಘದವರು ಮುಂದಿನ ದಿನಗಳಲ್ಲಿ, ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿ ದುಬಾರಿ ಟೋಲ್ ಸಂಗ್ರಹಿಸುತ್ತಿರುವ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿರುವ ಐಆರ್‌ಬಿ ಕಂಪನಿಯ ವಿರುದ್ಧ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದರು.

ಯಲ್ಲಾಪುರ ಸಂಘದ ಅಧ್ಯಕ್ಷ ಸುಜಯ್ ಮರಾಠಿ ಹಾಗೂ ಗೌರವಾಧ್ಯಕ್ಷ ಮಹೇಶ‌ ನಾಯ್ಕ ಶಿರೂರ ಭೇಟಿಯ ನಂತರ ಯಲ್ಲಾಪುರ ನ್ಯೂಸ್ ಜೊತೆ ಮಾತನಾಡಿ, ಗುಡ್ಡ ಕುಸಿತದ ನಂತರ ಅಲ್ಲಿ ನಿಲ್ಲಿಸಿಕೊಂಡಿರುವ ವಾಹನ ಚಾಲಕರು ಮತ್ತು ಕ್ಲೀನರ್ ಪರಿಸ್ಥಿತಿಗಳು ಬಹಳ ಗಂಭೀರವಾಗಿದೆ. ಅದರಲ್ಲೂ ಬಾರಿ ವಾಹನಗಳ ಚಾಲಕರು ಎಲ್ಲಿಯೂ ಹೋಗದಂತ ಸ್ಥಿತಿ ನಿರ್ಮಾಣವಾಗಿದೆ ಅವರಿಗೆ ಸ್ಥಳದಲ್ಲಿ ಊಟ ಸಿಗುತ್ತಿಲ್ಲ. ಕುಟುಂಬಸ್ಥರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಮಾನವೀಯ ನೆಲೆಯಲ್ಲಿ ಅಲ್ಲಿಯ ಚಾಲಕರು ಕ್ಲೀನರ್ ಗಳಿಗೆ ಸ್ಥಳೀಯ ಆಡಳಿತಗಳು ವ್ಯವಸ್ಥೆ ಮಾಡಿಕೊಡಬೇಕು.
   ಕಾಣೆಯಾಗಿರುವ ಕೇರಳದ ಚಾಲಕನನ್ನು ಪತ್ತೆ ಮಾಡಲು ಕಾರ್ಯಾಚರಣೆಗೆ ಇನ್ನಷ್ಟು ವೇಗ ತುಂಬಬೇಕು ಎಂದು ಹೇಳಿದ್ದಾರೆ.

ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳು ಮಂಗಳವಾರದಿಂದ ಪ್ರಾರಂಭ

ಯಲ್ಲಾಪುರ ; ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ತಾಲೂಕುಗಳ ಶಾಲೆ ಕಾಲೇಜುಗಳು ನಾಳೆ (ಜುಲೈ  23)ರಂದು ಪುನರಾರಂಭವಾಗುವುದು. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ನಾಳೆ ಶಾಲೆಗೆ ಹಾಜರಾಗಬೇಕು. ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
 
  ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಬಾರಿ ಮಳೆ, ಗುಡ್ಡ ಕುಸಿತ, ಭೂಕುಸಿತ, ರಸ್ತೆಯ ಮೇಲೆ ಮರ ಬೀಳುವುದು ಇತ್ಯಾದಿ ಅವಘಡ ಗಳಿಗೆ ಮಕ್ಕಳು ತುತ್ತಾಗಬಾರದು ಎಂದು ಜಿಲ್ಲಾಡಳಿತ ಜುಲೈ 15 ಸೋಮವಾರದಿಂದ ಜುಲೈ 22ರವರೆಗೆ ಪ್ರತಿದಿನ ಸಂಜೆ ಮಾರನೇ ದಿನದ ಸಂದರ್ಭವನ್ನು ಅವಲೋಕಿಸಿ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಒಟ್ಟು ಎಂಟು ದಿನ ರಜೆ ನೀಡಿತ್ತು( ಒಂದು ರವಿವಾರ ಇನ್ನೊಂದು ಮೊಹರಂ ರಜೆ ಹೊರತುಪಡಿಸಿ). ಸೋಮವಾರದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಯುತ್ತಿರುವ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಮುಂಜಾಗೃತ ಕ್ರಮವಾಗಿ ಹವಾಮಾನ ಇಲಾಖೆ ಕೂಡ ಯಾವುದೇ ಮುನ್ಸೂಚನೆ ನೀಡದೆ ಇರುವ ಕಾರಣಕ್ಕೆ ಜಿಲ್ಲಾಡಳಿತ ಮಂಗಳವಾರದಿಂದ ಶಾಲೆ ಕಾಲೇಜುಗಳು ಪುನರಾರಂಭಗೊಳ್ಳಲಿದೆ. ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು ಉಪನ್ಯಾಸಕರು ಹಾಜರಿರಬೇಕಾಗಿ ಸೂಚಿಸಿದೆ.

ಯಲ್ಲಾಪುರದಲ್ಲಿ ಗ್ರೀನ್ ಕೇರ್ ಸಂಸ್ಥೆಯಿಂದ ಉಚಿತ ಬ್ಯೂಟಿಶಿಯನ್ ಮತ್ತು ಫ್ಯಾಶನ್ ಡಿಸೈನಿಂಗ್ ತರಬೇತಿ

ಯಲ್ಲಾಪುರ: ಶಿಕ್ಷಣದ ಜೊತೆಗೆ ಕೌಶಲ್ಯ ಅಭಿವೃದ್ಧಿ ಕೂಡ ಯಶಸ್ಸಿಗೆ ಮುಖ್ಯ ಎಂದು ಯಲ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಆರ್.ಡಿ. ಜನಾರ್ಧನ ಹೇಳಿದರು.
    ಅವರು ಸೋಮವಾರ ಅಡಿಕೆ ಭವನದಲ್ಲಿ ಗ್ರೀನ್‌ಕೇರ್ ಸಂಸ್ಥೆ ಮತ್ತು ಕ್ರಿಯೇಟಿವ್ ತರಬೇತಿ ಕೇಂದ್ರ ಆಯೋಜಿಸಿದ ಕೌಶಲ್ಯ ವಿಕಾಸ ಯೋಜನೆಯ ಉಚಿತ ಬ್ಯೂಟಿಶಿಯನ್ ಮತ್ತು ಬೆಸಿಕ್ ಫ್ಯಾಶನ್ ಡಿಸೈನಿಂಗ್ ತರಬೇತಿ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ವರ್ತಮಾನದಲ್ಲಿ ಉದ್ಯೋಗಿಯಾಗಲು ಬೇಕಾದ ಕೌಶಲ್ಯಗಳನ್ನು ಸ್ವಪ್ರೇರಣೆಯಿಂದ ಪಡೆಯುವ ಅವಶ್ಯಕತೆ ಇದ್ದು, ಸ್ವಯಂ ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಈ ಯೋಜನೆ ಒದಗಿಸುತ್ತದೆ ಎಂದು ತಿಳಿಸಿದ ಜನಾರ್ಧನ, ಗ್ರೀನ್‌ಕೇರ್ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.
   ಗ್ರೀನ್ ಕೇರ್ ಸಂಸ್ಥೆಯ ಅಧ್ಯಕ್ಷರಾದ ಪ್ರಶಾಂತ ಮುಳೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ಯಶಸ್ಸಿಗೆ ಉತ್ತಮ ಸೇವೆಯ ಮನೋಭಾವ ಮುಖ್ಯ, ಇದನ್ನು ಭವಿಷ್ಯದಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳಿದರು.
  ಅಸ್ಮಿತೆ ಫೌಂಡೇಶನ್‌ನ ಕಾರ್ಯನಿರ್ವಾಹಕ ನಿರ್ದೇಶಕ ರಿಯಾಜ್ ಸಾಗರ್ ಮಾತನಾಡಿ, ಉದ್ಯಮಶೀಲತೆಗೆ ಬೇಕಾದ ಕೌಶಲ್ಯಗಳನ್ನು ಈ ತರಬೇತಿ ನೀಡುತ್ತದೆ ಎಂದು ತಿಳಿಸಿ, ಅದನ್ನು ಸದುಪಯೋಗ ಪಡೆದುಕೊಳ್ಳುವಂತೆ ಯುವಕರಿಗೆ ಕರೆ ನೀಡಿದರು.
 
  ಗ್ರೀನ್ ಕೇರ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಮಾರ್‌ಮಾತನಾಡಿ, 45 ದಿನಗಳ ಈ ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವವರು ಗ್ರೀನ್‌ಕೇರ್ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು  ತಿಳಿಸಿದರು.
 ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಭಟ್ಟ, ಪಟ್ಟಣ ಪಂಚಾಯತ್ ಸಮುದಾಯ ಸಂಘಟನಾಧಿಕಾರಿ ಹೇಮಾವತಿ ಭಟ್ ಮಾತನಾಡಿದರು.  
   ವೇದಿಕೆಯಲ್ಲಿ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಆರ್.ವಿ ಹೆಗಡೆ, ಗ್ರೀನ್‌ಕೇರ್ ಸಂಸ್ಥೆಯ ನಿರ್ದೇಶಕರಾದ ಸದಾಶಿವ ಶಿವಯ್ಯನಮಠ, ಗಜಾನನ ಭಟ್ಟ, ಉದಯ ನಾಯ್ಕ, ಉದಯ ಕುಮಾರ ಜಯಪ್ಪನವರ್, ಸಂಕಲ್ಪ ಸಮಗ್ರ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಕುಮಾರ ಜಿ. ಪಟಗಾರ ಉಪಸ್ಥಿತರಿದ್ದರು.
ಕ್ರಿಯೇಟಿವ್ ತರಬೇತಿ ಕೇಂದ್ರದ ಶ್ರೀನಿವಾಸ ಎಂ ಮುರ್ಡೇಶ್ವರ ಸ್ವಾಗತಿಸಿದರು, ಗ್ರೀನ್‌ಕೇರ್ ಸಂಸ್ಥೆಯ ಉಪಾಧ್ಯಕ್ಷರಾ ರೋಹಿಣಿ ಸೈಲ್ ವಂದಿಸಿದರು, ಸಂಸ್ಥೆಯ ನಿರ್ದೇಶಕಿ ಆಶಾ ಡಿಸೋಜಾ ಕಾರ್ಯಕ್ರಮವನ್ನು ನಿರೂಪಿಸಿ ನಿರ್ವಹಿಸಿದರು.

✒️✒️ ** ಹೆಬ್ಬುಳ ಕ್ರಾಸ್‌ನಲ್ಲಿ ರಸ್ತೆ ಹಾನಿಯಿಂದ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿಷೇಧ, ✒️✒️ ** ಹೆಬ್ಬುಳ ಹಾಗೂ ಗೋಕರ್ಣ ಕ್ರಾಸ್ ರಸ್ತೆಯಲ್ಲಿ ಭಾರೀ ವಾಹನ ಅಪಘಾತ, ಹೊಂಡ ಕಾರಣ

ಯಲ್ಲಾಪುರ: ಇತ್ತೀಚಿನ ಭಾರಿ ವಾಹನ ಸಂಚಾರ ಹಾಗೂ ಮಳೆಯಿಂದ ಹೆಬ್ಬುಳ ಕ್ರಾಸ್ ಬಳಿ ರಸ್ತೆ ಹಾನಿಯಾಗಿದೆ, ಪರಿಣಾಮ ಮಂಗಳೂರು, ಉಡುಪಿ, ಕುಮಟಾಕ್ಕೆ ತೆರಳುವ ಬಸ್ ಹಾಗೂ ಇತರೆ ವಾಹನಗಳ ರಸ್ತೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
 ಕಳೆದ ಒಂದು ವಾರದ ಹಿಂದೆ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿ ಮಣ್ಣು ಮತ್ತು ಕಲ್ಲುಗಳಿಂದ ಆವರಿಸಿಕೊಂಡಿತ್ತು. ಈ ಪ್ರದೇಶದಲ್ಲಿ ಈಗಲೂ ಸ್ವಚ್ಛಗೊಳಿಸುವ ಕಾರ್ಯ ಪ್ರಗತಿಯಲ್ಲಿದ್ದು, ಸಂಚಾರ ಮುಕ್ತವಾಗಿಲ್ಲ. ಕುಸಿತದಿಂದಾಗಿ ಹುಬ್ಬಳ್ಳಿ, ಯಲ್ಲಾಪುರ, ಬೆಳಗಾವಿಯಿಂದ ಕುಮಟಾ, ಮಂಗಳೂರು, ಉಡುಪಿಗೆ ತೆರಳುವ ವಾಹನಗಳು 20 ಕಿಮೀ ತೆರಳಬೇಕಾಗಿತ್ತು. ಈ ಮಾರ್ಗದಲ್ಲಿ ಹೆಚ್ಚು ಭಾರಿ ವಾಹನ ಸಂಚಾರದಿಂದ ಕೇವಲ ಆರು ದಿನಗಳಲ್ಲಿ ರಸ್ತೆ ಹಾಳಾಗಿದೆ ಎಂದು ಸ್ಥಳೀಯ ಚಾಲಕರು ತಿಳಿಸಿದ್ದಾರೆ.
   ಸೋಮವಾರ ಬೆಳಿಗ್ಗೆ ಆರು ಗಂಟೆಯಿಂದ ಯಲ್ಲಾಪುರ ಮೂಲಕ ಕುಮಟಾ, ಹೊನ್ನಾವರ, ಮಂಗಳೂರು, ಉಡುಪಿಗೆ ತೆರಳುವ ಬಸ್‌ಗಳನ್ನು ಯಲ್ಲಾಪುರದಲ್ಲೇ ತಡೆಯಲಾಗಿದೆ. ಇತರೆ ವಾಹನಗಳಿಗೆ ಹೆಬ್ಬುಳ ಕ್ರಾಸ್‌ನಲ್ಲಿ ಪ್ರವೇಶವನ್ನು ತಡೆದ ಬ್ಯಾರಿಕೇಡ್‌ ಮತ್ತು ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಈ ಸಮಯದಲ್ಲಿ ಲೋಕೋಪಯೋಗಿ ಇಲಾಖೆಯ ಅಂಕೋಲ ವಿಭಾಗದವರು ಹಾನಿಯಾದ ರಸ್ತೆಗಳಿಗೆ ಕಲ್ಲು ತುಂಬಿ ತಾತ್ಕಾಲಿಕ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ, ಆದಾಗ್ಯೂ ಯಾವುದೇ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
   ಸೋಮವಾರ ಕುಮಟಾಗೆ ತೆರಳಲು ಪ್ರಯತ್ನಿಸಿದ ಯಲ್ಲಾಪುರದ ಹಲವರು ನಿರಾಶೆಯಿಂದ ಮತ್ತೆ ಯಲ್ಲಾಪುರಕ್ಕೆ ಮರಳಿದ್ದಾರೆ.

ಹೆಬ್ಬುಳ ಹಾಗೂ ಗೋಕರ್ಣ ಕ್ರಾಸ್ ರಸ್ತೆಯಲ್ಲಿ ಭಾರೀ ವಾಹನ ಅಪಘಾತ, ಹೊಂಡ ಕಾರಣ
ಹೆಬ್ಬುಳ ಕ್ರಾಸ್ ಮತ್ತು ಮಾದನಗೇರಿ ಗೋಕರ್ಣ ಕ್ರಾಸ್ ನಡುವಿನ 20 ಕಿಲೋಮೀಟರ್ ರಸ್ತೆಯಲ್ಲಿ ಭಾರೀ ವಾಹನ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಹಲವಾರು ವಾಹನಗಳು ರಸ್ತೆಯ ಪಕ್ಕದಲ್ಲಿ ಉರುಳಿಕೊಂಡುಬಿದ್ದಿವೆ.
   ಈ ಅಪಘಾತಕ್ಕೆ ಕಾರಣವಾಗಿರುವುದು ರಸ್ತೆಯಲ್ಲಿರುವ ದೊಡ್ಡ ದೊಡ್ಡ ಹೊಂಡ ಹಾಗೂ ಕಿರಿದಾದ ರಸ್ಯೆಯಾಗಿದೆ.  ವಾಹನಗಳು ಎದುರಿನಿಂದ ಬರುವ ವಾಹನಗಳಿಗೆ ಜಾಗ ಮಾಡಿಕೊಡಲು ಪಕ್ಕಕ್ಕೆ ತಿರುಗುವಾಗ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿವೆ. ಈ ಅಪಘಾತಗಳಿಂದಾಗಿ ಸಂಚಾರ ದಟ್ಟಣೆ ಉಂಟಾಗಿದೆ. ಸ್ಥಳೀಯ ಪೊಲೀಸರು ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸಂಚಾರವನ್ನು ನಿಯಂತ್ರಿಸುತ್ತಿದ್ದಾರೆ. ಹಳ್ಳವನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ.
   ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಆದರೆ, ಹಲವಾರು ವಾಹನಗಳಿಗೆ ಹಾನಿಯಾಗಿದೆ.

ತುರ್ತು ವೆಚ್ಚ ಶೇ. 25 ಮತ್ತು ಪ್ರಾದೇಶಿಕ ವೆಚ್ಚ ಶೇ. 45 ಸೇರಿಸುವಂತೆ ಹೆಸ್ಕಾಂ ಗುತ್ತಿಗೆದಾರರ‌ ಮನವಿ

ಯಲ್ಲಾಪುರ : ಅರಣ್ಯಾವೃತ ಹಾಗೂ ವಿಶಾಲವಾದ ಯಲ್ಲಾಪುರ ಭಾರಿ ಮಳೆ ಗಾಳಿ ಆಗುವ ಪ್ರದೇಶವಾಗಿದೆ. ಹೆಸ್ಕಾಂ ನಿಗಮದ ತುರ್ತು ಕಾಮಗಾರಿಗೆ ಪ್ರಾದೇಶಿಕ ವೆಚ್ಚವನ್ನು ಕೈ ಬಿಟ್ಟಿರುವ ಬಗ್ಗೆ ಯಲ್ಲಾಪುರಸ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದವರು, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಯಲ್ಲಾಪುರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಮಾಕಾಂತ ನಾಯ್ಕರವರ ಮೂಲಕ  ಪತ್ರ ನೀಡಿ ಆಗ್ರಹಿಸಿದ್ದಾರೆ. 
   ಸೋಮವಾರ ಹೆಸ್ಕಾಂ ಕಚೇರಿಗೆ ತೆರಳಿದ ಗುತ್ತಿಗೆದಾರರು  ತಾಲೂಕಿನಲ್ಲಿ ಭಾರಿ ಮಳೆ ಮತ್ತು ಗಾಳಿಯಿಂದ ಮುರಿದ ಕಂಬ, ತಂತಿಗಳನ್ನು ಬದಲಾಯಿಸುವುದು ಶೀಘ್ರ ಕಾರ್ಯನಿರ್ವಹಣೆ ಕಷ್ಟವಾಗಿದೆ. ಅರಣ್ಯ ಪ್ರದೇಶದಲ್ಲಿ ಈ ಕಾರ್ಯ ಅತಿ ಜಟಿಲವಾಗಿದೆ, ಮರಗಳು ಮಾರ್ಗದ ಮೇಲೆ ಬಿದ್ದು ವಿದ್ಯುತ್ ಸರಬರಾಜು ವ್ಯತ್ಯಯ ಆಗುತ್ತದೆ. ತಲೆಯ ಮೇಲೆ ಕಂಬಗಳನ್ನು ಹೊತ್ತೇ ಸಾಗಿಸಬೇಕಾದ ಪರಿಸ್ಥಿತಿ ಎದುರಾಗಿದೆ. 2023-24 ದರ ಪಟ್ಟಿಯಲ್ಲಿ ತುರ್ತು ಮತ್ತು ಪ್ರಾದೇಶಿಕ ವೆಚ್ಚ ಸೇರಿಸದ ಕಾರಣ ತುರ್ತು ಕಾಮಗಾರಿಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ತುರ್ತು ವೆಚ್ಚ ಶೇ. 25 ಮತ್ತು ಪ್ರಾದೇಶಿಕ ವೆಚ್ಚ ಶೇ. 45 ಸೇರಿಸುವಂತೆ ಮನವಿಯಲ್ಲಿ ತಿಳಸಿದ್ದಾರೆ.
   ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ವೇಣುಗೋಪಾಲ ಮದ್ಗುಣಿ, ಎ.ಇ.ಟಿ ಸಂತೋಷ ಬಾವಕರ, ಖಜಾಂಚಿ ಗೋಪಾಲಕೃಷ್ಣ ಕರುಮನೆ, ಸಹ ಕಾರ್ಯದರ್ಶಿ ಮಕ್ಬೂಲ್ ಹಲವಾಯಿಘರ, ಬಾಲಚಂದ್ರ ಭಟ್, ರಿಗನ್ ಡಿಸೋಜಾ, ಶ್ರೀನಿವಾಸ ಪಟಗಾರ, ಸೈಯದ್ ಮಕ್ಬೂಲ್, ಮಹಮ್ಮದ್ ಜಾಫರ್, ಗಣಪತಿ ಕರುಮನೆ, ಗಣಪತಿ ಹೆಗಡೆ, ಮಾರುತಿ ಗೋವೇಕರ, ಮುಂತಾದವರು ಇದ್ದರು.

ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಶಿವರಾಮ ಹೆಬ್ಬಾರ್ ಟೀಕೆ : ಬಿಜೆಪಿ ನಾಯಕರಿಂದ ಖಂಡನೆ

ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯಲ್ಲಿ ಭಾರಿ ಪ್ರಕೃತಿ ವಿಕೋಪದ ನಡುವೆಯೇ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದೆ. , "ನಮ್ಮ ಪಕ್ಷದ ಮುಖಂಡರಾದ ವಿಶೇಷವಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಹೆಬ್ಬಾರ್ ಕೀಳುಮಟ್ಟದ ಆರೋಪ ಮಾಡಿದ್ದಾರೆ," "ವಿಶ್ವೇಶ್ವರ ಕಾಗೇರಿ ಅವರು ತತ್ವನಿಷ್ಠೆಯ ರಾಜಕಾರಣಿ. ಅವರು 30 ವರ್ಷಗಳಿಂದ ಜನಪ್ರಿಯ ಶಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ‌ ಎಂದು ರಾಜ್ಯ ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ ಶಾಸಕ ಶಿವರಾಮ ಹೆಬ್ಬಾರ್ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
   ಅವರು, ಯಲ್ಲಾಪುರದ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಹೆಬ್ಬಾರ್ ಅವರ ಅಹಂಕಾರ ಹಾಗೂ ಸ್ವಪ್ರತಿಷ್ಠೆಯ ಹೇಳಿಕೆಯನ್ನು ಖಂಡಿಸಿದ ಕೋಣೆಮನೆ, "ಹೆಬ್ಬಾರ್‌ ಅವರ ಟೀಕೆ ನಮ್ಮ ಜಿಲ್ಲೆಗೆ ಅವಮಾನ ತಂದಿದೆ. ಇದನ್ನು ಮುಂದುವರೆಸಿದರೆ, ನಾವು ಜನರ ಮುಂದೆ ಸತ್ಯಾಸತ್ಯತೆ ಬಿಚ್ಚಿಡುತ್ತೇವೆ," ಎಂದು ಎಚ್ಚರಿಕೆ ನೀಡಿದರು.
   ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಎಲ್. ಟಿ. ಪಾಟೀಲ, "  ಆಪರೇಷನ್ ಕಮಲದ ಮೂಲಕ ಪಕ್ಷಕ್ಕೆ ಸೇರ್ಪಡೆಗೊಂಡ ಹೆಬ್ಬಾರ್‌. ಮುಂದೆ ಅವರ ನಡೆ ಪಕ್ಷದ ಆಂತರಿಕ ಶಿಸ್ತಿಗೆ ವಿರುದ್ಧವಾಗಿತ್ತು. ಬಿಜೆಪಿ ಪಕ್ಷದಿಂದ ಆಯ್ಕೆಯಾದ ಅವರು,  ಮೋದಿಯವರ ಹಾಗೂ ಪಕ್ಷದ ಮೇಲಿದ್ದ ಗೌರವವನ್ನು ಉಳಿಸಬೇಕಾಗಿತ್ತು. ಹೆಬ್ಬಾರ್ ಅವರ ರಾಜೀನಾಮೆ ಕೊಟ್ಟು ಪುನಃ ಚುನಾವಣೆಗೆ ಎದುರಿಸುವಂತೆ ಸ್ಪಷ್ಟಪಡಿಸಿದ ಅವರು, ತಮ್ಮ ವಯಕ್ತಿಕ ಹಿತಾಸಕ್ತಿಗೆ, ಮೋಜು‌ ಮಜಕ್ಕಾಗಿ ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದರು. ನಾವು ಅವರನ್ನು ಕರೆದಿರಲಿಲ್ಲ ಎಂದರು.
   ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಉಮೇಶ ಭಾಗ್ವತ, "ಹೆಬ್ಬಾರ್ ಕಾಗೇರಿ ವಿರುದ್ದ ಮಾಡಿದ ಟೀಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಬಿರುಸಿನ ಪ್ರಕೃತಿ ವಿಕೋಪದ ವೇಳೆ, ರಾಜಕೀಯ ಪ್ರಹಸನ ಇನ್ನಷ್ಟು ಜನರ ಸಮಸ್ಯೆಗಳನ್ನು ಹೆಚ್ಚಿಸುತ್ತವೆ," ಎಂದು ಹೇಳಿದರು. 
  ಪತ್ರಿಕಾಗೋಷ್ಠಿಯಲ್ಲಿ ಯಲ್ಲಾಪುರ ಬಿಜೆಪಿ ಮಂಡಲ ಅಧ್ಯಕ್ಷ ಪ್ರಸಾದ ಹೆಗಡೆ, ಮುಂಡಗೋಡ ಮಂಡಲ ಅಧ್ಯಕ್ಷ ಮಂಜುನಾಥ ಪಾಟೀಲ, ಹಿರಿಯ ಬಿಜೆಪಿ ಕಾರ್ಯಕರ್ತರಾದ ಗಣಪತಿ ಬೋಳ್ಗುಡ್ಡೆ, ಸುಬ್ಬಣ್ಣ ಬೋಳ್ಮನೆ ಇದ್ದರು.