ಯಲ್ಲಾಪುರ : ಹಾಸಣಗಿ ಪಂಚಾಯತಿ ವ್ಯಾಪ್ತಿಯ ಯಡಳ್ಳಿ ಸಮೀಪದ ಕುಂದೂರು ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಕೆಲ ವರ್ಷದ ಹಿಂದೆ ನಿರ್ಮಿಸಲಾದ ಕಾಲು ಸಂಕ ಗುರುವಾರ ನಸೂಕಿನಲ್ಲಿ ಕೊಚ್ಚಿಹೋಗಿದೆ.
ಸ್ಥಳೀಯ ನಾಗರಿಕರಿಗಾಗಿ ಎನ್‌ಆರ್‌ಇಜಿ ಯೋಜನೆಯಲ್ಲಿ 1.5 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕಾಲು ಸಂಕ ಮಳೆಯಿಂದಾಗಿ ಕೊಚ್ಚಿ ಹೋಗಿದ್ದು, ಈ ಭಾಗದ ಜನ ಸಂಚರಿಸಲು ಸಂಕಷ್ಟ ಪಡುವಂತಾಗಿದೆ.
ಕೊಚ್ಚಿ ಹೋದ ಕಾಲು ಸಂಕದ ಕೆಳಗೆ ತುಂಬಿ ಹರಿಯುತ್ತಿರುವ ಹಳ್ಳದ ನೀರಿನಿಂದಾಗಿ ಜನ ಮನೆ, ತೋಟಕ್ಕೆ ಹೋಗಲು ಪರದಾಡುವಂತಾಗಿದೆ. ಹಳ್ಳದ ನೀರಿನ ಹರಿವು ಕಡಿಮೆ ಇರುವ ಕಡೆ ತೆರಳಿ ತಮ್ಮ ಮನೆ ಹಾಗೂ ತೋಟಕ್ಕೆ ಹೋಗುವ ದುಸ್ಥಿತಿ ನಿರ್ಮಾಣವಾಗಿದೆ.
ಸಂಬಂಧಪಟ್ಟ ಇಲಾಖೆಯವರು ಹಾಗೂ ಗ್ರಾಮ ಪಂಚಾಯತಿಯವರು ಕೂಡಲೇ ಕಾಲು ಸಂಕವನ್ನು ದುರಸ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹಾಸಣಗಿ ಪಂಚಾಯಿತಿ ಸದಸ್ಯ ಎಂ ಕೆ ಭಟ್ ಯಡಳ್ಳಿ ಆಗ್ರಹಿಸಿದ್ದಾರೆ.