ಯಲ್ಲಾಪುರ: ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘವು ರಾಜ್ಯಾದ್ಯಂತ ಏಕಕಾಲದಲ್ಲಿ ಎಲ್ಲಾ ತಾಲೂಕುಗಳ ತಹಶೀಲ್ದಾರರ ಮೂಲಕ ಜುಲೈ 6 ರಂದು ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೋಟಿಸ್ ನೀಡಲು ಸಿದ್ಧವಾಗಿದೆ ಎಂದು ಸಂಘದ ಯಲ್ಲಾಪುರ ಘಟಕದ ಕಾರ್ಯದರ್ಶಿ ಎಂ. ರಾಜಶೇಖರ್ ತಿಳಿಸಿದ್ದಾರೆ.
ಇದಲ್ಲದೆ, ರಾಜ್ಯ ಸರ್ಕಾರವು ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಎನ್‌ಪಿಎಸ್ ಅನ್ನು ರದ್ದುಗೊಳಿಸಿ ಓಪಿಎಸ್ ಜಾರಿಗೊಳಿಸುವ ಭರವಸೆ ನೀಡಿದ್ದು, ಶೀಘ್ರದಲ್ಲೇ ಹಳೆಯ ನಿಶ್ಚಿತ ಪಿಂಚಣಿ ಯೋಜನೆ (ಓಪಿಎಸ್) ಜಾರಿಗೊಳಿಸಬೇಕು ಎಂಬಂತೆ ಒತ್ತಾಯಿಸಲಾಗಿದೆ.
ಒಪಿಎಸ್ ಜಾರಿಯಲ್ಲಿ ವಿಳಂಬವಾದಲ್ಲಿ, ರಾಜ್ಯ ಸರ್ಕಾರಿ ನೌಕರರಿಗೆ ನೀಡುವಂತೆ ಎನ್‌ಪಿಎಸ್ ಅನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕು. ಅಂದರೆ, ನೇಮಕಾತಿ ಮತ್ತು ವೇತನದ ಕೊಡುಗೆಯನ್ನು ಆಡಳಿತ ಮಂಡಳಿಗಳ ಬದಲಿಗೆ ಸರ್ಕಾರವು ಭರಿಸಬೇಕು.
ಇದೇ ವೇಳೆ, 2014ರ ಕರ್ನಾಟಕ ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ನೌಕರರ (ವೇತನ, ನಿವೃತ್ತಿ ವೇತನ ಮತ್ತು ಇತರ ಸೌಲಭ್ಯಗಳ ನಿಯಂತ್ರಣ) ಕಾಯ್ದೆಗೆ ತಿದ್ದುಪಡಿ ತಂದು ಅಥವಾ ರದ್ದುಗೊಳಿಸಿ ಭವಿಷ್ಯದ ಅನ್ವಯಕ್ಕೆ ತರಬೇಕು.
ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ದಶಕಗಳಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು.h
ಅನುದಾನಿತ ನೌಕರರಿಗೂ ಸರ್ಕಾರಿ ನೌಕರರಂತೆ ಜ್ಯೋತಿ ಸಂಜೀವಿನಿ ಯೋಜನೆಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಸರ್ಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳು ಮತ್ತು ನೌಕರರಿಗೆ ಯಾವುದೇ ತಾರತಮ್ಯ ನೀತಿ ಇರಬಾರದು.
ಪಿಂಚಣಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಏಕಕಾಲಕ್ಕೆ ತಾಲೂಕು ತಹಶೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.