ಯಲ್ಲಾಪುರ : ಯಲ್ಲಾಪುರದಿಂದ ಮಾಗೋಡ ತೆರಳುವ ಕಾಳೆಮನೆ ಕ್ರಾಸ್ ರಸ್ತೆಯ ಮೇಲೆ ಬುಧವಾರ ಸುರಿದ ಭಾರಿ ಮಳೆಯಿಂದಾಗಿ ನೀರು ನಿಂತಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಗುರುವಾರ ಬೆಳಿಗ್ಗೆ ತಹಶೀಲ್ದಾರ್ ಅಶೋಕ್ ಭಟ್ಟ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ರಸ್ತೆಯ ಸ್ಥಿತಿಯನ್ನು ಪರಿಶೀಲಿಸಿದರು.
ಒಂದು ಸಣ್ಣ ಮಳೆಗೂ ಕೂಡ ಕಾಳೆಮನೆ ಕ್ರಾಸ್ ನಲ್ಲಿ ರಸ್ತೆ ಮೇಲೆ ನೀರು ನಿಲ್ಲುತ್ತದೆ. ಹೀಗಾಗಿ, ರಸ್ತೆ ಸಂಪೂರ್ಣವಾಗಿ ಹಾಳಾಗಿ ಹೋಗಿದೆ ಎಂದು ಕಳೆದ ಹಲವಾರು ವರ್ಷದಿಂದ ಸ್ಥಳೀಯ ಜನರು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿಕೊಳ್ಳುತ್ತಿದ್ದರು. ಆದರೆ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಇಲ್ಲದೆ ಬೇಸಿಗೆಯಲ್ಲಿ ದುರಸ್ತಿ ಮಾಡದೆ ಹಾಗೆ ಬಿಟ್ಟಿದ್ದರಿಂದ, ನಿನ್ನೆ ಬುಧವಾರ ಸುರಿದ ಬಾರಿ ಮಳೆಗೆ ರಸ್ತೆಯ ಮೇಲೆ ನೀರು ನಿಂತು ಹತ್ತು ಹಲವಾರು ವಾಹನಗಳು ಸಂಚರಿಸದಂತಹ ಸ್ಥಿತಿ ನಿರ್ಮಾಣವಾಗಿತ್ತು. ಸ್ಥಳೀಯ ರೈತ ಲಕ್ಷ್ಮೀನಾರಾಯಣ ತೋಟಮನೆ ಜೆಸಿಬಿ ತರಸಿಕೊಂಡು ರಸ್ತೆ ಪಕ್ಕದಲ್ಲಿ ಚರಂಡಿ ನಿರ್ಮಿಸಿ ರಸ್ತೆಯ ಮೇಲೆ ನಿಂತಿದ್ದ ನೀರನ್ನು ಹೊರಗೆ ಹಾಕಿದ್ದರು.
ಇದೀಗ, ಗುರುವಾರ ತಹಶೀಲ್ದಾರ್ ಅಶೋಕ್ ಭಟ್, ಇಡಗುಂಡಿ ವಲಯ ಅರಣ್ಯ ಅಧಿಕಾರಿ ಶಿಲ್ಪಾ ನಾಯ್ಕ, ಪಿ ಡಬ್ಲ್ಯುಡಿ ಸಹಾಯಕ ಇಂಜಿನಿಯರ್ ವಿಶಾಲ್ ಕಟಾವಕರ, ಮುಂತಾದವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡು ರಸ್ತೆಯಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ಸ್ಥಳೀಯ ಜನರಿಗೆ ನೀಡಿದ್ದಾರೆ.