ಯಲ್ಲಾಪುರ ; ಪಟ್ಟಣ ವ್ಯಾಪ್ತಿಯಲ್ಲಿ ಲಿಂಗಾನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಸುಮಾರು 10 ರಿಂದ 12 ವರ್ಷದ ಬೆಳೆದ ಗಂಧದ ಮರವನ್ನು ಕಳ್ಳರು ಶನಿವಾರ ರಾತ್ರಿಯಿಂದ ರವಿವಾರ ಬೆಳಗ್ಗೆ ಮದ್ಯ ಕತ್ತರಿಸಿಕೊಂಡು ಹೋಗಿದ್ದಾರೆ. ಕಳ್ಳತನವಾದ ಗಂಧದ ಮರದ ಮೌಲ್ಯ ಅಂದಾಜು 2.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಲಿಂಗನಕೊಪ್ಪ ಶಾಲೆಯ ಬಳಿಯ ನಿವಾಸಿ ಆಗಿರುವ ಸುರೇಶ್ ಯಲ್ಲಪ್ಪ ಪಾಟಣಕರ ಅವರ ಜಮೀನಿಗೆ ತಾಗಿ, ಮನೆಯಿಂದ ಸುಮಾರು 30 ಮೀಟರ್ ಅಂತರದಲ್ಲಿರುವ ಅರಣ್ಯ ವ್ಯಾಪ್ತಿಯ ಗಂಧದ ಮರ ಕಳ್ಳತನವಾಗಿದೆ. ಹರಿತವಾದ ಗರಗಸವನ್ನು ಬಳಸಿ ನೆಲದಿಂದ 6 ಇಂಚು ಎತ್ತರದಲ್ಲಿ ಮರವನ್ನು ಕತ್ತರಿಸಲಾಗಿದ್ದು, ಕಾಂಡದ ಅಳತೆಯೇ 8 ರಿಂದ 10 ಇಂಚು ಅಗಲವಾಗಿದೆ ಎಂದು ತಿಳಿದುಬಂದಿದೆ. ಕಳ್ಳರು ಗಂಧದ ಮರದ ಬೆಲೆ ಬಾಳುವ ತುಂಡುಗಳನ್ನು ಅಷ್ಟೇ ಕತ್ತರಿಸಿಕೊಂಡು ಹೋಹಿದ್ದಾರೆ, ಉಳಿದ ಭಾಗವನ್ನು ಅಲ್ಕಿಯೇ ಬಿಟ್ಟಿದ್ದಾರೆ. ಅತಿಯಾದ ಮಳೆ ಸುರಿಯುತ್ತಿರುವ ಕಾರಣಕ್ಕಾಗಿ ಸುರೇಶ್ ಪಾಟಣಕರ್ ಅವರ ಮನೆ ನಾಯಿಗಳು ಮನೆ ಹಿಂಬದಿಯ ನೀರು ಕಾಯಿಸುವ ಒಲೆಯ ಬಳಿ ಮಲಗಿದ್ದವು ಎನ್ನಲಾಗಿದೆ. ಇಲ್ಲದೆ ಇದ್ದರೆ. ಕಳ್ಳರು ಬಂದು ಸುಳಿವು ನಾಯಿಯಿಂದ ತಿಳಿದು ಬರುತ್ತಿತ್ತು.
ಗಂಧದ ಮರ ಕಡಿದ ಘಟನಾ ಸ್ಥಳಕ್ಕೆ ಆರ್‌ಎಫ್‌ಓ ಎನ್ ಎಲ್ ನದಾಫ್, ಡಿ ಆರ್‌ಎಫ್‌ಓ ಅಲ್ತಾಫ್ ಚೌಕಡಾಕ, ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದು ಇನ್ನುಳಿದ ಮರದ ತುಂಡುಗಳನ್ನು ಇಲಾಖೆಯ ವಶಕ್ಕೆ ಪಡೆದಿದ್ದಾರೆ. ಸಂಜೆಯ ವೇಳೆಗೆ ನೆಲದಲ್ಲಿದರು ಕಾಂಡ ಹಾಗೂ ಬೇರುಗಳನ್ನು ಜೆಸಿಬಿ ಬಳಸಿ ಇಲಾಖೆಯ ವಶಕ್ಕೆ ಪಡೆಯಲಿದ್ದಾರೆ ಎನ್ನಲಾಗಿದೆ. ಗಂಧದ ಮರವನ್ನು ಕಳ್ಳತನ ಮಾಡಿದ ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ವ್ಯಾಪಕ ಜಾಲ ಬೀಸಿದೆ.