ಯಲ್ಲಾಪುರ: ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಭಟ್ಕಳ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ತೊಡಕಾಗಿದೆ. ಜಿಲ್ಲೆಯ ಇತರ ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾದರೂ, ಭಟ್ಕಳದಲ್ಲಿ ಮಾತ್ರ ನಿರಂತರ ಮಳೆ ಸುರಿಯುತ್ತಿದೆ.
ರಸ್ತೆಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನೀರು ಸರಾಗವಾಗಿ ಹರಿದು ಹೋಗಲು ಅವಕಾಶವಿಲ್ಲದೆ ರಸ್ತೆಯಲ್ಲಿ ಸಂಗ್ರಹವಾಗಿದೆ. ಸುಮಾರು ಮೂರು ಅಡಿಗಿಂತಲೂ ಹೆಚ್ಚು ನೀರು ರಸ್ತೆಯ ಮೇಲೆ ನಿಂತಿದೆ.
ವಾಹನ ಚಾಲಕರು ರಸ್ತೆಯ ಹೊಂಡ ಮತ್ತು ತಗ್ಗುಗಳನ್ನು ತಪ್ಪಿಸಿ ವಾಹನ ಚಲಾಯಿಸಬೇಕಾಗಿದ್ದು, ಹೆಚ್ಚಿನವರು ಅಳುಕಿನಿಂದಲೇ ವಾಹನವನ್ನು ನೀರಿನಲ್ಲಿ ತೆಗೆದುಕೊಂಡು ತಮ್ಮ ಗಮ್ಯದತ್ತ ಸಾಗುತ್ತಿದ್ದಾರೆ.
ಯಲ್ಲಾಪುರ ಮೂಲದ ಗೋಕರ್ಣ ನಿವಾಸಿ ಚೇತನ್ ನಾಯಕ ಮಂಗಳೂರಿನ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಗೋಕರ್ಣಕ್ಕೆ ಕಾರಿನಲ್ಲಿ ಬರುತ್ತಿರುವಾಗ ಈ ಸಮಸ್ಯೆಯನ್ನು ಎದುರಿಸಿದ್ದಾರೆ. ನೀರಿನಲ್ಲಿ ಮುಳುಗಿದ ರಸ್ತೆಯ ಚಿತ್ರಗಳನ್ನು ಸಹ ಅವರು ಯಲ್ಲಾಪುರ ನ್ಯೂಸ್ ಗೆ ಕಳುಹಿಸಿದ್ದಾರೆ.