ಯಲ್ಲಾಪುರ : ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ಅರಬೈಲ್ ಘಟ್ಟದಲ್ಲಿ ಶನಿವಾರವ ಮರ ಬುಡ ಸಮೇತ ಕಿತ್ತು ಬಿದ್ದು ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ನಂತರ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ನಿರ್ಮಾಣ ಘಟಕದವರು ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಈ ವಾರದ ಆರಂಭದಲ್ಲಿ, ಬುಧವಾರ ಮತ್ತು ಗುರುವಾರ ದಾಖಲೆಯ ಮಳೆ ಸುರಿದ ನಂತರ ಶುಕ್ರವಾರ ಮತ್ತು ಶನಿವಾರ ಮಳೆ ಕಡಿಮೆಯಾಗಿತ್ತು. ಆದರೆ, ರವಿವಾರ ಬೆಳಿಗ್ಗೆಯಿಂದ ಮತ್ತೆ ನಿರಂತರ ಮಳೆ ಶುರುವಾಗಿದೆ. ಭಾರಿ ಮಳೆಯಿಂದಾಗಿ ಮಣ್ಣು ಸಡಿಲಗೊಂಡು ಕೆಲವೆಡೆ ಭೂಕುಸಿತದಂತಹ ಸ್ಥಿತಿ ನಿರ್ಮಾಣವಾಗಿದೆ. ಅರಬೈಲ್ ಘಟ್ಟದ ಗುಡ್ಡದ ಮೇಲಿನ ಮಣ್ಣು ಸವೆತಕ್ಕೆ ಒಳಗಾಗಿ ಮರಗಳು ಬೀಳುವ ಸ್ಥಿತಿ ನಿರ್ಮಾಣವಾಗಿತ್ತು.
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ನಿರ್ಮಾಣ ಘಟಕ, ಸ್ಥಳೀಯ ಪೊಲೀಸರು ಮತ್ತು ಸ್ಥಳೀಯರ ಸಹಾಯದಿಂದ ಬಿದ್ದ ಮರವನ್ನು ತೆರವುಗೊಳಿಸಲಾಗಿದೆ. ವಾಹನ ಸಂಚಾರ ಸುಗಮಗೊಳಿಸಲಾಗಿದೆ.